ಮನಸಿನ ಹರಿಯುವಿಕೆಗೆ ಆನಂದಕ್ಕೆ ಪೃಕೃತಿಯಿದೆ. ಹಿಮ ಸುರಿಯುವ ಮುಂಜಾನೆಗಳಿವೆ. ಅದ್ಭುತ ಸೂರ್ಯಾಸ್ತಗಳಿವೆ. ಸಮುದ್ರವಿದೆ. ತಂಗಾಳಿಯಿದೆ. ಬೆಳದಿಂಗಳ ರಾತ್ರಿಗಳಿವೆ.. ಕತ್ತಲೆಯ ಮೈತ್ರಿಯಿದೆ. ಎಲ್ಲಾ ಇದೆ. ಆನಂದಿಸುವ ಮನಸೂ ಇದೆ. ಆದರೆ ಮನುಷ್ಯ ಬಯಸೋದು ತನ್ನ ನೋವು ನಲಿವುಗಳಿಗೆಲ್ಲ ಹಂಚಿಕೊಳ್ಳುವ ಇನ್ನೊಂದು ಮನಸಿನ ಆಸರೆಯನ್ನ... ಮನುಷ್ಯನ ಭಾವಗಳಿಗೆ ಮತ್ತೊಂದು ಮನಸಿನ ಆಸರೆಯ ಹುಚ್ಚು.... ಇದೂ ಸಹ ಅಂತದ್ದೇ ಒಂದು ಹುಚ್ಚು... ವಿಚಾರ ಭಾವಗಳಿಗೆಲ್ಲ ಅಕ್ಷರ ಕೊಡುವ ಹುಚ್ಚು... ಖಾಲಿಯಾಗುವ ಕನಸು.... ಅಂತದ್ದೊಂದುಯಾನದಲ್ಲಿ ನಿಮ್ಮ ಜೊತೆ.......







Wednesday, October 8, 2014

ಸತ್ಯದಾವರಣ!

ಅಳಲೊಂದು ಹೆಗಲು
ನಗಲೊಂದು ನೆಪವು
ನೀನಿರದ ಘಳಿಗೆ
ನಾನಿರದ ಜೀವ!

ನನ್ನೊಳಗೆ ಹುಟ್ಟು
ನನ್ನೊಳಗೆ ಮರಣ
ಸುಖವಲ್ಲವೇ ಗೆಳೆಯ
ಸತ್ಯದಾವರಣ!

ಚಿತ್ತವಿದು ಸಂಕಲ್ಪ
ಮುಕ್ತಿತತ್ವದ ಒಲವು
ಬತ್ತಿರುವ ಭಾವಗಳ
ಬೆಳಕ ಚಿಲುಮೆ

ರಕ್ತ ಮಾಂಸದ ಜೀವ
ಕುದಿ ಕಳೆವ ಭಾವ
ತಣ್ಣಗಾಗಿಸು ಎಲ್ಲ
ನಿರ್ಜೀವ ತತ್ವ.

Wednesday, October 1, 2014

ಶ್ರದ್ಧಾಂಜಲಿ ಸಭೆ

 


 ಬರೆಯಬೇಕೆನ್ನುವ ನನ್ನ ತವಕಗಳಿಗೆ,
 ಬೆರಗು ಬೆರಗಿನ ಕಣ್ಣಾದ ನಿನಗೆ,
 ಮತ್ತು ಮರೆತ ನಿನ್ನೆಗಳಿಗೆ,
 ಹೀಗೊಂದು
 ಕಂಬನಿಯ ಶೃದ್ಧಾಂಜಲಿ ಸಭೆ
 ಏರ್ಪಡಿಸಿಕೊಂಡಿದ್ದೇನೆ.
 ನನಗೆ ಮತ್ತು
 ನನ್ನೊಳಗಿನ  ಎಲ್ಲ ನಿನ್ನೆಗಳಿಗೆ..


ಕಂಡರಿಯದ ಕಾಡುವಿಕೆಯ,
ಘಳಿಗೆಯೊಡನೆ
ಸುಖದ ತಾಪ ಸುಡುತಿರೆ,
ಮತ್ತನೊಳಗೆ
ಸುಡುವ ಕೋಪ...
ರಮಿಸುವಂತ
ಮಗುವಿನೊಲವ
ಮನಸುಗಳಿಗೆ..


ಸೋತ ಸೆರಗಿನಲ್ಲಿ
ಬಿಸಿಯನೆಬ್ಬಿಸುವ ಗೆಳೆಯ
ಕನಸು ಕನಸಿನಲ್ಲೇ ಕಾಡಿ
ಹುಸಿಮುನಿಸಿನ
ಹೃದಯದೊಡೆಯ
ಕ್ಷಣಕ್ಷಣವನು ಹಸಿರಾಗಿಸಿ
ಕಳೆದುಹೋದ
ಜೀವಗಳಿಗೆ....

ಶ್ರದ್ಧಾಂಜಲಿ ಸಭೆಯಿದು.
ನನ್ನದು.. ನನ್ನದು ...
ನನ್ನದು ಮಾತ್ರ..








Tuesday, June 10, 2014

ನೀರು ತೋಟದ ಹಸಿರು ಮನೆ



 (ಕಥೆ: ಕುಮಟಾ ಕನ್ನಡ ಸಾಹಿತ್ಯಪರಿಷತ್ತು ನಡೆಸಿದ ರಾಜ್ಯಮಟ್ಟದ ಕಥಾ ಸ್ಪರ್ಧೆಯಲ್ಲಿ ಎರಡನೇ ಬಹುಮಾನ ಪಡೆದ ಕಥೆ)
    
         ಇತ್ತೀಚೆಗೆ ತೋಟದ ಆಚೆ ಮನೆಗೆ ಸಂಜೆಯ ಹೊತ್ತಿನ ಒಂದು ಭೇಟಿ ಮಾಮೂಲಿಯಾಗಿದೆ ಮಗಂದು. ಹೇಳಬೇಕೆನ್ನಿಸಿದ ಎಷ್ಟೋ ಮಾತುಗಳ ಹೇಳಲಾಗದಷ್ಟು ಬೆಳೆದು ಬಿಟ್ಟಿದ್ದಾನೆ ಎಂದು ಇತ್ತೀಚೆಗೆ ಅರ್ಥವಾಗುತ್ತಿದೆ ರಾಧೆಗೆ. ಹಾಗಂತ ಹೇಳದೇ ಇರಲು ಎಲ್ಲಿ ಸಾಧ್ಯ? ಸೀತಾರಾಮ ಹೆಗಡೇರ ಹತ್ರನೇ ಒಂದು ಮಾತು ಹೇಳಿಸಿದ್ರೆ ಹೆಂಗೆ ಅಂತ ಯೋಚನೆ ಬಂದಿತ್ತು. ಗಂಡ ಆಗಲೇ ಆ ಮಾತು ಬ್ಯಾಡ ಅಂತ ಬದಿಗೊತ್ತಿಬಿಟ್ಟಿದ್ದ. ಈ ಗಂಡಸರ ಜಾತಿಗೇ ಇಷ್ಟು ನಮ್  ಗಂಡುಮಕ್ಳು ಎಂಥಾ ಹಲ್ಕಟ್ಟು ದಂಧೆ ಮಾಡೂಕೆ ಶುರು ಮಾಡಿದ್ರೂ ಅಪ್ಪಂದಿರಗೆ ಮಗ ಶುದ್ಧ ಸಂಭಾವಿತ ಅನ್ಸೂದು ಬಿಡೂದೆ ಇಲ್ಲ. ನಾಳೆ ಏನಾದ್ರೂ ಹೆಚ್ಚು ಕಮ್ಮಿ ಆಗೂತ್ಲೆ ತಲೆ ಮೇಲೆ ಕೈ ಹೊತ್ಕಂಡು ಕೂತ್ರಾತು. ಎಂಥಾ ಮಾಡೂದು ಸ್ವಲ್ಪ ಮೊದ್ಲೆ ಸೂಕ್ಷ್ಮ ತಿಳ್ಕಂಬವಾದ್ರೆ ಏನಾದ್ರೂ ಮಾಡಬಹುದಿತ್ತು.ಹೆಂಗೆ ಹೇಳೂದು?  ರಾಧೆ ಅವತ್ತಿಡೀ ಅಡ್ಗೆನೂ ಸರಿ ಮಾಡದೇ ಯೋಚನೆಗೆ ಬಿದ್ದಳು. ಅವಳನ್ನು ಅಷ್ಟು ಚಿಂತೆಗೀಡು ಮಾಡಿದ ವಿಷಯವೇ ಅದು.

     ಯಾವತ್ತೂ ಆಯಿಗೆ ತಿರ್ಗಿ ಒಂದು ಮಾತಾಡಗಿದ್ದ ಮಗ ಸಂತು ಸಂಜೆ ಹೊತ್ತಿಗೆ ದಿನಾ ಬೈಲ್ಗದ್ದೆ ವಾಲಿಬಾಲ್ ಮ್ಯಾಚ್ ಆಡೂಲೆ ಹಳದಿ ಟೀ ಶರ್ಟ್ ಸಿಕ್ಕಕ್ಕಂಡ ಓಡವನು ಇದ್ದಕ್ಕಿದ್ದಂತೆ ಆಚೆ ತೋಟದ ಅವರ ಮನೆ ಬದಿಗೆ ಹೊರಡೂದು ಶುರು ಮಾಡಿ ಒಂದು ವಾರ ಆದಾಗ ಆಯಿ ಅವಳಿಗೆ ಇದೆಂತ ಹೊಸ ನಮ್ನಿ ಅನ್ನಿಸಿ ಸುಮ್ನೆ ನೋಡ್ವಾ ಅನ್ಕಂಡು ಇವತ್ ಸಂಜೆ ದೇವ್ರಮನೆಗೆ ಹೋಗ ಬರಾನ ಅಂದ್ಕೂಡ್ಲೆ ಅಂವ ಏಕ್ದಂ  ಸಂಜೆಗೆ ಆಗಾಕಿಲ್ಲೆ ಆಯಿಅಂತಾನೂ ಹೇಳದೇ ಬಾಯಿಗೆ ಬಂದಿದ್ದೆಲ್ಲ ಜೋರಾಗಿ ಬೈಯ್ಕಂಬದು ಏನಾಗಿತ್ತು ಅಂತ ಈಗ್ಲೂ ಅರ್ಥ ಆಗ್ತಾ ಇಲ್ಲ ಅವಳಿಗೆ. ಅಪ್ಪ ಎದ್ರಿಗೆ ಇದ್ದ ಅಂತಾನೂ ನೋಡದೇ ಧುಮು ಧುಮು ಹೊರಟೇ ಬಿಟ್ನಪ್ಪ! ಅರೆ ಇಸ್ಕಿ ಇವಂಗೆಂತಾ ಆತು ಅಂತ  ಅವಳು ತಲೆ ಕೆಡ್ಸಕಂಬುದು ಶುರುವಾಗೇ ಹೋತು.ಯಾವತ್ತೂ ಹಿಂಗೆಲ್ಲ ಆಡಿದ ಮಗ ಅಲ್ಲಪ್ಪ ಅಂವ. ಹಾಗಾಗಿ ರಾಧೆಗೆ ರಾತ್ರಿ ನಿದ್ರೆ ಕೂಡ ಹಾರಿಯೇ ಹೋಯ್ತು.     

   ಏನಾದ್ರಾಗ್ಲಿ. ಸೀತಾರಾಮ ಹೆಗಡೇರ ಮನೆವರೆಗೆ ಹೋಗೇ ಬರೂದು ಅಂತ ಎದ್ದು ಹೊರಟವಳಿಗೆ ಗಂಡನಿಗೆ ಊಟ ಬಡಿಸುವುದೂ ಮರೆತೇ ಹೋಯಿತು.ಅರ್ಧ ದಾರಿಗೆ ಹೋದ್ಮೇಲೆ ಇನ್ನು ಅಂವ ಬೈಯ್ಕತ್ತಿರ್ತಾ ಅನ್ಸಿದ್ರು ಇದೊಂದು ಪರಿಹಾರ ಮಾಡ್ಕಂಡೇ ಬಿಡುದು ಅನ್ಸಿ ಮುಂದೆ ಹೆಜ್ಜೆ ಎತ್ತಿಟ್ಟಳು.
 ಸಿತಾರಾಂ ಹೆಗಡೇರಮನೇಲಿ  ಅವತ್ತು ಬೆಳಗಿಂದಾನೆ ಜನ ಜನ. ಮಧ್ಯಾಹ್ನವಾದರೂ ಜಗುಲಿಯ ತುಂಬ ಜನರೇ ತುಂಬಿದ್ದರು ಕಾರು ಜೀಪು ಬೈಕು ಅಂತೆಲ್ಲ ಗೇಟಿನ ಆಚೆಗೆ ರಸ್ತೆವರೆಗೂ ತುಂಬಿತ್ತು! ರಾಧೆಗೆ ಗೇಟು ತೆಗೆದು ಒಳಗಡಿಯಿಟ್ಟಾದಮೇಲೆ ಹೆಗಡೇರ  ಮನೆ ದೊಡ್ಡ ಜೂಲು ನಾಯಿಯ  ಬೊಗಳುವಿಕೆಯ ಕೇಳಿದ ಮೇಲೆ ಇವೆಲ್ಲ ಲಕ್ಷಕ್ಕೆ ಬಂದಿದ್ದು. ಥೋ ಎಂತಾ ಟೈಮಿಗೆ ಬಂದೆ ಅನ್ನಿಸಿತು ಆ ಕ್ಷಣ ಅವಳಿಗೆ. ಹೆಗಡೇರ ಮನೇಲಿ ಈ ಪಾಟಿಜನ ಅಂದ್ರೆ ಏನೋ ವಿಶೇಷಾನೆ ಇರ್ಬೇಕು. ನನ್ನ ಕೆಲಸ ಅಪ್ಪುದಲ್ಲ ಇವತ್ತು ಅಂತ ಗೊತ್ತಾಗಿಹೋಯಿತು ಆದ್ರೆ ಅಲ್ಲಿವರೆೆಗೆ ಬಂದು ಮನೆಗ್ ಬರದೇ ಹೋಗುವುದು ತರವಲ್ಲ ಅನ್ನಿಸಿ ಹೆಗಡ್ತೀರನ್ನಾದರೂ ಮಾತನಾಡಿಸಿ ಹೋಗೋದು ಅನ್ಕೊಂಡು ಹಿಂಬದಿಯ ಬಾಗಿಲತ್ತ ನಡೆದಳು.
 ಹೆಗಡ್ತೀರು ಭಾರೀ ಊಟಕ್ಕೆ ತಯಾರಿ ಮಾಡ್ತಿದ್ದವರು ರಾಧೆ ಕಂಡು ಕುಶಿಯಿಂದಲೇ ಮಾತನಾಡಿಸಿಕೊಂಡರು. ಅರೆ ರಾಧೇ ಅಪರೂಪ ಆಗೋಯ್ದಲೇ! ಒಳ್ಳೆ ದಿನಾನೇ ಬಂದೆ ನೋಡು.ಇವತ್ತು ಮನೆ ತುಂಬ ಜನ. ನೀ ಬಂದಿದ್ದು ಚೊಲೋದೇ ಆತು. ಊಟ ಮಾಡ್ಕಂಡುಹೋಗ್ಲಕ್ಕು. ಮತ್ ನಾ ಒಳಬದಿಗೆ ಇದ್ದಾಗ ಹಂಗೇ ಹೋಯಿಕ್ಕಡಾ ಅವರ ಎಂದಿನ ಆತ್ಮೀಯತೆಗೆ ರಾಧೆ ಯ ಮನ ಸ್ವಲ್ಪ ತಂಪಾಯಿತು. ಸ್ಟೀಲ್ ಚೊಂಬಿನಲ್ಲಿ ಮಜ್ಜಿಗೆ ತಂಬಳಿ ತಂದು ಕೊಟ್ಟರು. ರಣ ಬಿಸಿಲಿನ  ಹಸಿದ ಹೊಟ್ಟೆಗೆ ಅದು ತಂಪು ಅಮೃತದಂತೆನ್ನಿಸಿತು.
ಹೆಗಡ್ತೀರೇ ಎಂಥಾ ವಿಶೇಷನ್ರಾ?ಮತ್ತೆ ಕೂಸಿಂದು ಮದ್ವೆ ಗಿದ್ವೆ ನಿಕ್ಕಿ ಆತ ಹೆಂಗೆ? ರಾಶೀ ಜನ ಇದ್ವಪ್ಪಾ ಹೊರ್ಗೆಲ್ಲವಾ ರಾಧೆಯ ಒಳ ಮನಸು ಸೀತಾರಾಂ ಹೆಗಡೇರು ಯಾವಾಗ ಮಾತಿಗೆ ಸಿಗಬಹುದೆಂಬ ಲೆಕ್ಕಾಚಾರದಲ್ಲೇ ಕುತೂಹಲವನ್ನು ಹೀಗೆ ಪ್ರಶ್ನೆಯಾಗಿಸಿತು.
ಅಲ್ದೇ ರಾಧೇ. ಕೂಸಿನ ಮದ್ವೆ ನಿಕ್ಕಿ ಆದ್ರೆ ನಿಂಗೆ ಹೇಳಗಿದ್ದೆ ಇರ್ತ್ನನೆ? ಇದು ಇಲೆಕ್ಷನ್ ಗಲಾಟೆನೇ. ಅದೇ ಜನ ಈಗ ಬಂತಲಿ ಇಲೆಕ್ಷನ್ನು. ಇನ್ನೊಂದು ತಿಂಗ್ಳು ಹಿಂಗೆಯಾ. ನಿನ ಹೆಗಡೇರ ಮಾತಾಡ್ಸುದೇ ಕಷ್ಟ ಮಾರಾಯ್ತಿ. ಊಟ ನಿದ್ರೆ ಕೊಡ್ತ್ವಿಲ್ಲೆ.
ರಾಧೆಗೆ ಏನು ಹೇಳಲೆಂದು ತೋಚಲಿಲ್ಲ. ಹೆಗಡ್ತೀರೇ ಹೀಗೆ ಹೇಳಬೇಕಾದ್ರೆ ನನಗೆಲ್ಲಿ ಮಾತಿಗೆ ಸಿಕ್ಕಾರು? ಅಂತ ಯೋಚನೆ ಶುರುವಾಯಿತು ಅವಳಿಗೆ. ಪರಿಚಯದ ಹಲವರು ಮಾತಾನಾಡುತ್ತಿದ್ದರೂ ಊಟ ಮುಗಿಸಿ ಹೊರಟಾಗಲೂ ಅವಳಿಗೆ ಹೆಗಡೇರು ಕಣ್ಣಿಗೂ ಕಾಣಲಿಲ್ಲ. ಹೋಗುತ್ತಿರುವಾಗಿಗಿಂತಲೂ ಹೆಜ್ಜೆ ಭಾರವಾಗಿಸಿಕೊಂಡು ಮರಳಿದಳು ರಾಧೆ.




ಅವತ್ತೂ ಸಂಜೆಯ ಹೊತ್ತಿಗೆ ಮಗ ಎಂದಿನಂತೆ ಟೀ ಶರ್ಟ  ಬಿಟ್ಟು ಹೊಸದಾಗಿ ಹೊಲಿಸಿ ತಂದಿಟ್ಟುಕೊಂಡ ಕೆಂಪು ಚೌಕಳಿ ಮನೆಮನೆ ಇರುವ ಶರ್ಟ ಅಂತದ್ದೇ ಚೌಕಳಿ ಬಣ್ಣದ ಲುಂಗಿ ಸುತ್ತಿಕೊಂಡು ಹೆಗಲಿಗೊಂದು ಟಕರ್ೀಸು ಹಾಕಿ ಪೌಂಡ್ಸ್ ಪೌಡರ್ ಮೆತ್ತಿ ಮುಖ ಬಿಳಿಗಾಗಿಸಕೊಂಡು ಹೊರಟಾಗ ನಾಲಿಗೆ ತುದಿವರೆಗೂ ಬಂದ ಪ್ರಶ್ನೆ ಹೊರಬೀಳಲಿಲ್ಲ. ಅವನಪ್ಪನೂ ಟೀವಿ ಪರದೆಯಿಂದ ಕಣ್ಣು ಇತ್ತ ಹಾಯಿಸಲಿಲ್ಲ. ಗೇಟು ತೆರೆದು ಹೊರಟೇ ಹೋದ ಮಗನ ಹಿಂದೆಯೆ ದೊಡ್ಡ ನಿಟ್ಟುಸಿರು ಹೊರಬಂತು ಅವಳಿಂದ. ಇನ್ನೆಂತ ಮಾಡೂದಪ್ಪ ಭಗವಂತ ಎಂದು ತಲೆಯ ಮೇಲೆ ಕೈ ಹೊತ್ತಳು ರಾಧೆ.


      ಸಂತು ಬಹಳ ಉತ್ಸಾಹಿತನಾಗಿದ್ದ.  ಏನೇನು ಗೊತ್ತಿಲ್ಲದ ಹಳ್ಳಿ ಗುಗ್ಗು ತಾನು ಅಂತ ಅವನಿಗೆ ಅನ್ನಿಸ್ತಿತ್ತ್ತು ಹಲವು ಬಾರಿ. ತನ್ನ ಕ್ಲಾಸ್ಮೇಟ್ಸ್ಗಳೆಲ್ಲ ಇಂಜನಿಯರು, ಲೆಕ್ಚರು, ಅದೂ ಇದು ಅಂತ ನೌಕರಿ ಹಿಡಿದು ಊರಿಗೆ ಸ್ಟೈಲಾಗಿ ವಾಪಸ್ಸು ಬಂದಾಗೆಲ್ಲಾ ಅವನಿಗೆ ಒಳಗೊಳಗೆ ಖಿನ್ನತೆ ಆವರಿಸುತ್ತಿತ್ತು. ಬಣ್ಣ ಬಣ್ಣದ ಮೊಬೈಲ್ಗಳು.ಕೈಯಲ್ಲೇ ಹಿಡಿದುಕೊಂಡು ಪಾಟಿಯಂತೆ ಕಾಣುವ ಟ್ಯಾಬ್ ಗಳು! ಕುಟುಕುಟು ಕುಟ್ಟಿ ಇಡೀ ಪ್ರಪಂಚ ತೋರಿಸುವ ಲ್ಯಾಪ್ಟಾಪುಗಳು ಇವನ್ನೆಲ್ಲ ಬೀಗುತ್ತ ತೋರಿಸುವ ಹಳೆಯ ಗೆಳೆಯರು ಅವನನ್ನು  ಸಂತು ನಿಂಗೇನೂ ಗೊತ್ತಿಲ್ಲ ಕಣೋ ಅಂತ ಹೇಳುವುದಕ್ಕೇ ಕಾದಿದ್ದವರಂತೆ ತೋರುತ್ತಿದ್ದರೂ ಒಮ್ಮೆಯೂ ಮನಸಿನ ಮಾತು ಹೊರಗಿಟ್ಟ ಪೋರನಲ್ಲ ಅವ. ಸುಮ್ಮನೆ ಬಿಳಿ ನಗೆಯಾಡಿ ಬಂದುಬಿಡುತ್ತಿದ್ದ. ತನಗೂ ಕಲಿಬೇಕೆಂಬ ಬಯಕೆಯನ್ನೂ ತೋರಿಸಿಕೊಂಡವನಲ್ಲ. ತಾನಾಯಿತು ತನ್ನ ತೋಟ ಮನೆ ಗದ್ದೆ, ವಾಲಿಬಾಲ್ ಮ್ಯಾಚು, ಸಿಡಿ ಬೆಟ್ಟದ ಅಂಚು ಎಂಬಂತಿದ್ದ ಅವನಿಗೂ ಒಳಗೊಳಗೆ ಈ ಹೊಸ ಪ್ರಪಂಚದ ಪುಳಕಗಳನ್ನೆಲ್ಲ ಅನುಭವಿಸಬೇಕೆಂಬ ಬಯಕೆ ತೀವ್ರವಾಗತೊಡಗಿತ್ತು. ಅದಕ್ಕೆ ಸರಿಯಾಗಿ ಆಚೆತೋಟದ ಅವರ ಮನೆಯಲ್ಲಿ  ಬಿಳಿ ಬಿಳೀ ನಾಯಿಮರಿ ಇದ್ದಾವೆಂದು  ನೋಡಲು ಹೋದ ಅವತ್ತು ಅವನಿಗೆ ನಿಧಿ ಸಿಕ್ಕಂತಾಗಿತ್ತು. . ಅಷ್ಟೇ ಅಲ್ಲ ಅದು ತನ್ನ ಕೈಗೇ ಸಿಗಲೆಂದೇ ಬಂದಿದೆಯೆಂಬ ಹೊಸದೊಂದು ಕನಸು ಅವನನ್ನು ಸಿಡೀ ಬೆಟ್ಟದ ಅಂಚಿಂದ ರೆಕ್ಕೆ ಕಟ್ಟಿ ಹಾರಿದಷ್ಟು ಖುಶೀ ಆಗಿತ್ತು.  ಕನ್ನಡ ಶಾಲೆಯಲ್ಲಿ ಸರಿಯಾಗಿ ಇಂಗ್ಲೀಷ್ ಕಲಿಯದ್ದರ ಬಗ್ಗೆ ಅವನ ಬಗ್ಗೆ ಅವನಿಗೇ ಇದ್ದ ಬೇಜಾರೆಲ್ಲ ಇಂಗ್ಲೀಷ್ ಮಾಸ್ತರೆ ಸರಿ ಇಲ್ಲ ಅಂತ ಸಮಾಧಾನ ಪಟ್ಕಂಡಿದ್ದು ಹೈಸ್ಕೂಲಿನಲ್ಲಂತು ಇಂಗ್ಲೀಷ್ ಕಲಿಸಲು  ಬಂದ ಮೇಡಂ ಗೋಳು ಹೊಯ್ಕಂಡಿದ್ದೇ  ನೆನಪಿಗಿರೋದು. ಆದರೀಗ ಅದೆಲ್ಲ ಮರೆತೇ ಹೋಯ್ತು. ಇಂಗ್ಲೀಷು ಕಲಿಯದ್ದರಿಂದ ಮೊಬೈಲು, ಕಂಪ್ಯೂಟರ ನ ಇಡೀ ಪ್ರಪಂಚದಿಂದ ತನ್ನ ಹೊರಗಿಟ್ಟಿದ್ದಾರೆನ್ನಿಸಿದ ಆ ಅಸಹನೆ ಕೂಡ ಈ ಸಂಂಭ್ರಮದೊಳಗೆ ಮರೆಯಾಯಿತು.ಇವೆಲ್ಲ ಆದದ್ದು ಆಚೆ ತೋಟದ ನಾರಣಪ್ಪನ ಮನೇಲಿ ಅವಳು ಬಂದಾಗಿಂದ. ಯಾವುದೋ  ಬೇರೇ ಪ್ರಪಂಚವೇ ಕೈಗೆ ಸಿಕ್ಕಷ್ಟು ಕುಶಿ ಆಯಿತು ಅವನಿಗೆ ಪ್ರಾಚೀ ಎಂಬ ಡಾಕ್ಟರಣೀ ಅವನಿಗೆ ದೋಸ್ತಿ ಆದಾಗಿಂದ.!

   ಅಪ್ಪ ಆಯಿ ಯಾರೂ ಕಲಿಸ್ದೇ ಇದ್ದ ನೂರಾರು ವಿಷಯ ಕಲಿಸ್ತಾ ಇದ್ದ  ಅವಳು ಅವನಿಗೆ ಸಾಕ್ಷಾತ್ ದೇವತೆಯಂತೆ ಕಾಣ್ತಾ ಇದ್ದಾಳೆ.. ನಾರಣಪ್ಪನ  ಮಗಳು ಸಿಂಧುವಿನ ಗೆಳತಿಯಂತೆ ಅವಳು. ಏನೋ ರಜೆಗೆಂದು ಬಂದವಳು ಇಲ್ಲಿಯೇ ನಿಂತಿದ್ದಾಳೆ. ಅಕಸ್ಮಾತ್  ಅವತ್ತು ವಾಲಿಬಾಲ್ ಆಟ ಆಡುವಾಗ  ನೋಡಿದವಳು ಸುಮ್ಮನೆ ರಸ್ತೆಯಲ್ಲಿ ಬರುತ್ತಿದ್ದ ನನ್ನ ನಿಲ್ಲಿಸಿ ಮಾತನಾಡಿದಾಗ ಇವಳ್ಯಾವ ಸೀಮೆ ಹೆಣ್ಣಪ್ಪ ಅನ್ನಿಸ್ತ್ತು. ಪರಿಚಯ ಎಲ್ಲ ಹೇಳ್ಕೊಂಡು ಹಾಗೆ ದೋಸ್ತಿ ಮಾಡಿಕೊಂಡ್ಬಿಟ್ಳು. ಬಿಳಿ ಬೀಳೀ ಬಟ್ಟೆ ಹಾಕ್ಕೊಂಡು  ಬೆಟ್ಟ ಗುಡ್ಡ ಸುತ್ತೋಕೆ ಹೊರಡುವ ಅವಳೊಂಥರಾ ವಿಚಿತ್ರ ಅನ್ಸಿತ್ತು ಅವಂಗೆ. ನಾರಣಪ್ಪ ಮತ್ತು ಸಿಂಧು ಅವಳಿಗೆ ನಮ್ಮೂರ ಸಿಡಿ ಬೆಟ್ಟದ ತುದಿವರೆಗೂ ತೋರ್ಸಿ ಬರಲು ಕರೆದಾಗ ಸಿಡಿ ಬೆಟ್ಟದ ಬಗ್ಗೆ ತನಗೆ ಗೊತ್ತಿದ್ದಷ್ಟು ಇನ್ಯಾರಿಗೆ ಗೊತ್ತು ಎಂದು ಹೆಮ್ಮೆಯಿಂದ ಬೀಗಿದ್ದ ಅವನು. ಹಾಗೆ ಹಾಗೆ ದಿನಾ ಸಂಜೆ ವಾಕಿಂಗ್ ಅಂತ ನಾರಣಪ್ಪ   ಸಂತು ಮತ್ತು ಪ್ರಾಚೀ ಬೆಟ್ಟ ಗುಡ್ಡ ಸುತ್ತಾಡುತ್ತಿದ್ದರೆ ರಾಧೇ ಮಗನ ಬಗ್ಗೆ ಚಿಂತೆ ಮಾಡಿ ಮಾಡಿ ಹೈರಾಣಾಗಿದ್ದಳು. ನಾರಣಪ್ಪನ ಮನೆ ತುಂಬ ಬೆಳೆದ ಹೆಣ್ಣುಮಕ್ಕಳಿದ್ದಾರೆ. ಜಾತೀಲಿ ಒಂದು ಗುಲಗಂಝಿ ತಮಗಿಂತ ಮೇಲೇಯೇ ಅವರು. ದುಡ್ಡಿರೋ ಜನ. ಇನ್ನೇನಾದೀತು ಎಂದು ಅವಳದ್ದು ಒಂದೇ ಚಿಂತೆ. ಇದ್ದೊಬ್ಬ ಮಗನ ದೇವರೇ ಕಾಪಾಡಬೇಕು ಅಂದುಕೊಂಡಳು. ಸರಿಯಾಗಿ ವಿಚಾರಿಸಿಕೊಳ್ಳಬಹುದಾದ ಸೀತಾರಾಂ ಹೆಗಡೆಯವರೂ ಅವಳಿಗೆ ಸಿಗಲೇ ಇಲ್ಲ.




     ಅವತ್ತೊಂದಿನ  ಸಿಡಿ ಬೆಟ್ಟದ ಪಶ್ಚಿಮಾಭೀಮುಖದಲ್ಲಿ ಹೊರಟರು ನಾರಣಪ್ಪ, ಸಂತು ಮತ್ತು ಪ್ರಾಚೀ. ಎಂದಿನಂತೆ ಅವಳ ಕೈಲೊಂದು ಕ್ಯಾಮರಾ, ಕುತ್ತಿಗೆಯಲ್ಲಿ ಉದ್ದೀ ಸುಂಡಿಯ ಬೈನಾಕ್ಯುಲರ್. ನೀಲಿ ಜೀನ್ಸಿನ ಮೇಲೊಂದು ಬಿಳಿ ಬಣ್ಣದ ಟಾಪು. ಅವಳು ನಮ್ಮೂರ ಹುಡ್ಗೀರ ತರಾ ದುಪ್ಪಟ್ಟಾ ಹೊದ್ದು ಬರೋದಿಲ್ಲ ಅಂತ ಅವನು ಗಮನಸಿದ್ದ. ಅವಳ ಬಿಳೀ ಶಂಖದಂತ ಕೊರಳಿನ ಸುತ್ತ ಒಂದು ಚೈನೂ ಲಾಕೆಟ್ಟೂ ಕಂಡಿಲ್ಲ ಅವನಿಗೆ.  ಎಲ್ಲಾದರೂ ಅಪರೂಪಕ್ಕೆ ಅವಳೇನಾದ್ರೂ ಕಾರಣಕ್ಕೆ ಬಗ್ಗಿದ್ರೆ ಅವಳ  ಕೊರಳಿನ ಆಳ ಕಾಣುತ್ತಿತ್ತು.  ಬೇಡಬೇೆಡ ಅನ್ನಿಸದರೂ  ಅವಳು ಬೇಕೆಂತಲೇ ಹಾಗೆ ಮಾಡುತ್ತಾಳೆ ಅನ್ನಿಸ್ತಿತ್ತು ಅವನಿಗೆ. ಅವಳ ಬೋಲ್ಡ್  ಆಗಿರೋ ಮಾತು ಸಿಗ್ಗಿಲ್ಲದ ನಡವಳಿಕೆ ಅಲ್ಪ ಸ್ಡಲ್ಪ ಮೈ ಕೈ ತಾಗಿದರೂ ನಕ್ಕು ಸುಮ್ಮನಾಗುತ್ತಿದ್ದ ಕಂಗಳು ಒಂಥರಾ ಸಂತು ಅವಳ ಆರಾಧಕನಾಗಿಬಿಟ್ಟಿದ್ದ.  ಆಗಲೇ ತಿಂಗಳು ಸಮೀಪಿಸಿದೆ ಇದೇ ಸುತ್ತಾಟದಲ್ಲಿ. ಅವಳೊಂದಿಗೆ ಕ್ಯಾಮರ ಕ್ಲಿಕ್ ಮಾಡೋದು, ಲ್ಯಾಪ್ ಟಾಪಿಗೆ ಹಾಕಿದ ಪೋಟೋಗಳ ನೋಡೋದು ಎಲ್ಲ ಕಲಿತಿದ್ದಾನೆ ಸಂತು.  ಬೆಟ್ಟದ ತುದಿತುದಿಯಲ್ಲಿ ನಿಂತಾಗ ಮಾತ್ರ ಬರುವ ನೆಟ್ ವರ್ಕ ನಲ್ಲಿ ಮೊಬೈಲ್ ಆಪರೇಟಿಂಗ್ ಸಹ ಅವನಿಗೆ ಅರ್ಥವಾಗಿದೆ ಈಗ. ಯಾವ ಸ್ಥಳದಲ್ಲಿ ನಿಂತರೆ ನೆಟ್ವರ್ಕ ಸಿಗಬಹುದೆಂಬ ಅಂದಾಜು ಅವನಿಗಾಗಿದೆ. ಇಷ್ಟೆಲ್ಲ ಗೊತ್ತಾದರೂ ಒಮ್ಮೆಯೂ ತಮ್ಮ ಜೊತೆಗೆ ಸಿಂಧೂ ಎಂಬ ಪ್ರಾಚೀ ಗೆಳತಿ ಯಾಕೆ ಬರುವುದಿಲ್ಲ ಈ ಸುತ್ತಾಟಕ್ಕೆ? ಎಂಬ ಪ್ರಶ್ನೆ ಒಳಗೊಳಗೆ ಸುತ್ತುತ್ತಿದೆ. ಈ ಡಾಕ್ಟರಣೀ ಇಷ್ಟು ದಿನ ಸುತ್ತಾಡಿ ಸುತ್ತಾಡೀ ಇಷ್ಟೆಲ್ಲ ಪೋಟೋ ತೆಗೆದು ಏನು ಮಾಡುತ್ತಾಳೆ ಎಂಬುದೂ ಒಂದು ಪ್ರಶ್ನೆ ಇದೆ. ನಾರಣಪ್ಪ ಮಾತಿಲ್ಲದ ಮೂಗನಂತೆ ತಮ್ಮಜೊತೆ ತಿರುಗುತ್ತಿದ್ದಾನೆ. ಅವನ ಕೈಯಲ್ಲಿನ ದೊಣ್ಣೆ ಕೆಲವು ಗಿಡಗಳ ಸವರಿದ್ದು ಬಿಟ್ಟರೆ ಇನ್ನೇನೂ  ಇಲ್ಲ. ದಿನಾ  ನಕ್ಷೆ ತೆಗೆದು ಎಲ್ಲಿಗೆ ಹೋಗಿ ತಲುಪಬೇಕೆಂಬ ಮ್ಯಾಪ್ ಗುರುತು  ತೋರಿಸುತ್ತಾಳೆ ಈ ಹುಡುಗಿ. ಅಲ್ಲಿಯವರೆಗೂ ಕರೆದೊಯ್ಯುವುದು ಸಂತು ಮತ್ತು ನಾರಣಪ್ಪ ಕೆಲಸ. ಒಂದರ್ಧ ಗಂಟೆ ಅಲ್ಲಿಯೇ ಕುಳಿತು ಏನೇನೋ ಲೆಕ್ಕಾಚಾರ ಹಾಕಿಕೊಳ್ಳುವುದು ಅವಳ ವಾಡಿಕೆ. ಮತ್ತೆ ವಾಪಸ್. ಸುಮಾರು 25 ಎಕರೆಯ ಆ ಅರಣ್ಯ ಪ್ರದೇಶದ ಇಂಚಿಂಚೂ ಬಿಡದೇ ಸಂತು ಅವಳಿಗೆ ತೋರಿಸಿದ್ದ. ಅವನ ಪ್ರಶ್ನೆಗಳೂ  ಹಾಗೇ ಉಳಿದಿದ್ದವು. 
ಅವತ್ತೂ ಅವರು ಸಿಡಿ ಬೆಟ್ಟದ ಪಶ್ಚಿಮ ತುದಿಯ ತಲುಪಿದರು. ನಾರಣಪ್ಪ ಸ್ವಲ್ಪ ಸುಸ್ತಾದಂತೆ ಕಂಡರು. ಅವನೇ ನಾರಣಪ್ಪನ ಒಂದುಕಡೆ ಕುಳ್ಳಿರಿಸಿ ನೀರು ಕುಡಿಸಿ ವಿಶ್ರಾಂತಿಗೆ ಬಿಟ್ಟು  ದೂರದಲ್ಲಿ ಕುಳಿತ ಪ್ರಾಚೀ ಯ ಹಿಂದುಗಡೆಯಿಂದ ಮೆಲ್ಲಗೆ ನಡೆದ. ಅಷ್ಟು ದಿನದ ಸಲಿಗೆ ಅವನಲ್ಲಿ ಪುಟ್ಟ ಹುಡುಗಾಟವಾಡಲು ಪ್ರೇರೇಪಿಸಿತ್ತಷ್ಟೇ. ಲ್ಯಾಪ್ ಟಾಪಿನ ಮೇಲೆ ಅನೇಕ ಪೋಟೋಗಳ ಬಿಚ್ಚಿಕೊಂಡ ಅವಳು ಮಾಡ್ತಾ ಇರೋ ಕೆಲಸದ ಬಗ್ಗೆ ಕುತೂಹಲ ಶುರುವಾಯಿತು.
ಸ್ಕ್ರೀನ್ ಬದಲಾದಂತೆ ಅವನು ವಿಚಿತ್ರ ಆವೇಗಕ್ಕೊಳಗಾದ. ಇಡೀ  ಸಿಡಿ ಬೆಟ್ಟ ದೇವಲೋಕದಂತ ಒಂದು ಬಣ್ಣ ಬಣ್ಣದ ನಕ್ಷೆ ಅಲ್ಲಿತ್ತು. ಸಿಡೀ ಬೆಟ್ಟವ ಸುತ್ತೀ ಬಂದ ಅಘನಾಶಿನಿಯ ಮಡಿಲಲ್ಲಿ ಹಲವು ಬೋಟುಗಳ ಚಿತ್ರಗಳಿದ್ದವು! ಅಂದರೆ ಸಿಡಿ ಬೆಟ್ಟವನ್ನು ಹೀಗೆಲ್ಲ ಮಾಡುವಳೇ ಈ ಹುಡುಗಿ? ಇವಳಿದ್ನಾ ಖರೀದಿಸುತ್ತಿದ್ದಾಳೆಯೇ? ಇಷ್ಟು ದೊಡ್ಡ ಬೆಟ್ಟವನ್ನು ಖರೀದಿ ಮಾಡುವಷ್ಟು ಶ್ರೀಮಂತಳೇ?  ಪ್ರಶ್ನೆಗಳ ಮೇಲೆ ಪ್ರಶ್ನೆಗಳೇಳುತ್ತಿದ್ದಂತೆ ಅವಳಿಗೆ ಕಾಲ್ ಬಂತು.
ಲ್ಯಾಪ್ ಟಾಪ್ ಮೇಲೇ ಅವನದೇ ಅನೇಕ ಚಿತ್ರಗಳು ಮೂಡುತ್ತದ್ದವು. ಅವನಿಗೆಂದೂ ಅರಿವಾಗದ ರೀತಿಯಲ್ಲಿ ಅವಳ್ಯಾವಾಗ ಈ ಪೋಟೋಗಳನ್ನು ತೆಗೆದಳು? ಅವನಿಗೆ ನಾಚಿಕೆಯೆನ್ನಿಸಿತು.  ಅವನೆಂದು ಮೈಕಟ್ಟು ಪ್ರದರ್ಶನ ಮಾಡಿದವನಲ್ಲ. ರಾಧೆ ಯೆದುರು ಮಾತ್ರ ಹಾಗೆ ಅವನು ಶರ್ಟ್ ಬಿಚ್ಚಿ ನಿಲ್ಲುತ್ತಿದ್ದದ್ದು. ಅದೂ ಆಯಿಯ ಕೈನ ಎಣ್ಣೆ ಸ್ನಾನಕ್ಕಾಗಿ ಮಾತ್ರ.  ಆಯಿ  ಆಗಾಗ ಹುಡ್ಗೀರ ಎದ್ರಿಗೆ ಹಿಂಗೆಲ್ಲ ಶರ್ಟ ತೆಗೆದು ನಿಲ್ಲಬ್ಯಾಡ ಕಟ್ಟು ಮಸ್ತು ದೇಹ ನಿಂದು. ದೃಷ್ಟಿ ಆದೀತು ಅಂದಿದ್ದು ನೆನಪಿಗೂ ಬಂತು. ಆದ್ರೂ ಡಾಕ್ಟರಣಿ ಪ್ರಾಚೀ ತುಂಬ ಒಳ್ಳೆ ಹುಡುಗಿ ಅಂದುಕೊಂಡು ಅದನ್ನೆಲ್ಲ ದೂರ ಸರಿಸಿದ. ಯಾಕೋ ಅವಳ ಲ್ಯಾಪ್ ಟಾಪಿನಲ್ಲಿ ತನ್ನ ಅಂಥ ಪೋಟೋಗಳು ಅವನಿಗೆ ಒಳಗೊಳಗೆ ಮಜವೆನ್ನಿಸದರೂ  ಇಂಗ್ಲೀಷ್ ನಲ್ಲೇ ಮಾತನಾಡುವ ಅವಳ ಮೋಡಿ ಮಾಡುವ ಕಂಗಳು ಅವನಿಗ್ಯಾಕೋ ಭಯ ಹುಟ್ಟಿಸಿತು ಮೊದಲ ಬಾರಿಗೆ ಏನು ಮಾಡುತ್ತ್ತಿದ್ದಾಳೆ ಈ ಹುಡುಗಿ?ತಿಳಿಯಲೇಬೇಕೆಂಬ ಹಠ ಹುಟ್ಟಿಕೊಂಡಿತು ಆ ಕ್ಷಣ ಸಂತುವಿನಲ್ಲಿ! ಪೆದ್ದು ನಗು ನಗುತ್ತ ಬೆಟ್ಟದ ತುದಿಯಲ್ಲಿದ್ದ ಬಂಡೆಗಲ್ಲಿನಮೇಲೆ ನಿಂತ..
 ದೂರ ದೂರದ ವರೆಗೂ ಹಸಿರು ಹಸಿರು ಹಸಿರು. ಅಲ್ಲಿ ನಿಂತು ಉಸಿರಾಡಿದರೆ ರಕ್ತವೂ ಹಸಿರಾಗಬೇಕು! ಅಂತ ವನರಾಜ್ನಿ ಅವಳು! ಸಿಡಿ ಬೆಟ್ಟದ ತನ್ನಂತ ಹಸಿರು ಪ್ರೇಮಿಗಳ ಧ್ಯಾನ ತಾಣ. ನಾಗರಿಕತೆಯ ಸೋಂಕಿಲ್ಲದೆ ಶುದ್ಧ ಹಸಿರಿನ ಸಮೃದ್ಧ ಕಾಡಿನ ಆ ಬೆಟ್ಟ ಅದೆಷ್ಟು ಮುಗ್ಧವಾಗಿ ಅಲ್ಲಿ ನೆಲೆ ನಿಂತಿತ್ತು! ತನ್ನಂತೆ. ಈ ಪ್ರಪಂಚದ ಯಾವ ಘನ ನಾಗರಿಕತೆಗಳ ಅವಶ್ಯಕತೆ ಇವಳಿಗಿಲ್ಲ. ಅಘನಾಶಿನಿ ಮೈದೆರೆದು ಸುತ್ತಿಕೊಂಡಿರುವ ಈ ನೆಲೆ ಯಾವ ದೇವಸ್ಥಾನಗಳಿಗೂ ಕಮ್ಮಿ ಇಲ್ಲದ ಪೃಕೃತಿ ದೇವಿಯ ವಾಸಸ್ಥಳ. ಇದರ ಮೇಲೂ ಇವರ  ಕಣ್ಣು ಬಿದ್ದಿತೆಂಬ ಅರಿವೇ ಇಲ್ಲದ ಮೂರ್ಖನಂತೆ ನಾನು ಈ ಸಿಡಿ ಬೆಟ್ಟವ ಪರಿಚಯಿಸಿದೆನಲ್ಲವಾ ಈ ಬಿಳಿ ಕೋಟಿನ ಹುಡುಗಿಗೆ? ಛೇ.. ತನ್ನದೇ ಜೀವ  ಯಾರದ್ದೋ ಒತ್ತೆಯಾಳಾದಂತೆ ವಿಲಿವಿಲಿ ಒದ್ದಾಡಿತು ಅವನ ಮನಸು.
ಇನ್ನೂ ಸಾವಿರ ಪ್ರಶ್ನೆಗಳು ಒಮ್ಮೇಲೇ ಹುಟ್ಟಿಕೊಂಡವು.  ಉತ್ತರ ಸಿಗಬೇಕೆಂದರೆ ಅವನಿಗೆ ಒಂದೇ ದಾರಿ ಸಿಂಧೂ.

ಇಲೆಕ್ಷನ್ನಿನ ಗಡಿಬಿಡಿಯ ನಡುವೆಯೇ ಒಂದಿನ ಹೆಗಡೇರು ಅಂತೂ ಇಂತೂ ಸಿಕ್ಕಿದ್ದರು ರಾಧೆಯ  ನಸೀಬಕ್ಕೆ. ಅವತ್ತು ಅವಳು ಕ್ಷಣ ಬಿಡದೇ ಅಲವತ್ತುಕೊಂಡಳು. ಮಗ ಅವಳ್ಯಾವಳೋ ಡಾಕ್ಟರಣಿಯ ಜೊತೆ ಬೆಟ್ಟ ಅಲೆಯುತ್ತದ್ದಾನೆಂದೂ ಅಪ್ಪನ ಅಂಕೆ ಇಲ್ಲದ ಮಗ. ಅಪ್ಪನ ಹಾಗೆ ಕುಡುಕ ಜವಾಬ್ಧಾರಿ ಇಲ್ಲದವನಾದರೆ ತಾನು ಜೀವ ಇಟ್ಟುಕೊಂಡು ಬದುಕಲಾಗದೆಂದೂ ಕಣ್ಣೀರು ಹಾಕಿದಳು. ಅದಾಗಲೇ ಹೆಂಗಸರ ಸುದ್ದಿ ಮನೆಯಲ್ಲಿ ಇದು ಹರಿದಾಡಿದ್ದು ಅವರ ಕಿವಿಗೂ ಬಿದ್ದಿದ್ದರಿಂದ ಸ್ವಲ್ಪ ಗಂಭೀರವಾಗೇ ಅವಳಿಗೆ ವಿಚಾರಿಸುವುದಾಗಿ ಭರವಸೆಯಿತ್ತರು ಸೀತಾರಾಂಹೆಗಡೆಯವರು. ಈ ಬಾರಿಯ ಇಲೆಕ್ಷನ್ನು ಅವರಿಗೂ ತಲೆನೋವಾಗಿ ಪರಿಣಮಿಸಿತ್ತು. ಯಾರನ್ನೂ ವಿರೋಧ ಕಟ್ಟಿಕೊಳ್ಳುವ ಹಾಗಿರಲಿಲ್ಲ. ಎಲ್ಲ ಸಮಸ್ಯೆಗೂ ನಾಜೂಕದ ಪರಿಹಾರ ಹುಡುಕುವ ತಾಳ್ಮೆಯಿಂದ ಮಾತನಾಡಿ ಕಳಸಿದರು ರಾಧೆಯ. ರಾಧೇಯೀಗ ಸ್ವಲ್ಪ ಹಗುರ! ಸಂತು ವಿನ ತಲೆ ಭಾರಭಾರ.


   ಹಳ್ಳೀಮನೆಯ ಮಧ್ಯೆ ಸಿಂಧೂ ವೆಂಬ ಸುಂದರಿಯ ಹಿಡಿದು ನಿಲ್ಲಿಸಿ ಮಾತನಾಡಿಸುವುದೇನು ಅಷ್ಟು ಸುಲಭದ ಮಾತ? ನಾರಣಪ್ಪ ಪ್ರಾಚೀ ಜೊತೆ ಅಲೆಯಲು ತನ್ನ ಕರೆದೊಯ್ದರೂ ತನ್ನ ಮೂವರು ಮಕ್ಕಳನ್ನೂ ಅವನ ಹತ್ತಿರಕ್ಕೆ ಸೇರಗೊಡಲಿಲ್ಲ. ಜಾಸ್ತಿ ಮಾತೂ  ಆಡುತ್ತಿರಲಿಲ್ಲ. ಏನೋ ಸಮಯ ಸಾಧಿಸಿ ಅಂಥೂ ಇಂಥೂ ಅವನು ಸಿಂಧೂ ಹಿಡಿದು ಮಾತನಾಡಿಸಲು ನಾಲ್ಕು ದಿನ ಬೇಕಾಯಿತು. ಅಲ್ಲಿಯವರೆಗೂ ದಿನ ಮೊದಲಿನಂತೆ ಕಳೆಯುತ್ತಿತ್ತು. ಅವನೂ ಪೆದ್ದು ಪೆದ್ದು ಪ್ರಶ್ನೆ ಕೇಳುತ್ತ ಹಾಗೇ ಇದ್ದ. ಅವತ್ತು ಬೆಳ್ಳಂಬೆಳಿಗ್ಗೆ ಸಿಂಧೂ ನದೀ ತೀರಕ್ಕೆ ಬಂದಾಗ ಕಾಯ್ದು ನಿಲ್ಲಿಸಿದ ಅವಳನ್ನು. ಎಂದೂ ಅವಳನ್ನು ಹಾಗೆ ಗಮನಿಸದ ಸಂತು ಆ ಚಂದದ ಹುಡುಗಿಯ ಬೆಳಗಿನ ಬೆಳಕಿನ ಹಣತೆಯಂತೆ  ನೋಡಿದ. ಬಂದ ಕೆಲಸ ನೆನಪಾಗಿ  ಈ ನಿನ್ನ ಪ್ರೆಂಡ್ ಎಂಥಕ್ಕೆ ಬಂದಿದ್ದು ಇಲ್ಲಿಗೆ? ಎಂಥ ಮಾಡ್ತಿದ್ದಾಳೆ ಅದು? ನೀ ಎಂಥಕ್ಕೆ ಕರ್ಕ ಬಂದಿದ್ದು? ಎಲ್ಲ ನಿಜ ಹೇಳು ಸಿಂಧು. ನಂಗೆ ಎಲ್ಲ ಗೊತ್ತಾಗಿದೆ.
  ನೀ ಸುಳ್ಳು ಗಿಳ್ಳೂ ಹೇಳದ್ಬ್ಯಾಡ ಮತ್ತೆ. ಪಟ್ ಪಟ್ ಅಂತ ಹೇಳು. ಒಂದೇ ಉಸಿರಿಗೆ ಗಟ್ಟಿಯಾಗಿ ಹೇಳಿದ ಅವ. ಅವನ ಆ ದನಿಗೆ ಬೆದರಿದ ಗುಬ್ಬಚ್ಚಿಯಂತೆ ಬಾಯಿ ಬಿಟ್ಟಳು ಅವಳು. ನಂಗೊತ್ತಿಲ್ಲ ಸಂತು. ಎಂಥದ್ದೋ ಪಾರೆಸ್ಟು ರೆಸಾರ್ಟ ಮಾಡ್ತೇನೆ ಅಂಥಾಳೆ.
 ನಿಂಗೆಲ್ಲಿ ಸಿಕ್ಕಿದ್ದು? ನಿನ್ನಪ್ಪ ಎಂಥಕ್ಕೆ ಅವಳು ಹೇಳೀದ್ದಕ್ಕೆಲ್ಲ ಹುಂ  ಹಾಕ್ತ? ನೀ ಎಂಥಕ್ಕೆ ಕಾಲೇಜು ಬಿಟ್ಕಂಡು ಕೂತಿದ್ದೆ ಮನೇಲಿ?
ಅದು .ಅದು.
ಸುಳ್ ಹೇಳೀದ್ರೆ ಪೋಲಿಸಿಗೆ ಹೇಳ್ಕೊಡ್ತೆ. ನಂಗೆಲ್ಲ ಗೊತ್ತಾಗದೆ ಅವಳ ಕಣ್ಣಲ್ಲಿ ಗಂಗಾ ಭವಾನಿ. ಆದ್ರು ಸಂತು ಗತ್ತು ಬಿಡಲಿಲ್ಲ
ನಾ ಕಾಲೇಜಿಗೆ  ಹೋಗ್ತಿದ್ದಾಗ ಒಬ್ಬವ್ನ ಲವ್ ಮಾಡ್ತಿದ್ದೆ ಸಂತು ಅವನು ಒಳ್ಳೆಯವನ ಹಂಗೆ ನನ್ನ ನಂಬಿಸ್ದ. ಅವ್ನ ನಂಬ್ಕಂಡ ಅವನ ಸಂಗ್ತಿಗೆ ನಾನಿದ್ದ ಪೋಟೋ ವಿಡಿಯೋ ಎಲ್ಲಾ ತಗಂಡು ಅವ್ನು ಈ ಪ್ರಾಚೀನೂ ಸೇರ್ಕಂಡು ನನ್ನ ಅಪ್ಪನ ಹೆದರಿಸ್ದ. ಸಿಡಿ ಬೆಟ್ಟ ದಲ್ಲಿ ಅವರದ್ದು ಎಂಥಾ ಪ್ಲಾನು ನಂಗೊತ್ತಿಲ್ಲೆ. ಫಾರೆಸ್ಟು ರೆಸಾಟರ್ು ಹೇಳ್ತ ಇರ್ತ. ಉಳಿದದ್ದೆಲ್ಲ ಅವೇ ಮಾಡ್ಕೊಳ್ತಿವಿ ಅಂದ. ಬೆಟ್ಟದ ಪರಿಚಯ ಉಳಿಯಕ್ಕೆ ಜಾಗ ಊಟ ತಿಂಡಿ ಅಷ್ಟೇ ನಮ್ದು. ಮತ್ತೆಂತ ಗೊತ್ತಿಲ್ಲೆ ನಮ್ಗೆ. ದೇವರಾಣೆ. ಅವಳಿಗೆ ಅದಕ್ಕಿಂತ ಜಾಸ್ತಿ ಗೊತ್ತಿಲ್ಲ ಎಂಬುದು ಅವನಿಗೇ ಅನ್ನಿಸಿತು ಯಾಕೋ. ಆದ್ರೂ ಕೇಳಿದ ನನ್ನ ಪೋಟೋ ತೆಗದು ತೆಗದು ಇಟ್ಕಂಜು ಅದು ಎಂಥಾ ಮಾಡ್ತು ಅದರ?
ನೀ ನೋಡೂಕೆ ಚಂದ ಇದ್ಯಲಿ ಎತ್ತರಕ್ಕೆ ಚಂದಕ್ಕೆ ಇರೋ ಹುಡುಗರ ಪೋಟೋ ವೆಬ್ ಸೈಟಿಗೆ ಹಾಕಿದರೆ ಜಾಸ್ತಿ ಪ್ರಚಾರ ಆಗ್ತು ಅಂತ ಮಾತಾಡ್ತ ಇದ್ದಾಗ ಕೇಳಿದ್ದೆ  ಅವನಿಗೂ ಇದು ಯಾವುದರ ಪ್ರಚಾರ ಅರ್ಥವಾಗಲಿಲ್ಲ.
ಸರಿ ನೀ ಹೋಗೂ. ನಾ ಎಲ್ಲ ನೋಡ್ಕತ್ತೆ. ಎಲ್ಲ ಬಲ್ಲವರ ಫೋಸಿನಲ್ಲಿ ಅವಳನ್ನು ಕಳಿಸಿಬಿಟ್ಟ. ಅವನಿಗೂ ಗೊತ್ತಿಲ್ಲ ಏನು ಮಾಡಬೇಕೆಂಬುದು. 6 ಪ್ಯಾಕ್ ಹುಡುಗರ ಪೋಟೋಗಳಿಗೆ ಎಷ್ಟು ವ್ಯಾಲ್ಯೂ! ಏನಿದೆ ಪ್ರಚಾರ ಎಂಬುದು ಸಂತುನಂತ ಹಳ್ಳೀ ಹೈದನಿಗೆ ಹೇಗೆ ಗೊತ್ತಗ್ಬೇಕು?
  ಅವತ್ತೇ ಅವನಿಗೆ ಸೀತಾರಾಂ ಹೆಗಡೇರಿಂದ ಕರೆ ಹೋಯಿತು. ಇಲೆಕ್ಷನ್ನು ಪ್ರಚಾರದ ವಿಷಯ ಮಾತನಾಡುವುದಿದೆ ಎಂದು ಬರಹೇಳಿ ಹೋದ ಅವರ ಹಿಂಬಾಲಕರಲ್ಲೊಬ್ಬರಾದ ಗೊಂದ. ಅವರಿಂದ ಕರೆಯೆಂದಮೇಲೆ ಹೋಗದಿರುವುದು ಸಾಧ್ಯವೆ? ಸಂತು ಅವತ್ತು ನಾರಣಪ್ಪನಿಗೆ ಬರಲಾಗುವುದಿಲ್ಲವೆಂದು ಗೇಟಿನ ಬಳಿಯಿಂದಲೇ ಕೂಗಿ ಹೇಳಿ ಅದೇ ದಾರಿಯಿಂದ  ಹೆಗಡೇರ ಮನೆ ಹಾದಿ ತುಳಿದ. ಉದ್ದ ಕೂದಲಿನ ಆಲ್ಸೇಷಿಯನ್ ನಾಯಿ ನೋಡುತ್ತಲೇ ಖುಷಿಯಾಯಿತು ಅವನಿಗೆ. ನಾಯಿಗಳೆಂದರೆ ಅವನಿಗೆ ಮುದ್ದು ಪ್ರೀತಿ. ನಾರಣಪ್ಪನ ಮನೆಯಿಂದ ತಂದ ಬಿಳಿ ಬಿಳೀ  ನಾಯಿ ಮರಿಗಳೆರಡೂ ಸ್ವಲ್ಪ ದೊಡ್ಡವಾಗಿದ್ದವು ಈಗ.. ಬೆಳಗಿನ ಒಂದು ತಾಸು ಅವರ ಜೊತೆಗೇ ಕಳೆಯುತ್ತಿತ್ತು ಅವನದು. ರಾಧೆಯ ಧ್ವನಿ ತಿಂಡಿಗೆಂದು ಕೂಗಿದ ಮೇಲೇ ಅವನು ಒಳ ಬರುತ್ತದ್ದದು.ಮುಂದಿನ ಜಗುಲಿಯ ಮೇಲೆ ಹೆಗಡೇರು ಬೆಳ್ಳಿ ಕಟ್ಟಿನ ಕನ್ನಡಕ ಧರಿಸಿ ಎಲೆಯಡಿಕೆಯ ಮಡಿಸುತ್ತಿದ್ದರು.
      ಬಾ ಸಂತು. ಕುತ್ಗ. ಅವರು ಹಿರಿಯರಷ್ಟೇ ಅಲ್ಲ. ಊರಿಗೆ ಶ್ರೀಮಂತರೂ, ರಾಜಕೀಯ ಶಕ್ತಿಯೂ ಹೌದು. ಆದರೂ ಸರಳ ಜೀವಿಗಳು, ಪ್ರೀತಿ ವಿಶ್ವಾಸದ ನುಡಿ ಅವರ್ದು ಎಲ್ಲರ ಜೊತೆಗೂ.  ಸೋಪಾದಲ್ಲಿ ಬದಿಗೆ ಕುಳಿತಂತೆ ಒಳಮನೆಯಿಂದ ಚಾ ಕಪ್ಪು ಬಂತು. ಇಬ್ಬರಿಗೂ. ಅವರ ಪ್ರಶ್ನೆ ಗಳಿಗೆ ಮೊದಲು ಅನುಮಾನ ಮಾಡಿದರೂ ಸಿಡಿ ಬೆಟ್ಟ ಉಳಿಸೋರು ಅವ್ರೊಬ್ಬರೇ ಅನ್ನಿಸಿತು ಅವನಿಗೆ. ಸಂತು ಕೂಡ ತನ್ನ ಅನುಮಾನಗಳ ಬಿಚ್ಚಿಟ್ಟುಕೊಂಡ. ಅವರಾಗೇ ಕೇಳಿದ್ದು ಅವನಿಗೆ ಸ್ವಲ್ಪ ಧೈರ್ಯ ಬಂದಿತ್ತು. ಅವನಿಗೆ ತಿಳಿದಷ್ಟನ್ನೂ ಹೇಳೀದ ಮೇಲೆ ಅದೇನೋ ನಮ್ಮೂರ ಹೈಕಳ ಪೋಟೋ ಹಾಕ್ಕೊಂಡು ವೆಬ್ಸೈಟು ಮಾಡ್ತಾಳಂತೆ ಆ ಡಾಕ್ಟರಣಿ ಅಂತ ಹೇಳುವಾಗ ಅವನಿಗೆ ಮುಜುಗರವಾಗಿತ್ತು. ಅಷ್ಟು ಹಿರೇಕರೆದ್ರಿಗೆ ಹಂಗೆಲ್ಲ ಮಾತಾಡೋ ಅಭ್ಯಾಸ ಇದ್ದವನಲ್ಲ ಅವ. ಅಲ್ಲಿಂದ  ವಾಪಸ್ಸು ಹೊರಡುವಾಗ ಹೆಗಡೇರ ಮನೆ ನಾಯಿನು ಅವನ ಪ್ರೆಂಡಾಗಿತ್ತು. ಸಂತು ನಿರಾಳವಾಗಿದ್ದ. ಸುಮಾರು ದಿನದ ಮಣಭಾರ  ಇಳಿದಂತೆ ಮನೆಗೆ ಬಂದವನೇ ಅಪರೂಪಕ್ಕೆ ಆಯೀ  ಇವತ್ತು ತಿನ್ನೂಕೆ ಎಂಥಾ ಮಾಡ್ತೆ? ರಾಶೀ ದಿನಾತು ಬೋಂಡಾ ಮಾಡಿಕೊಡೇ ಅದು ರಾಧೇಯ ಸೆರಗಿನ ಮಗುವಿನ ದನಿ.
ರಾಧೇ ಅವತ್ತೇ ಸಂಜೆ ಕೃಷ್ಣನ ಮಂಟಪದಲ್ಲಿ ಮತ್ತೆರಡು ತುಪ್ಪದ ದೀಪ ಹಚ್ಚಿಟ್ಟಳು.
  . 
ಸಂತು ಹೊಸದಾಗಿ ಆಯಿ ಕೊಡಿಸಿದ್ದ ಮೊಬೈಲ್ ನಲ್ಲಿ ಆಪ್ಷನ್ಸ್ ಹುಡುಕುತ್ತಿದ್ದ.... 

Wednesday, March 12, 2014

ಋಣ

ಈ ಕಣ್ಣಲ್ಲಿ ಹನಿ ನೀರಿಲ್ಲ!
ಯಾರಿಗಾಗಿಯೂ
ಯಾವುದಕ್ಕಾಗಿಯೂ
ಬರೀ ಋಣಗಳು
ತುಂಬಿಕೊಂಡಿವೆ!
ಜನ್ಮಾಂತರದ ಋಣಗಳು
ಅದಕ್ಕಾಗೇ ಸುರಿದಿವೆ ಕಂಗಳು
ಯಾವ ತಡೆಗೂ ನಿಲ್ಲದೇ
ಯಾರ ಕರೆಯೂ ಕೇಳದೆ..
ಈ ಕಂಗಳಲ್ಲಿ ಚೂರು ಬೆಳಕಿಲ್ಲ!
ಕತ್ತಲೆಯ ಸಂಗವೇ
ಹಿತವಾಗಿದೆ.
ಬೆಳಕಿನ ಋಣಕ್ಕೆ ಕರಗುತ್ತಿವೆ!
ಕೈಎತ್ತಿ ಕೊಟ್ಟ
ಆನಂದಕ್ಕೆಲ್ಲ
ಋಣವಿಳಿಸ ಹೊರಟಿವೆ
ಕತ್ತಲೆಯ ಕಂಗಳು..
ಮೋಡದೆದೆಯಲ್ಲಿ
ಚಂದ್ರ ಸಂತೈಸಲಿ
ಕರಗಲಿ ಆನಂದದ
ಋಣಗಳೆಲ್ಲ..

Monday, December 16, 2013

ಬೆಳಕಿನ ಪ್ರೇಮಿಗೆ.

ಹಗಲಿರುಳು ನಿನ್ನ ಧ್ಯಾನ
ಸಿಗದೆ ನನಗೆ ನಿನ್ನ ಪಾನ
ಉಸಿರಾಡಲಿ ಹೇಗೆ ಹೇಳು
ಉಸಿರಿಲ್ಲದ ಜೀವಗಾನ.

ಸರಸ ಸಂಜೆ ಇರುಳಾಯಿತು
ಬೆಳಗೆಲ್ಲವು ಜಡವಾಯಿತು
ವಿರಹವಿಂದು ಉರಿಯಾಯಿತು
ಬೆಳಕ ಮೋಹಕೆ!
ಸುಡುಬಿಸಿಲಿಗು ನೆರಳಾಗುವ
ಒಳಮನೆಯಲಿ ತಂಪೆನಿಸುವ
ಜಗಪ್ರೇಮಿಯೇ ಬರಬಾರದೆ
ಎನ್ನ ಹೃದಯಕೆ!

ಹೂ ಬಿಸಿಲಿನ ಬಿಸಿಯಪ್ಪುಗೆ
ಹಿಮಸಿಂಚನ ಸವಿಮುತ್ತಿಗೆ
ಅರಳೆಲೆಯಲಿ ಬಿರಿವ ಭಾವ
ನಿನ್ನ ಪ್ರೇಮಕೆ..
ನೀನಿಲ್ಲದೆ ನಾನಿಲ್ಲವೊ
ನಿನ್ನುಸಿರಲೆ ಈ ಜೀವವು
ಬಾ ಬದುಕಿಗೆ ಒಲವ ಹನಿಸಿ
ಜೀವಭಾವಕೆ..

Friday, November 8, 2013

ಶರಣೆ

ತುಂಬಾ ಸೋತಾಗೆಲ್ಲ ನಿನ್ನ ಹಂಬಲವೇಕೆ?
ನನ್ನ ಕಂಬನಿಗೆಲ್ಲ ನೀನೆ ಕಾರಣವೇಕೆ?

ಏನು ತಪ್ಪಿದೆ ಹೇಳು
ಭಾವದಲ್ಲಿ
ಎನ್ನ ಶರಣಾಗತಿಗೆ
ನೀನೇ ಇಲ್ಲಿ.

ಅರಿವು,ಗುರುವುಗಳೆಲ್ಲ
ನೀನೆ ತಾನೆ?
ಕೃಷ್ಣ ನಿನ್ನಡಿಯಲ್ಲಿ
ನಾನು ಶರಣೆ.

Monday, November 4, 2013

ಮುತ್ತು ಮತ್ತು ಕವನ.

ಮುತ್ತು ಮತ್ತು ಕವನ.

 ಜೀವಸಂಚಲನದ
ಮೈತ್ರಿಯಲ್ಲಿ ಮೊರೆಯಾಗುತ್ತಿದೆ
 ಇದೋ ಕೇಳು
ಭಾವದೊಸಗೆಯ ಈ ಪ್ರೇಮ
 ಒಲವೆಂಬುದು ಮಾತು ಮಾತಿನ
ನಡುವೆ  ಕಟ್ಟಿಕೊಟ್ಟ
ನೆನಪಿನ ಬುತ್ತಿ!

 ಮೆಲ್ಲುವ ಮನಸಿನ
ಮೆಲುಕಾಗುವ
ಕನಸಿನ ಚೆಲುವ
 ಅಂತಃಕರಣಕ್ಕೆ
ಧ್ವನಿ ಪೂರ್ಣ ಹಗಲು
ಈ ಬೆಳಕಾಗಲಿ.


 ಕಡಲು ಕರೆಯುವ
ಅಲೆಯ ಮೊರೆತವ
ಎಲ್ಲೋ ಜತನದಿ ಕಾಪಿಡು
 ಕಪ್ಪೆ ಚಿಪ್ಪಿನ ಒಳಗೆ
ಸ್ವಾತಿ ಹನಿ
 ಮುತ್ತಾಗಲು ಕಾಯ್ದಿರು..

 ಕವಿತೆ ನನ್ನೊಳಗಲ್ಲ,
 ನಾನು ಕವಿತೆಯೊಳಗೆ
 ಅರಿಯದೇ ಉಳಿದುಬಿಡಲಿ
ಮೂಡಿಬರಲಿ
ಮುತ್ತು ಮತ್ತು ಕವನ.

Friday, November 1, 2013

ನಾಡಹಬ್ಬಕ್ಕೊಂದು ಚಿಂತನೆ.

ನಾಡದೇವಿಯ ಗುಡಿಯ ಮುಂಗಡೆ ಹಾಡುತಿರುವುದು ಕೋಗಿಲೆ

ಕಾಳಕತ್ತಲೆ ಕಳೆದು ಬೆಳಗಿನ ಕೋಳಿ ಕೂಗಿತು ಆಗಲೇ.     

       ನಮ್ಮ ನಾಡದೇವಿಯ ಮುಂದೆ ಕೋಗಿಲೆ ಹಾಡುತ್ತಿದೆ. ಆದರೆ ಅದರ ದನಿಯ ಇಂಪು ತಾಯಿಯ ಕಿವಿಯನ್ನು ತಲುಪಲು ನಾವು ಬಿಡುತ್ತಿಲ್ಲ ಮುಂಜಾನೆಯಿಂದ ಸಂಜೆಯವರೆಗೂ ಕರ್ಕಶದನಿ ಯಿಂದಲೇ ತುಂಬಿದೆ ಇಂದು ನಾಡದೇವಿಯ ಮಡಿಲು. ಅಬ್ಬರದ ಸ್ಟೀರಿಯೋಗಳ ಗಬ್ಬು ಹಾಡುಗಳಲ್ಲಿ ಕನ್ನಡ, ಕನ್ನಡ ಅಂತ ನವೆಂಬರ್ ತಿಂಗಳಿಡೀ ಕೂಗಿದರೆ ಮುಗಿದು ಹೋಯಿತೆ ನಾಡಹಬ್ಬ? ಈ ಪರಿಯ ಹಬ್ಬ ದೇವಿಯ ಮುಂಗಡೆ ಬೆಳ್ಳನೆಯ ಮುಂಜಾನೆಯ ಬೆಳಕಿನ ಕಿರಣಗಳ ತಂಪು ಬೆಳ್ಳಗೆಯನ್ನು ತರಬಲ್ಲದೆ? ನಾಡದೇವಿ ಈ ಶ್ರೀ ಗಂಧದ ನಾಡಿನಲ್ಲಿ, ಸಹ್ಯಾದ್ರಿಯ ಸಾಲಿನಲ್ಲಿ ಕರಾವಳಿಯ ಅಲೆಗಳಲ್ಲಿ ಬಯಲ ಹಸಿರಿನ ಸೆರಗಿನಲ್ಲಿ ಮೈ ದುಂಬಿ ನಲಿವಂತಾಗದೇ ಅವಳ ಹಬ್ಬ ಆಚರಿಸಿ ಏನು ಪ್ರಯೋಜನ? ನದಿಗಳನ್ನೆಲ್ಲ ಬರಿದಾಗಿಸಿ, ಕಾಡುಗಳನ್ನೆಲ್ಲ ನೆಲ ಸಮವಾಗಿಸಿ, ರೈತನ ಆತ್ಮಹತ್ಯೆಗಿಳಿಸಿ, ನಾಡ ಕಟ್ಟ ಹೊರಟಿರುವ ನಾವು. ಈ ಮಣ್ಣಿನ ಮಕ್ಕಳು! ಬೆಂಗಳೂರು, ಮತ್ತು ಕಂಪ್ಯೂಟರ್ ನಮಗೆ ಕಾಣುವ ಅದ್ಭುತ ವಿಶ್ವ. ನಿಜವೇ, ಆದರೆ ತಿನ್ನುವ ಅನ್ನ ಕಂಪ್ಯೂಟರ್ ಬೆಳೆಯಲಾರದಲ್ಲ! ಯಾವ ಉದ್ಯಮಗಳು ರಾಜ್ಯದ ಉನ್ನತಿಗೆ ಪೂರಕವೋ ಅವು ರಾಜ್ಯದ ಪರಿಸರಕ್ಕೆ ಜನರ ಬದುಕಿಗೆ, ಈ ಮಣ್ಣಿಗೆ ಮಾರಕವಾಗಬಾರದಲ್ಲ? ಉದಾಹರಣೆಗೆ ನಾಗಾರ್ಜುನ ಮತ್ತು ತದಡಿ ಉ? ಸ್ಥಾವರಗಳು, ಗಣಿಗಾರಿಕೆಯಿಂದ ತತ್ತರಿಸಿದ ಬಳ್ಳಾರಿಯ ಮಡಿಲು! ಹೇಳುತ್ತ ಹೋದರೆ ಪ್ರತೀ ಜಿಲ್ಲೆಗೂ ಒಂದೊಂದು ಮಾರಕ ಯೋಜನೆಗಳು. ಅಭಿವೃದ್ಧಿಯ ಕನಸು ಯಾರಿಗೆ ಮತ್ತು ಪರಿಸರ, ಜನರ ಕಂಬನಿ ಯಾರಿಗೆ ಅನ್ನುವ ಗುಟ್ಟು ಮಾತ್ರ ಇಂದಿಗೂ ಅರಿವಾಗದ ಪ್ರಶ್ನೆ! ನಮ್ಮ ಉತ್ತರ ಕನ್ನಡವನ್ನೇ ತೆಗೆದುಕೊಂಡರೆ ಇಲ್ಲಿ ದೇಶದ ನಾನಾ ಯೋಜನೆಗಳು ಬಂದು ತಳವೂರಿವೆ. ವಿದ್ಯುತ್ ಸ್ಥಾವರಗಳಿವೆ. ಕರಾವಳಿಯ ಸಂಪದ್ಭರಿತ ತೀರಗಳಿವೆ. ಸಹ್ಯಾದ್ರಿಯ ಸೆರಗಿದೆ. ಮಲೆನಾಡಿನ ಮಡಿಲಿದೆ, ನದಿಗಳಿವೆ, ಕಾಡಿದೆ. ಆದರೆ ಇಲ್ಲಿಯ ಜನ ಮಾತ್ರ ಕರೆಂಟ್‌ಗೆ ಪರದಾಡುತ್ತಾರೆ. ರಸ್ತೆ, ಹೊಂಡಗಳಲ್ಲಿ ಪ್ರತೀದಿನ ಸಾಯುತ್ತಾರೆ. ಬೆಳೆಗಾರ ಬೆಳೆಗಳಿಗೆ ಮಾರುಕಟ್ಟೆಯಿಲ್ಲದೇ ಆತ್ಮಹತ್ಯೆಗಿಳಿಯುತ್ತಾನೆ. ಮೀನುಗಾರ ದಿನಗೂಲಿಯಿಂದ ಮೇಲೇಳಲಾರ. ಯಾವುದು ಅಭಿವೃದ್ಧಿ? ಯಾವುದು ನಾಡದೊರೆಗಳ ಕನಸು? ಯಾವುದು ಕರ್ನಾಟಕದ ಗುರಿ? ಒಂದು ಜಿಲ್ಲೆಯ, ಸಂಪದ್ಭರಿತ ಮುಂದುವರೆದ ಜಿಲ್ಲೆಯ ಸ್ಥಿತಿಯೇ ಇದಾದರೆ ಈ ನಾಡಿನ ಉಳಿದ ಜಿಲ್ಲೆಗಳ ಪಾಡೇನಿರಬಹುದು? ದೋಚುವುದಕ್ಕೆ ಇದೆಯೆಂದು ಬೇಕಾಬಿಟ್ಟಿ ದೋಚಿದರೆ ಪ್ರಕೃತಿ ಮುನಿಯದಿರು ತ್ತಾಳೆಯೇ? ಇದೆಲ್ಲ ಮೌನವಾಗಿ ಸಹಿಸುವ ನಾವು ನಾಡಿನ ಕುರಿತಾದ ಉದ್ದುದ್ದ ಭಾಷಣ ಮಾಡಿ ರಾಜ್ಯೋತ್ಸವ ಆಚರಿಸಿದರೆ ಅದಕ್ಕೆ ಅರ್ಥವಿದೆಯೇ? ಕನ್ನಡದ ಮನಸಿಲ್ಲದವ, ಕರ್ನಾಟಕದ ಹೃದಯವಿಲ್ಲದವ ಗತವೈಭವವ ಕೊಂಡಾಡಿ ಏನು ಪ್ರಯೋಜನ? ಈ ಕತ್ತಲೆಯ ಪರಿಣಾಮವೇ ಮಲೆನಾಡಿನ ಸೆರಗಿನಲ್ಲಿ ಬುಗಿಲೆದ್ದ ನಕ್ಸಲೈಟ್. ಯಾವ ಕಾಡಿನಲ್ಲಿ ಪ್ರಾಣಿಗಳೂ, ಮನುಷ್ಯರೂ ಸೌಹಾರ್ದಯುತರಾಗಿ ತಲೆತಲಾಂತರದಿಂದ ಬಾಳುತ್ತ ಬಂದಿದ್ದಾರೋ. ಅಲ್ಲೀಗ ಮನುಷ್ಯರು ಮನುಷ್ಯರ ಭಯದಿಂದ ಬದುಕಬೇಕಾಗಿದೆ! ಕೇವಲ ಯೋಜನೆಗಳ ಮಾಡಿದರೆ ಖಂಡಿತ ರಾಜ್ಯ, ಉದ್ಧಾರ ವಾಗುವುದಿಲ್ಲ. ಅದರ ಪರಿಣಾಮಗಳ ಯೋಚಿಸ ದಿದ್ದಲ್ಲಿ ಅದು ರಾಜ್ಯಕ್ಕೆ ಮತ್ತಷ್ಟು ಮಾರಕವಾಗುತ್ತದೆ.
     ನಾಡದೇವಿಯ ಕುರಿತಾದ ಹಾಡುಗಳು ಕೇವಲ ಸಿ.ಡಿ ಕ್ಯಾಸೆಟ್‌ಗಳಲ್ಲಿ ಮಾತ್ರ ಉಳಿದು ಹೋದರೆ ಸಾಕೆ? ನಮ್ಮ ತಾಯಿಯ ಅಮೃತಭಾಷೆ ನಮಗೆ ಮರೆಯುತ್ತಿದೆಯೇ? ಕೇಳಬೇಕಾದದ್ದು ಯಾರನ್ನೋ ಅಲ್ಲ. ನಮ್ಮ ನಮ್ಮ ಮನಸ್ಸನ್ನ. ಆ ಕುರಿತು ಕ್ಷಣ ಯೋಚಿಸಿದರೂ ಸಾಕು ಅದು ನಾಡದೇವಿಗೆ ನಮ್ಮ ನಮನವಾಗುತ್ತದೆ. ಅಂತಹ ಸಂಕಲ್ಪ ನಾವು ಮಾಡೋಣ. ಈ ನಾಡು, ನೆಲ, ನುಡಿ, ನಮ್ಮದು, ನಮಗಾಗಿರುವುದು. ಅದನ್ನ ಉಳಿಸಲು ನಮ್ಮ ಕೈಲಾದ ಪ್ರಯತ್ನ ಮಾಡೋಣ. ನಮ್ಮ ನಲ್ನುಡಿ ಕನ್ನಡ ಮಾತ್ರ ಎಲ್ಲಿ ಹೋದರೂ ಮರೆಯದಿರೋಣ.

Friday, September 27, 2013

  

ನಮಸ್ತೆ..


   ಈ ಬರಹ ಯಾರದ್ದಾದರೂ ಮನಸಿಗೆ ಸ್ವಲ್ಪ ನಾಟಿದಲ್ಲಿ ನೋವಿಗೆ ದಯವಿಟ್ಟು ಕ್ಷಮೆಯಿರಲಿ. ಆ ನೋವು ಇನ್ನಷ್ಟು ಒಳ್ಳೆಯದನ್ನು ಸೃಷ್ಟಿಸಲಿ ಎಂಬ  ಆಶಾವಾದದೊಂದಿಗೆ..

            ಎಲ್ಲಿ ನೋಡಿದರಲ್ಲಿ ಅಂತರ್ಜಾಲದ ತುಂಬ  ಪತ್ರಿಕೆಗಳು, ಟಿ.ವಿ ಅಷ್ಟೇ ಅಲ್ಲ ಸುಮ್ ಸುಮ್ನೆ ಹರಟುವ ಸಂಜೆಕಟ್ಟೆಗಳಲ್ಲಿ ಸಹ ಇಂದು ಚರ್ಚೆಯಾಗುತ್ತಿರುವ ವಿಷಯ ಮೋದಿ ಹಾಗೂ ನಮೋ ಇಂಡಿಯಾದಂತ  ಬಹು ಚರ್ಚಿತ ವಿಷಯಗಳು.  ಚರ್ಚೆಯಾಗಬೇಕಾದದ್ದು ಆಗುತ್ತಿರುವುದು ಹಾಗೂ  ಇನ್ನಷ್ಟು ತೀವ್ರಗೊಂಡು ಒಂದು ಸದಾಶಯದ ಅಲೆ ಏಳಬೇಕಾದ ಅಗತ್ಯ ಇಂದು ಹಿಂದೆಂದಿಗಿಂತಲೂ ಅವಶ್ಯಕವಿದೆ. ದೇಶದ ಭವಿಷ್ಯಕ್ಕೆ  ದೇಶ ಉಳಿಯಲು ಮೋದಿಯಂತ ನಿರ್ಭಿಡೆಯ  ಕನಸುಗಾರನ ಅಗತ್ಯ ದೇಶಕ್ಕೆ ಖಂಡಿತ ಇದೆ.  ಆದರೆ ಅವರನ್ನು ಆರಿಸಿ ತರುವ ಜವಾಬ್ಧಾರಿ ಇರುವುದು ನಾಗರಿಕರ ಮೇಲೆಯೇ.  ಎಲ್ಲ ವಿದ್ಯಾವಂತರ ಮೇಲೆ ಇಂದು ಅತಿ ಹೆಚ್ಚಿನ ಜವಾಬ್ಧಾರಿಯಿದೆ. ಜಾತಿ ಮತ ಪಂಥಗಳ ಹೊರತಾಗಿ ದೇಶ ಮುಖ್ಯವೆನ್ನಿಸುವ ಅಥವಾ ದೇಶಕ್ಕಾಗಿ ಚಿಂತಿಸಬಲ್ಲ ಪ್ರತಿಯೊಬ್ಬನೂ ಈ ಬಗ್ಗೆ ಚಿಂತಿಸುವ ಅಗತ್ಯ, ಅನಿವಾರ್ಯತೆಯಿದೆ. ದೇಶ ಉಳಿದರೆ ಮಾತ್ರ
ನಾವು ಜಾತಿಯ ಮತ ಧರ್ಮಗಳ ಕುರಿತು  ಚರ್ಚೆ ಮಾಡಬಹುದು. ಯಾವ ಮಾಂಸ ಯಾರು ತಿನ್ನುತ್ತಾರೆ, ಎಷ್ಟು ಎಂಬುದು ಲೆಕ್ಕ ಹಾಕಬಹುದು.  ಅನಂತ ಮೂರ್ತಿಯಂತ ಸಾಹಿತಿಗಳು ದೇಶವನ್ನೇ ಬಿಡುವ ಮಾತನಾಡಬಹುದು. ಆದರೆ ಜನಸಾಮಾನ್ಯ ಬದುಕಲು, ದೇಶದ ಆರ್ಥಿಕ ಸಾಮಾಜಿಕ ಪ್ರಗತಿಗೆ, ಕುಸಿಯುತ್ತಿರುವ ರೂಪಾಯಿಯ ಮೌಲ್ಯ ಉಳಿಸಲು, ರೈತನ ಬದುಕಿಗೆ ಬೆಳೆಗೆ ನೆಮ್ಮದಿ ಕಾಣಲು, ಈ ದೇಶದ ಗಡಿಗಳಲ್ಲಿ ರಕ್ತ ಹರಿಸುತ್ತಿರುವ  ಸೈನಿಕರ ಪ್ರಾಣದ ಬೆಲೆ ಅರಿಯಲು, ಅವರಲ್ಲಿ ಉತ್ಸಾಹ, ಶೌರ್ಯ ತುಂಬಲು, ನಾಡಿನ ಮನೆ ಮನಸುಗಳಲ್ಲಿ ಚೈತನ್ಯ ತುಂಬುವಂತ ಧೀರೋಧಾತ್ತ ನಾಯಕರ ಅವಶ್ಯಕತೆ ಇಂದು ಇದೆ. ಅಂತಹ  ಎಲ್ಲ ಗುಣಗಳು ಕಾಣುತ್ತಿರುವುದು ಯುವ ಜನರ ಆಶಾವಾದ ಆಗಿರುವ ನರೇಂದ್ರ ಮೋದಿ ಅವರಲ್ಲಿ.

  ನನಗೆ ಬೇಸರವಿರುವುದು ಇಲ್ಲಿಯೇ. ಇಂದು ಚರ್ಚೆಯಾಗುತ್ತಿರುವ ಎಲ್ಲ ಮಾಧ್ಯಮಗಳು ವಿದ್ಯಾವಂತರು ಬೆಂಬಲ ಕೊಡುತ್ತಿರುವ ತಂತ್ರಜ್ಞಾನದ ಈ ಪ್ರಪಂಚದ ಎಷ್ಟು ಜನ ವೋಟಿಂಗ್ ಮಾಡುತ್ತಾರೆಂಬುದು? ನಮ್ಮಲ್ಲಿ ಚುನಾವಣೆಯ ವೇಳೆಗೆ ವೋಟಿಂಗ್ ನ ಪ್ರಮಾಣ ಅವಿದ್ಯಾವಂತರು, ಅನಕ್ಷರಸ್ಥರು ಇರುವ ಪ್ರದೇಶಗಳಲ್ಲಿ ಮಾತ್ರ. ನಗರ ಪ್ರದೇಶಗಳಲ್ಲೇ  ವೋಟಿಂಗ್ ಮಾಡದೇ ಮನೆಯಲ್ಲಿರುವ  ಬಹಳಷ್ಟು ಯುವ ಜನತೆಯನ್ನು ಕಳೆದ ಹಲವು ಚುನಾವಣೆಗಳಲ್ಲಿ ಕಂಡಿದ್ದೇವೆ. ಈ ಬಾರಿಯೂ ಇಲ್ಲಿ ಎಷ್ಟೇ ಸಮರ್ಥಿಸಿಕೊಂಡರೂ ಚುನಾವಣೆಯ ವೋಟಿಂಗ್ ಮಾತ್ರ ನಿಜವಾದ ದೇಶದ ಭವಿಷ್ಯಕ್ಕೆ ಸಮರ್ಥನೆಯಾಗುವುದು ಎಂಬುದನ್ನು ಅನಿವಾರ್ಯ ಹೇಳಲೇ ಬೇಕಾಗಿದೆ. ಒಬ್ಬ ವಿದ್ಯಾವಂತ ನಾಗರಿಕ ಚುನಾವಣೆಗಾಗಿ ವೋಟಿಂಗ್ ನಡೆಸಲು ಊರಿಗೆ ಮರಳುತ್ತಿದ್ದಾನೆಂದರೆ ಮನೆಯಲ್ಲಿ ಹಳ್ಳಿಯಲ್ಲಿರುವ ಎಷ್ಟೋ ಜನರಿಗೆ ದೇಶದ ಇಂದಿನ ಸ್ಥಿತಿಗತಿಗಳ ತಿಳಿಸಿ ಹೇಳಬಹುದು. ದೇಶಕ್ಕೆ ಯಾಕೆ  ಮೋದಿಯಂತ ಆಶಾವಾದಿ ನಾಯಕನ ಅಗತ್ಯವಿದೆ ಎಂಬುದನ್ನು ಊರು ತುಂಬ ಆಗದಿದ್ದರೆ ಮನೆಯಲ್ಲಾದರೂ ಹೇಳಬಹುದು. ಯಾರ ಮೇಲೂ ಒತ್ತಡ ಹೇರಬೇಕಾದ ಅವಶ್ಯಕತೆಯಿಲ್ಲ. ಯಾರನ್ನೂ ಪ್ರಚೋದಿಸಿ ಗಲಾಟೆ ಮಾಡಬೇಕಾದ ಅಗತ್ಯವಿಲ್ಲ. ಕೇವಲ ದೇಶದ ಇಂದಿನ ಸತ್ಯಾಸತ್ಯತೆಗಳ ಅರ್ಥೈಸಿದರೆ ಸಾಕು. ಕೆಲವರಾದರೂ ದುಡ್ಡಿಗೆ ಓಟು ಕೊಂಡುಕೊಳ್ಳುವವರ ಬಲೆಗೆ ಬೀಳುವುದು ತಪ್ಪುತ್ತದೆ.  ಯಾರೋ ಒಬ್ಬ ಭಾಷಣಕಾರನ ಮಾತಿಗಿಂತ, ಯಾರೋ ಒಬ್ಬ ತೋರಿಸೋ ನೂರರ ನೋಟುಗಳಿಗಿಂತ ಮನೆ ಮಕ್ಕಳ ವಿದ್ಯಾವಂತರ ಮೇಲೆ ನಮ್ಮ ಹಳ್ಳಿಗಳ ಅವಿದ್ಯಾವಂತ ಮುಗ್ಧ ಜನ ಹೆಚ್ಚು ಭರವಸೆಯನ್ನು ಇಡಬಲ್ಲರೆಂದು ನನಗನ್ನಿಸುತ್ತದೆ. 

   ನಾನು ಚುನಾವಣಾ ಪ್ರಚಾರಮಾಡಿ ಎನ್ನುತ್ತಿಲ್ಲ. ಇದ್ದ ಕೆಲಸ ಬಿಟ್ಟು ಭಾಷಣ ಮಾಡಿ ಹೇಳುತ್ತಿಲ್ಲ. ವಿದ್ಯಾವಂತ ನಾಗರಿಕರೇ ದಯವಿಟ್ಟು ಓಟಿಂಗ್ ನಲ್ಲಿ  ಪಾಲ್ಗೊಳ್ಳಿ. ದೇಶಕ್ಕೆ ನಿಮ್ಮ ಅಗತ್ಯ ಹಿಂದೆಂದಿಗಿಂತಲೂ ಹೆಚ್ಚಿದೆ ಇಂದು. ಅರ್ಥಮಾಡಿಕೊಳ್ಳಿ ಎನ್ನುತ್ತಿದ್ದೇನೆ.ಯಾವ ಪಕ್ಷಕ್ಕೆ  ಓಟು ಎಂಬುದು ನೀವೇ ನಿರ್ಧರಿಸಿ. ಆದರೆ ವೋಟಿಂಗ್ ನಂತ ದೇಶದ ಬಹುಮುಖ್ಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪಾಲ್ಗೊಳ್ಳಿ. ಇದು ಕೂಡ ನಮ್ಮೆಲ್ಲರ ಕರ್ತವ್ಯವಾಗಿದೆ. ಒಂದುವೇಳೆ ನ್ಯಾಯಕ್ಕೆ ದೇಶದ ಹಿತಕ್ಕೆ  ಇಂದಿನ ರಾಜಕೀಯವ್ಯವಸ್ಥೆಯಲ್ಲಿ ಧಕ್ಕೆಯಾಗುತ್ತಿದೆ ಅಂತಾದರೆ ವೋಟ್ ಮಾಡಿ ರಾಜಕಾರಣಿಗಳನ್ನು ಗೆಲ್ಲಿಸಿದವರಷ್ಟೇ ವೋಟಿಂಗ್ ನಲ್ಲಿ ಪಾಲ್ಗೊಳ್ಳದೆ ಇರುವವರು ಕೂಡ ಕಾರಣವಾಗಿದ್ದಾರೆ. ಇದು ದೇಶದ ಅಳಿವು ಉಳಿವಿನ ನಿರ್ಧರಿತ ಪ್ರಶ್ನೆ. ಒಂದುವೇಳೆ ಇಂದು  ವೋಟಿಂಗ್ ನಲ್ಲಿ ಪಾಲ್ಗೊಳ್ಳದಿರುವ ಯಾವ ವ್ಯಕ್ತಿಗೂ ನಾಳೆ ರಾಜಕಾರಣಿಗಳನ್ನು ದೂರುವ ದೇಶದ ವ್ಯವಸ್ಥೆಯನ್ನು ಮಾತನಾಡುವ ಅಧಿಕಾರ ಇರುವುದಿಲ್ಲ ಅಲ್ಲವೇ?

     
 ಫೇಸ್ ಬುಕ್ ನಲ್ಲಿ ಲೈಕ್ ಗಳನ್ನು ಒತ್ತಿದಾಕ್ಷಣ  ಅಥವಾ ಸ್ನೇಹಿತರ ಅಡ್ಡದಲ್ಲಿ ಚರ್ಚೆಗಿಳಿದಾಕ್ಷಣ ನಮ್ಮ ಕರ್ತವ್ಯಗಳು ಮುಗಿಯುವುದಿಲ್ಲ. ವಿಚಾರಗಳನ್ನು ಹಂಚಿಕೊಳ್ಳುವಷ್ಟೇ ಮುಖ್ಯವಾದ್ದದ್ದು ಕಾರ್ಯಗೊಳಿಸುವ ಕೆಲಸ. ದೇಶಕ್ಕೆ ಭವಿಷ್ಯವಿಲ್ಲ ಎಂದುಕೊಳ್ಳುವ ಪ್ರತಿಯೊಬ್ಬ ನಾಗರಿಕನೂ ದೇಶಕ್ಕೋಸ್ಕರ ಮತದಾನ ಮಾಡಿದಾಗ ಮಾತ್ರ ದೇಶಕ್ಕೊಂದು ಸದೃಡ ರಾಜಕೀಯ ವ್ಯವಸ್ಥೆ ನಿರ್ಮಾಣವಾಗಬಹುದು. ನನ್ನೊಬ್ಬನದೇನು ಅಂದುಕೊಳ್ಳುವ ಪ್ರತಿಯೊಬ್ಬನೂ  ಈ ದೇಶದ ರಾಜಕೀಯ ವ್ಯವಸ್ಥೆಯನ್ನು ಪ್ರಶ್ನಿಸುವ ಅಧಿಕಾರ ಕಳೆದುಕೊಳ್ಳುತ್ತಾನೆಂದೆನ್ನಿಸುತ್ತದೆ ನನಗೆ. ದೇಶದಲ್ಲಿ ಒಳ್ಳೆಯದು ಎಂಬುದು ಇನ್ನೂ ಜೀವಂತವಿದೆ. ಈ ದೇಶಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಅಣುಬಾಂಬುಗಳಿಂದ ಪೂರ್ಣ ನಲುಗಿ ಹೋದ ಜಪಾನ್ ದಂತ ದೇಶ ಮೈ ಕೊಡವಿಕೊಂಡು  ಜಗತ್ತಿನ ಮಹಾಶಕ್ತಿಯಾಗಿ ಬೆಳೆದಿರುವುದು ಸಾಧ್ಯವಿರುವಾಗ ನಮಗೇಕೆ ಸಾಧ್ಯವಿಲ್ಲ? ದುಬೈ, ಸಿಂಗಾಪೂರ ದಂತ ಪುಟ್ಟ ರಾಷ್ಟೃಗಳು  ಸಮರ್ಥ ನಾಯಕತ್ವದಿಂದಾಗಿ ಜಗತ್ತಿನ ಮುಂಚೂಣಿಯಲ್ಲಿರುವಾಗ ಭಾರತವೇಕೆ  ಇನ್ನು ಹಿಂದುಳಿದ ದೇಶಗಳ ಪಟ್ಟಿಯಲ್ಲಿದೆ? ಚೀನಾದಂತ ಬೃಹತ್ ಜನಸಂಖ್ಯೆ ಹೊಂದಿರುವ ರಾಷ್ಟೃ ತನ್ನ ದೇಶದ ಪ್ರತಿ ನಾಗರಿಕನಿಗೂ ಕೈತುಂಬಾ ಕೆಲಸ ಮತ್ತು ಊಟ ಬಟ್ಟೆ ವಸತಿಗಳನ್ನು ಕೊಡಲು  ಸಾಧ್ಯವಾದದ್ದು ಹೇಗೆ? ಎಲ್ಲ ದೇಶಗಳ ಫೈವ್ ಸ್ಟಾರ್ತ್ತಿ ಬರುವ ನಮ್ಮ ದೇಶದ ರಾಜಕೀಯ ನಾಯಕರಿಗೇಕೆ ಅಂತ  ಶಕ್ತಿಗಳಿಲ್ಲ? ವ್ಯವಸ್ಥೆ ಕುಸಿಯುವಲ್ಲಿ ರಾಜಕೀಯವೊಂದೇ ಪಾಲುದಾರನಾಗಿದ್ದರೆ ವ್ಯವಸ್ಥೆಯನ್ನು ನಿರ್ಮಿಸುವಲ್ಲಿ ಸೋತವರು ಯಾರು? ಈ ಎಲ್ಲ ಪ್ರಶ್ನೆಗಳನ್ನೂ ದಯವಿಟ್ಟು ಯಾರೂ ಯಾರಿಗೂ ಕೇಳಬೇಡಿ. ನಿಮಗೆ ನೀವೇ ಆರ್ಥ ಮಾಡಿಕೊಳ್ಳಿ. ಯೋಚನೆ ಮಾಡಿ. ಮತ್ತು ಕನಿಷ್ಟ ದೇಶಕ್ಕಾಗಿ ನಿಮ್ಮ ಮತವನ್ನು ಮರೆಯದೇ ಎಲ್ಲ ಒತ್ತಡ ಅನಿವಾರ್ಯತೆಗಳ ಬದಿಗಿಟ್ಟು ಚಲಾಯಿಸಿ.

        ನಮ್ಮ ಯುವ ಜನತೆಯ ಪ್ರತಿಭೆ, ಸಾಧನೆ, ಸಾಧ್ಯತೆ ಹಾಗೂ ಆರಂಭಶೂರತ್ವ ಹಾಗೂ ಆಲಸ್ಯ ಮನೋಭಾವಗಳ ಕುರಿತು ಮುಂದಿನ ಸಂಚಿಕೆಯಲ್ಲಿ....

       
        
     


Monday, September 9, 2013

ತಳಮಳಗಳು.

ವಿಚಿತ್ರ ತಳಮಳಗಳು.
ಒಂದೆರಡು ಬಿರುದುಗಳೇ
ಈ ಬದುಕಿಗೆ!
ಒಮ್ಮೆ ಸ್ವಾಥರ್ಿ
ಇನ್ನೊಮ್ಮೆ ಅಹಂಕಾರಿ,
ಮತ್ತೊಮ್ಮೆ 
ಹುಚ್ಚಿ,
ಇನ್ನೊಮ್ಮೆ
ಇನ್ನೇನೋ..


ಆಚೆಗೆ,
ಒಳಗೇನಿದೆ ನಿಜವಾಗಿ?
ಗೊಂದಲ
ಒಳಗೊಳಗೇ ಪ್ರಶ್ನೆ
ಇಷ್ಟೆಲ್ಲ ಬಿರುದುಗಳೊಂದಿಗೆ
ಏನಿದೆ ನನ್ನಲ್ಲಿ?
ನನಗಾಗಿ?

ನಾಳೆಗೆ ಕನಸು
ನಿನ್ನೆಯ ನೆನಪು
ಇಂದಿಗೆ ಹಂಗಿಲ್ಲದ
ಬದುಕು
ಯಾರೊಳಗಿಲ್ಲ?

ಅಲೆಮಾರಿ
ಜೋಗಿತಿಯ ಜೋಳಿಗೆಯ
ಒಳಗೆ ಉಳಿದಿದ್ದೇನು?
ಖಾಲಿ
ಖಾಲಿ
ಖಾಲಿ 

Saturday, June 29, 2013

ಸಾಕೋ..

ಒಂದೂ ಕವಿತೆಯ ಬರೆಯಬಾರದೆನ್ನುವ
ಕೊಲೆಗಡುಕ ಮನಸು,
ಯಾಕೋ?
ಬರೆದದ್ದೆಲ್ಲವೂ ಕವಿತೆಯಾಗದಿದ್ದರೂ
ಕವಿಮನದ ಸೊಲ್ಲಾದೀತು
ಬರೆದುಬಿಡು ಎಂಬ
ಒಳ ಸುಳಿಯ ಹತ್ತಿಕ್ಕುವ
ಹುಚ್ಚೂ ನಿನಗ್ಯಾಕೋ?

ಹೂವರಳುವ ಭಾವ
ಬಯಲಾಸರೆಯಲ್ಲಿ
ಕುಣಿದು ಕುಪ್ಪಳಿಸುವ
ಎಳೆಗರುವಿನಂತ
ಮುಗ್ಧ ಚೆಲುವಿನ ಹೂವ
ಮತ್ತೆ ಮೂಡಿಸಬೇಡ,
ಚಿತ್ರ
ಹರಿಯುವೆದೆನೆಂಬ
ಕೊಸರು ಗಣ್ಣಿನ ಕಿಸುರು
ನಿನಗ್ಯಾಕೋ?

ಅಗರುಬತ್ತಿಯ ಹಚ್ಚಿ
ಪರಿಮಳವ ತೆಗೆದುಕೊಳ್ಳಬೇಡ
ಎಂಬಂತ ಸಣ್ಣತನ ನಿಂಗ್ಯಾಕೋ
ಸಣ್ಣ ಸಣ್ಣ ಖುಶಿಗಳೆಲ್ಲ
ಕಸಿದುಕೊಳ್ಳುವ
ನಿನ್ನ ಮನಸಿನ ಒಳಗೆ
ಅದೆಷ್ಟು ಸಣ್ಣತನಗಳ
ತುಂಬಿಕೊಂಡಿದ್ದೀ ಯಾಕೋ?

ಭಾವಗಳ, ಬಯಕೆಗಳ
ಬದುಕುಗಳ, ಕನಸುಗಳ
ನಡುವೆ ನಿನ್ನದು ಎಂತ
ದುಷ್ಟತನದಾಟ!
ಒಂದೊಮ್ಮೆ ಅನ್ನಿಸೀತು ನೋಡು
ಈ ನಿನ್ನ ಆಟದಾಳಗಳಲ್ಲಿ
ಸೋತು ಹೋದವರೆಲ್ಲ
ನೋಡು ಸಾಕೋ.
ಸಾಕೋ..

Tuesday, June 11, 2013

ಮಳೆಹಾಡು

ಮೇಘವೇ
ಸುರಿದು ಬಿಡು
ಇಳೆಯ ಉಸಿರೂ
ಬಸಿರಾಗುವಂತೆ,
ಎಲ್ಲೆಲ್ಲೂ ಹಸಿರು
ಮೊಳಕೆಯೊಡೆಯುವಂತೆ.

ನೀನೂ
ಹರಿದುಬಿಡು,
ಉಸಿರುಗಟ್ಟುವಂತೆ
ಹಸಿಯಾಗಿಸಿ,
ತಂಪಾಗಿಸಿ.

ಜಲಪಾತವಾಗಲಿ
ಮಳೆ!
ಪ್ರೀತಿ!
ತಣಿಯಲಿ.
ಅಲ್ಲು. ಇಲ್ಲು.

ಯಾರಿಗೆ ಹೇಳಲಿ?

ಯಾರಿಗೆ ಹೇಳಲಿ?
ಏನೆಂದು ಬರೆಯಲಿ?

ಭಾವಗಳ ಮಳೆ ಸುರಿಯೆ,
ಮನಸು ಬಂದ ಹಾಗೆಲ್ಲ
ಮನದ ಮಳೆಯಂತೆ
ಸುರಿದು ಬಿಡಲೊಮ್ಮೆ
ಎಲ್ಲಿರುವೆ ನೀನು
ಇನ್ನೆಲ್ಲಿ ನಾನು!

ನನ್ನ ಮುನಿಸಿಗೆ ಮಡಿಲು
ನನ್ನ ಕನಸಿಗೆ ಒಡಲು
ಜೀವ ಉಸಿರಿಗೆ ಕಡಲು
ಕಡಲಾದೆ ನೀನು!
ಕರಗಿಸದೇ ಉಳಿದು ಹೋದೆ
ನನ್ನ ನಾ ಕಲ್ಲು ಬಂಡೆಯಾಗಿ!


ಪ್ರತಿ ಬೆಳಗು ಕನ್ನಡಿಯ
ಹಂಗ್ಯಾಕೆ ಇನ್ನು?
ಸಿಂಗಾರದ  ಸೀರೆಗೆ
ನೆರಿಗೆಗಳೇಕೆ ಇನ್ನು?
ನೀನಿರದ  ದಿನ ದಿನಕು
ಯಾವ  ರಾಗದ ಹೊನಲು!
ನುಡಿಸಲಿವೆ ತಂತಿ ಹರಿದ
ವೀಣೆ
ಹೊಸದೇ ಶೃತಿಯನ್ನು!


  ಕೊಡಲೇನು ಗೆಳೆಯಾ
ವಿದಾಯಕ್ಕೆ ಮುನ್ನ?
ಕಣ್ಣ ಕೊನೆಯಂಚಲ್ಲಿ
ಸಣ್ಣಗೆ ಉಳಿದಿದೆ
ತಂಪು ತಂಪೆನ್ನುವ
ಹನಿ ಬಿಂದುಗಳು ನಿನ್ನ
ತಾಗಲಿ ಉಳಿದುಹೋಗಲಿವೆ
ಅಲ್ಲೇ
ತುಟಿಯಂಚಿನಲ್ಲೇ ....


Thursday, May 16, 2013

ವಿಶಾಖ.



                
ಚಿತ್ರ ಕೃಪೆ: ಅಂತರ್ಜಾಲ


                 ವೈಶಾಖದ ಬಿರು ಬಿಸುಲು ಸುಡು ಸುಡುತ್ತಿದೆ. ಬೆವರಿಳಿಸುತ್ತ ಬಿರ ಬಿರನೇ ನಡೆಯುತ್ತಿದ್ದಾಳೆ ವಿಶಾಖ....  ಮನೆಯಿಂದ ಹೊರಡುವಾಗಲೇ ಲೇಟು. ಎಷ್ಟು ಗಡಿಬಿಡಿ ಮಾಡಿದರೂ ಮುಗಿಯದ ಕೆಲಸ. ಈ ಬಿಸಿಲಿನುರಿಗೆ ಮೊದಲೇ ಕಪ್ಪಾದ ಮುಖ ಇನ್ನಷ್ಟು ಕರಿದಾಗಿ ಸುಟ್ಟು ಹೋಗುತ್ತದೆ. ಒಂದು ಛತ್ರಿಯಾದರೂ ಹಿಡಿದು ತರಬೇಕಿತ್ತು ಅನಿಸಿದರೂ  ಈ ಗಡಿಬಿಡಿಯಲ್ಲಿ ಅದು ನೆನಪಾದರೂ ಎಲ್ಲಿಂದ ಬರಬೇಕೆನೆಸಿ ಸಮಾಧಾನ ಮಾಡಿಕೊಳ್ಳುತ್ತಿದ್ದಳು.  ವಿಶಾಖ  ಬಿಸಿಲಲ್ಲಿ ಕಪ್ಪಾಗಿ ಹೋಗ್ತಿಯ ಛತ್ರಿ ಹಿಡ್ಕೊಂಡು ಹೋಗೇ ಅನ್ನೊ ಕರುಳು ನನಗಾದರು ಎಲ್ಲಿದೆ.  ಅಷ್ಟೊಂದು ಬಾಗ್ಯ ಇದ್ದವಳಾಗಿದ್ದರೆ ಈ ಪರಿ ಬಿಸಿಲಲ್ಲಿ ಹೀಗೆ ಓಡುವ ಹಣೆಬರಹ ನನಗಾದರು ಯಾಕಿತ್ತು.?


        ಬಿಸಿಲು ನೆತ್ತಿಯನ್ನು  ಸೋಕಿ ಬೈತಲೆಯೆಲ್ಲ ಬಿಸಿ ಬಿಸಿ ಎನಿಸಿ ಒಂದು ಕ್ಷಣ ತಲೆಸುತ್ತುವಂತೆನೆಸಿ ಹೊಟ್ಟೆಯೆಲ್ಲ ಸಂಕಟವೆನಿಸಿ ವಾಂತಿ ಬರುವಂತಾಗಿ ಅತ್ತಿತ್ತ ನೋಡುತ್ತ ಸಾವರಿಸಿಕೊಳ್ಳುವವರೆಗೆ ಪಕ್ಕದಲ್ಲೇ ಯಾರೋ ಬುರ್. ಎಂದು ಬೈಕ್ ಹಾರಿಸಿಕೊಂಡು ಹೋಗುವವರೆಗೆ ಗೊತ್ತಾಗುತ್ತಿತ್ತು. ರಸ್ತೆ ಮೇಲೆ ನಡೆಯುತ್ತಿದ್ದೇನೆ. ಎಂದು. ನಿರ್ಜನವಲ್ಲದಿದ್ದರೂ ಜನಸಂದಣಿಯೇನೂ ಹೆಚ್ಚಿಗೆ ಇರಲಿಲ್ಲ. ಇವತ್ತು ರಜೆಯ ದಿನ ವಾಗಿದ್ದರಿಂದ ಈ ನಡು ಮದ್ಯಾಹ್ನ ದಾರಿಯಲ್ಲಿ ಅತೀ ವಿರಳ ಜನರಿದ್ದರು. ಕೈಲಿರೋ ಪುಟ್ಟ ಪ್ಲಾಸ್ಟಿಕ್ ಬ್ಯಾಗಿನಲ್ಲಿನ ಕೋಕಾ ಕೋಲಾದ ಬಾಟ್ಲಿ ತೆಗೆದು ನೋಡಿದಳು. ಈಗಾಗಲೇ ಬೆಳಿಗ್ಗೆಯಿಂದ ಅದೆಷ್ಟು ಬಾರಿಯೋ ಅವಳು ಆ ಬಾಟ್ಲಿ ತುಂಬಿ ತಂದ ನೀರು ಖಾಲಿಯಾದರೂ ಇನ್ನೊಮ್ಮೆ ನೋಡಿಕೊಳ್ಳುತ್ತಿದ್ದಳು. ದಿನಾಲೂ ತಂದ ಒಂದು ಬಾಟ್ಲಿ ನೀರು ಅವಳು ವಾಪಸ್ ಮನೆಗೆ ಹೋಗುವವರೆಗೂ ಇರುತ್ತಿದ್ದರಿಂದ ಈಗಲೂ ಇದೆಯೇನೋ ಅನ್ನೋ ಚೂರು ಆಸೆಯಿಂದ ನೋಡುತ್ತಿದ್ದಳು. ಆದರೆ ಮನೆಯಿಂದ ಹೊರಟು ಮೊದಲ ಮನೆ ಕೆಲಸ ಮುಗಿಸೋ ಹೊತ್ತಿಗೇ ಅವಳ ಬಾಟ್ಲಿ ನೀರು ಖಾಲಿಯಾಗಿತ್ತು. ಎರಡನೇ ಮನೆಯಿಂದ ನೀರು ತರಲು ಮರೆತೇ ಹೋಗಿತ್ತು. ಮೂರನೇ ಮನೆಗಿನ್ನು ಪಲರ್ಾಂಗು ನಡೆಯಬೇಕು.  ಅಲ್ಲಿವರೆಗೂ ನಡೆಯಲಾರೆ ಅನ್ನಿಸಿ ಮುಚ್ಚಿದ ಗೂಡಂಗಡಿಯ ಪಕ್ಕದ ಬೆಂಚಿನ ಮೇಲೆ ಕುಳಿತಳು. ಅತ್ತಿತ್ತ ಯಾವುದಾದರೂ ಮನೆಯ ಬಾಗಿಲು ಸ್ವಲ್ಪವೇ ತೆಗೆದಿದ್ದರೆ ಒಂದು ಲೋಟ ನೀರು ಕೇಳೋಣ ಅನ್ನಿಸಿ ಅತ್ತಿತ್ತ ಆಸೆ ಕಂಗಳಿಂದ ನೋಡಿದಳು. ಯಾರದೋ ಮನೆಯ ಟೀವಿ ಯ ಒದರುವಿಕೆಯಲ್ಲಿ ತನ್ನ ಕ್ಷೀಣ ದನಿ ಕೇಳಲಾರದೆನಿಸಿ ಸುಮ್ಮನಾದಳು.ಕುಳಿತ ಮೆಟ್ಟಿಲು ತಂಪು ಸ್ಥಳ ಹಿತವೆನಿಸಿ ಕಣ್ಮುಚ್ಚಿ ಕುಳಿತಿದ್ದಳು.

 ಹತ್ತು ನಿಮಿಷ ಹಾಗೇ ಕುಳಿತಿದ್ದಳು. ನಿಜರ್ೀವ ಬೊಂಬೆಯಂತೆ. ಯಾರೂ ಅವಳತ್ತ ತಿರುಗಿಯೂ ನೋಡಿರಲಿಲ್ಲ. ಮಂಡಿಯ ಮೇಲೇ ತಲೆಯಿಟ್ಟು ಕಣ್ಮುಚ್ಚಿ ಸಾವರಿಸಿಕೊಂಡರೂ ಏನೋ ನಿಶ್ಯಕ್ತಿ ಅವಳನ್ನು ಏಳಲು ಬಿಡುತ್ತಿರಲಿಲ್ಲ. ಹೋಗಬೇಕಾದ ಮನೆಯ ಕೆಲಸ ಅವಳನ್ನು ಕರೆಯುತ್ತಿತ್ತು. ಜೊತೆಗೇ ಇವತ್ತು ಉತ್ತರ ಹೇಳಬೇಕಲ್ಲ ತಾನು ಎನ್ನುವ ಆತಂಕ!


                                                        *              *                *

                       ವಿಶಾಖ ಕುಮಟಾ ಪೇಟೆಗೆ ಕಾಲಿಟ್ಟಾಗಿಂದ ಅವಳದ್ದು ಕಸಮುಸುರೆಯ ಮನೆಕೆಲಸ. ಅವಳಿಗದರಲ್ಲಿ ಬೇಸರವೇನೂ ಇರಲಿಲ್ಲ. ಆದಾಯವೂ ತೀರಾ ಕಮ್ಮಿ ಇರಲಿಲ್ಲ. ತಾನು ಕಲಿತಿರೋ ಮೂರಕ್ಷರದ ವಿದ್ಯೆಗೆ ಊರಲ್ಲಿ ತನಗಿಂತ ಎಷ್ಟೋ ಜಾಸ್ತಿ ಹಾಯ್ಸ್ಕೂಲ್ ಮುಗಿಸಿದ ಹುಡ್ಗೀರು ದುಡಿಯೋ ಮೊತ್ತದ ನಾಲ್ಕು ಪಟ್ಟು ತಾನು ದುಡಿಯುತ್ತಿದ್ದೇನೆ ಅನ್ನೋ ಹೆಮ್ಮೆ ಇತ್ತು ಅವಳಿಗೆ.

                           ಮೊದ ಮೊದಲು ಒಂದು ಎರಡು ಮನೆಕೆಲಸ ಮಾಡುತ್ತಿದ್ದೋಳು ಈಗ ನಾಲ್ಕು ಮನೆ ಕೆಲಸ ಮಾಡುತ್ತಿದ್ದಳು. ತನ್ನನ್ನು ಮನೆಕೆಲಸಕ್ಕೆಂದು ಊರಿಂದ ಕರೆತಂದು ಇಟ್ಟುಕೊಂಡ ಒಡತೀಯೇ ತನಗೆ  ಹೀಗೇ ನಾಲ್ಕು ಮನೆ ಕೆಲಸ ಹಿಡಿಸಿಕೊಟ್ಟಿದ್ದಳು. ಅವರ ವಿಶ್ವಾಸ ಗೆದ್ದದ್ದರಿಂದ ಅವರದೇ ಗೆಳತಿಯರ ಮನೆಕೆಲಸ ಮಾಡ್ತೀಯಾ ನಿನಗೂ ನಾಲ್ಕು ಕಾಸು ಜಾಸ್ತಿ ಸಂಪಾದನೆ ಆಗತ್ತೆ. ಇಡೀ ದಿನ  ಇಲ್ಲಿ ಕೂತು ಏನು ಮಾಡ್ತೀ ಅಂದಾಗ ತನಗೂ ಇದು ಒಳ್ಳೇದು ಅನ್ನಿಸಿ ಒಪ್ಪಿಕೊಂಡಿದ್ದು. ಉಳಿಯುವ ಊಟದ ಸಮಸ್ಯೆ ಇರಲಿಲ್ಲ. ತನ್ನೊಡತಿ ಇಡೀ ದಿನ ಹೊರಗಿನ ಕೆಲಸಕ್ಕೆ ಹೋಗುವವಳು. ಎಷ್ಟೇ ಹೊತ್ತಿಗೆ ಬಂದರೂ ಒಂದು ತುತ್ತು ಊಟ ತಿಂಡಿಗೆ ಕೈ ಹಿಡಿದವರಲ್ಲ. ಅವರ ಹಾಗೂ ಯಜಮಾನರ ಕೆಲಸಕ್ಕೆ ಕುಂದುಂಟಾಗದಂತೆ ಕೆಲಸ ಮಾಡಿಕೊಂಡಿದ್ದರಾಯ್ತು. ಒಮ್ಮೆ ಯಜಮಾನ ಯಜಮಾನತಿ ಬೆಳಿಗ್ಗೆ ಹೊರಟರೆ ಅಲ್ಲಿಗೆ ತನ್ನಕೆಲಸವೂ ಮುಗಿದಿರತ್ತೆ. ಮತ್ತೆ. ಮಧ್ಯಾಹ್ನದ ಊಟಕ್ಕೆ ಅವರವರೇ ಬಡಿಸಿಕೊಳ್ತಾರೆ. ಸಂಜೆ ವಾಪಸ್ಸಾಗೋ ಹೊತ್ತಿಗೆ ಕಾಫಿ ತಿಂಡಿ ಮಾಡೋದಕ್ಕೆ ತಾನು ತಲುಪಿದ್ರಾಯ್ತು. ಅವಳಿಗೆ ಕೆಲಸಗಳು ಭಾರವೆನಿಸುತ್ತಿರಲಿಲ್ಲ. ಹಣ ಒಂದಿಷ್ಟು ಬರತ್ತಲ್ಲ. ಮೈ ಮುರಿದು ದುಡಿಯುತ್ತಿದ್ದರೆ ಬೇರೆ ಯೋಚನೆಗಳು ಅವಳನ್ನು ಕಾಡುತ್ತಿರಲಿಲ್ಲ. ಎಲ್ಲವೂ ಸುಗಮವಾಗಿ ಸಾಗುತ್ತಿತ್ತು. ವರ್ಷದಿಂದ.


              ತನ್ನೊಡತಿ ಅಶ್ವಿನಿಯವರ ಮನೆಗೆಲಸಕ್ಕೆ ಬಂದ ಮೊದಲ ನಾಲ್ಕು ತಿಂಗಳು ತಾನು ಮನೆಯಿಂದ ಎಲ್ಲೂ ಹೊರಗೆ ಬಿದ್ದಿರಲಿಲ್ಲ. ಪಕ್ಕದ ಅಂಗಡಿಯಿಂದ ನಾಲ್ಕು ತರಕಾರಿ ದಿನಸಿ ತರೋದಾದರೆ ಮಾತ್ರ ತನ್ನ ಕಳಿಸುತ್ತಿದ್ದದ್ದು. ಹಾಗಂತ ಅಪನಂಬಿಕೆ ಅಂತದ್ದೇನಿರಲಿಲ್ಲ ಹೊಸದಾಗಿ ಪೇಟೆಗೆ ಬಂದವಳು ಅಂತ ಅವರಿಗೂ ಸಹಜ ಭಯವಿತ್ತು. ತನಗೂ ಆ ಭಯ ಇದ್ದೇ ಇತ್ತು. ತನ್ನ ಅಶ್ವಿನಿ ಅಮ್ಮ ಸೋಮಾರಿಯೇನಲ್ಲ. ಅವರು ಮನೆಯಲ್ಲಿದ್ದರೂ ಹತ್ತು ನಿಮಿಷ ಖಾಲಿ ಕುಳಿತು ಸಮಯ ಹಾಳು ಮಾಡಿದವರಲ್ಲ. ಮನೆಯಲ್ಲಿ ಮಕ್ಕಳು ಇಲ್ಲದಿದ್ದರೂ ಸುಖೀ ದಾಂಪತ್ಯ ಅವರದು. ಆಫೀಸಿನ ಕೆಲಸದ ನಂತರ ನೂರಾರು ಬೇರೆ ಬೇರೆ ಕೆಲಸಗಳ ಹಚ್ಚಿಕೊಂಡವರು. ಮಧ್ಯೆ ಮನೆಯ ಎಲ್ಲ ಉಸ್ತುವಾರಿ ಅವರದ್ದೇ.. ದೇವರ ಪೂಜೆಯಿಂದ ಹಿಡಿದು  ಮನೆಗೆ ಬೇಕಾದ ಅಕ್ಕಿ ಬೇಳೆ, ನೀರು, ಕರೆಂಟ್ ಎಲ್ಲಾ ನೋಡಿಕೊಳ್ಳುವುದು ಅವರದ್ದೇ ಕೆಲಸ. ಅದರಲ್ಲೇನು ವಿಶೇಷ ಅಂತಿಲ್ಲ. ಆದರೆ ವಿಶೇಷವಿರೋದು ಅವರ ನಗುಮುಖದ ಜೊತೆಯ ಬದುಕುವುದರಲ್ಲಿ. ಒಂದಿನ ದೊಡ್ಡಕ್ಕೆ ಮಾತಾಡಿದವರಲ್ಲ. ಒಂಚೂರು ಬೈದವರಲ್ಲ.ಜವಾಬ್ದಾರಿಯ ಜೊತೆ ನಂಬಿಕೆಯನ್ನೂ ಕೊಟ್ಟವರು. ಅವಳಿಗೆ ಈ ಮನೆ ತನ್ನದೆಂಬ ಆತ್ಮೀಯ ಭಾವ ಮೂಡಿದ್ದರೆ ಅದು ಆಶ್ವಿನಿ ಅಮ್ಮನ ಗುಣದಿಂದಲೇ ಅನ್ನಿಸುತ್ತದೆ. 
                  ಇಂಥ ಅಮ್ಮನ ಸಲಹೆಯ ಮೇರೆಗೆ ಅವರ ಗೆಳತಿಯರ ಮನೆಗೆ ಕೆಲಸಕ್ಕೆ ಹೋಗ ತೊಡಗಿದ ಮೊದಮೊದಲು ಎಲ್ಲ ಚೆನ್ನಾಗೇ ಇತ್ತು. ಕ್ರಮೇಣ ಒಂದೊಂದೇ ಮನೆಯ ಅಭ್ಯಾಸವೂ ಆಯ್ತು. ಉಳಿದ ಎರಡು ಮನೆಗಳಲ್ಲಿ ಎರಡು ಮಕ್ಕಳುಮತ್ತೆ ಗಂಡ ಹೆಂಡತಿ. ಕೇವಲ ಪಾತ್ರೆ ತೊಳೆದು ಬಟ್ಟೆ ಒಗೆದು ಬಂದರಾಯ್ತಷ್ಟೇ. ಆದರೆ ಮಧ್ಯಾಹ್ನ ಹೋಗೋ ಈ ಮನೆಯಲ್ಲಿ ಮಾತ್ರ ಮನೆತುಂಬ ಜನ. ಮನೆಯ ಹಿರಿ ಜೀವ ಅನಂತಜ್ಜ. ಅವರ ಮೂವರು ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳು. ಅದಲ್ಲದೇ ಮನೆಯ ಒಳಗಿನ ಕೆಲಸಕ್ಕೆ ಇರೋ ಶ್ಯಾಮಲಾ ಆಂಟಿ.. ಯಾವಾಗಲೂ ಮನೆತುಂಬಾ ಜನ ಇರೋ ಮನೆ ಇದು.  ತನ್ನ ಕೆಲಸ ಮದ್ಯಾಹ್ನ ಅನಂತಜ್ಜನ ಕೋಣೆ ಒರೆಸಿ ಅವರ ಬಟ್ಟೆ ತೊಳೆದು ಬೇಕಾದ ಬಟ್ಟೆ ಐರನ್ ಮಾಡಿಟ್ಟು ಅವರ ಜೊತೆ ಒಂದು ಅರ್ಧ ಕಿಲೋಮೀಟರ್ ವಾಕಿಂಗ್ ಹೋಗಿ ವಾಪಸ್ ಮನೆಗೆ ಬಿಟ್ಟು ಬಂದರಾಯ್ತು. ಒಂದಿನ ವಾಕಿಂಗ್ ಹೋದಾಗಲೇ ಅವರ ಪ್ರೆಶರ್ ಹೆಚ್ಚಾಗಿ ರಸ್ತೆಲಿ ಬಿದ್ದು ಬಿಟ್ಟಿದ್ದರಿಂದ ಈ ವ್ಯವಸ್ಥೆ. ತನ್ನ ಕೆಲಸ ಅಷ್ಟೇ ಆದರೂ ಸಂಬಳಕ್ಕೇನೂ ಕಮ್ಮಿ ಇರಲಿಲ್ಲ. ಸಂಜೆ ಆರರ ಒಳಗೆಲ್ಲ ವಾಪಸ್ ಮನೆಗೆ ಹೊರಟುಬಿಡಬೇಕಿತ್ತು ತಾನು. ಅಜ್ಜ ಒಂದು ದಿನವೂ ಕಿರಿಕಿರಿ ಮಾಡುವವರಲ್ಲ.

                              ಶುಭ್ರ ಬಿಳಿಯ ಪಾಯಜಾಮ ಅದರ ಮೇಲೊಂದು ಅಷ್ಟೇ ಶುಭ್ರ ಬಿಳಿಯ ಉಜಾಲಾ ಹೊಳಪಿನ ಜುಬ್ಬಾ ಅವರ ದಿನನಿತ್ಯದ ಉಡುಗೆ. ನುಣ್ಣಗೆ ಶೇವ್ ಮಾಡಿ ಚಿನ್ನದ ಫ್ರೇಮಿನ ಕನ್ನಡಕ ಧರಿಸಿ ಕೈಲೊಂದು ಕೋಲು ಹಿಡಿದು ಅವರು ಹೊರಟರೆ ಅವರ ಪಕ್ಕ ನಡೆಯಲು ಭಯವಾಗುತ್ತಿತ್ತು. ಹಾಗಂತ ದೂರ ನಡೆದರೆ ಅವರೇ ಹತ್ತಿರ ಕರೆಯುತ್ತಿದ್ದರು. ಆ ಗತ್ತು ಆ ನಡಿಗೆ ಅವರ ಕೊರಳಲ್ಲಿನ ಚಿನ್ನದೆಳೆಯ ಚೈನ್ ಸರ ಎಲ್ಲ ನೋಡುತ್ತಿದ್ದರೆ ತನಗೋ  ಟಿವಿ ಯಲ್ಲಿ ಬರುವ ಮಂತ್ರಿಗಳ ನೋಡಿದಂತೆನಿಸುತ್ತಿತ್ತು. 
            ಕಳೆಗೆಟ್ಟ ಮುಖದಲ್ಲಿ ನಾನಿದ್ದರೆ ಅವರು 'ಹೋಗಿ ಮುಖ ತೊಳ್ಕೊ ಬಾ ವಿಶಾಖಾ' ಅಂತನ್ನುತ್ತಿದ್ದರು. ಅದಕ್ಕೆಂದೇ ಅವರ ಮನೆಗೆ ಹೋದ ತಕ್ಷಣ ಮೊದಲು ಕೈಕಾಲು ಮುಖ ತೊಳೆದೆ ತಾನು ಒಳಗೆ ಹೋಗುತ್ತಿದ್ದದ್ದು.  ಅನಂತಜ್ಜ ನ ಒಡೆದೀರು ಅಂತಲೇ ಕರೆಯುತ್ತಿದ್ದದ್ದು. 

                ಒಡೆದೀರು ಕಾಯುತ್ತಿದ್ದಾರೆ ಎಂಬ ನೆನಪಾದ ತಕ್ಷಣ ಎದ್ದು ಹೊರಟಳು. ಎಂದಿನ ಅದೇ ದಾರಿ. ದೂರದಲ್ಲಿ ಎರಡಂತಸ್ತಿನ ಮನೆ. ಮಧ್ಯೆ ಕುಂಬೇಶ್ವರ ದೇವಸ್ಥಾನದ ಬಳಿಗಾದ್ರೂ ಹೋಗಿ ಒಂಚೂರು ನೀರು ಕುಡಿದು ಹೋಗೋಣ ಎಂದುಕೊಂಡು ಬಿರಬಿರನೇ ಹೆಜ್ಜೆ ಹಾಕಿದಳು. ದೇವಸ್ಥಾನದ ಎದುರು ಅದೇ ಕಾಯಿ ಊದುಬತ್ತಿ ಮಾರಾಟದ ಅಂಗಡಿ ಸಾಲು. ಆವಾಗಾವಾಗ ಅಜ್ಜನ ಜೊತೆ ಇಲ್ಲಿವರೆಗೂ ಹೆಜ್ಜೆ ಹಾಕಿದ್ದರಿಂದ ಪರಿಚಯದ ಮುಖಗಳು. ಒಂಚೂರು ನೀರು ಕೊಡಣ್ಣ ಅಂತ ಬೇಡಿ ಅವನು ಕೊಟ್ಟ ಚೊಂಬಿಗೆ ನೀರು ಘಟಘಟನೆ ಕುಡಿದಾಗಲೇ ಅರ್ಧ ಸಮಾಧಾನ ಅನ್ನಿಸಿದ್ದು. ಒಂದು ಮುಗುಳ್ನಗೆ ಧನ್ಯವಾದ ಎಸೆದು ಬಿರಬಿರನೇ ನಡೆದಳು ವಿಶಾಖಾ. 


           ಮನೆಯೆದುರಿನ ಅಂಗಳದ ಮೂಲೆಯಲ್ಲಿ ಚಪ್ಪಲಿ ಬಿಟ್ಟು ನಲ್ಲಿ ನೀರಿಗೆ ಮುಖ ಹಾಕಿ ಸ್ವಲ್ಪ ಹಾಯೆನಿಸುತ್ತಿದ್ದಂತೆ ಮನೆಯೊಳಗಿಂದ ಜೋರಾದ ಗಲಾಟೆ ಕೇಳಿಬಂದುಹೋ ಯಾರೋ ನೆಂಟರು ಬಂದಿರಬೇಕೇನೋ ಅಂದುಕೊಂಡಳು. ಹಾಗೆ ನೆಂಟರು ಬಂದಿದ್ದರೆ ಅಜ್ಜ ಒಂದೊಂದು ಬಾರಿ ವಾಕಿಂಗ್ ಹೊರಡುತ್ತಿರಲಿಲ್ಲ. ಹೀಗಾದರೆ ಇವತ್ತು ಒಳ್ಳೇದು. ಬೇಗ ಮನೆಗೆ ಹೋಗಿ ತಾಸು ಮಲಗೋದಕ್ಕಾದೀತು ಅಂದುಕೊಂಡರೂ ತಡಮಾಡದೇ ಒಳ ನಡೆದು ಬಾತ್ ರೂಮಿನ ಹೊರಗಿಟ್ಟ ಒರಸು ಬಟ್ಟೆ ಬಕೇಟು ತೆಗೆದುಕೊಂಡಳು.   ಮನೆಯ ವರಾಂಡದಲ್ಲಿ ನಾಲ್ಕಾರು ಜನ ಕೂತು ಮಾತಾಡುತ್ತಿದ್ದರು. ಒಡೇದೀರು ಅಲ್ಲೇ ಇದ್ದರು. ಹಾಗೇ ಅವನೂ ಇದ್ದ. ಕಳ್ಳ ನೋಟ ತನ್ನೆಡೆಗೆ ಹಾಯಿಸುತ್ತ. ಈ ಹೊತ್ತು ಬಚಾವ್ ಎಂದುಕೊಂಡು ಸರಸರನೆ ಕೋಣೆಯತ್ತ ನಡೆದಳು ವಿಶಾಖ.ಕೋಣೆ ಒರೆಸಿ ಬಟ್ಟೆ ತೊಳೆದು ಮೇಲೆ ಟೆರೆಸ್ ಗೆ ಹರಗಲು ಹೊರಡುತ್ತಿದ್ದಂತೆ ಮಟ್ಟಿಲ ಪಕ್ಕದಲ್ಲಿ ನೆರಳಾದಂತೆನೆಸಿ ಭಯವಾಯ್ತು. ಆಚೀಚೆ ನೋಡಿದಳು. ಯಾರೂ ಕಾಣಲಿಲ್ಲ. ತನ್ನ ಭ್ರಮೆ ಎಂದುಕೊಂಡು ಮೆಟ್ಟಿಲೇರಿದಳು. 

           ಟೆರೆಸ್ ಪಕ್ಕದಲ್ಲಿಯೇ ಇರೋ ಪುಟ್ಟ ಶೆಡ್ ಒಳಗೆ ಇಟ್ಟಿರೋ ಕ್ಲಿಪ್ ಗಳನ್ನ ತರಲು ಒಳ ಹೊಕ್ಕಿದರೆ ಅವನಿದ್ದ ಅಲ್ಲೇ..  ಏನು ವಿಚಾರ ಮಾಡಿದೆ ವಿಶಾಖ?'' ಅವಳು ಮಾತಾಡದೇ ಅಲ್ಲಿರುವ ಕ್ಲಿಪ್ ಎತ್ತಿಕೊಂಡು ಈಚೆ ಬಂದಳು. ಅವಳಿಗೆ ಗೊತ್ತು. ಅವನಲ್ಲೇ ಕಾಯುತ್ತಿದ್ದಾನೆ. ಹಾಗಂತ ಅವಳು ಬಹಳ ಹೊತ್ತು ಅಲ್ಲಿ ನಿಲ್ಲಲಾರಳು. ಅವನ ಬೇಡಿಕೆ ಅವಳಿಗೆ ಗೊತ್ತು. ಒಬ್ಬ ಪುಟ್ಟ ಹುಡುಗನ ಮನಸಿನವ ಆತ. ದೇಹ ವಯಸ್ಸಿಗೆ ತಕ್ಕಂತೆ ಬೆಳೆದಿದೆ. ಸುರ ಸುಂದರಾಂಗನೇ.. ಎಲ್ಲರಂತಿದ್ದರೆ ಬಹುಶಃ ಇಷ್ಟು ದಿನಕ್ಕೆ ಕುಮಟಾ ಪೇಟೆಲಿ ಫಲ್ಸರ್ ಮೇಲೇ ಗುರ್ ಅಂತ ಓಡಾಡೋ ಹುಡುಗ್ರಲ್ಲಿ ಅವನೂ ಒಬ್ಬನಾಗಿರ್ತಿದ್ದ. ತನ್ನೆಡೆಗೆ ತಿರುಗಿ ಕೂಡ ಹಾಯದ ಅಂತಸ್ತು ಅವನದು. ಆದರೆ ಇವತ್ತು ಅವನು ವಿಶಾಖ ವಿಶಾಖ ಅಂತ ತನ್ನ ಬೆನ್ನು ಬಿದ್ದಿದ್ದು ಅವನದೊಂದೇ ಕೋರಿಕೆ.  ನೀನು ನನ್ನ ದೋಸ್ತ್ ಆಗ್ತೀಯ ವಿಶಾಖ? ಎಲ್ಲರಿಗೂ ದೋಸ್ತರಿರುತ್ತಾರಲ್ಲ! ನನಗೆ ಮಾತ್ರ ಯಾರೂ ಇಲ್ಲ. ನನಗೆ ನೀನು ದೋಸ್ತ ಆಗ್ತೀಯ? ಅವನದ್ದು ಅಪ್ರಬುದ್ಧ ಮನಸು ನಿಜ. ಆದರೆ ಅವನ ಹೇಳಿಕೆಯಂತೇ ದೋಸ್ತ್ ಆಗೋದಕ್ಕೆ ಸಾಧ್ಯವಾ? ಮನಸಿನ ಒಳಗೆ ಒಂಚೂರು ಹೆಮ್ಮೆ ಕಾಣಿಸಿಕೊಂಡಿತು. ರಾಯರ ಮನೆ ಹುಡುಗ ನನ್ನ ಗೆಳೆತನಕ್ಕೆ ಹಾತೊರೆಯುವುದೆಂದರೆ ಸಾಮಾನ್ಯವಾ? ಚಿನ್ನದ ಚಮಚೆ ಬಾಯಲ್ಲಿ ಇಟ್ಕೊಂಡು ಹುಟ್ಟಿದ ಹುಡುಗ ಅವನು. ಅವರ ಮನೆಯಲ್ಲಿ ಬಾಯ್ಬಿಡದೇ ತುಟಿ ಪಿಟಿಕ್ ಅನ್ನದೇ ಕೆಲಸ ಮುಗಿಸಿ ಬರುವ ಅವಳು. ಯಾಕಾಗ್ಬಾರ್ದು ದೋಸ್ತಿ? ಅನ್ನಿಸ್ತಿತ್ತು. ಎದೆಯೊಳಗೆಲ್ಲೋ ಅಮಿತ ಆನಂದ.



                         ಚಿಕ್ಕ ಮಕ್ಕಳ ಬುದ್ದಿ ಬಿಟ್ಟರೆ ಕರ್ಣ ಎನೂ ಕೆಟ್ಟ ಹುಡುಗರಂತಿರಲಿಲ್ಲ.ಅವನಷ್ಟೊತ್ತಿಗೆ ಆಟಿಕೆ ಆಡಿಕೊಂಡು ಅಜ್ಜನ ಜೊತೆ ಕತೆ ಕೇಳಿಕೊಂಡು ಶುಭ್ರ ಬಟ್ಟೆ ಧರಿಸಿ ಆರಾಮಾಗೇ ಇದ್ದ. ಮನೆಯವರೆಲ್ಲ ಅವನ ಅಕ್ಕರಾಸ್ತೆಯಿಂದಲೆ ನೋಡಿಕೊಳ್ಳುತ್ತಿದ್ದರು. ಅವನ ನೋಟ ತನ್ನೆಡೆಗೆ ಹರಿದಿರೋದ ಗಮನಿಸಿ ಮನೆಯೊಡತಿ ಚಂದ್ರಾಣಿ ತನಗೆ ಸೂಕ್ಷ್ಮ ಸೂಚನೆಯನ್ನೂ ಕೊಟ್ಟಿದ್ದರು. ಇಷ್ಟೆಲ್ಲ ಆದಮೇಲೂ ಅವನೊಟ್ಟಿಗೆ ಸ್ನೇಹ ಎಂದು ಕೈ ಚಾಚಲು ಧೈರ್ಯ ಬರ್ತಿರಲಿಲ್ಲ. ಇತ್ತೀಚೆಗೆ ಆಗಾಗ ಹೀಗೆ ತನ್ನ ಕಾಡುವುದು ಸಾಮಾನ್ಯವಾಗಿತ್ತು. ಜೊತೆಗೇ ಅದೇ ಟೆರೆಸ್ ಶೆಡ್ ನಲ್ಲಿ ಬಾಗಿಲು ಹಾಕಿಕೊಂಡು ಅಳುತ್ತಿದ್ದದೂ ಗಮನಕ್ಕೆ ಬರುತ್ತಿತ್ತು. 

              ಕಪ್ಪುಕಣ್ಣಿನ  ದಪ್ಪ ಹುಬ್ಬನ್ನು  ಗಂಟಾಗಿಸಿ ಅವನು ನೋಡುತ್ತಿದ್ದರೆ ತನಗೋ ಒಳಗೊಳಗೇ ಪುಳಕ. ಅದಾಗಲೇ ಮೂಡಿರುವ ಚಿಗುರು ಮೀಸೆಯಡಿಯಲ್ಲಿ ಪುಟ್ಟ ತುಟಿಗಳ ಓರೆಯಾಗಿಸಿ 'ವಿಶಾಖ........' ಅನ್ನುತ್ತಿದ್ದರೆ ಎದೆಯೊಳಗೆಲ್ಲ ಮಳೆ ಹೊಯ್ದ ಅನುಭವ. 

               ಹೌದು. ತನ್ನಂತ ಕಪ್ಪು ಹುಡುಗಿಗೆ ಮದುವೆಯ ಕನಸುಗಳಿರಲಿಲ್ಲ. ಕುಡುಕ ಅಪ್ಪನ ಸಾವು ಎಂದೋ ಕಳೆದುಕೊಂಡ ಅಮ್ಮ ಅವರವರ ಬದುಕೇ ಹೊರೆಯಾದಂತಿರುವ ಅಕ್ಕ ಅಣ್ಣಂದಿರು ತನ್ನನ್ನು ಅಶ್ವಿನಿ ಅಮ್ಮನ ಮನೆಗೆ ಸೇರಿಸಿದ ನಂತರ ತಿಂಗಳಿಗೊಮ್ಮೆಯೂ ಊರ ಕಡೆ ಮುಖ ಹಾಕಿದ್ದಿಲ್ಲ. ಕರೆದೊಯ್ಯುವವರೂ ಇಲ್ಲ. ಎಂದೋ ಸುಗ್ಗಿ ಹುಣ್ಣಿಮೆಯ ಸಮಯದಲ್ಲಿ ಅಮ್ಮನೇ ತನ್ನ ಅಣ್ಣನ ಕರೆದು ಊರಿಗೆ ಕಳಿಸಿದ್ದರೂ ತಾನು ಎರಡೇ ದಿನಕ್ಕೆ ಹಿಂತಿರುಗಿದ್ದು ನೆನಪಾಯ್ತು. ಇನ್ನು ತನ್ನ ಮದುವೆಯಂತ ಕನಸುಗಳ ಯಾವತ್ತೋ ಬಿಟ್ಟಿದ್ದಳು. ಮದುವೆಯ ಕನಸಿರದಿದ್ದರೂ ಅವಳೆದೆಯಲ್ಲಿ ಬಯಕೆಯ ಸುಳಿ ಕಾಡುತ್ತಿತ್ತು. ಅಮ್ಮ ಎಂದಾದರೂ ತನ್ನ  ಮದುವೆ ಮಾಡಿಯಾರು ಅನ್ನೋ ನಂಬಿಕೆ ತಂದುಕೊಳ್ಳುತ್ತಿದ್ದಳು. ಆದರೂ ಕರ್ಣನ ಕಣ್ಣಿನ ಸೆಳೆತದಲ್ಲಿ ಅವಳೂ ನಲುಗುತ್ತಿದ್ದಳು. ರಾತ್ರಿಯೂ ಅದೇ ಮುಗ್ದಕಂಗಳು ಅವಳನ್ನು ಕಾಡುತ್ತಿದ್ದವು.ನಿದ್ರೆ ಬರದೇ ಹೊರಳಾಡುತ್ತಿದ್ದಳು. ಹೌದು ಅವನೇ ಕರೆದಾಗ ನಾನು ಸುಮ್ಮನೆ ಪ್ರೆಂಡ್ ಅಂತ  ಮಾತಾಡಿದರೆ ತಪ್ಪೇನು ಅನ್ನಿಸುತ್ತಿತ್ತು. ಎಷ್ಟು ಜನ ಹುಡುಗರು ಹುಡುಗಿಯರು ಕೈ ಕೈ ಹಿಡ್ಕೊಂಡು ಮಾತಾಡ್ಕೊಂಡು ಹೋಗೋದು ಇದೇ ಕುಮಟಾ ರಸ್ತೆಯಲ್ಲಿ ತಾನು ನೋಡಿದ್ದಿಲ್ಲ? ಅವರೆಲ್ಲ ಎಂತ ಮದುವೆಯೇ ಆಗುವವರಾ? ಮನೆ ತುಂಬಾ ಜನರಿರ್ತಾರೆ. ಅವನೆನೂ ನನ್ನ ಜೊತೆ ಕೆಟ್ಟದಾಗಿ ನಡೆದುಕೊಳ್ಳೋದಕ್ಕೆ ಆಗೋದಿಲ್ಲ. ಹಾಗಿದ್ದಾಗ ಒಂದಷ್ಟು ಪ್ರೀತಿ ಮಾತು ಆಡಿದ್ರೆ ತಪ್ಪೇನು ಅನ್ನಿಸುತ್ತಿತ್ತು. 

                    ಆದರೂ ಚಂದ್ರಾಣಿ ಅಮ್ಮ ಹೇಳಿದ್ದು ನೆನಪಾದರೆ ಭಯವೂ ಆಗುತ್ತಿತ್ತು. ನೋಡು ವಿಶಾಖ. ನಮ್ಮ ಕರ್ಣನಿಗೆ ಏನೂ ತಿಳಿಯೋದಿಲ್ಲ. ಅವನ ದೇಹ ಬೆಳೆದಿದೆ. ಬುದ್ಧಿ ಬೆಳೆದಿಲ್ಲ. ಅವನ ಕೈಗೆ ಸಿಗೋ ಹಾಗೆ ಒಬ್ಬೊಬ್ಬಳೇ ಇರ್ಬೇಡ. ಆಮೇಲೆ ಏನಾದ್ರೂ ಅನಾಹುತ ಆದ್ರೆ ನಾವ್ಯಾರು ಏನೂ ಮಾಡಕ್ಕಾಗಲ್ಲ. ನಿನ್ನಷ್ಟೊತ್ತಿಗೆ ನೀನಿರು. ಹೌದು. ನನಗ್ಯಾಕೆ ದೊಡ್ಡವರ ಮನೆ ಉಸಾಬರಿ ಅನಿಸಿ ಸುಮ್ಮನುಳಿದರೂ ಮನೆಗೆ ಬಂದು ಹೋಗುವವರೆಗಿನ ಅವನ ಮುಗ್ಧ ನೋಟಕ್ಕೆ  ತಾನೂ ಕಾಯುತ್ತಿರೋದು ಸುಳ್ಳಲ್ಲ. ಆ ನೋಟದಲ್ಲಿನ ಅವ್ಯಕ್ತ ಒಲುಮೆ ತನ್ನ ಕುಶಿ ಪಡಿಸ್ತಾ ಇರೋದು ಸುಳ್ಳಲ್ಲ ಎನಿಸಿ ಅವಳಷ್ಟಕ್ಕೇ ಅವಳು ಗಾಬರಿಯಾದಳು. 


    ಒಣಗಿದ್ದ ಬಟ್ಟೆ ಮಡಿಸಿಟ್ಟು ಒದ್ದೆ ಬಟ್ಟೆ ಹರಗಿ ಅವು ಗಾಳಿಗೆ ಹಾರದಂತೆ ಕ್ಲಿಪ್ ಹಾಕಿ ಬರುವವರೆಗೂ ಅವಳನ್ನೇ ನೋಡುತ್ತಿದ್ದ ಕರ್ಣ. ಅದೇ ಶೆಡ್ ನ ಬಾಗಿಲಿಗೊರಗಿ ನಿಂತು. ಅವಳ ಕೆಲಸ ಮುಗಿಯುತ್ತಿದ್ದಂತೇ  ಹೇಳೇ ................ವಿಶಾಖ........... ಎಂದ. 

ಅವಳು ಮಾತಾಡದೇ ಇಳಿದು ಬಂದಳು. ಒಂದೊಂದುಸಲ ಭಯವೂ ಕಾಡುತ್ತಿತ್ತು ಅವಳಿಗೆ. ಅವನೊಳಗಿನ ಒಂಟಿತನದ ಅರಿವಿತ್ತು. ಇದೇ ನೆಪ ಮಾಡ್ಕೊಂಡು ಅವನಿಗೇನಾದರೂ ಆದರೆ!
             ಯಾರತ್ರನಾದ್ರೂ ಹೇಳ್ಬೇಕನಿಸಿತು. ಯಾರತ್ರ ಹೇಳೋದು? ಅಶ್ವಿನಿ ಅಮ್ಮನ ಹತ್ತಿರ ಹೇಳಿ ಅವರ ಗೆಳತಿಗೆ  ಹೇಳಿಸೋದು ಒಳ್ಳೇದೇನೋ ಅಂದುಕೊಳ್ಳುತ್ತಿದ್ದಂತೇ ಅಜ್ಜ ಕೋಲು ಹಿಡಿದು ಶಾಲು ಹೊದೆದು ಹೊರಗೆ ಬಂದರು. ಸರ ಸರ ನಡೆದು ಬಕೇಟು ಇಟ್ಟು ಬಂದಳು. ಅಜ್ಜನ ಬೆನ್ನಿಗೆ ಹೊರಟಳು.

                      ಬಂದವರ ಗಲಾಟೆಯಿನ್ನೂ ವರಾಂಡದಲ್ಲಿ ಕೇಳುತ್ತಲೇ ಇತ್ತು.  ಅಜ್ಜ ಒಂದಿನ ಮನೇಲಿ ಕೂತ್ಗೋಬಾರ್ದಾ? ಅಂತ ಮನದಲ್ಲೇ ಶಾಪ ಹಾಕಿಕೊಂಡಳು. ಆದರೆ ಆಗಲೇ ರಸ್ತೆ ಹಿಡಿದ ಅಜ್ಜನ ಬೆನ್ನಿಗೆ ಕಾಲು ಉದ್ದುದ್ದ ಹಾಕತೊಡಗಿದಳು. ಇವತ್ಯಾಕೋ ಜೀವ ಸಹಕರಿಸುತ್ತಿಕಲ್ಲ ಅನಿಸಿದರೂ ತುಟಿ ಪಿಟಿಕ್ ಅನ್ನಲಿಲ್ಲ ವಿಶಾಖ. ಅಜ್ಜರೆಂದರೆ ವಿಪರೀತ ಗೌರವ ಅವಳಿಗೆ. ಹಾಗಿರಬೇಕು ಮನೆ ಯಜಮಾನರೆಂದರೆ ಎಂಬುದು ಅವಳ ಅಭಿಮತ. ದೇವಸ್ಥಾನದ ಎದುರು ನಿಂತು ಚಪ್ಪಲಿ ಕಳೆದು ಒಂದು ಸುತ್ತು ಕೈ ಮುಗಿದು ಹೊರ ಬರುತ್ತಿದ್ದಂತೇ ವಿಶಾಖ ದಡಕ್ಕನೇ ಬಿದ್ದು ಹೋದಳು..............


                                                       *                   *                *


                     ಪಂಡಿತರ ಆಸ್ಪತ್ರೆ ವಾರ್ಡನಲ್ಲಿ ತಾನು ಕಣ್ ಬಿಟ್ಟಾಗ ಪಕ್ಕದಲ್ಲೇ ಕುಳಿತಿದ್ದ ಒಡೇದೀರು ತಲೆ ಮೇಲೇ ಕೈಯಿಟ್ಟು ನೇವರಿಸುತಿತದ್ದರೆ ತನಗೆ ಎಚ್ಚರವಾಯ್ತಾ ಇಲ್ಲ ಕನಸಾ ಗೊತ್ತಾಗ್ತಿರಲೇ ಇಲ್ಲ. ನರ್ಸ ಬಂದು ಒಂದು ಇಂಜೆಕ್ಷನ್ ಚುಚ್ಚಿ ಹೋದಾಗ ಹಾ!!! ಎಂದು ನಲುಗಿದ್ದಷ್ಟೇ ಗೊತ್ತು. ಆ ನಂತರ ತನಗೆ ಸರಿಯಾಗಿ ಎಚ್ಚರಾಗಿದ್ದು ಬೆಳಿಗ್ಗೆಯೇ. ರಾತ್ರಿ ಸುಮಾರು ಹೊತ್ತಿನ ವರೆಗೂ ಅಜ್ಜನವರು ತನ್ನ ಜೊತೆಗೇ ಇದ್ದರೆಂದು ಬೆಳಿಗ್ಗೆ ಮತ್ತೆ ಬರುತ್ತಾರೆಂದೂ ಅಶ್ವಿನಿ ಅಮ್ಮ ಬಂದು ಹೋಗಿದ್ದರೆಂದು ತನಗೇನೂ ಚಿಂತೆ ಬೇಡವೆಂದೂ ತನ್ನ ನೋಡಿಕೊಳ್ಳತ್ತಿದ್ದ ನರ್ಸ ಹೇಳುತ್ತಿದ್ದರೂ ತನಗೇನಾಗಿದೆಯೆಂದು ಯಾರೂ ಹೇಳುತ್ತಿರಲಿಲ್ಲ. ಎದ್ದು ಕೂತುಕೊಳ್ಳೋಣವೆಂದರೆ ಅದೂ ಸಾಧ್ಯಾವಾಗಲಿಲ್ಲ............
ಪಕ್ಕದಲ್ಲಿದ್ದ ನರ್ಸನ ಬಲವಾಗಿ ಹಿಡಿದು ಕೇಳಿದ್ದಳು.  ಏನಾಗಿದೆ ನನಗೆ?
 ಏನಿಲ್ಲ. ನಿಮಗೆ ತುಂಬಾ ವೀಕ್ನೆಸ್ ಆಗಿದೆ. ಜ್ವರ ಇದೆ. ಅದು ಟಾರ್ಯಫರ್ಡ್ ಆಗೋ ಸಾಧ್ಯತೆ ಇದೆ. ನಿಮಗೆ ರೆಸ್ಟ್ ಬೇಕು. ಸುಮ್ಮನೇ ಮಲಗಿ. ಡಾಕ್ಟರು ಎಲ್ಲಾ ಟೆಸ್ಟ ಮಾಡಿದ್ದಾರೆ. ರಿಪೋರ್ಟ ಬರತ್ತೆ ಇವತ್ತು


                       ಆ ಆಸ್ಪತ್ರೆಯ ವಾಸನೆಗೆ ಹೊಟ್ಟೆ ಕಿತ್ತು ಬಂದಂತಾಗುತ್ತಿತ್ತು. ಕೆಳಗೆಲ್ಲೋ ಮಕ್ಕಳು ಚೀರಾಡುವುದು ಕೇಳುತ್ತಿತ್ತು. ಪೇಶೆಂಟ್ಗಳ ಓಡಾಟ. ಅವರ ಪರಿಚಯದವರ ಮಾತು ನರ್ಸಗಳು ಬಿಳಿ ಸೀರೆಯ ಸೆರಗನ್ನ ಅತ್ತಿತ್ತ ಬೀಸಾಡುತ್ತ ಓಡಾಡುತ್ತಿದ್ದುದು ಎಲ್ಲವನ್ನೂ ನೋಡುತ್ತ ಮಲಗಿದ್ದಳು. ಸುಮಾರು ಹತ್ತು ಗಂಟೆಯ ಹೊತ್ತಿಗೆ  ಅನಂತಜ್ಜ ಮತ್ತು ಕರ್ಣ ಬಂದರು. ಅವನನ್ನು ನೋಡಿ ಆಶ್ಚರ್ಯ ವಾದರೂ ಸುಮ್ಮನುಳಿದಳು ವಿಶಾಖ. ನಮ್ಮ ಕರ್ಣ ತಾನೂ ಬರ್ತೀನಂತ ಹಟ ಹಿಡಿದ. ಅದ್ಕೇ ಕರ್ಕೊಂಡ್ ಬಂದೆ. ಅಜ್ಜ ಮೊಮ್ಮಗ ಬಂದಿದ್ದಕ್ಕೆ ಕಾರಣ ಹೇಳಿಕೊಂಡರು. ಅವರೇ ಡಾಕ್ಟರ್ ಹತ್ತಿರ ಮಾತಾಡ್ಕೊಂಡ್  ಬಂದ್ರು ಅನ್ಸತ್ತೆ.  ವಿಶಾಖ ಯೋಚನೆ ಮಾಡಬೇಡಮ್ಮ. ಅಶ್ವಿನಿಗೆ ನಾನು ಹೇಳಿದ್ದೀನಿ. ಒಂದೆಂಟ್ ದಿನ ನಮ್ಮನೇಲೇ ಇದ್ದು ರೆಸ್ಟ್ ತಗೋ ಆಮೇಲೆ ಅಲ್ಲಿಗೆ ಹೋಗೋವಂತೆ. ಅವರಿಬ್ಬರೂ ಕೆಲ್ಸಕ್ಕ  ಹೋಗೋರು. ನಮ್ಮನೇಲಾದ್ರೆ ಶ್ಯಾಮಲಾ ಇರ್ತಾಳೆ. ಮನೆ ತುಂಬಾ ಜನ ಇರ್ತಾರೆ. ಯೋಚನೆ ಮಾಡಬೇಡ.ಅವರ ಮಾತು ತೆಗೆದು ಹಾಕೋ ಧೈರ್ಯ ಯಾರಿಗೂ ಇರಲಿಲ್ಲ. ಮತ್ತೆ ನಾನೆಷ್ಟರವಳು. ಅವರೊಟ್ಟಿಗೇ ರಿಕ್ಷವರೆಗೆ ನಡೆದು ಬಂದಿದ್ದಾಯ್ತು. ಆಟೋ ಮಾಡಿಕೊಂಡು ಮನೆಗೆ ಬಂದಿದ್ದೂ ಆಯ್ತು. ಅಜ್ಜ ತನ್ನ ರೂಮಿನ ಪಕ್ಕದಲ್ಲೇ ಇರುವ ಸ್ಟೋರ್ ರೂಮಿನ ಚಾವಿ ತೆಗೆದು ಅಲ್ಲಿ ಇರಲು ಹೇಳಿದರು. ಶ್ಯಾಮಲಾ ಆಂಟಿ ಬಂದು ನೀರು ಚಾಪೆ ಒಂದು ರಗ್ ಕೊಟ್ಟು ಹೋದರು. ಅಜ್ಜ ತಲೆ ನೇವರಿಸುತ್ತಿದ್ದದ್ದಷ್ಟೇ ತನಗೆ ಗೊತ್ತು


                                                     *                   *                    *



        ತನ್ನ ಔಷಧ ಉಪಚಾರ ನೋಡಿಕೊಂಡ ಅಜ್ಜ ಮತ್ತು ಮೊಮ್ಮಗನ ಬಗ್ಗೆ ಹೇಳೋಕೆ ಅವಳಲ್ಲಿ ಶಬ್ಧಗಳಿರಲಿಲ್ಲ. ಎಂಟು ದಿನ ಕಳೆದಿತ್ತು. ದಿನಾಲೂ ಒಂದಷ್ಟು ಹೊತ್ತು ಅಜ್ಜನೋ ಮೊಮ್ಮಗನೋ ತನ್ನ ಪಕ್ಕದಲ್ಲಿ ಬಂದು ಕೂರುತ್ತಿದ್ದದ್ದು ತನಗರಿವಾದರು ತಾನು ತುಟಿ ಪಿಟಿಕ್ ಎನ್ನದೇ ಸುಮ್ಮನಿದ್ದಳು. ಆ ದಿನ ಮನೆಯಲ್ಲಿ ಯಾರ ಮಾತೂ ಕೇಳದಷ್ಟು ಮೌನವಿತ್ತು. 
                   ಬಹುಶಃ ರಾತ್ರಿ ಊಟವೂ  ಮುಗಿದು ಎಲ್ಲ ಮಲಗಿರಬಹುದು. ಇಡೀ ಮನೆ ಪ್ರಶಾಂತವಿರುವಾಗ ಅವಳಿಗೆ ಹಗಲು ನಿದ್ರಿಸಿರುವುದರಿಂದ ನಿದ್ರೆ ಬರುತ್ತಿರಲಿಲ್ಲ. ಕರ್ಣ ತನ್ನ ಜೊತೆ ನಡೆದುಕೊಳ್ಳುತ್ತಿದ್ದದ್ದನ್ನೇ ಧ್ಯಾನಿಸುತ್ತಿದ್ದಳು. ಕತ್ತಲು ತುಂಬಿದ ಪುಟ್ಟ ಕೊಟಡಿಯದು. ಬಾಗಿಲು ಚಿಲಕವೇನೂ ಹಾಕಿರುವುದಿಲ್ಲ. ಅಲ್ಲೆಲ್ಲೋ ಗೋಡೆಯ ಮೇಲೆ ಹಲ್ಲಿಯೊಂದು ಲೊಚಕ್ ಅನ್ನುವಶಬ್ಧ. ಈ ಕಾಳ ಕತ್ತಲಿನ ಅರಮನೆಯಲ್ಲಿ ತಾನೆಲ್ಲೋ ಕಳೆದುಹೋದಂತೆ ಅವಳಿಗೆ ಭಯವಾಗುತ್ತಿತ್ತು. ಅಜ್ಜ ತನ್ನನ್ನು ಎಷ್ಟು ಚೆನ್ನಾಗಿ ನೋಡಿಕೊಂಡರು. ಮನೆ ಮಗಳಂತೆ! ಅವರು ಹಣೆಮೇಲೆ ಕೈಯಿಟ್ಟರೆ ಎಂತಹ ಭದ್ರತೆ! ನೆಮ್ಮದಿ! ದೇವರಂತ ಅಜ್ಜ...........ಯಾವುದೋ ಬೆಚ್ಚಗಿನ ಕೈಯೊಂದು ಅವಳ ಕೈ ಹಿಡಿದುಕೊಂಡಿತು. ಮುಖ ನೇವರಿಸತೊಡಗಿತು...............!!!!???. 
               

              ಬೆಳಿಗ್ಗೆ ಎದ್ದ ವಿಶಾಖ ತಡಮಾಡದೇ  ಶ್ಯಾಮಲಾ ಆಂಟಿ. ನಾನು ಅಮ್ಮನ ಮನೆಗೆ ಹೋಗ್ತೀನ್ರೀ ಎಂದು ಹೊರಟೇ ಬಿಟ್ಟಳು.ಅಮ್ಮನ ಹತ್ತಿರ ಎಲ್ಲಾ ಹೇಳಿ ಇನ್ನು ಈ ಮನೆ ಕೆಲಸಕ್ಕೆ ಕಾಲಿಡಬಾರ್ದು ಅಂದುಕೊಳ್ಳುತ್ತ. ಅದೇ ದಿನದ ದಾರಿಯಾದರೂ ಎಲ್ಲರೂ ತನ್ನನ್ನೇ ನೋಡುತ್ತಿರುವ ನಗುತ್ತಿರುವ ಭಾವ. ತನ್ನೊಳಗೆ ತಾನೇ ಅಡಗಿಕೊಂಡು ಕುಳಿತುಕೊಳ್ಳುವ ಬಯಕೆ. 

                  ಅವಳ ತಲೆ ಕೆಟ್ಟು ಕೆಸರಾಯಿತು. ಆಶ್ವಿನಿ ಅಮ್ಮನ ಮನೆಗೆ ಬಂದು ಸುಮ್ಮನೇ ಕುಳಿತಳು ನಾಲ್ಕು ದಿನ. ಮತ್ತೆ ಪ್ರಶ್ನೆ ಶುರುವಾಯ್ತು. ದಿನಕ್ಕೆ ನಾಲ್ಕು ಬಾರಿ ಅಜ್ಜ ಅಥವಾ ಮೊಮ್ಮಗನ ಫೋನ್ ಬರುತ್ತಿತ್ತು. ಅಮ್ಮ ಏನೋ ಸಹನೆಯಿಂದಲೇ ಇದ್ದರು. ತನಗೇ ಸಹನೆ ಕೆಟ್ಟು ಸಿಟ್ಟು ಬರುತ್ತಿತ್ತು. ಅವರಂದ ನಿಮ್ಮಂತ ಕೆಲಸದ ಹುಡ್ಗೀಗೆ ಇದು ಮಾಮೂಲಲ್ವಾ? ಮದ್ವೆ ಗಿದ್ವೆ ಇರೋದಿಲ್ಲ. ನೀವಾದ್ರೂ ಮತ್ತೇನು ಮಾಡ್ತೀರಿ.  ನಿನಗೆ ಎಂಥಾ ಕೊರತೇನೂ ಮಾಡೋದಿಲ್ಲ. ಹೆದರ್ಬೇಡ ಅಂದಿದ್ದು ಕಿವಿಯಲ್ಲಿ ಕಾದ ಸೀಸದಂತೇ ಅನಿಸುತ್ತಿತ್ತು. ಹಾಗೆ ಅವರಂದುಕೊಂಡಂತೇ ಆಗಿದ್ರೆ ನಿನ್ನ ಮೊಮ್ಮಗನ ಯಾವಾಗ್ಲೋ ಬುಟ್ಟಿಗೆ ಹಾಕ್ಕೊಂಡಿರ್ತಿದ್ದೆ ಅಂತ ಹೇಳಬೇಕೆನಿಸುತ್ತಿತ್ತು. ಅಸಹಾಯಕತೆ ಅವಳನ್ನ ಕಟ್ಟಿ ಹಾಕುತ್ತಿತ್ತು.

                        ಕರ್ಣನ ನೆನಪಾದರೆ ಹೌದು ಅವಳಿಗೆ ಅವನು ಇಷ್ಟವಾಗುತ್ತಿದ್ದ.  ಅವನ ನೋಟವೂ ಇಷ್ಟವೆನಿಸುತ್ತಿತ್ತು. ಹಾಗಂತ  ಅಜ್ಜ ಮೊಮ್ಮಗನಿಗೆ ಕಾವಲಾಗಿ ಹೀಗೆ ಹೇಳ್ತಾನೆ ಅಂತ ಅವಳಿಗೆ ಕಲ್ಪನೆ ಇರಲಿಲ್ಲ. ತನ್ನ ದಂಡ ಪಿಂಡದಂತ ಮೊಮ್ಮಗನ ಬಯಕೆ ತೀರಿಸೋಕೆ ತನ್ನ ಬಲಿ ಪಶು ಆಗು ಅಂತ ಕೇಳೋ ಅಜ್ಜನ ಕುರಿತು ಭಯಂಕರ ಕೋಪ ಉಕ್ಕುತ್ತಿತ್ತು. ತನಗೆ ಅಷ್ಟು ಪ್ರೀತಿ ತೋರಿಸಿದ್ದರ ಹಿಂದಿನ ಉದ್ದೇಶ ಅರ್ಥವಾಗುತ್ತಿದ್ದಂತೆ ಮೈ ಉರಿಯುತ್ತಿತ್ತು. ತಾನು ಮನೆಮನೆಗೆ ಕೆಲಸಕ್ಕೆ ಹೋಗ್ತೀನೇ ಹೊರತು ಹಾದರಕ್ಕಲ್ಲ. ಅಂತ ಉಗಿದುಬಿಡೋ ಆವೇಶ ಬಂದ್ರೂ ತನ್ನ ಪರಿಸ್ಥಿತಿ ನೆನೆದು ಸುಮ್ಮನೇ ಬಾಯ್ಮುಚ್ಚಿ ಬಂದಿದ್ದಳು.  ಅಷ್ಟು ದೊಡ್ಡ ಮನುಷ್ಯರು ಇಂತ ಮಾತಾಡಬಾರದಿತ್ತು ಅಂತ ಸಾವಿರ ಸಲ ಅಂದುಕೊಳ್ಳುತ್ತಿದ್ದಳು.

          ಅಮ್ಮ ಕೆಲಸಕ್ಕೆ ಹೋಗುವಾಗಲೇ ಎಲ್ಲ ಮನೆಗೆಲಸ ಮುಗಿಸಿ ಹೋಗಿದ್ದರು. ಮನೆಯ ಹೊರಗಿನ ಬಾಲ್ಕನಿಯಲ್ಲಿ ಹೂ ಕಟ್ಟುತ್ತ ಕುಳಿತ ಅವಳಿಗೆ ಬಗಲಲ್ಲೊಂದು ಕಂದನ ಕಟ್ಕೊಂಡು ಅಚೀಚೆ ರಸ್ತೆ ತುಂಬ ಬೇಡ್ತಾ ಇದ್ದ ಅವಳು ಕಂಡಳು. ಯಾಕೋ ಆ ಕಮಗುವಿನ ಕಣ್ಣಲ್ಲಿ ಏನಿದೆ ಹುಡುಕೋಕೆ ಆಸೆಯಾಗುತ್ತಿತ್ತು. ಮುದ್ಧಾದ ಮಗುವದು. ತೀರಾ ಹೊಲಸು ಹರಕು ಬಟ್ಟೆ ಅದರ ಅರ್ಧ ಮೈಯನ್ನೂ ಮುಚ್ಚುತ್ತಿರಲಿಲ್ಲ.  ಆ ತಾಯಿ ಅವಳ ಸೆರಗನ್ನೇ ಜೋಳಿಗೆಯಾಗಿಸಿ ಮಗುವನ್ನ ಸೊಂಟಕ್ಕೆ ಕಟ್ಟಿಕೊಂಡಿದ್ದಳು. ಅಮ್ಮಾ.ತಾಯೇ. ಮಗು ಹಸಿದಿದೆ. ಭಿಕ್ಷೆ ಹಾಕಮ್ಮಾ . ಚೂರು ದೋಸೆ ಕೊಡಮ್ಮ. ಸಾಂಬಾರ್ ಕೊಡಮ್ಮ  ಪ್ರತೀ ಮನೆಯೆದುರು ಅವಳ ರಾಗ. ತನ್ನ ಮನೆಯೆದುರು ಬರುತ್ತಿದ್ದಂತೇ ಕೇಳಬೇಕೆನಿಸಿತು. ಈ ಮಗುವಿನ ತಂದೆ ಯಾರು?
ಅವನಿಗೆ ಮಗು ಸಾಕೋದಕ್ಕೆ ದುಡಿದು ತರೋದಕ್ಕೆ ಹೇಳು. ಯಾಕೆ ಮಗುನ ಹೊತ್ಕೊಂಡು ಊರೂರು ಅಲಿತೀಯ?
ನೂರಾರು ಪ್ರಶ್ನೆ ಕೇಳಬೇಕೆನಿಸುತ್ತಿತ್ತು. ಆದರೆ ಮಾತೇ ಹೊರಡಲಿಲ್ಲ. ಒಳಗೆ ಹೋಗಿ ಒಂಚೂರು ಅನ್ನ ಸಾಂಬಾರ್ ತಂದು ಅವಳ ಒಡೆದ ಸ್ಟೀಲ್ ಬಟ್ಟಲಲ್ಲಿ ಸುರಿದಳು ವಿಶಾಖ. ಮತ್ತೆ ಅವಳ್ಯಾವುದೋ ಮನೆಯ ಬಾಗಿಲು ತಟ್ಟುತ್ತಿದ್ದರೆ ತಾನೂ  ಭಾವನೆಗಳಿಗೆ ಒಳಗಾದರೆ ಹೀಗೇ ಒಂದಿನ ಕರ್ಣನ ಮಗು ಹೊತ್ತು ಬೀದಿ ಬೀದಿ ತಿರುಗಬೇಕಾಗುತ್ತಾ? ಅನ್ನಿಸಿ ನಡುಗಿದಳು. ಹೌದು. ಆ ಅಜ್ಜನ ಮಾತು ತನಗೆ ಕರ್ಣನ ಬಗ್ಗೆ ಇರೋ ಅಲ್ಪ ಸ್ವಲ್ಪ ಆಕರ್ಷಣೆ. ಯನ್ನೂ ಕೊಂದುಬಿಟ್ಟಿದೆ ಅನ್ನೋ ಸತ್ಯ ಅರಿವಾಗುತ್ತಿತ್ತು. ತಾನಿನ್ನು ಇಂತ ಬಯಕೆಗಳಿಗೆ ಬೀಳಬಾರ್ದು.  ಅಮ್ಮನಿಗೆ ಹೇಳಿ ಬಿಡಬೇಕು.  ದೇವರಂತ ಅಶ್ವಿನಿ ಅಮ್ಮ ಇದ್ದಾರೆ. ತಾನಿನ್ನು ಯಾರ ಮನೆ ಕೆಲಸಕ್ಕೂ ಹೋಗೋದಿಲ್ಲ ಅಂತ. ನನಗಿಲ್ಲೇ ಮಾಡಲು ಏನಾದರೂ ಕೆಲಸ ಹುಡುಕಿಕೊಡಿ. ಮನೆಯಲ್ಲೇ ಕುಳಿತು ಮಾಡ್ತೀನಿ ಅನ್ಬೇಕು. ಕಾರಣ ಹೇಳಿ ಅವರ ಮನಸು ನೋಯಿಸೋದಕ್ಕಿಂತ ಇದೇ ಉತ್ತಮ ಉಪಾಯ ಅನ್ನಿಸತೊಡಗಿತು.



                                                      *                *                    * 



                  ವಿಶಾಖಾ ಹೋಂ ಪ್ರೊಡಕ್ಟ ಅಶ್ವಿನಿ ಹಾಕಿಕೊಟ್ಟ ಪುಟ್ಟ ಉದ್ಯೋಗವಿಂದು ವಿಶಾಖಳ ಶ್ರಮದಿಂದ ಬೆಳೆದು ನಿಂತಿದೆ. ಅದರ ಬೆಳವಣಿಗೆಗೆ ಅವಳ ಶ್ರಮದಷ್ಟೇ ಆಶ್ವಿನಿ ಅಮ್ಮನ ಪ್ರೋತ್ಸಾಹವೂ ಕಾರಣ.  ಹಾಗೇ ಇಂದು ಅವಳ ಮನಸ್ಸಿನಲ್ಲಿ ಎಂದೋ ತೀರಿ ಹೋದ ಅನಂತಜ್ಜನ ಬಗ್ಗೆಯೂ ಕಹಿ ಉಳಿದಿಲ್ಲ. ತಾನಿಂದು ಹೀಗೆ ಸ್ವಾವಲಂಬಿ ಆಗೋದಕ್ಕೆ ಅವರೂ ಒಂದು ರೀತಿಯಲ್ಲಿ ಕಾರಣವೇ. 
         

                ಆಗಾಗ ಅದೇ ದಾರಿಯಲ್ಲಿ ಅಪ್ಪನ ಕಾರಿನ ಹಿಂಬಾಗದಲ್ಲಿ ಕೂತು ಆಚೀಚೆ ಕಣ್ಣು ಪಿಳುಕಿಸುತ್ತಾ ಹೋಗುವ ಕರ್ಣ ಅವಳೆಡೆಗೆ ನಿಜೀವ ಭಾವ ತೋರುತ್ತಾನೆ. ಪರಿಚಯದ ನಗು ಬೀರುತ್ತಾಳೆ. ಇತ್ತೀಚೆಗೆ ಅವನನ್ನು ನೋಡದೇ ವರ್ಷಗಳೇ ಕಳೆದವೇನೋ. ತನ್ನ ಕೆಲಸಗಳ ಒತ್ತಡದಲ್ಲಿ ಅವರಿವರ ಮಾತನಾಡಲು ಪುರುಸೊತ್ತೆಲ್ಲಿ? ಅಶ್ವಿನಿ ಅಮ್ಮಂಗೆ ಗೊತ್ತರಬಹುದಾದ್ರೂ ಅವರೇನೂ ಇಂತಹ ವಿಷಯ ಮಾತಾಡುತ್ತ ಕುಳಿತುಕೊಳ್ಳೋದಿಲ್ಲ. ಯಾಕೋ ಇವತ್ತು ಕರ್ಣನ ನೆನಪು! ಅವನ ಮುಗ್ದ ನೋಟ ಬಹಳ ನೆನಪಿಗೆ ಬರುತ್ತಿದೆ ಅನಿಸುತ್ತಿದ್ದಂತೇ ಭಾವನೆಗಳ ಬದುಕಿಂದ ತಾನೆಷ್ಟು ದೂರ ಬಂದಿದ್ದೇನೆ ಅನ್ನಿಸಿತು. ತನಗೆ ತನ್ನನ್ನೂ ಕನ್ನಡಿಯಲ್ಲಿ ನೋಡಿಕೊಳ್ಳುವ ಅಭ್ಯಾಸವೇ ಮರೆತು ಹೋಗಿದೆ ಅನ್ನಿಸಿತು.! ಅವತ್ತಿನ ಲಂಗ ದಾವಣಿ ತೊಟ್ಟು ಬಿಸಿಲು ಮಳೆಯೆನ್ನದೇ ಕುಮಟಾ ಪೇಟೆಯ ಬೀದಿ ಬೀದಿ ಸುತ್ತಿ ತನ್ನ ಕರಿದಾದ ಮುಖವನ್ನ ಇನ್ನೂ ಕರಿದಗಿಸಿಕೊಂಡು ಕಣ್ಣಲ್ಲೊಂದಿಷ್ಟು ಕನಸು ಇಟ್ಕೊಂಡು ನಡೆದ ದಿನಗಳು ಈ ಆರು ವರ್ಷದಲ್ಲಿ ತನ್ನ ಬದುಕೆಷ್ಟು ಬದಲಾಗಿದೆ! ಅವತ್ತೇನಾದರೂ ತಾನು ಹದಿ ಭಾವನೆಗಳಿಗೆ ಜೋತು ಬಿದ್ದಿದ್ದರೆ ತನ್ನ ಬದುಕು ಹೇಗಿರುತ್ತಿತ್ತು! ಯೋಚನೆಗೂ ಸಿಗದು ಎಂದುಕೊಳ್ಳುತ್ತಿದ್ದಂತೆ ಅಶ್ವಿನಿ ಅಮ್ಮ ಬಂದರು. 

 ವಿಶಾಖ ಗೊತ್ತಾ ನಿಂಗೆ? ನಮ್ಮ ಅನಂತಜ್ಜನ ಮನೆ ಕರ್ಣ ಇದ್ದಾನಲ್ಲ. ಅವನ ಹಾಸ್ಪಿಟಲ್ ನಲ್ಲಿಟ್ಟು ಒಂದು ತಿಂಗಳಾಗಿತ್ತಂತೆ. ಅವನಿಗೆ ಚಿಕ್ಕೋನಿದ್ದಾಗಲೇ ಹಾರ್ಟ ಪ್ರಾಬ್ಲಂ ಇತ್ತಲ್ಲವ. ಹೋಗ್ಬಿಟ್ನಂತೆ ಬೆಳಿಗ್ಗೆ.
ಅವರೇ ಮಾತು ಮುಂದುವರೆಸಿದರು. ಪಾಪದ ಹುಡುಗ 

 ಬದುಕು ಬದಲಾಗಿದೆ! ನಿಜ ಇನ್ನು ಕನಸೂ ಕಾಣುವ ಹಾಗಿಲ್ಲ! ನೋವಿಗೂ ಅರ್ಥವಿಲ್ಲ
ಎಂದೆನೆಸಿ ಎದುರಿಗಿನ ಕೆಲಸ ಕೈಗೆತ್ತಿಕೊಂಡಳು.......        




Thursday, December 27, 2012

ಅರ್ಪಣೆ

ಚಿತ್ರಕೃಪೆ: ಅಂತರ್ಜಾಲ



ನಿನಗಾಗಿ ನಾನೇಕೆ
ಅಡಿಗಡಿಗೆ ಹಂಬಲಿಸಿ
ಕಾಯುತ್ತಿರುವೆ?
ಕೃಷ್ಣ ನಿನ್ನಡಿಯಲ್ಲಿ
ಕನವರಿಸಿ ಕನವರಿಸಿ
ಕರಗುತ್ತಿರುವೆ?


ಮನಸಾಗಿ ರಾಜಿಸಿದ ನೀ
ಯಾಕೆ ಮರೆತಿರುವೆ
ಮನದ ಈ ನುಡಿಗಳಿಗೆ
ದನಿಯಾಗಬಿಡದೇ?
ನನ್ನ ದನಿಗೊಮ್ಮೆಯೂ
ಕಿವಿಯಾಗದೆ?

ಎಡಬಿಡದೇ ದಣಿದಿರುವ
ದಿನಕಿಲ್ಲ ನಿದ್ರೆ!
ಕನಸಲ್ಲಿ ಕಾಡುವುದು
ನಿನ್ನದೇ ಮುದ್ರೆ!

ನೀನೇಕೆ ನನ್ನ ಒಳಗುಡಿಯ
ಸೇರಿದೆ?
ನೀನಿಲ್ಲದೀದಿನಕು
ನನ್ನೊಳಗು ಅಳುತಿದೆ
ಹೇಗೆ ಹೇಳಲಿ ಮನವೇ
ಕೊಳಲ ಪರಿ ಜೀವ!

ಒಳಗಿನುಸಿರೆ ಜೀವ!
ಬೆರಳ ನೇವರಿಸಿ
ನೀ ನುಡಿಸದಿರೆ
ನಾದವೆಲ್ಲಿಂದ ತರಲಿಹೇಳು?
ನೀ ಉಸಿರ ಭಾವದಲಿ
ನನ್ನದೆಯ ಜೀವದಲಿ
ಇಷ್ಟು ಸಾಕಲ್ಲ
ಕೃಷ್ಣ ಬಾಳು!


Tuesday, December 4, 2012

ನೀ ಬರುವುದಿಲ್ಲ...




ಚಿತ್ರ ಕೃಪೆ:ಅಂತರ್ಜಾಲ



ನನ್ನ ಸರಿದ ಕಾಲದಂಚುಗಳ
ನೆರಿಗೆ ಕಟ್ಟಲಾರೆ ನೀನು!
ನನ್ನ ತೋಳತೊರೆದು ಹೋದ
ನಗುವ  ನಗಿಸಲಾರೆ ನೀನು!

ಸೆರಗಿನಂಚಿನಲ್ಲಿ ಜೋಡಿಸಿಟ್ಟ
ಮುತ್ತು ಮಣಿಗಳ ಹಾಗೆ
ಜೋಪಾನ ಮಾಡಿದೆ ನಿನ್ನ
ನೀ ನನ್ನೆದೆಯನ್ನೆ
ಮುಚ್ಚಿಟ್ಟುಕೊಳ್ಳದಾದೆ!

ನನ್ನ ಕಣ್ಣೆವೆಗಳಲ್ಲಿ
ಕಾಂತಿಯಾಗಿಸಿಕೊಂಡೆ
ಗೆಳೆಯಾ ನೀ ಬೆಳಕಿಲ್ಲದ
ನೆರಳಲ್ಲಿ ನನ್ನ ಬಿಟ್ಟು ಹೋದೆ!

ಕಾಲದಲ್ಲಿ
ಅರಳಿದ ಹೂಗಳೆಲ್ಲ
ನಿನ್ನ ಆಗಮನಕ್ಕೆ ಕಾಯುವುದಿಲ್ಲ!
ನಾಳೆಗಳ ನಿರೀಕ್ಷೆ
ಬಾಡಿ ಉದುರುವುದನ್ನು
ತಡೆಯುವುದಿಲ್ಲ!

ಮತ್ತೆ ನಾಳೆಗಳು ನಮ್ಮವಲ್ಲ!
ನೆನಪ ನಾವೆಗೆ ಕಟ್ಟಿ ಹೋದ
ಹಗಲುಗನಸುಗಳು!
ನಮ್ಮವಾಗುವುದಿಲ್ಲ!
ಅದಕ್ಕೆಂದೇ ಕನಸು ಕಾಣುವುದಿಲ್ಲ!
ನೀ ಬರುವುದೂ ಇಲ್ಲ.!!

Tuesday, November 27, 2012

ಮಿಲನ





ಅಳಿವು ಉಳಿವಿನ ಸ್ಥಬ್ಧಚಿತ್ರಕೆ
ಮಾತು ಮೌನದ ನೆಲೆಯೆಲ್ಲಿ?
ಹುಟ್ಟು ಸಾವಿನ ಸೃಷ್ಟಿಚಿತ್ತಕೆ
ನಾನು ನೀನು ಕೊನೆಯೆಲ್ಲಿ?

ಅಕಳಂಕವಾದರೆ ನೀ
ತ್ಯಾಗದೊಲುಮೆಯ ಪಥದಲ್ಲಿ
ಸುಖದ ಸಗ್ಗಕೆ ಶಾಂತಿ ಮಂತ್ರದ
ಬೀಜ ನೆಡುವೆಯ ನೆಪದಲ್ಲಿ?

ತೊಲಗು ಮೌನವೆ ತಬ್ಬು ಜೀವವ
ರಮಿಸು ರಸಮಯ ಜೀವಗಳ
ಒಲಿಸು ಲಾಲಿಸು ಮತ್ತೆ ಘಮಿಸು
ಸುಟ್ಟು ಸುಡಲಿದು ಸರಕುಗಳ!

ಜೀವ ಉರಿಯಲಿ ತಮವು ತಣಿಯಲಿ
ಹರಿದು ಹಾಡಲಿ ರಾಗಗಳು
ವೀಣೆ ಮಿಡಿಯುವ  ತಂಪು ನಾದಕೆ
ಬೆಸೆದು ಬೀಳಲಿ ಭಾವಗಳು

Wednesday, November 14, 2012

ಅಮರ ಪ್ರೇಮ


ಅಮರ ಪ್ರೇಮ
ಅಸ್ತಮಿಸೋ ಸೂರ್ಯನೆ,
ಸುಸ್ತಾಗಿದೆ ನಿನಗೆ 
ಹಗಲಿಡೀ ಕಾರಿದ್ದೀ
ಉರಿಬಿಸಿಲನ್ನ,
ಸ್ವಲ್ಪ ವಿಶ್ರಮಿಸಿಕೋ
ಸಾಗರಿಯ ಎದೆಯಲ್ಲಿ 
ನಾಳೆ ಬರುವಿಯಂತೆ
ಕಾಯಿತ್ತಿರುವೆ ನಿನಗೆ

ನಿನ್ನ ಉರಿಕಿರಣಗಳ
ನೇವರಿಸಿ ಲಾಲಿಸುವ 
ಅವಳ ಕೈನತಂಪು
ಆಸ್ವಾದಿಸು.
ನಿನಗೂ ಬರಬಹುದು 
ಅವಳ ತಂಪು ಗುಣ.
ಆ ಹೃದಯ ಪ್ರೀತಿಗೆ
ಇರಲಿ ಋಣ.

ಎದೆಯೊಳಗೆ ಆರ್ಭಟದ
ಶಕ್ತಿಯಿದೆ,ರೋಷವಿದೆ
ಮುತ್ತು ರತ್ನಗಳಿವೆ.
ಅವಳೊಳಗೆ ಆದರೂ
ಅವಳದ್ದು ಅಗಾಧ ಪ್ರೇಮ!
ಅಗಾಧ ಸಹನೆ!

ವಾರಿಧೆಯೇ ಹಾಗೆ
ವಿವರಣೆಗೆ ನಿಲುಕದವಳು.
ಭಾಸ್ಕರನೆ ಹಾಗೆ.
ಸುಡು ಸುಡು ಬಿಸಿಲಿನವನು.
ಪ್ರತಿ ದಿನವೂ ಮಿಲನ!
ಪ್ರತೀ ದಿನವೂ ವಿರಹ!
ಬೆಳದಿಂಗಳ ರಾತ್ರಿಯಲಿ ಅಮರ ಪ್ರೇಮ!

Tuesday, November 13, 2012

ಹಚ್ಚೋಣ ಬನ್ನಿ ಹಣತೆಗಳ..






                         ಇದು ಲಕ್ಷ್ಮೀಪೂಜೆಯ ಹೊತ್ತು. ಮುಸ್ಸಂಜೆಯ ಈ  ಸಮಯ ಮನೆಮನೆಗಳಲ್ಲಿ ದೀಪ ಹಚ್ಚುವ ಸಂಭ್ರಮ! ಅಂಗಡಿ, ಪ್ಯಾಕ್ಟರಿ, ಬ್ಯುಸಿನೆಸ್ ಏನೇ ಇರಲಿ.. ಉದ್ಯೋಗಸ್ಥರಿಗೆಲ್ಲ  ತಮ್ಮ ಆದಾಯದ ಮೂಲವನ್ನು ಪೂಜಿಸಿ  ಆ ಶ್ರೀಮಾತೆ ಲಕ್ಷ್ಮೀ ಯಲ್ಲಿ ಮನಃಪೂರ್ವಕ ಪ್ರಾಥರ್ಿಸಿ ಪೂಜಿಸಿ ಎಲ್ಲೆಲ್ಲು ದೀಪಗಳ ಹಚ್ಚಿಟ್ಟು ಸಂಭ್ರಸುವುದು ಕಾಣುತ್ತಿದ್ದೇವೆ.
ಹಾಗೇ ಒಂದು ಪುಟ್ಟ ದೀಪದೊಂದಿಗೆ ನನ್ನದೂ ಪ್ರಾರ್ಥನೆ ಮುಗಿಸಿ ನಿಮ್ಮೆದುರು ಹೀಗೆ ಮನಸು ಹರವಿಕೊಂಡು ಕೂತಿದ್ದೇನೆ


   ಪೂಜೆಗಳೆಲ್ಲ  ಮನಸಿನ ಸಂಭ್ರಮಕ್ಕೆ, ಶೃದ್ಧೆ ಭಕ್ತಿಗೆ. ದೇವರು ಒಂದು ದಿನವಲ್ಲ. ಪ್ರತಿ ದಿನವೂ ಪ್ರತಿಕ್ಷಣವೂ ಅವನ ಕರುಣೆಯ ಅವಶ್ಯಕತೆಯಿದೆ ನಮಗೆಲ್ಲರಿಗೂ..
ಇಂದಿನ ಈ ಪುಟ್ಟ ಹಣತೆಯಲ್ಲಿ ಹಚ್ಚಿಟ್ಟ ಎಲ್ಲ ದೀಪಗಳು ನಮ್ಮಬದುಕನ್ನೇ ಬೆಳಗಲಿ ಎಂಬ ಪ್ರಾರ್ಥನೆ ಅವಳಲ್ಲಿ.
ಈ ದಿನ  ಅವಳಲ್ಲಿ ಇನ್ನಷ್ಟು ನಿವೇದನೆಗಳ ತಂದಿದ್ದೇನೆ!  ಜೋಗಿತಿಯ ಜೋಳಿಗೆಯಲ್ಲಿ ಅವಳ ಕರುಣೆಗಾಗಿ ಬೇಡಿಕೆಯ ಪಟ್ಟಿಗಳಿವೆ! ತುಂಬಿಕೊಳ್ಳಲೆಂಬ ಶುದ್ಧ ಬೇಡಿಕೆಯಿದು.
ಖಾಲಿಯಾಗುವ ಹಂಬಲದಲ್ಲಿಯೇ ತುಂಬಿಕೊಳ್ಳುವ ಮನಸಿನ ಸೋಜಿಗಗಳಿವು!

   ಮೊನ್ನೆ ಮೊನ್ನೆ ಪ್ರೀತಿಯಿಂದ  ಸಮ್ಮಾನಿಸಿದ ಕುಮಟಾ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿಗೊಂದು ಮನಸ್ವೀ ಕೃತಜ್ಞತೆಯನ್ನು ಮೊಟ್ಟಮೊದಲು ಸಲ್ಲಿಸುತ್ತೇನೆ.
ಸಮ್ಮಾನವೆಂಬುದು  ಹಾಗೆ ಸ್ವೀಕರಿಸುವ ಅರ್ಹತೆಗಳು ನನಗೆಷ್ಟಿವೆ ಗೊತ್ತಿಲ್ಲ ನನಗೆ. ಆದರೆ ಇಷ್ಟು ಮಾತ್ರ ಹೇಳಬಲ್ಲೆ. ನಮ್ಮದೇ ತಾಲೂಕಿನಲ್ಲಿ ನನಗಿಂತ ಹಿರಿಯರು, ಸಾಧನೆ ಮಾಡಿದವರು ಹಾಗೂ ಪ್ರತಿಭಾವಂತರೂ ಸಾಕಷ್ಟು ಜನರಿದ್ದಾರೆಂದು ಅರಿವಿನಿಂದಲೂ ವಿನಯದಿಂದಲೂ ಹೇಳಬಯಸುತ್ತೇನೆ.  ಹಾಗಿದ್ದೂ ಸಹ ಈ ಸಮ್ಮಾನ ನನ್ನಂತ ಹೊಸತಲೆಮಾನ
ಹಲವು ಬರಹಗಾರರಿಗೆ ಸಲ್ಲುವುದು. ಮತ್ತು ಇದು ನನ್ನನ್ನೂ ಸೇರಿ ಇನ್ನಷ್ಟು ಜನರಿಗೆ ಸ್ಪೂರ್ತಿದಾಯಕಾವಾಗಿದ್ದು ಆ ಕಾರಣಕ್ಕೆ  ಇದು ಶ್ಲಾಘನೀಯವೆಂದು ಹಾಗೂ ಸಾಹಿತ್ಯ ಪರಿಷತ್ತಿನ ಪ್ರೀತಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳನ್ನು ಅರ್ಪಿಸಲು ಬಯಸುತ್ತೇನೆ.

 ದೀಪಾವಳಿ ಈ ಶುಭ ಸಂದರ್ಬದಲ್ಲಿ ತಾಯಿ ಭಗವತಿ ಇನ್ನಷ್ಟು ಬರೆಯುವ ಓದುವ ಹಾಗೂ ಕನ್ನಡಾಂಬೆಯ ಸೇವೆ ಸಲ್ಲಿಸುವ ಅವಕಾಶ ನನಗೆ ದಯಪಾಲಿಸಲೆಂದು ಬೇಡಿಕೊಳ್ಳುತ್ತೇನೆ. ಅಂತಜರ್ಾಲದಲ್ಲಿ ಇತ್ತೀಚೆಗಷ್ಟೆ ಅಂಬೆಗಾಲಿಟ್ಟು ಬರೆಯುತ್ತಿರುವ ನನ್ನನ್ನು ಪ್ರೀತಿಯಿಂದ   ಆದರಿಸಿದ ನನ್ನೆಲ್ಲ ಮಿತ್ರರಿಗೆ ತುಂಬು ಮನದ ಕೃತಜ್ಞತೆಗಳು. ನನ್ನ  ಸಾಹಿತ್ಯ ಬಳಗದ ಎಲ್ಲ ಸ್ನೇಹಿತರಿಗೂ ನನ್ನ ಬೆಳೆಸಿದ ನನ್ನ ಬದುಕಿನ ಎಲ್ಲ ಸಂಗತಿಗಳಿಗೂ ನಾನು ಋಣಿಯಾಗಿದ್ದೇನೆ. ಮತ್ತೊಮ್ಮೆ   ಎಲ್ಲರಿಗೂ  ದೀಪಾವಳಿಯ ಶುಭಕೋರುತ್ತ.
ಇದೊಂದು ಪುಟ್ಟ ಸಾಲಿನೊಂದಿಗೆ ನಿಮ್ಮ

-ಸಿರಿ


ಕತ್ತಲೆಯ ರಾತ್ರಿಯಲಿ
ನಕ್ಷತ್ರಗಳ ಹಾಗೆ
ಬದುಕ ದಾರಿಯಲಿಂದು
ಬೆಳಕ ಹಣತೆ!

ಭಾವಗಳ ಬತ್ತಿಯಲಿ
ಪ್ರೀತಿ ತೈಲವನೆರೆದು
ಬೊಗಸೆ ಹಣತೆಯಲಿಟ್ಟ
ಚೆಲುವ ಕವಿತೆ!

ದೀಪಗಳ  ಹಚ್ಚಿಟ್ಟು
ಹೊರಟ ಯಾತ್ರಿಕನಾರೋ
ತಿರುವಿಗೆಲ್ಲಿಯ ಬೆಳಕು
ಅವನೇ ತಾನೆ?


ಅಂತರಾತ್ಮನೆ ಜ್ಯೋತಿ
ಅವನೆ ಇಹದ ಅಕ್ಷಿ.
ಭವಕು ದಿವ್ಯತ್ವಕ್ಕೂ
ದೀಪಗಳೇ ಸಾಕ್ಷಿ!
















Saturday, October 27, 2012

ಕನಸು






ಸಾಗರ ತೀರದ ಮುಸ್ಸಂಜೆಯಲಿ
ಮತ್ತದೇ ಹೆಜ್ಜೆಗಳ ಮೂಡಿಸುವ ಕನಸು
ಬುಟ್ಟಿ ತುಂಬ ಬೊಗಸೆ ಪಾರಿಜಾತವ ತುಂಬಿ
ನಿನ್ನ ನಸುನಗೆಗೆ ಕಾಯುವ ಮನಸು!

ಜಲಪಾತದಂಚಲ್ಲಿ ಮುತ್ತುಗಳ ತುಂಬಿಕೊಂಡು
ಆ ಮೌನ ಶಿಖರಗಳ ಅರ್ಚಿಸುವ ಕನಸು!
ದೇಗುಲದ ಗಂಟೆಯಲಿ ನಾದಗಳ ಸವಿಯುತ್ತ
ಕಲ್ಲಾಗಿ ಬಿಡುವಂತ ಕಲೆಯ ಮನಸು!

ಕೈಯೆಡೆಗೆ ಕೈಚಾಚಿ ಹಿಡಿದ ಅಂಗೈಯಲ್ಲಿ
ಬೆಸೆದ  ಬಾಂಧವ್ಯಗಳ ಮಧುರ ಕನಸು
ಮಾತಿಲ್ಲದೇ ನಡೆದ ಮೌನಾಂಧಕಾರದಲಿ
ಭಗವತಿಯ ಧ್ಯಾನಿಸುವ ಶುದ್ಧ ಮನಸು!

ಮತ್ತಷ್ಟು ಕನಸುಗಳ ಬುಟ್ಟಿ ಹೆಣೆಯುತ್ತ
ಈ ಬೆಳಗ ಬೆಳಕಲ್ಲಿ ನಲಿವ ಮನಸು!
ಭಾವದ ಹೊಸ್ತಿಲೊಳಗೆ ಹೂನಗೆಯಹಾಸುತ್ತ
ನಿನ್ನ ಬರಮಾಡಿಕೊಳ್ಳುವ ಪುಟ್ಟ ಕನಸು