ಮನಸಿನ ಹರಿಯುವಿಕೆಗೆ ಆನಂದಕ್ಕೆ ಪೃಕೃತಿಯಿದೆ. ಹಿಮ ಸುರಿಯುವ ಮುಂಜಾನೆಗಳಿವೆ. ಅದ್ಭುತ ಸೂರ್ಯಾಸ್ತಗಳಿವೆ. ಸಮುದ್ರವಿದೆ. ತಂಗಾಳಿಯಿದೆ. ಬೆಳದಿಂಗಳ ರಾತ್ರಿಗಳಿವೆ.. ಕತ್ತಲೆಯ ಮೈತ್ರಿಯಿದೆ. ಎಲ್ಲಾ ಇದೆ. ಆನಂದಿಸುವ ಮನಸೂ ಇದೆ. ಆದರೆ ಮನುಷ್ಯ ಬಯಸೋದು ತನ್ನ ನೋವು ನಲಿವುಗಳಿಗೆಲ್ಲ ಹಂಚಿಕೊಳ್ಳುವ ಇನ್ನೊಂದು ಮನಸಿನ ಆಸರೆಯನ್ನ... ಮನುಷ್ಯನ ಭಾವಗಳಿಗೆ ಮತ್ತೊಂದು ಮನಸಿನ ಆಸರೆಯ ಹುಚ್ಚು.... ಇದೂ ಸಹ ಅಂತದ್ದೇ ಒಂದು ಹುಚ್ಚು... ವಿಚಾರ ಭಾವಗಳಿಗೆಲ್ಲ ಅಕ್ಷರ ಕೊಡುವ ಹುಚ್ಚು... ಖಾಲಿಯಾಗುವ ಕನಸು.... ಅಂತದ್ದೊಂದುಯಾನದಲ್ಲಿ ನಿಮ್ಮ ಜೊತೆ.......







Friday, December 31, 2010

ಒಂದು ವರ್ಷ ಕಳೆದಿದೆ.. ಒಂದಷ್ಟು ದಿನಗಳ ಗುಂಪಿಗೆ ವಿದಾಯ ಹೇಳಿದ್ದೇವೆ. ಒಂದಷ್ಟು ಸಿಹಿ ಕಹಿ ನೆನಪುಗಳಿಗೂ ವಿದಾಯ ಹೇಳಿದ್ದೇವೆ ಅಂದುಕೊಂಡಿದ್ದೇವೆ.ಹೊಸವರ್ಷ ಹೊಸತನಗಳ ಹೊಸ ಜೀವಂತಿಕೆಯ ಉತ್ಸಾಹವ ತರಲೆಂದು ಆಶಿಸಿದ್ದೆವೆ.  ಬದುಕಿಗೆ ಹೊಸ ಹೊಸ ಗುರಿಗಳ ಇಟ್ಟುಕೊಂಡಿದ್ದೇವೆ. ಕನಸುಗಳ ಕಂಡಿದ್ದೇವೆ.
             ಗೊತ್ತಿಲ್ಲ. ನಾಳೆ ಮತ್ತೊಂದು ಹೊಸವರ್ಷ ಬರುವವರೆಗೆ ಇವೆಲ್ಲ ಎಷ್ಟು ನನಸಾಗಿರುತ್ತವೆ ಅಂತ. ಆದರೂ ನಾಳೆಗಳ ನಿರೀಕ್ಷೆಯಲ್ಲಿ ಬದುಕಿನ ಮತ್ತೊಂದು ಹೊಸ ಉದಯಕ್ಕೆ ಚಂದದ ಸ್ವಾಗತವ ಕೋರುತ್ತಿದ್ದೇವೆ. ಎಲ್ಲರಿಗೂ ಹೊಸ ವರ್ಷದಹಾದರ್ಿಕ ಶುಭಾಶಯಗಳೊಂದಿಗೆ.....   



ನಾಳೆಗಳ ಆಗಮನಕ್ಕೆ ಇಂದು
ಸಜ್ಜಾದ ವೇದಿಕೆ.
ನಮನವಿರಲಿ,
ನಿನ್ನೆ ರಾತ್ರಿಗಳಿಗೆ
ತುಂತುರು ಹನಿಯ
ಚಿಲಿಪಿಲಿ ಕವನಗಳಿಗೆ!

ಮಾರ್ದವತೆಯ ಹೂ ಅರಳಿ
ಬಾಡಿದ ಭಾವಕುಸುಮಗಳಿಗೆ
ತಂಪುಕಂಪು ಸೂಸಿ ಚೆಲ್ಲಿದ
ಚಂದದ ದಿನಗಳ
ಬೆಳಕಿಗೆ ಮತ್ತು ರಾತ್ರಿಗೆ.

ಅಗಾಧ ಸಾಗರದ
ಸೂಯರ್ಾಸ್ತಗಳಂದಕ್ಕೆ
ಹಸಿರ ಸೆರಗಿನ ನಡುವೆ
ಇಣುಕಿದ ರವಿಯ
ಕಂಗಳ ಚಂದಕ್ಕೆ
ತಿಂಗಳ ಬಂಧಕ್ಕೆ.
ನಾನಿರುವ ನಿನ್ನೆಗಳ
ನನ್ನದಲ್ಲದ ನೆನಪುಗಳಿಗೆ
ನಾಳೆಗಿರದ ಎಲ್ಲ ಕಳೆದ
ಕಂಬನಿಗಳ ರಾತ್ರಿಗಳಿಗೆ
ನಮನವೀಯುತ್ತಲೇ
ಕೋರುವ ಸ್ವಾಗತವ.
ಶುಭೋದಯದ ಹೊಸ ಬೆಳಕಿಗೆ.