ಸೃಷ್ಟಿ ಚಿಂತನದ ಕಾಲಗರ್ಭದೊಳು
ಅದೆಷ್ಟೋ ಕಾಯಗಳ ವೈಭವ!
ಕರಗುವುದು ಸೊರಗುವುದು
ನರಮಾಂಸ ಮಜ್ಜೆಗಳು,
ಇರುವುದೊಂದೇ ಪ್ರೀತಿ
ಆತ್ಮಜ್ಯೋತಿ.
ಸುರಿವ ಶುದ್ಧಾಮೃತಕೆ ತೆರೆದಿದೆ
ಕವಿದ ಕಪ್ಪನೆ ಮೋಡ!
ಉರಿವ ಸೂರ್ಯನ ತೆಕ್ಕೆಯೊಳಗೆ
ಸಂಧ್ಯೆ ಕಾಲಿನ ಜೇಡ!
ಅಂಧಕಾರದ ಅಸುರ ಗರ್ಭದಲಿ
ನವನವೋನ್ಮೇಷದ
ಚೈತನ್ಯ ಚಿಲುಮೆ
ಬೆಳಗು,
ಬಾನಿನೆದೆಯಲಿ
ಹೊತ್ತಿದ, ಪ್ರೇಮಜ್ಯೋತಿ.
ಪ್ರೀತಿ
ತಮವ ಕರಗಿಸುವ ಜಲಪಾತ್ರೆ.
ಬದುಕು
ಅರ್ಚನೆಗೆ ಕಾಯ್ದ ಸಂಕಲ್ಪ.