ಮನಸಿನ ಹರಿಯುವಿಕೆಗೆ ಆನಂದಕ್ಕೆ ಪೃಕೃತಿಯಿದೆ. ಹಿಮ ಸುರಿಯುವ ಮುಂಜಾನೆಗಳಿವೆ. ಅದ್ಭುತ ಸೂರ್ಯಾಸ್ತಗಳಿವೆ. ಸಮುದ್ರವಿದೆ. ತಂಗಾಳಿಯಿದೆ. ಬೆಳದಿಂಗಳ ರಾತ್ರಿಗಳಿವೆ.. ಕತ್ತಲೆಯ ಮೈತ್ರಿಯಿದೆ. ಎಲ್ಲಾ ಇದೆ. ಆನಂದಿಸುವ ಮನಸೂ ಇದೆ. ಆದರೆ ಮನುಷ್ಯ ಬಯಸೋದು ತನ್ನ ನೋವು ನಲಿವುಗಳಿಗೆಲ್ಲ ಹಂಚಿಕೊಳ್ಳುವ ಇನ್ನೊಂದು ಮನಸಿನ ಆಸರೆಯನ್ನ... ಮನುಷ್ಯನ ಭಾವಗಳಿಗೆ ಮತ್ತೊಂದು ಮನಸಿನ ಆಸರೆಯ ಹುಚ್ಚು.... ಇದೂ ಸಹ ಅಂತದ್ದೇ ಒಂದು ಹುಚ್ಚು... ವಿಚಾರ ಭಾವಗಳಿಗೆಲ್ಲ ಅಕ್ಷರ ಕೊಡುವ ಹುಚ್ಚು... ಖಾಲಿಯಾಗುವ ಕನಸು.... ಅಂತದ್ದೊಂದುಯಾನದಲ್ಲಿ ನಿಮ್ಮ ಜೊತೆ.......







Tuesday, June 11, 2013

ಮಳೆಹಾಡು

ಮೇಘವೇ
ಸುರಿದು ಬಿಡು
ಇಳೆಯ ಉಸಿರೂ
ಬಸಿರಾಗುವಂತೆ,
ಎಲ್ಲೆಲ್ಲೂ ಹಸಿರು
ಮೊಳಕೆಯೊಡೆಯುವಂತೆ.

ನೀನೂ
ಹರಿದುಬಿಡು,
ಉಸಿರುಗಟ್ಟುವಂತೆ
ಹಸಿಯಾಗಿಸಿ,
ತಂಪಾಗಿಸಿ.

ಜಲಪಾತವಾಗಲಿ
ಮಳೆ!
ಪ್ರೀತಿ!
ತಣಿಯಲಿ.
ಅಲ್ಲು. ಇಲ್ಲು.

ಯಾರಿಗೆ ಹೇಳಲಿ?

ಯಾರಿಗೆ ಹೇಳಲಿ?
ಏನೆಂದು ಬರೆಯಲಿ?

ಭಾವಗಳ ಮಳೆ ಸುರಿಯೆ,
ಮನಸು ಬಂದ ಹಾಗೆಲ್ಲ
ಮನದ ಮಳೆಯಂತೆ
ಸುರಿದು ಬಿಡಲೊಮ್ಮೆ
ಎಲ್ಲಿರುವೆ ನೀನು
ಇನ್ನೆಲ್ಲಿ ನಾನು!

ನನ್ನ ಮುನಿಸಿಗೆ ಮಡಿಲು
ನನ್ನ ಕನಸಿಗೆ ಒಡಲು
ಜೀವ ಉಸಿರಿಗೆ ಕಡಲು
ಕಡಲಾದೆ ನೀನು!
ಕರಗಿಸದೇ ಉಳಿದು ಹೋದೆ
ನನ್ನ ನಾ ಕಲ್ಲು ಬಂಡೆಯಾಗಿ!


ಪ್ರತಿ ಬೆಳಗು ಕನ್ನಡಿಯ
ಹಂಗ್ಯಾಕೆ ಇನ್ನು?
ಸಿಂಗಾರದ  ಸೀರೆಗೆ
ನೆರಿಗೆಗಳೇಕೆ ಇನ್ನು?
ನೀನಿರದ  ದಿನ ದಿನಕು
ಯಾವ  ರಾಗದ ಹೊನಲು!
ನುಡಿಸಲಿವೆ ತಂತಿ ಹರಿದ
ವೀಣೆ
ಹೊಸದೇ ಶೃತಿಯನ್ನು!


  ಕೊಡಲೇನು ಗೆಳೆಯಾ
ವಿದಾಯಕ್ಕೆ ಮುನ್ನ?
ಕಣ್ಣ ಕೊನೆಯಂಚಲ್ಲಿ
ಸಣ್ಣಗೆ ಉಳಿದಿದೆ
ತಂಪು ತಂಪೆನ್ನುವ
ಹನಿ ಬಿಂದುಗಳು ನಿನ್ನ
ತಾಗಲಿ ಉಳಿದುಹೋಗಲಿವೆ
ಅಲ್ಲೇ
ತುಟಿಯಂಚಿನಲ್ಲೇ ....