ಮನಸಿನ ಹರಿಯುವಿಕೆಗೆ ಆನಂದಕ್ಕೆ ಪೃಕೃತಿಯಿದೆ. ಹಿಮ ಸುರಿಯುವ ಮುಂಜಾನೆಗಳಿವೆ. ಅದ್ಭುತ ಸೂರ್ಯಾಸ್ತಗಳಿವೆ. ಸಮುದ್ರವಿದೆ. ತಂಗಾಳಿಯಿದೆ. ಬೆಳದಿಂಗಳ ರಾತ್ರಿಗಳಿವೆ.. ಕತ್ತಲೆಯ ಮೈತ್ರಿಯಿದೆ. ಎಲ್ಲಾ ಇದೆ. ಆನಂದಿಸುವ ಮನಸೂ ಇದೆ. ಆದರೆ ಮನುಷ್ಯ ಬಯಸೋದು ತನ್ನ ನೋವು ನಲಿವುಗಳಿಗೆಲ್ಲ ಹಂಚಿಕೊಳ್ಳುವ ಇನ್ನೊಂದು ಮನಸಿನ ಆಸರೆಯನ್ನ... ಮನುಷ್ಯನ ಭಾವಗಳಿಗೆ ಮತ್ತೊಂದು ಮನಸಿನ ಆಸರೆಯ ಹುಚ್ಚು.... ಇದೂ ಸಹ ಅಂತದ್ದೇ ಒಂದು ಹುಚ್ಚು... ವಿಚಾರ ಭಾವಗಳಿಗೆಲ್ಲ ಅಕ್ಷರ ಕೊಡುವ ಹುಚ್ಚು... ಖಾಲಿಯಾಗುವ ಕನಸು.... ಅಂತದ್ದೊಂದುಯಾನದಲ್ಲಿ ನಿಮ್ಮ ಜೊತೆ.......







Tuesday, November 27, 2012

ಮಿಲನ





ಅಳಿವು ಉಳಿವಿನ ಸ್ಥಬ್ಧಚಿತ್ರಕೆ
ಮಾತು ಮೌನದ ನೆಲೆಯೆಲ್ಲಿ?
ಹುಟ್ಟು ಸಾವಿನ ಸೃಷ್ಟಿಚಿತ್ತಕೆ
ನಾನು ನೀನು ಕೊನೆಯೆಲ್ಲಿ?

ಅಕಳಂಕವಾದರೆ ನೀ
ತ್ಯಾಗದೊಲುಮೆಯ ಪಥದಲ್ಲಿ
ಸುಖದ ಸಗ್ಗಕೆ ಶಾಂತಿ ಮಂತ್ರದ
ಬೀಜ ನೆಡುವೆಯ ನೆಪದಲ್ಲಿ?

ತೊಲಗು ಮೌನವೆ ತಬ್ಬು ಜೀವವ
ರಮಿಸು ರಸಮಯ ಜೀವಗಳ
ಒಲಿಸು ಲಾಲಿಸು ಮತ್ತೆ ಘಮಿಸು
ಸುಟ್ಟು ಸುಡಲಿದು ಸರಕುಗಳ!

ಜೀವ ಉರಿಯಲಿ ತಮವು ತಣಿಯಲಿ
ಹರಿದು ಹಾಡಲಿ ರಾಗಗಳು
ವೀಣೆ ಮಿಡಿಯುವ  ತಂಪು ನಾದಕೆ
ಬೆಸೆದು ಬೀಳಲಿ ಭಾವಗಳು