ನಮಸ್ತೆ..
ಈ ಬರಹ ಯಾರದ್ದಾದರೂ ಮನಸಿಗೆ ಸ್ವಲ್ಪ ನಾಟಿದಲ್ಲಿ ನೋವಿಗೆ ದಯವಿಟ್ಟು ಕ್ಷಮೆಯಿರಲಿ. ಆ ನೋವು ಇನ್ನಷ್ಟು ಒಳ್ಳೆಯದನ್ನು ಸೃಷ್ಟಿಸಲಿ ಎಂಬ ಆಶಾವಾದದೊಂದಿಗೆ..
ಎಲ್ಲಿ ನೋಡಿದರಲ್ಲಿ ಅಂತರ್ಜಾಲದ ತುಂಬ ಪತ್ರಿಕೆಗಳು, ಟಿ.ವಿ ಅಷ್ಟೇ ಅಲ್ಲ ಸುಮ್ ಸುಮ್ನೆ ಹರಟುವ ಸಂಜೆಕಟ್ಟೆಗಳಲ್ಲಿ ಸಹ ಇಂದು ಚರ್ಚೆಯಾಗುತ್ತಿರುವ ವಿಷಯ ಮೋದಿ ಹಾಗೂ ನಮೋ ಇಂಡಿಯಾದಂತ ಬಹು ಚರ್ಚಿತ ವಿಷಯಗಳು. ಚರ್ಚೆಯಾಗಬೇಕಾದದ್ದು ಆಗುತ್ತಿರುವುದು ಹಾಗೂ ಇನ್ನಷ್ಟು ತೀವ್ರಗೊಂಡು ಒಂದು ಸದಾಶಯದ ಅಲೆ ಏಳಬೇಕಾದ ಅಗತ್ಯ ಇಂದು ಹಿಂದೆಂದಿಗಿಂತಲೂ ಅವಶ್ಯಕವಿದೆ. ದೇಶದ ಭವಿಷ್ಯಕ್ಕೆ ದೇಶ ಉಳಿಯಲು ಮೋದಿಯಂತ ನಿರ್ಭಿಡೆಯ ಕನಸುಗಾರನ ಅಗತ್ಯ ದೇಶಕ್ಕೆ ಖಂಡಿತ ಇದೆ. ಆದರೆ ಅವರನ್ನು ಆರಿಸಿ ತರುವ ಜವಾಬ್ಧಾರಿ ಇರುವುದು ನಾಗರಿಕರ ಮೇಲೆಯೇ. ಎಲ್ಲ ವಿದ್ಯಾವಂತರ ಮೇಲೆ ಇಂದು ಅತಿ ಹೆಚ್ಚಿನ ಜವಾಬ್ಧಾರಿಯಿದೆ. ಜಾತಿ ಮತ ಪಂಥಗಳ ಹೊರತಾಗಿ ದೇಶ ಮುಖ್ಯವೆನ್ನಿಸುವ ಅಥವಾ ದೇಶಕ್ಕಾಗಿ ಚಿಂತಿಸಬಲ್ಲ ಪ್ರತಿಯೊಬ್ಬನೂ ಈ ಬಗ್ಗೆ ಚಿಂತಿಸುವ ಅಗತ್ಯ, ಅನಿವಾರ್ಯತೆಯಿದೆ. ದೇಶ ಉಳಿದರೆ ಮಾತ್ರ
ನಾವು ಜಾತಿಯ ಮತ ಧರ್ಮಗಳ ಕುರಿತು ಚರ್ಚೆ ಮಾಡಬಹುದು. ಯಾವ ಮಾಂಸ ಯಾರು ತಿನ್ನುತ್ತಾರೆ, ಎಷ್ಟು ಎಂಬುದು ಲೆಕ್ಕ ಹಾಕಬಹುದು. ಅನಂತ ಮೂರ್ತಿಯಂತ ಸಾಹಿತಿಗಳು ದೇಶವನ್ನೇ ಬಿಡುವ ಮಾತನಾಡಬಹುದು. ಆದರೆ ಜನಸಾಮಾನ್ಯ ಬದುಕಲು, ದೇಶದ ಆರ್ಥಿಕ ಸಾಮಾಜಿಕ ಪ್ರಗತಿಗೆ, ಕುಸಿಯುತ್ತಿರುವ ರೂಪಾಯಿಯ ಮೌಲ್ಯ ಉಳಿಸಲು, ರೈತನ ಬದುಕಿಗೆ ಬೆಳೆಗೆ ನೆಮ್ಮದಿ ಕಾಣಲು, ಈ ದೇಶದ ಗಡಿಗಳಲ್ಲಿ ರಕ್ತ ಹರಿಸುತ್ತಿರುವ ಸೈನಿಕರ ಪ್ರಾಣದ ಬೆಲೆ ಅರಿಯಲು, ಅವರಲ್ಲಿ ಉತ್ಸಾಹ, ಶೌರ್ಯ ತುಂಬಲು, ನಾಡಿನ ಮನೆ ಮನಸುಗಳಲ್ಲಿ ಚೈತನ್ಯ ತುಂಬುವಂತ ಧೀರೋಧಾತ್ತ ನಾಯಕರ ಅವಶ್ಯಕತೆ ಇಂದು ಇದೆ. ಅಂತಹ ಎಲ್ಲ ಗುಣಗಳು ಕಾಣುತ್ತಿರುವುದು ಯುವ ಜನರ ಆಶಾವಾದ ಆಗಿರುವ ನರೇಂದ್ರ ಮೋದಿ ಅವರಲ್ಲಿ.
ನನಗೆ ಬೇಸರವಿರುವುದು ಇಲ್ಲಿಯೇ. ಇಂದು ಚರ್ಚೆಯಾಗುತ್ತಿರುವ ಎಲ್ಲ ಮಾಧ್ಯಮಗಳು ವಿದ್ಯಾವಂತರು ಬೆಂಬಲ ಕೊಡುತ್ತಿರುವ ತಂತ್ರಜ್ಞಾನದ ಈ ಪ್ರಪಂಚದ ಎಷ್ಟು ಜನ ವೋಟಿಂಗ್ ಮಾಡುತ್ತಾರೆಂಬುದು? ನಮ್ಮಲ್ಲಿ ಚುನಾವಣೆಯ ವೇಳೆಗೆ ವೋಟಿಂಗ್ ನ ಪ್ರಮಾಣ ಅವಿದ್ಯಾವಂತರು, ಅನಕ್ಷರಸ್ಥರು ಇರುವ ಪ್ರದೇಶಗಳಲ್ಲಿ ಮಾತ್ರ. ನಗರ ಪ್ರದೇಶಗಳಲ್ಲೇ ವೋಟಿಂಗ್ ಮಾಡದೇ ಮನೆಯಲ್ಲಿರುವ ಬಹಳಷ್ಟು ಯುವ ಜನತೆಯನ್ನು ಕಳೆದ ಹಲವು ಚುನಾವಣೆಗಳಲ್ಲಿ ಕಂಡಿದ್ದೇವೆ. ಈ ಬಾರಿಯೂ ಇಲ್ಲಿ ಎಷ್ಟೇ ಸಮರ್ಥಿಸಿಕೊಂಡರೂ ಚುನಾವಣೆಯ ವೋಟಿಂಗ್ ಮಾತ್ರ ನಿಜವಾದ ದೇಶದ ಭವಿಷ್ಯಕ್ಕೆ ಸಮರ್ಥನೆಯಾಗುವುದು ಎಂಬುದನ್ನು ಅನಿವಾರ್ಯ ಹೇಳಲೇ ಬೇಕಾಗಿದೆ. ಒಬ್ಬ ವಿದ್ಯಾವಂತ ನಾಗರಿಕ ಚುನಾವಣೆಗಾಗಿ ವೋಟಿಂಗ್ ನಡೆಸಲು ಊರಿಗೆ ಮರಳುತ್ತಿದ್ದಾನೆಂದರೆ ಮನೆಯಲ್ಲಿ ಹಳ್ಳಿಯಲ್ಲಿರುವ ಎಷ್ಟೋ ಜನರಿಗೆ ದೇಶದ ಇಂದಿನ ಸ್ಥಿತಿಗತಿಗಳ ತಿಳಿಸಿ ಹೇಳಬಹುದು. ದೇಶಕ್ಕೆ ಯಾಕೆ ಮೋದಿಯಂತ ಆಶಾವಾದಿ ನಾಯಕನ ಅಗತ್ಯವಿದೆ ಎಂಬುದನ್ನು ಊರು ತುಂಬ ಆಗದಿದ್ದರೆ ಮನೆಯಲ್ಲಾದರೂ ಹೇಳಬಹುದು. ಯಾರ ಮೇಲೂ ಒತ್ತಡ ಹೇರಬೇಕಾದ ಅವಶ್ಯಕತೆಯಿಲ್ಲ. ಯಾರನ್ನೂ ಪ್ರಚೋದಿಸಿ ಗಲಾಟೆ ಮಾಡಬೇಕಾದ ಅಗತ್ಯವಿಲ್ಲ. ಕೇವಲ ದೇಶದ ಇಂದಿನ ಸತ್ಯಾಸತ್ಯತೆಗಳ ಅರ್ಥೈಸಿದರೆ ಸಾಕು. ಕೆಲವರಾದರೂ ದುಡ್ಡಿಗೆ ಓಟು ಕೊಂಡುಕೊಳ್ಳುವವರ ಬಲೆಗೆ ಬೀಳುವುದು ತಪ್ಪುತ್ತದೆ. ಯಾರೋ ಒಬ್ಬ ಭಾಷಣಕಾರನ ಮಾತಿಗಿಂತ, ಯಾರೋ ಒಬ್ಬ ತೋರಿಸೋ ನೂರರ ನೋಟುಗಳಿಗಿಂತ ಮನೆ ಮಕ್ಕಳ ವಿದ್ಯಾವಂತರ ಮೇಲೆ ನಮ್ಮ ಹಳ್ಳಿಗಳ ಅವಿದ್ಯಾವಂತ ಮುಗ್ಧ ಜನ ಹೆಚ್ಚು ಭರವಸೆಯನ್ನು ಇಡಬಲ್ಲರೆಂದು ನನಗನ್ನಿಸುತ್ತದೆ.
ನಾನು ಚುನಾವಣಾ ಪ್ರಚಾರಮಾಡಿ ಎನ್ನುತ್ತಿಲ್ಲ. ಇದ್ದ ಕೆಲಸ ಬಿಟ್ಟು ಭಾಷಣ ಮಾಡಿ ಹೇಳುತ್ತಿಲ್ಲ. ವಿದ್ಯಾವಂತ ನಾಗರಿಕರೇ ದಯವಿಟ್ಟು ಓಟಿಂಗ್ ನಲ್ಲಿ ಪಾಲ್ಗೊಳ್ಳಿ. ದೇಶಕ್ಕೆ ನಿಮ್ಮ ಅಗತ್ಯ ಹಿಂದೆಂದಿಗಿಂತಲೂ ಹೆಚ್ಚಿದೆ ಇಂದು. ಅರ್ಥಮಾಡಿಕೊಳ್ಳಿ ಎನ್ನುತ್ತಿದ್ದೇನೆ.ಯಾವ ಪಕ್ಷಕ್ಕೆ ಓಟು ಎಂಬುದು ನೀವೇ ನಿರ್ಧರಿಸಿ. ಆದರೆ ವೋಟಿಂಗ್ ನಂತ ದೇಶದ ಬಹುಮುಖ್ಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪಾಲ್ಗೊಳ್ಳಿ. ಇದು ಕೂಡ ನಮ್ಮೆಲ್ಲರ ಕರ್ತವ್ಯವಾಗಿದೆ. ಒಂದುವೇಳೆ ನ್ಯಾಯಕ್ಕೆ ದೇಶದ ಹಿತಕ್ಕೆ ಇಂದಿನ ರಾಜಕೀಯವ್ಯವಸ್ಥೆಯಲ್ಲಿ ಧಕ್ಕೆಯಾಗುತ್ತಿದೆ ಅಂತಾದರೆ ವೋಟ್ ಮಾಡಿ ರಾಜಕಾರಣಿಗಳನ್ನು ಗೆಲ್ಲಿಸಿದವರಷ್ಟೇ ವೋಟಿಂಗ್ ನಲ್ಲಿ ಪಾಲ್ಗೊಳ್ಳದೆ ಇರುವವರು ಕೂಡ ಕಾರಣವಾಗಿದ್ದಾರೆ. ಇದು ದೇಶದ ಅಳಿವು ಉಳಿವಿನ ನಿರ್ಧರಿತ ಪ್ರಶ್ನೆ. ಒಂದುವೇಳೆ ಇಂದು ವೋಟಿಂಗ್ ನಲ್ಲಿ ಪಾಲ್ಗೊಳ್ಳದಿರುವ ಯಾವ ವ್ಯಕ್ತಿಗೂ ನಾಳೆ ರಾಜಕಾರಣಿಗಳನ್ನು ದೂರುವ ದೇಶದ ವ್ಯವಸ್ಥೆಯನ್ನು ಮಾತನಾಡುವ ಅಧಿಕಾರ ಇರುವುದಿಲ್ಲ ಅಲ್ಲವೇ?
ಫೇಸ್ ಬುಕ್ ನಲ್ಲಿ ಲೈಕ್ ಗಳನ್ನು ಒತ್ತಿದಾಕ್ಷಣ ಅಥವಾ ಸ್ನೇಹಿತರ ಅಡ್ಡದಲ್ಲಿ ಚರ್ಚೆಗಿಳಿದಾಕ್ಷಣ ನಮ್ಮ ಕರ್ತವ್ಯಗಳು ಮುಗಿಯುವುದಿಲ್ಲ. ವಿಚಾರಗಳನ್ನು ಹಂಚಿಕೊಳ್ಳುವಷ್ಟೇ ಮುಖ್ಯವಾದ್ದದ್ದು ಕಾರ್ಯಗೊಳಿಸುವ ಕೆಲಸ. ದೇಶಕ್ಕೆ ಭವಿಷ್ಯವಿಲ್ಲ ಎಂದುಕೊಳ್ಳುವ ಪ್ರತಿಯೊಬ್ಬ ನಾಗರಿಕನೂ ದೇಶಕ್ಕೋಸ್ಕರ ಮತದಾನ ಮಾಡಿದಾಗ ಮಾತ್ರ ದೇಶಕ್ಕೊಂದು ಸದೃಡ ರಾಜಕೀಯ ವ್ಯವಸ್ಥೆ ನಿರ್ಮಾಣವಾಗಬಹುದು. ನನ್ನೊಬ್ಬನದೇನು ಅಂದುಕೊಳ್ಳುವ ಪ್ರತಿಯೊಬ್ಬನೂ ಈ ದೇಶದ ರಾಜಕೀಯ ವ್ಯವಸ್ಥೆಯನ್ನು ಪ್ರಶ್ನಿಸುವ ಅಧಿಕಾರ ಕಳೆದುಕೊಳ್ಳುತ್ತಾನೆಂದೆನ್ನಿಸುತ್ತದೆ ನನಗೆ. ದೇಶದಲ್ಲಿ ಒಳ್ಳೆಯದು ಎಂಬುದು ಇನ್ನೂ ಜೀವಂತವಿದೆ. ಈ ದೇಶಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಅಣುಬಾಂಬುಗಳಿಂದ ಪೂರ್ಣ ನಲುಗಿ ಹೋದ ಜಪಾನ್ ದಂತ ದೇಶ ಮೈ ಕೊಡವಿಕೊಂಡು ಜಗತ್ತಿನ ಮಹಾಶಕ್ತಿಯಾಗಿ ಬೆಳೆದಿರುವುದು ಸಾಧ್ಯವಿರುವಾಗ ನಮಗೇಕೆ ಸಾಧ್ಯವಿಲ್ಲ? ದುಬೈ, ಸಿಂಗಾಪೂರ ದಂತ ಪುಟ್ಟ ರಾಷ್ಟೃಗಳು ಸಮರ್ಥ ನಾಯಕತ್ವದಿಂದಾಗಿ ಜಗತ್ತಿನ ಮುಂಚೂಣಿಯಲ್ಲಿರುವಾಗ ಭಾರತವೇಕೆ ಇನ್ನು ಹಿಂದುಳಿದ ದೇಶಗಳ ಪಟ್ಟಿಯಲ್ಲಿದೆ? ಚೀನಾದಂತ ಬೃಹತ್ ಜನಸಂಖ್ಯೆ ಹೊಂದಿರುವ ರಾಷ್ಟೃ ತನ್ನ ದೇಶದ ಪ್ರತಿ ನಾಗರಿಕನಿಗೂ ಕೈತುಂಬಾ ಕೆಲಸ ಮತ್ತು ಊಟ ಬಟ್ಟೆ ವಸತಿಗಳನ್ನು ಕೊಡಲು ಸಾಧ್ಯವಾದದ್ದು ಹೇಗೆ? ಎಲ್ಲ ದೇಶಗಳ ಫೈವ್ ಸ್ಟಾರ್ತ್ತಿ ಬರುವ ನಮ್ಮ ದೇಶದ ರಾಜಕೀಯ ನಾಯಕರಿಗೇಕೆ ಅಂತ ಶಕ್ತಿಗಳಿಲ್ಲ? ವ್ಯವಸ್ಥೆ ಕುಸಿಯುವಲ್ಲಿ ರಾಜಕೀಯವೊಂದೇ ಪಾಲುದಾರನಾಗಿದ್ದರೆ ವ್ಯವಸ್ಥೆಯನ್ನು ನಿರ್ಮಿಸುವಲ್ಲಿ ಸೋತವರು ಯಾರು? ಈ ಎಲ್ಲ ಪ್ರಶ್ನೆಗಳನ್ನೂ ದಯವಿಟ್ಟು ಯಾರೂ ಯಾರಿಗೂ ಕೇಳಬೇಡಿ. ನಿಮಗೆ ನೀವೇ ಆರ್ಥ ಮಾಡಿಕೊಳ್ಳಿ. ಯೋಚನೆ ಮಾಡಿ. ಮತ್ತು ಕನಿಷ್ಟ ದೇಶಕ್ಕಾಗಿ ನಿಮ್ಮ ಮತವನ್ನು ಮರೆಯದೇ ಎಲ್ಲ ಒತ್ತಡ ಅನಿವಾರ್ಯತೆಗಳ ಬದಿಗಿಟ್ಟು ಚಲಾಯಿಸಿ.
ನಮ್ಮ ಯುವ ಜನತೆಯ ಪ್ರತಿಭೆ, ಸಾಧನೆ, ಸಾಧ್ಯತೆ ಹಾಗೂ ಆರಂಭಶೂರತ್ವ ಹಾಗೂ ಆಲಸ್ಯ ಮನೋಭಾವಗಳ ಕುರಿತು ಮುಂದಿನ ಸಂಚಿಕೆಯಲ್ಲಿ....