ಮನಸಿನ ಹರಿಯುವಿಕೆಗೆ ಆನಂದಕ್ಕೆ ಪೃಕೃತಿಯಿದೆ. ಹಿಮ ಸುರಿಯುವ ಮುಂಜಾನೆಗಳಿವೆ. ಅದ್ಭುತ ಸೂರ್ಯಾಸ್ತಗಳಿವೆ. ಸಮುದ್ರವಿದೆ. ತಂಗಾಳಿಯಿದೆ. ಬೆಳದಿಂಗಳ ರಾತ್ರಿಗಳಿವೆ.. ಕತ್ತಲೆಯ ಮೈತ್ರಿಯಿದೆ. ಎಲ್ಲಾ ಇದೆ. ಆನಂದಿಸುವ ಮನಸೂ ಇದೆ. ಆದರೆ ಮನುಷ್ಯ ಬಯಸೋದು ತನ್ನ ನೋವು ನಲಿವುಗಳಿಗೆಲ್ಲ ಹಂಚಿಕೊಳ್ಳುವ ಇನ್ನೊಂದು ಮನಸಿನ ಆಸರೆಯನ್ನ... ಮನುಷ್ಯನ ಭಾವಗಳಿಗೆ ಮತ್ತೊಂದು ಮನಸಿನ ಆಸರೆಯ ಹುಚ್ಚು.... ಇದೂ ಸಹ ಅಂತದ್ದೇ ಒಂದು ಹುಚ್ಚು... ವಿಚಾರ ಭಾವಗಳಿಗೆಲ್ಲ ಅಕ್ಷರ ಕೊಡುವ ಹುಚ್ಚು... ಖಾಲಿಯಾಗುವ ಕನಸು.... ಅಂತದ್ದೊಂದುಯಾನದಲ್ಲಿ ನಿಮ್ಮ ಜೊತೆ.......
Friday, January 14, 2011
ಸಂಕ್ರಮಣದ ಶುಭಾಶಯಗಳು.
ಋತುಮಾನದಾವರ್ತನೆಗೆ
ಮತ್ತೊಂದು ಹೊಸಬೆಳಗು.
ಎಳ್ಳುಬೆಲ್ಲದ ಕಲಶ
ಕೈಯಲ್ಲಿ ಹಿಡಿದು
ಉಷೆಕಂಗಳಾರತಿಯಲಿ
ಹೊನ್ನದೋಕುಳಿ ಮುಗಿಸಿ
ಬಂದಿಹನೋ ಭಾನು..
ಬರಮಾಡಿ ಅವನನ್ನು
ತಳಿರು ತೋರಣದಿಂದ...
ಚಂದದಲಿ ನೇಯ್ದ
ಕಡುಹಸಿರ ಸೆರಗಲಿ,
ಧವಸ ಧಾನ್ಯದ ಮಡಿಲ
ಸೆರಗಕ್ಕಿ ಹಿಡಿದು
ಮತ್ತೆ ಕಬ್ಬಿನ ಜಲ್ಲೆ,
ಹುರಿದ ಕಡಲೆಯ ಬೀಜ
ಬೆಲ್ಲದಾ ಸಿಹಿಯೆಳ್ಳು
ಬೆಳ್ಳಿ ಪಾತ್ರೆಯ ತುಂಬ
ಹಿಡಿದು ಬಂದವಳವಳೊ
ತೆನೆರಾಣಿಯಂತೆ,
ಭೂತಾಯಿ ಅಮ್ಮ.
ಪುಣ್ಯಸ್ವರ್ಗದ ಕದವ
ತೆರೆದಿಟ್ಟು ಸುರಿಸುವನು
ಪುಷ್ಪದೋಕುಳಿ ಜಗಕೆ
ಜನ್ಮಪಾವನವು.
ಸಂಕ್ರಾಂತಿ ಕುಸುರೆಳ್ಳು
ಸ್ನೇಹ ಪ್ರೀತಿಯ ಮೆಲ್ಲು
ಇಹವೇ ಸ್ವರ್ಗದ ಸೊಲ್ಲು
ಇದನೇ ಸಾರುವನು ಇಹಪರಕೆ.
Subscribe to:
Posts (Atom)