ಮನಸಿನ ಹರಿಯುವಿಕೆಗೆ ಆನಂದಕ್ಕೆ ಪೃಕೃತಿಯಿದೆ. ಹಿಮ ಸುರಿಯುವ ಮುಂಜಾನೆಗಳಿವೆ. ಅದ್ಭುತ ಸೂರ್ಯಾಸ್ತಗಳಿವೆ. ಸಮುದ್ರವಿದೆ. ತಂಗಾಳಿಯಿದೆ. ಬೆಳದಿಂಗಳ ರಾತ್ರಿಗಳಿವೆ.. ಕತ್ತಲೆಯ ಮೈತ್ರಿಯಿದೆ. ಎಲ್ಲಾ ಇದೆ. ಆನಂದಿಸುವ ಮನಸೂ ಇದೆ. ಆದರೆ ಮನುಷ್ಯ ಬಯಸೋದು ತನ್ನ ನೋವು ನಲಿವುಗಳಿಗೆಲ್ಲ ಹಂಚಿಕೊಳ್ಳುವ ಇನ್ನೊಂದು ಮನಸಿನ ಆಸರೆಯನ್ನ... ಮನುಷ್ಯನ ಭಾವಗಳಿಗೆ ಮತ್ತೊಂದು ಮನಸಿನ ಆಸರೆಯ ಹುಚ್ಚು.... ಇದೂ ಸಹ ಅಂತದ್ದೇ ಒಂದು ಹುಚ್ಚು... ವಿಚಾರ ಭಾವಗಳಿಗೆಲ್ಲ ಅಕ್ಷರ ಕೊಡುವ ಹುಚ್ಚು... ಖಾಲಿಯಾಗುವ ಕನಸು.... ಅಂತದ್ದೊಂದುಯಾನದಲ್ಲಿ ನಿಮ್ಮ ಜೊತೆ.......







Friday, January 14, 2011

ಸಂಕ್ರಮಣದ ಶುಭಾಶಯಗಳು.

      

ಋತುಮಾನದಾವರ್ತನೆಗೆ
ಮತ್ತೊಂದು ಹೊಸಬೆಳಗು.
ಎಳ್ಳುಬೆಲ್ಲದ ಕಲಶ
ಕೈಯಲ್ಲಿ ಹಿಡಿದು
ಉಷೆಕಂಗಳಾರತಿಯಲಿ
ಹೊನ್ನದೋಕುಳಿ ಮುಗಿಸಿ
ಬಂದಿಹನೋ ಭಾನು..
ಬರಮಾಡಿ ಅವನನ್ನು
ತಳಿರು ತೋರಣದಿಂದ...

ಚಂದದಲಿ ನೇಯ್ದ
ಕಡುಹಸಿರ ಸೆರಗಲಿ,
ಧವಸ ಧಾನ್ಯದ ಮಡಿಲ
ಸೆರಗಕ್ಕಿ ಹಿಡಿದು
ಮತ್ತೆ ಕಬ್ಬಿನ ಜಲ್ಲೆ,
ಹುರಿದ ಕಡಲೆಯ ಬೀಜ
ಬೆಲ್ಲದಾ ಸಿಹಿಯೆಳ್ಳು
ಬೆಳ್ಳಿ ಪಾತ್ರೆಯ ತುಂಬ
ಹಿಡಿದು ಬಂದವಳವಳೊ
ತೆನೆರಾಣಿಯಂತೆ,
ಭೂತಾಯಿ ಅಮ್ಮ.
 ಪುಣ್ಯಸ್ವರ್ಗದ ಕದವ
ತೆರೆದಿಟ್ಟು ಸುರಿಸುವನು
ಪುಷ್ಪದೋಕುಳಿ ಜಗಕೆ
ಜನ್ಮಪಾವನವು.
ಸಂಕ್ರಾಂತಿ ಕುಸುರೆಳ್ಳು
ಸ್ನೇಹ ಪ್ರೀತಿಯ ಮೆಲ್ಲು
ಇಹವೇ ಸ್ವರ್ಗದ ಸೊಲ್ಲು
ಇದನೇ ಸಾರುವನು ಇಹಪರಕೆ.

Wednesday, January 5, 2011

ಸಾವಿನ ಮನೆ.

ಸಾವಿನ ಮನೆಯಲ್ಲಿ ನಿಂತು
ಸಾಂತ್ವನಗಳ ಯಾರಿಗೆ ಹೇಳಲಿ?
ಸತ್ತಂತೆ ಬದುಕುವ ಜೀವಗಳಿಗಾ!
ಸತ್ತು ಬದುಕುವ ಆತ್ಮಗಳಿಗಾ!

ವಿಶ್ವಾತ್ಮನವನಲ್ಲಿ ಕಾರಣವ ಕೇಳಲಾರೆ.
ಚಿರಂತನಕೆ ಚಿತೆ ಸುಡದು.
ಮತ್ತಿಲ್ಲಿ ಮೌನ, ಗದ್ಗದ,
ಕಣ್ಣಂಚ ವಿಷಾದ, ವಿವರಣೆಗಳು
ಈ ಕ್ಷಣಕೆ ಮೂಕವಿಲ್ಲಿ.!

ಬೋಳುಮರದ ಮಸ್ತಕದಿ
ಮತ್ತೆ ಮೂಡದ ಚಿತ್ರಗಳು.
ಕತ್ತಿನ ತುಂಬಾ ತುಂಬಿದ ಕರಿನೆರಳು!
ಅತ್ತಿತ್ತ ಸರಿಯದ ಕಣ್ರೆಪ್ಪೆಗಳು
ತುಂಬಿ ನಿಂತ ಜೀವ ಕೊಳಗಳು.

ಓ ಸಾವೇ ಎಲ್ಲಿದ್ದಿ ನಿ?
ಹೇಗಿದ್ದಿ?ನಂಗೂಂದಿಷ್ಟಾದರೂ
ಬಿಟ್ಟುಗೊಡು ನಿನ್ನ ಗುಟ್ಟು.
ಮತ್ತೆಂದಾದರೂ ಬರಲೇ ಬೇಕಲ್ಲ ನಾನೂ ಸುಟ್ಟು!
ಸಾವಿನ ಮನೆಗೆ ಸಾಂತ್ವನದ ನೆಲೆಗಟ್ಟು
ಸತ್ಯ ನಿತ್ಯವೆಂಬ ಈ ನುಡಿಗಟ್ಟು!

Friday, December 31, 2010

ಒಂದು ವರ್ಷ ಕಳೆದಿದೆ.. ಒಂದಷ್ಟು ದಿನಗಳ ಗುಂಪಿಗೆ ವಿದಾಯ ಹೇಳಿದ್ದೇವೆ. ಒಂದಷ್ಟು ಸಿಹಿ ಕಹಿ ನೆನಪುಗಳಿಗೂ ವಿದಾಯ ಹೇಳಿದ್ದೇವೆ ಅಂದುಕೊಂಡಿದ್ದೇವೆ.ಹೊಸವರ್ಷ ಹೊಸತನಗಳ ಹೊಸ ಜೀವಂತಿಕೆಯ ಉತ್ಸಾಹವ ತರಲೆಂದು ಆಶಿಸಿದ್ದೆವೆ.  ಬದುಕಿಗೆ ಹೊಸ ಹೊಸ ಗುರಿಗಳ ಇಟ್ಟುಕೊಂಡಿದ್ದೇವೆ. ಕನಸುಗಳ ಕಂಡಿದ್ದೇವೆ.
             ಗೊತ್ತಿಲ್ಲ. ನಾಳೆ ಮತ್ತೊಂದು ಹೊಸವರ್ಷ ಬರುವವರೆಗೆ ಇವೆಲ್ಲ ಎಷ್ಟು ನನಸಾಗಿರುತ್ತವೆ ಅಂತ. ಆದರೂ ನಾಳೆಗಳ ನಿರೀಕ್ಷೆಯಲ್ಲಿ ಬದುಕಿನ ಮತ್ತೊಂದು ಹೊಸ ಉದಯಕ್ಕೆ ಚಂದದ ಸ್ವಾಗತವ ಕೋರುತ್ತಿದ್ದೇವೆ. ಎಲ್ಲರಿಗೂ ಹೊಸ ವರ್ಷದಹಾದರ್ಿಕ ಶುಭಾಶಯಗಳೊಂದಿಗೆ.....   



ನಾಳೆಗಳ ಆಗಮನಕ್ಕೆ ಇಂದು
ಸಜ್ಜಾದ ವೇದಿಕೆ.
ನಮನವಿರಲಿ,
ನಿನ್ನೆ ರಾತ್ರಿಗಳಿಗೆ
ತುಂತುರು ಹನಿಯ
ಚಿಲಿಪಿಲಿ ಕವನಗಳಿಗೆ!

ಮಾರ್ದವತೆಯ ಹೂ ಅರಳಿ
ಬಾಡಿದ ಭಾವಕುಸುಮಗಳಿಗೆ
ತಂಪುಕಂಪು ಸೂಸಿ ಚೆಲ್ಲಿದ
ಚಂದದ ದಿನಗಳ
ಬೆಳಕಿಗೆ ಮತ್ತು ರಾತ್ರಿಗೆ.

ಅಗಾಧ ಸಾಗರದ
ಸೂಯರ್ಾಸ್ತಗಳಂದಕ್ಕೆ
ಹಸಿರ ಸೆರಗಿನ ನಡುವೆ
ಇಣುಕಿದ ರವಿಯ
ಕಂಗಳ ಚಂದಕ್ಕೆ
ತಿಂಗಳ ಬಂಧಕ್ಕೆ.
ನಾನಿರುವ ನಿನ್ನೆಗಳ
ನನ್ನದಲ್ಲದ ನೆನಪುಗಳಿಗೆ
ನಾಳೆಗಿರದ ಎಲ್ಲ ಕಳೆದ
ಕಂಬನಿಗಳ ರಾತ್ರಿಗಳಿಗೆ
ನಮನವೀಯುತ್ತಲೇ
ಕೋರುವ ಸ್ವಾಗತವ.
ಶುಭೋದಯದ ಹೊಸ ಬೆಳಕಿಗೆ.

Thursday, December 16, 2010

ನಕ್ಷತ್ರಗಳೇ ........

ನಕ್ಷತ್ರಗಳೇ ........
> ನಕ್ಷತ್ರಗಳೇ ನಿಮಗೆ ಅಮಾವಾಸ್ಯೆಯಿಲ್ಲ
> ಬೆಳದಿಂಗಳಂತೆ ಬರಿದಾಗೋದಿಲ್ಲ
> ಬೆಳಕಿನ ಖನಿಗಳು ನೀವು
> ಕಣ್ಣು ಕುಕ್ಕುವುದಿಲ್ಲ
> ಕತ್ತಲೆಯ ರಾತ್ರಿಗಳ
> ತಣಿಸುತ್ತೀರಿ.
> ಮತ್ತೆ ಮನಗಳ
> ಮುದ್ದಿಸುತ್ತೀರಿ.
> ಎಲ್ಲ ನೋವುಗಳಿಗೆ
> ಸಾಕ್ಷಿಯಾಗುತ್ತ
> ನಿಮ್ಮದೇ ಬೆಳಕಲ್ಲಿ
> ಕರಗುತ್ತ..........
>
>
> ಶಬ್ಧಗಳಿಗ್ಯಾಕೆ ಈ ಪರಿಯ
> ದಾಹ!
> ಹೇಳಿ ಗೆಳೆಯರೆ
> ಇವಕೆ ಏಕಿಂತ ಮೋಹ!
> ಮನದೆಲ್ಲ ಒಳಗುಗಳ
> ಬಿಚ್ಚಿಡುವ ಬಯಕೆ!
> ಗೊತ್ತಿಲ್ಲ,- ಬೆಳದಿಂಗಳೆ ನಾಳೆ
> ಕತ್ತಲೆಯ ಗೂಡ ಸೇರಿ
> ಮಾಡುವುದೇ ಅರಿಕೆ!
>
> ಜೋಳಿಗೆಯ ತುಂಬೆಲ್ಲ
> ನಿನ್ನದೇ ಹೊಳಪಿರಲಿ.
> ಕಡುರಾತ್ರಿಯಲ್ಲೂ ನೀ ನನ್ನ
> ಜೊತೆಯಿರಲಿ!
> ಅಳುವ ಚಂದ್ರಮಂಗೂ
> ನಗುವ ಬೆಳದಿಂಗಳಿಗೂ
> ನಕ್ಷತ್ರಗಳೇ
> ಜೊತೆಯಾಗಿ....
> ಬೆಳಕಾಗಿ.......

Tuesday, December 7, 2010

ಅವಳು......

 

ಕಂಗಳಲಿ ಬತ್ತಿದೆಣ್ಣೆಯ ಹೊತ್ತು
ಕೈಗಳಲಿ ಬೆಳಗೋ ಹಣತೆಯ ಹಿಡಿದು
ನಸುನಗುವ ಮುಸುಕಿನದಿ ಮತ್ತೆ ಬಂದಿದೆ
ದೀಪಾವಳಿ! ದೀಪಗಳ ಹಬ್ಬ ದೀಪಾವಳಿ.

ಕತ್ತಲೆಯ ಹಿಂದೆ ಬೆಳಕಿನಲೆ ಬರಲೆಂದು
ಪುಟ್ಟ ಹಣತೆಯ ಹಿಡಿದು ಉರಿಸುತ್ತ ನಿಂದವಳು
ಕತ್ತಲೆಯ ಕೊಂದವಳು
ಚಿತ್ತದಲಿ ಬೆಂದವಳು....

ಜೀವನದಿ ಜೀವನ್ಮುಖಿ ಜೀವಸೆಲೆ ಸಮ್ಮಿಲನ
ಕತ್ತಲೆಯ ಕಡಲಿಂದ ಬೆಳಕಿನ ಆಭರಣ
ಮುತ್ತು ರತ್ನದ ತೇರ ಎಳೆದೆಳೆದು ನಿಂತವಳು
ಮತ್ತೆ ನಸುನಗುವ ಮುತ್ತೈದೆ ಹಣೆಯವಳು!

ಅವಳೊಡಲು ಬೆಂಕಿ... ಉರಿವ ಚಿತೆಯನ್ನ
ಕಂಬನಿಯ ಕೊಡ ಹಿಡಿದು ನಂದಿಸಿದ ಬೆಳಕಲ್ಲೇ
ಮತ್ತೆ ಬೆಳಕಿನ ಹಣತೆ ಹಚ್ಚಿದವಳು..
ನಿತ್ಯ ನಿಯತಿಗೆ ತನ್ನ ತನುಮನವ ಉರಿಸಿ ನಿಂತವಳು......

ಕತ್ತಲೆಯೇ ಬೆದರಿದೆ ಆ ಅಗ್ನಿಶಿಖೆಗೆ!
ಮತ್ತೆಲ್ಲಿ ಉಳಿದಿದೆ ಹೂನಗೆಯ ಒಳಬಗೆ!
ಹುಟ್ಟಿ ಬರುವುದೇ ಹಣತೆ ಹಿಡಿದವಳ ಕಿರುನಗೆ
ಅಳಿಯುವುದೇ ಅವಳ ಸುತ್ತಲಿನ ಕರಿನಗೆ!

Sunday, November 28, 2010

ದೂರದಿರು ರಾತ್ರಿಗಳ ಅಂತರಾತ್ಮನೆ ಮಿತ್ರ, ಪುಟ್ಟ ಹಣತೆಯೊಳಿರುವ ಬೆಳಕೆ ದಿವ್ಯತ್ವ!

            

 ಮಾತು ಮತ್ತು ಮೌನದ ಕುರಿತು........               

ಮಾತು ಮತ್ತು ಮೌನದ ಕುರಿತು ಒಂದಿಷ್ಟು ಬರ್ಕೊಂಡೇ ಮುಂದಕ್ಕೋಗ್ತೀನಿ.. ನಿಮಗೆ ಬೇಸರ ಬರಬಾರದು ನನ್ನ ಮಾತಿಂದ ಇಲ್ಲ ತುಂಬಾ ದಿನ ಇತ್ತ ತಲೆಹಾಕದೇ ಉಳಿದುಬಿಡೋ ಮೌನದಿಂದ...  "ಮಾತು ಬೆಳ್ಳಿ ಮೌನ ಬಂಗಾರ" ಅಂತ ಹಿರಿಯರು ಹೇಳಿದ್ದು ನಿಜ. ಮಾತು ತಿಕ್ಕಿದ ಹಾಗೆ ಹೊಳೆಯತ್ತೆ. ಕಲಿತರೆ ಬೆಳೆಯತ್ತೆ ಮುತ್ತಂತ ಮಾತು ಎಷ್ಟೋ ಮನಸುಗಳ ತಣಿಸತ್ತೆ. ಮನೆಗಳ ಮನಸುಗಳ ಬೆಸೆಯತ್ತೆ. ಮಿತವಿದ್ದರೆ ಮಾತಂದ. ಅದಕ್ಕಿಂತ ಮಾತು ಹಿತವಿದ್ದರೆ ಚಂದ.ಮನಸ್ಸಿನ ಮಾತುಗಳಿಗೆ ದನಿಯಾಗಲಾರದೇ ಅಳಿಸಿಹೋಗುವ ಪ್ರೀತಿಗಳೂ ಇಲ್ಲದಿಲ್ಲ. ಹಾಗಿದ್ದರೆ ಮಾತಂದೋ ಎಲ್ಲಕ್ಕೂ ಮೂಲವಾ? ಜಗಳಕ್ಕೆ ಮೂಲವೂ ಮಾತೇ..ಹಾಗಂತ ಮಾತನಾಡದೇ ಇದ್ದುಬಿಡಲಾದೀತಾ?
        ಮಾತಾಗಲೀ ಮೌನವಾಗಲೀ ಅಗತ್ಯಬಿದ್ದಾಗ ಅಗತ್ಯ ಇರೋವಷ್ಟು ಆಡಿದ್ರೆ ಎಲ್ಲರಿಗೂ ಹಿತ. ಅಗತ್ಯಕ್ಕಿಂತ ಹೆಚ್ಚಾದರೆ ಏನಿದ್ದರೂ ವಿಷವೇ..ಅಗತ್ಯವಿದ್ದಾಗ ಮಾತಾಡದೇ ಮೌನ ನನ್ನ ದಿವ್ಯ ಸಾಧನವೆಂದು ಕುಳಿತುಕೊಳ್ಳುವುದೂ, ಮನೆಗೆ ಬೆಂಕಿಬಿದ್ದಾಗ ಧ್ಯಾನಕ್ಕೆ ತೊಡಗಿದ್ದೇನೆ ಅನ್ನೋದು ಒಂದೇ ಸಮ.ಇನ್ನು ಕೆಲವರದ್ದು ಹೀಗೆ... ನಿಮಗೂ ಅನುಭವವಿರಬಹುದು. ನಮ್ಮ ತೀರಾ ಆತ್ಮೀಯರಲ್ಲಿ ನಮಗೆ ನಂಬಿಕೆ ಇದೆ ಅನ್ನೋ ಕಾರಣಕ್ಕೆ ಹೇಗೂ ಬಿಡಿಸಲಾರದ ಬಂಧ ಅನ್ನೋ ಕಾರಣಕ್ಕೆ ಮನಸಿಗೆ ಬಂದಂತೆ ಮಾತನಾಡುವುದು. ಅದರ ಪರಿಣಾಮ ಯೋಚಿಸ್ತಾ ಕೂರೋದಿಲ್ಲ ನಾವು. ಯಾಕಂದ್ರೆ ಅವರು ನಮ್ಮವರು. ಆಮೇಲೆ ಒಂದು ಕ್ಷಮೆ ಕೇಳೋದಕ್ಕೂ ಬೇಜಾರಿಲ್ಲ ನಮಗೆ. ಹಾಗಿದ್ರೆ ಮಾತಾಡಿದರೂ ತಪ್ಪು. ಆಡದಿದ್ದರೂ ತಪ್ಪು.. ಏನು ಮಾಡ್ಬೇಕು ನಾವು?
     ಇದಕ್ಕೆ ಉತ್ತರ ನಾನಂತೂ ಹೇಳೋದಿಲ್ಲ. ನನಗೆ ಗೊತ್ತಿಲ್ಲ. ಎಲ್ಲರಿಗೂ ಅವರವರಿಗೆ ತೋಚಿದಂತೆ ಇರುತ್ತಾರೆ. ಬದುಕುತ್ತಾರೆ. ಮಾತಾಡುತ್ತಾರೆ. ನಾನೂ ಹೀಗೇ..ಒಂದಿಷ್ಟು ತೋಚಿದಂತೆ ಹೇಳಿ ಹೋಗೋಕೆ ಬಂದಿರೋದು. ಪರಿಸ್ಥಿತಿಗೆ ಅನುಗುಣವಾಗಿ ಅಗತ್ಯಗಳಿಗೆ, ಜವಾನ್ದಾರಿಗಳಿಗೆ ಅನುಗುಣವಾಗಿ ನಡೆದುಕೊಂಡಷ್ಟೇ ಮಾತನಾಡುವುದೂ ಮುಖ್ಯ. ಮಾತಿಂದ ಪರಿಹರಿಸಲಾಗದ್ದು ಅನಿಸಿದಾಗ ಮೌನ ಹಿತವೇ... ಆದರೆ ಮಾತಿನ ಜವಾಬ್ಧಾರಿ ಅತ್ಯಂತ ದೊಡ್ಡದು. ಮೌನ ಒಂದು ಸಂಪೂರ್ಣವೂ ಹೌದು.ನಿವರ್ಾಣ, ನಿಶ್ಯೇಶವೂ ಹೌದು. ಮೌನಕ್ಕೆ ಮನ ಬಂದಷ್ಟು ಅರ್ಥಗಳಿವೆ. ಆದರೆ ಮಾತಾಡಿದ ಮೇಲೆ ಅದು ಕೊಡುವ ಅರ್ಥ ಸಂದರ್ಭಸಹಿತವೇ ಆಗಿರುತ್ತದೆ. ಅದರ ಏಳು ಬೀಳುಗಳಿಗೆ ಆಡಿದವರು ಜವಾಬ್ಧಾರಿ ಹೊರಬೇಕಾಗುತ್ತದೆ. ಮೌನ ಹಾಗಲ್ಲ....

       ಮೌನದಲ್ಲಿ ಏನಿಲ್ಲ? ಯೋಚಿಸಿ... ಸುಮ್ಮನಿದ್ದು ಬಿಡುವುದು ತುಂಬಾ ಒಳ್ಳೆಯ ಲಕ್ಷಣ. ಆದರೆ ಅದೆಂದೂ ಪೊಸಿಟಿವ್ ಆಗೇ ಇರತ್ತೆ ಅಂತೇನೂ ಇಲ್ಲ.ಬಿದ್ದ ಮಗುವಿಗೆ ನಿಮ್ಮ  ಮೌನ ಪ್ರೀತಿಯನ್ನು ಹೇಳುವುದಿಲ್ಲ. ಮೌನದಲ್ಲೂ ಪ್ರೀತಿಸಲು ಅಂತಹ ಮನಸ್ಸನ್ನ ವ್ಯಕ್ತವಾಗಿಸುವ ಕಾರ್ಯಶುದ್ಧಿ ಬೇಕು.  ಕ್ರಿಯೆಯಲ್ಲಿ ವ್ಯಕ್ತವಾಗದ ಪ್ರೀತಿ ಮಾತಿನಲ್ಲಿ ಎಷ್ಟು ವ್ಯಕ್ತವಾದರೂ ಅದು ಅಸಹಜವಲ್ಲವೇ? ಹಾಗಿದ್ದರೆ ಮಾತು ಹೆಚ್ಚು ಮೌನ ಹೆಚ್ಚು ಎಂದು ನೀವು ನಿರ್ಧರಿಸುವುದಾದರೂ ಹೇಗೆ?
ಹಿತವಾದ ಮಾತು, ಹಿತವಾದ ಮೌನ ಎರಡೂ ಸುಂದರವೇ.. ಒಂದು ಅಸೀಮ ಧ್ಯಾನಕ್ಕೆ, ಆನಂದದ ರಾಗಕ್ಕೆ ಅದ್ಭುತ ಏಕಾಂತಕ್ಕೆ, ಆತ್ಮದರ್ಶನಕ್ಕೆ ಭಗವ್ಭಕ್ತಿಗೆ ಅನಂತಾನಂತ ಪ್ರಕೃತಿಯ ವಿಕಾಸಕ್ಕೆ ಮೌನ ಅದ್ಭುತ ಸಂಗಾತಿ... ಹಾಗೇ ಒಂದು ಬದುಕಿಗೆ, ಮಾನವೀಯತೆ ನೆಲೆಗೆ, ಸಾಮಾಜಿಕ ಚಿಂತನೆಗೆ, ವಿಚಾರವಿನಿಮಯಕ್ಕೆ, ಭಾವಗಳ ಅಭಿವ್ಯಕ್ತಿಗೆ,
ಜಗತ್ತಿನ ಜೊತೆ ಸಂಪರ್ಕಕ್ಕೆ ಮಾತೇ ಬೇಕು. ಮತ್ತದು ಶ್ರೇಷ್ಠ ಮಾಧ್ಯಮ ಕೂಡ. ಕೆಟ್ಟ ಮಾತನಾಡುವವರ ಇಲ್ಲಿ ಗಮನಿಸುವುದು ಬೇಡ. ಒಳ್ಳೆಯ ಮಾತಿನ ಅಗತ್ಯ ಮನುಷ್ಯರಿಗಿದೆ. ಮನಸುಗಳಿಗಿದೆ. ಹಾಗೇ ಮಾತು ಮಾತು ಅಂತ ಇನ್ನೂ ಆಡಿದ್ರೆ ನೀವೆಲ್ಲ ಎದ್ದು ಓಡಿ ಬಿಡ್ತೀರ. ಸಾಕಿಷ್ಟು ಮೊದಲಮಾತಿಗೆ ವಿರಾಮದೊಂದಿಗೆ ನಿರಂತರ
ನಿಮ್ಮ ಜೊತೆ.........