ಮನಸಿನ ಹರಿಯುವಿಕೆಗೆ ಆನಂದಕ್ಕೆ ಪೃಕೃತಿಯಿದೆ. ಹಿಮ ಸುರಿಯುವ ಮುಂಜಾನೆಗಳಿವೆ. ಅದ್ಭುತ ಸೂರ್ಯಾಸ್ತಗಳಿವೆ. ಸಮುದ್ರವಿದೆ. ತಂಗಾಳಿಯಿದೆ. ಬೆಳದಿಂಗಳ ರಾತ್ರಿಗಳಿವೆ.. ಕತ್ತಲೆಯ ಮೈತ್ರಿಯಿದೆ. ಎಲ್ಲಾ ಇದೆ. ಆನಂದಿಸುವ ಮನಸೂ ಇದೆ. ಆದರೆ ಮನುಷ್ಯ ಬಯಸೋದು ತನ್ನ ನೋವು ನಲಿವುಗಳಿಗೆಲ್ಲ ಹಂಚಿಕೊಳ್ಳುವ ಇನ್ನೊಂದು ಮನಸಿನ ಆಸರೆಯನ್ನ... ಮನುಷ್ಯನ ಭಾವಗಳಿಗೆ ಮತ್ತೊಂದು ಮನಸಿನ ಆಸರೆಯ ಹುಚ್ಚು.... ಇದೂ ಸಹ ಅಂತದ್ದೇ ಒಂದು ಹುಚ್ಚು... ವಿಚಾರ ಭಾವಗಳಿಗೆಲ್ಲ ಅಕ್ಷರ ಕೊಡುವ ಹುಚ್ಚು... ಖಾಲಿಯಾಗುವ ಕನಸು.... ಅಂತದ್ದೊಂದುಯಾನದಲ್ಲಿ ನಿಮ್ಮ ಜೊತೆ.......







Monday, November 4, 2013

ಮುತ್ತು ಮತ್ತು ಕವನ.

ಮುತ್ತು ಮತ್ತು ಕವನ.

 ಜೀವಸಂಚಲನದ
ಮೈತ್ರಿಯಲ್ಲಿ ಮೊರೆಯಾಗುತ್ತಿದೆ
 ಇದೋ ಕೇಳು
ಭಾವದೊಸಗೆಯ ಈ ಪ್ರೇಮ
 ಒಲವೆಂಬುದು ಮಾತು ಮಾತಿನ
ನಡುವೆ  ಕಟ್ಟಿಕೊಟ್ಟ
ನೆನಪಿನ ಬುತ್ತಿ!

 ಮೆಲ್ಲುವ ಮನಸಿನ
ಮೆಲುಕಾಗುವ
ಕನಸಿನ ಚೆಲುವ
 ಅಂತಃಕರಣಕ್ಕೆ
ಧ್ವನಿ ಪೂರ್ಣ ಹಗಲು
ಈ ಬೆಳಕಾಗಲಿ.


 ಕಡಲು ಕರೆಯುವ
ಅಲೆಯ ಮೊರೆತವ
ಎಲ್ಲೋ ಜತನದಿ ಕಾಪಿಡು
 ಕಪ್ಪೆ ಚಿಪ್ಪಿನ ಒಳಗೆ
ಸ್ವಾತಿ ಹನಿ
 ಮುತ್ತಾಗಲು ಕಾಯ್ದಿರು..

 ಕವಿತೆ ನನ್ನೊಳಗಲ್ಲ,
 ನಾನು ಕವಿತೆಯೊಳಗೆ
 ಅರಿಯದೇ ಉಳಿದುಬಿಡಲಿ
ಮೂಡಿಬರಲಿ
ಮುತ್ತು ಮತ್ತು ಕವನ.

Friday, November 1, 2013

ನಾಡಹಬ್ಬಕ್ಕೊಂದು ಚಿಂತನೆ.

ನಾಡದೇವಿಯ ಗುಡಿಯ ಮುಂಗಡೆ ಹಾಡುತಿರುವುದು ಕೋಗಿಲೆ

ಕಾಳಕತ್ತಲೆ ಕಳೆದು ಬೆಳಗಿನ ಕೋಳಿ ಕೂಗಿತು ಆಗಲೇ.     

       ನಮ್ಮ ನಾಡದೇವಿಯ ಮುಂದೆ ಕೋಗಿಲೆ ಹಾಡುತ್ತಿದೆ. ಆದರೆ ಅದರ ದನಿಯ ಇಂಪು ತಾಯಿಯ ಕಿವಿಯನ್ನು ತಲುಪಲು ನಾವು ಬಿಡುತ್ತಿಲ್ಲ ಮುಂಜಾನೆಯಿಂದ ಸಂಜೆಯವರೆಗೂ ಕರ್ಕಶದನಿ ಯಿಂದಲೇ ತುಂಬಿದೆ ಇಂದು ನಾಡದೇವಿಯ ಮಡಿಲು. ಅಬ್ಬರದ ಸ್ಟೀರಿಯೋಗಳ ಗಬ್ಬು ಹಾಡುಗಳಲ್ಲಿ ಕನ್ನಡ, ಕನ್ನಡ ಅಂತ ನವೆಂಬರ್ ತಿಂಗಳಿಡೀ ಕೂಗಿದರೆ ಮುಗಿದು ಹೋಯಿತೆ ನಾಡಹಬ್ಬ? ಈ ಪರಿಯ ಹಬ್ಬ ದೇವಿಯ ಮುಂಗಡೆ ಬೆಳ್ಳನೆಯ ಮುಂಜಾನೆಯ ಬೆಳಕಿನ ಕಿರಣಗಳ ತಂಪು ಬೆಳ್ಳಗೆಯನ್ನು ತರಬಲ್ಲದೆ? ನಾಡದೇವಿ ಈ ಶ್ರೀ ಗಂಧದ ನಾಡಿನಲ್ಲಿ, ಸಹ್ಯಾದ್ರಿಯ ಸಾಲಿನಲ್ಲಿ ಕರಾವಳಿಯ ಅಲೆಗಳಲ್ಲಿ ಬಯಲ ಹಸಿರಿನ ಸೆರಗಿನಲ್ಲಿ ಮೈ ದುಂಬಿ ನಲಿವಂತಾಗದೇ ಅವಳ ಹಬ್ಬ ಆಚರಿಸಿ ಏನು ಪ್ರಯೋಜನ? ನದಿಗಳನ್ನೆಲ್ಲ ಬರಿದಾಗಿಸಿ, ಕಾಡುಗಳನ್ನೆಲ್ಲ ನೆಲ ಸಮವಾಗಿಸಿ, ರೈತನ ಆತ್ಮಹತ್ಯೆಗಿಳಿಸಿ, ನಾಡ ಕಟ್ಟ ಹೊರಟಿರುವ ನಾವು. ಈ ಮಣ್ಣಿನ ಮಕ್ಕಳು! ಬೆಂಗಳೂರು, ಮತ್ತು ಕಂಪ್ಯೂಟರ್ ನಮಗೆ ಕಾಣುವ ಅದ್ಭುತ ವಿಶ್ವ. ನಿಜವೇ, ಆದರೆ ತಿನ್ನುವ ಅನ್ನ ಕಂಪ್ಯೂಟರ್ ಬೆಳೆಯಲಾರದಲ್ಲ! ಯಾವ ಉದ್ಯಮಗಳು ರಾಜ್ಯದ ಉನ್ನತಿಗೆ ಪೂರಕವೋ ಅವು ರಾಜ್ಯದ ಪರಿಸರಕ್ಕೆ ಜನರ ಬದುಕಿಗೆ, ಈ ಮಣ್ಣಿಗೆ ಮಾರಕವಾಗಬಾರದಲ್ಲ? ಉದಾಹರಣೆಗೆ ನಾಗಾರ್ಜುನ ಮತ್ತು ತದಡಿ ಉ? ಸ್ಥಾವರಗಳು, ಗಣಿಗಾರಿಕೆಯಿಂದ ತತ್ತರಿಸಿದ ಬಳ್ಳಾರಿಯ ಮಡಿಲು! ಹೇಳುತ್ತ ಹೋದರೆ ಪ್ರತೀ ಜಿಲ್ಲೆಗೂ ಒಂದೊಂದು ಮಾರಕ ಯೋಜನೆಗಳು. ಅಭಿವೃದ್ಧಿಯ ಕನಸು ಯಾರಿಗೆ ಮತ್ತು ಪರಿಸರ, ಜನರ ಕಂಬನಿ ಯಾರಿಗೆ ಅನ್ನುವ ಗುಟ್ಟು ಮಾತ್ರ ಇಂದಿಗೂ ಅರಿವಾಗದ ಪ್ರಶ್ನೆ! ನಮ್ಮ ಉತ್ತರ ಕನ್ನಡವನ್ನೇ ತೆಗೆದುಕೊಂಡರೆ ಇಲ್ಲಿ ದೇಶದ ನಾನಾ ಯೋಜನೆಗಳು ಬಂದು ತಳವೂರಿವೆ. ವಿದ್ಯುತ್ ಸ್ಥಾವರಗಳಿವೆ. ಕರಾವಳಿಯ ಸಂಪದ್ಭರಿತ ತೀರಗಳಿವೆ. ಸಹ್ಯಾದ್ರಿಯ ಸೆರಗಿದೆ. ಮಲೆನಾಡಿನ ಮಡಿಲಿದೆ, ನದಿಗಳಿವೆ, ಕಾಡಿದೆ. ಆದರೆ ಇಲ್ಲಿಯ ಜನ ಮಾತ್ರ ಕರೆಂಟ್‌ಗೆ ಪರದಾಡುತ್ತಾರೆ. ರಸ್ತೆ, ಹೊಂಡಗಳಲ್ಲಿ ಪ್ರತೀದಿನ ಸಾಯುತ್ತಾರೆ. ಬೆಳೆಗಾರ ಬೆಳೆಗಳಿಗೆ ಮಾರುಕಟ್ಟೆಯಿಲ್ಲದೇ ಆತ್ಮಹತ್ಯೆಗಿಳಿಯುತ್ತಾನೆ. ಮೀನುಗಾರ ದಿನಗೂಲಿಯಿಂದ ಮೇಲೇಳಲಾರ. ಯಾವುದು ಅಭಿವೃದ್ಧಿ? ಯಾವುದು ನಾಡದೊರೆಗಳ ಕನಸು? ಯಾವುದು ಕರ್ನಾಟಕದ ಗುರಿ? ಒಂದು ಜಿಲ್ಲೆಯ, ಸಂಪದ್ಭರಿತ ಮುಂದುವರೆದ ಜಿಲ್ಲೆಯ ಸ್ಥಿತಿಯೇ ಇದಾದರೆ ಈ ನಾಡಿನ ಉಳಿದ ಜಿಲ್ಲೆಗಳ ಪಾಡೇನಿರಬಹುದು? ದೋಚುವುದಕ್ಕೆ ಇದೆಯೆಂದು ಬೇಕಾಬಿಟ್ಟಿ ದೋಚಿದರೆ ಪ್ರಕೃತಿ ಮುನಿಯದಿರು ತ್ತಾಳೆಯೇ? ಇದೆಲ್ಲ ಮೌನವಾಗಿ ಸಹಿಸುವ ನಾವು ನಾಡಿನ ಕುರಿತಾದ ಉದ್ದುದ್ದ ಭಾಷಣ ಮಾಡಿ ರಾಜ್ಯೋತ್ಸವ ಆಚರಿಸಿದರೆ ಅದಕ್ಕೆ ಅರ್ಥವಿದೆಯೇ? ಕನ್ನಡದ ಮನಸಿಲ್ಲದವ, ಕರ್ನಾಟಕದ ಹೃದಯವಿಲ್ಲದವ ಗತವೈಭವವ ಕೊಂಡಾಡಿ ಏನು ಪ್ರಯೋಜನ? ಈ ಕತ್ತಲೆಯ ಪರಿಣಾಮವೇ ಮಲೆನಾಡಿನ ಸೆರಗಿನಲ್ಲಿ ಬುಗಿಲೆದ್ದ ನಕ್ಸಲೈಟ್. ಯಾವ ಕಾಡಿನಲ್ಲಿ ಪ್ರಾಣಿಗಳೂ, ಮನುಷ್ಯರೂ ಸೌಹಾರ್ದಯುತರಾಗಿ ತಲೆತಲಾಂತರದಿಂದ ಬಾಳುತ್ತ ಬಂದಿದ್ದಾರೋ. ಅಲ್ಲೀಗ ಮನುಷ್ಯರು ಮನುಷ್ಯರ ಭಯದಿಂದ ಬದುಕಬೇಕಾಗಿದೆ! ಕೇವಲ ಯೋಜನೆಗಳ ಮಾಡಿದರೆ ಖಂಡಿತ ರಾಜ್ಯ, ಉದ್ಧಾರ ವಾಗುವುದಿಲ್ಲ. ಅದರ ಪರಿಣಾಮಗಳ ಯೋಚಿಸ ದಿದ್ದಲ್ಲಿ ಅದು ರಾಜ್ಯಕ್ಕೆ ಮತ್ತಷ್ಟು ಮಾರಕವಾಗುತ್ತದೆ.
     ನಾಡದೇವಿಯ ಕುರಿತಾದ ಹಾಡುಗಳು ಕೇವಲ ಸಿ.ಡಿ ಕ್ಯಾಸೆಟ್‌ಗಳಲ್ಲಿ ಮಾತ್ರ ಉಳಿದು ಹೋದರೆ ಸಾಕೆ? ನಮ್ಮ ತಾಯಿಯ ಅಮೃತಭಾಷೆ ನಮಗೆ ಮರೆಯುತ್ತಿದೆಯೇ? ಕೇಳಬೇಕಾದದ್ದು ಯಾರನ್ನೋ ಅಲ್ಲ. ನಮ್ಮ ನಮ್ಮ ಮನಸ್ಸನ್ನ. ಆ ಕುರಿತು ಕ್ಷಣ ಯೋಚಿಸಿದರೂ ಸಾಕು ಅದು ನಾಡದೇವಿಗೆ ನಮ್ಮ ನಮನವಾಗುತ್ತದೆ. ಅಂತಹ ಸಂಕಲ್ಪ ನಾವು ಮಾಡೋಣ. ಈ ನಾಡು, ನೆಲ, ನುಡಿ, ನಮ್ಮದು, ನಮಗಾಗಿರುವುದು. ಅದನ್ನ ಉಳಿಸಲು ನಮ್ಮ ಕೈಲಾದ ಪ್ರಯತ್ನ ಮಾಡೋಣ. ನಮ್ಮ ನಲ್ನುಡಿ ಕನ್ನಡ ಮಾತ್ರ ಎಲ್ಲಿ ಹೋದರೂ ಮರೆಯದಿರೋಣ.

Friday, September 27, 2013

  

ನಮಸ್ತೆ..


   ಈ ಬರಹ ಯಾರದ್ದಾದರೂ ಮನಸಿಗೆ ಸ್ವಲ್ಪ ನಾಟಿದಲ್ಲಿ ನೋವಿಗೆ ದಯವಿಟ್ಟು ಕ್ಷಮೆಯಿರಲಿ. ಆ ನೋವು ಇನ್ನಷ್ಟು ಒಳ್ಳೆಯದನ್ನು ಸೃಷ್ಟಿಸಲಿ ಎಂಬ  ಆಶಾವಾದದೊಂದಿಗೆ..

            ಎಲ್ಲಿ ನೋಡಿದರಲ್ಲಿ ಅಂತರ್ಜಾಲದ ತುಂಬ  ಪತ್ರಿಕೆಗಳು, ಟಿ.ವಿ ಅಷ್ಟೇ ಅಲ್ಲ ಸುಮ್ ಸುಮ್ನೆ ಹರಟುವ ಸಂಜೆಕಟ್ಟೆಗಳಲ್ಲಿ ಸಹ ಇಂದು ಚರ್ಚೆಯಾಗುತ್ತಿರುವ ವಿಷಯ ಮೋದಿ ಹಾಗೂ ನಮೋ ಇಂಡಿಯಾದಂತ  ಬಹು ಚರ್ಚಿತ ವಿಷಯಗಳು.  ಚರ್ಚೆಯಾಗಬೇಕಾದದ್ದು ಆಗುತ್ತಿರುವುದು ಹಾಗೂ  ಇನ್ನಷ್ಟು ತೀವ್ರಗೊಂಡು ಒಂದು ಸದಾಶಯದ ಅಲೆ ಏಳಬೇಕಾದ ಅಗತ್ಯ ಇಂದು ಹಿಂದೆಂದಿಗಿಂತಲೂ ಅವಶ್ಯಕವಿದೆ. ದೇಶದ ಭವಿಷ್ಯಕ್ಕೆ  ದೇಶ ಉಳಿಯಲು ಮೋದಿಯಂತ ನಿರ್ಭಿಡೆಯ  ಕನಸುಗಾರನ ಅಗತ್ಯ ದೇಶಕ್ಕೆ ಖಂಡಿತ ಇದೆ.  ಆದರೆ ಅವರನ್ನು ಆರಿಸಿ ತರುವ ಜವಾಬ್ಧಾರಿ ಇರುವುದು ನಾಗರಿಕರ ಮೇಲೆಯೇ.  ಎಲ್ಲ ವಿದ್ಯಾವಂತರ ಮೇಲೆ ಇಂದು ಅತಿ ಹೆಚ್ಚಿನ ಜವಾಬ್ಧಾರಿಯಿದೆ. ಜಾತಿ ಮತ ಪಂಥಗಳ ಹೊರತಾಗಿ ದೇಶ ಮುಖ್ಯವೆನ್ನಿಸುವ ಅಥವಾ ದೇಶಕ್ಕಾಗಿ ಚಿಂತಿಸಬಲ್ಲ ಪ್ರತಿಯೊಬ್ಬನೂ ಈ ಬಗ್ಗೆ ಚಿಂತಿಸುವ ಅಗತ್ಯ, ಅನಿವಾರ್ಯತೆಯಿದೆ. ದೇಶ ಉಳಿದರೆ ಮಾತ್ರ
ನಾವು ಜಾತಿಯ ಮತ ಧರ್ಮಗಳ ಕುರಿತು  ಚರ್ಚೆ ಮಾಡಬಹುದು. ಯಾವ ಮಾಂಸ ಯಾರು ತಿನ್ನುತ್ತಾರೆ, ಎಷ್ಟು ಎಂಬುದು ಲೆಕ್ಕ ಹಾಕಬಹುದು.  ಅನಂತ ಮೂರ್ತಿಯಂತ ಸಾಹಿತಿಗಳು ದೇಶವನ್ನೇ ಬಿಡುವ ಮಾತನಾಡಬಹುದು. ಆದರೆ ಜನಸಾಮಾನ್ಯ ಬದುಕಲು, ದೇಶದ ಆರ್ಥಿಕ ಸಾಮಾಜಿಕ ಪ್ರಗತಿಗೆ, ಕುಸಿಯುತ್ತಿರುವ ರೂಪಾಯಿಯ ಮೌಲ್ಯ ಉಳಿಸಲು, ರೈತನ ಬದುಕಿಗೆ ಬೆಳೆಗೆ ನೆಮ್ಮದಿ ಕಾಣಲು, ಈ ದೇಶದ ಗಡಿಗಳಲ್ಲಿ ರಕ್ತ ಹರಿಸುತ್ತಿರುವ  ಸೈನಿಕರ ಪ್ರಾಣದ ಬೆಲೆ ಅರಿಯಲು, ಅವರಲ್ಲಿ ಉತ್ಸಾಹ, ಶೌರ್ಯ ತುಂಬಲು, ನಾಡಿನ ಮನೆ ಮನಸುಗಳಲ್ಲಿ ಚೈತನ್ಯ ತುಂಬುವಂತ ಧೀರೋಧಾತ್ತ ನಾಯಕರ ಅವಶ್ಯಕತೆ ಇಂದು ಇದೆ. ಅಂತಹ  ಎಲ್ಲ ಗುಣಗಳು ಕಾಣುತ್ತಿರುವುದು ಯುವ ಜನರ ಆಶಾವಾದ ಆಗಿರುವ ನರೇಂದ್ರ ಮೋದಿ ಅವರಲ್ಲಿ.

  ನನಗೆ ಬೇಸರವಿರುವುದು ಇಲ್ಲಿಯೇ. ಇಂದು ಚರ್ಚೆಯಾಗುತ್ತಿರುವ ಎಲ್ಲ ಮಾಧ್ಯಮಗಳು ವಿದ್ಯಾವಂತರು ಬೆಂಬಲ ಕೊಡುತ್ತಿರುವ ತಂತ್ರಜ್ಞಾನದ ಈ ಪ್ರಪಂಚದ ಎಷ್ಟು ಜನ ವೋಟಿಂಗ್ ಮಾಡುತ್ತಾರೆಂಬುದು? ನಮ್ಮಲ್ಲಿ ಚುನಾವಣೆಯ ವೇಳೆಗೆ ವೋಟಿಂಗ್ ನ ಪ್ರಮಾಣ ಅವಿದ್ಯಾವಂತರು, ಅನಕ್ಷರಸ್ಥರು ಇರುವ ಪ್ರದೇಶಗಳಲ್ಲಿ ಮಾತ್ರ. ನಗರ ಪ್ರದೇಶಗಳಲ್ಲೇ  ವೋಟಿಂಗ್ ಮಾಡದೇ ಮನೆಯಲ್ಲಿರುವ  ಬಹಳಷ್ಟು ಯುವ ಜನತೆಯನ್ನು ಕಳೆದ ಹಲವು ಚುನಾವಣೆಗಳಲ್ಲಿ ಕಂಡಿದ್ದೇವೆ. ಈ ಬಾರಿಯೂ ಇಲ್ಲಿ ಎಷ್ಟೇ ಸಮರ್ಥಿಸಿಕೊಂಡರೂ ಚುನಾವಣೆಯ ವೋಟಿಂಗ್ ಮಾತ್ರ ನಿಜವಾದ ದೇಶದ ಭವಿಷ್ಯಕ್ಕೆ ಸಮರ್ಥನೆಯಾಗುವುದು ಎಂಬುದನ್ನು ಅನಿವಾರ್ಯ ಹೇಳಲೇ ಬೇಕಾಗಿದೆ. ಒಬ್ಬ ವಿದ್ಯಾವಂತ ನಾಗರಿಕ ಚುನಾವಣೆಗಾಗಿ ವೋಟಿಂಗ್ ನಡೆಸಲು ಊರಿಗೆ ಮರಳುತ್ತಿದ್ದಾನೆಂದರೆ ಮನೆಯಲ್ಲಿ ಹಳ್ಳಿಯಲ್ಲಿರುವ ಎಷ್ಟೋ ಜನರಿಗೆ ದೇಶದ ಇಂದಿನ ಸ್ಥಿತಿಗತಿಗಳ ತಿಳಿಸಿ ಹೇಳಬಹುದು. ದೇಶಕ್ಕೆ ಯಾಕೆ  ಮೋದಿಯಂತ ಆಶಾವಾದಿ ನಾಯಕನ ಅಗತ್ಯವಿದೆ ಎಂಬುದನ್ನು ಊರು ತುಂಬ ಆಗದಿದ್ದರೆ ಮನೆಯಲ್ಲಾದರೂ ಹೇಳಬಹುದು. ಯಾರ ಮೇಲೂ ಒತ್ತಡ ಹೇರಬೇಕಾದ ಅವಶ್ಯಕತೆಯಿಲ್ಲ. ಯಾರನ್ನೂ ಪ್ರಚೋದಿಸಿ ಗಲಾಟೆ ಮಾಡಬೇಕಾದ ಅಗತ್ಯವಿಲ್ಲ. ಕೇವಲ ದೇಶದ ಇಂದಿನ ಸತ್ಯಾಸತ್ಯತೆಗಳ ಅರ್ಥೈಸಿದರೆ ಸಾಕು. ಕೆಲವರಾದರೂ ದುಡ್ಡಿಗೆ ಓಟು ಕೊಂಡುಕೊಳ್ಳುವವರ ಬಲೆಗೆ ಬೀಳುವುದು ತಪ್ಪುತ್ತದೆ.  ಯಾರೋ ಒಬ್ಬ ಭಾಷಣಕಾರನ ಮಾತಿಗಿಂತ, ಯಾರೋ ಒಬ್ಬ ತೋರಿಸೋ ನೂರರ ನೋಟುಗಳಿಗಿಂತ ಮನೆ ಮಕ್ಕಳ ವಿದ್ಯಾವಂತರ ಮೇಲೆ ನಮ್ಮ ಹಳ್ಳಿಗಳ ಅವಿದ್ಯಾವಂತ ಮುಗ್ಧ ಜನ ಹೆಚ್ಚು ಭರವಸೆಯನ್ನು ಇಡಬಲ್ಲರೆಂದು ನನಗನ್ನಿಸುತ್ತದೆ. 

   ನಾನು ಚುನಾವಣಾ ಪ್ರಚಾರಮಾಡಿ ಎನ್ನುತ್ತಿಲ್ಲ. ಇದ್ದ ಕೆಲಸ ಬಿಟ್ಟು ಭಾಷಣ ಮಾಡಿ ಹೇಳುತ್ತಿಲ್ಲ. ವಿದ್ಯಾವಂತ ನಾಗರಿಕರೇ ದಯವಿಟ್ಟು ಓಟಿಂಗ್ ನಲ್ಲಿ  ಪಾಲ್ಗೊಳ್ಳಿ. ದೇಶಕ್ಕೆ ನಿಮ್ಮ ಅಗತ್ಯ ಹಿಂದೆಂದಿಗಿಂತಲೂ ಹೆಚ್ಚಿದೆ ಇಂದು. ಅರ್ಥಮಾಡಿಕೊಳ್ಳಿ ಎನ್ನುತ್ತಿದ್ದೇನೆ.ಯಾವ ಪಕ್ಷಕ್ಕೆ  ಓಟು ಎಂಬುದು ನೀವೇ ನಿರ್ಧರಿಸಿ. ಆದರೆ ವೋಟಿಂಗ್ ನಂತ ದೇಶದ ಬಹುಮುಖ್ಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪಾಲ್ಗೊಳ್ಳಿ. ಇದು ಕೂಡ ನಮ್ಮೆಲ್ಲರ ಕರ್ತವ್ಯವಾಗಿದೆ. ಒಂದುವೇಳೆ ನ್ಯಾಯಕ್ಕೆ ದೇಶದ ಹಿತಕ್ಕೆ  ಇಂದಿನ ರಾಜಕೀಯವ್ಯವಸ್ಥೆಯಲ್ಲಿ ಧಕ್ಕೆಯಾಗುತ್ತಿದೆ ಅಂತಾದರೆ ವೋಟ್ ಮಾಡಿ ರಾಜಕಾರಣಿಗಳನ್ನು ಗೆಲ್ಲಿಸಿದವರಷ್ಟೇ ವೋಟಿಂಗ್ ನಲ್ಲಿ ಪಾಲ್ಗೊಳ್ಳದೆ ಇರುವವರು ಕೂಡ ಕಾರಣವಾಗಿದ್ದಾರೆ. ಇದು ದೇಶದ ಅಳಿವು ಉಳಿವಿನ ನಿರ್ಧರಿತ ಪ್ರಶ್ನೆ. ಒಂದುವೇಳೆ ಇಂದು  ವೋಟಿಂಗ್ ನಲ್ಲಿ ಪಾಲ್ಗೊಳ್ಳದಿರುವ ಯಾವ ವ್ಯಕ್ತಿಗೂ ನಾಳೆ ರಾಜಕಾರಣಿಗಳನ್ನು ದೂರುವ ದೇಶದ ವ್ಯವಸ್ಥೆಯನ್ನು ಮಾತನಾಡುವ ಅಧಿಕಾರ ಇರುವುದಿಲ್ಲ ಅಲ್ಲವೇ?

     
 ಫೇಸ್ ಬುಕ್ ನಲ್ಲಿ ಲೈಕ್ ಗಳನ್ನು ಒತ್ತಿದಾಕ್ಷಣ  ಅಥವಾ ಸ್ನೇಹಿತರ ಅಡ್ಡದಲ್ಲಿ ಚರ್ಚೆಗಿಳಿದಾಕ್ಷಣ ನಮ್ಮ ಕರ್ತವ್ಯಗಳು ಮುಗಿಯುವುದಿಲ್ಲ. ವಿಚಾರಗಳನ್ನು ಹಂಚಿಕೊಳ್ಳುವಷ್ಟೇ ಮುಖ್ಯವಾದ್ದದ್ದು ಕಾರ್ಯಗೊಳಿಸುವ ಕೆಲಸ. ದೇಶಕ್ಕೆ ಭವಿಷ್ಯವಿಲ್ಲ ಎಂದುಕೊಳ್ಳುವ ಪ್ರತಿಯೊಬ್ಬ ನಾಗರಿಕನೂ ದೇಶಕ್ಕೋಸ್ಕರ ಮತದಾನ ಮಾಡಿದಾಗ ಮಾತ್ರ ದೇಶಕ್ಕೊಂದು ಸದೃಡ ರಾಜಕೀಯ ವ್ಯವಸ್ಥೆ ನಿರ್ಮಾಣವಾಗಬಹುದು. ನನ್ನೊಬ್ಬನದೇನು ಅಂದುಕೊಳ್ಳುವ ಪ್ರತಿಯೊಬ್ಬನೂ  ಈ ದೇಶದ ರಾಜಕೀಯ ವ್ಯವಸ್ಥೆಯನ್ನು ಪ್ರಶ್ನಿಸುವ ಅಧಿಕಾರ ಕಳೆದುಕೊಳ್ಳುತ್ತಾನೆಂದೆನ್ನಿಸುತ್ತದೆ ನನಗೆ. ದೇಶದಲ್ಲಿ ಒಳ್ಳೆಯದು ಎಂಬುದು ಇನ್ನೂ ಜೀವಂತವಿದೆ. ಈ ದೇಶಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಅಣುಬಾಂಬುಗಳಿಂದ ಪೂರ್ಣ ನಲುಗಿ ಹೋದ ಜಪಾನ್ ದಂತ ದೇಶ ಮೈ ಕೊಡವಿಕೊಂಡು  ಜಗತ್ತಿನ ಮಹಾಶಕ್ತಿಯಾಗಿ ಬೆಳೆದಿರುವುದು ಸಾಧ್ಯವಿರುವಾಗ ನಮಗೇಕೆ ಸಾಧ್ಯವಿಲ್ಲ? ದುಬೈ, ಸಿಂಗಾಪೂರ ದಂತ ಪುಟ್ಟ ರಾಷ್ಟೃಗಳು  ಸಮರ್ಥ ನಾಯಕತ್ವದಿಂದಾಗಿ ಜಗತ್ತಿನ ಮುಂಚೂಣಿಯಲ್ಲಿರುವಾಗ ಭಾರತವೇಕೆ  ಇನ್ನು ಹಿಂದುಳಿದ ದೇಶಗಳ ಪಟ್ಟಿಯಲ್ಲಿದೆ? ಚೀನಾದಂತ ಬೃಹತ್ ಜನಸಂಖ್ಯೆ ಹೊಂದಿರುವ ರಾಷ್ಟೃ ತನ್ನ ದೇಶದ ಪ್ರತಿ ನಾಗರಿಕನಿಗೂ ಕೈತುಂಬಾ ಕೆಲಸ ಮತ್ತು ಊಟ ಬಟ್ಟೆ ವಸತಿಗಳನ್ನು ಕೊಡಲು  ಸಾಧ್ಯವಾದದ್ದು ಹೇಗೆ? ಎಲ್ಲ ದೇಶಗಳ ಫೈವ್ ಸ್ಟಾರ್ತ್ತಿ ಬರುವ ನಮ್ಮ ದೇಶದ ರಾಜಕೀಯ ನಾಯಕರಿಗೇಕೆ ಅಂತ  ಶಕ್ತಿಗಳಿಲ್ಲ? ವ್ಯವಸ್ಥೆ ಕುಸಿಯುವಲ್ಲಿ ರಾಜಕೀಯವೊಂದೇ ಪಾಲುದಾರನಾಗಿದ್ದರೆ ವ್ಯವಸ್ಥೆಯನ್ನು ನಿರ್ಮಿಸುವಲ್ಲಿ ಸೋತವರು ಯಾರು? ಈ ಎಲ್ಲ ಪ್ರಶ್ನೆಗಳನ್ನೂ ದಯವಿಟ್ಟು ಯಾರೂ ಯಾರಿಗೂ ಕೇಳಬೇಡಿ. ನಿಮಗೆ ನೀವೇ ಆರ್ಥ ಮಾಡಿಕೊಳ್ಳಿ. ಯೋಚನೆ ಮಾಡಿ. ಮತ್ತು ಕನಿಷ್ಟ ದೇಶಕ್ಕಾಗಿ ನಿಮ್ಮ ಮತವನ್ನು ಮರೆಯದೇ ಎಲ್ಲ ಒತ್ತಡ ಅನಿವಾರ್ಯತೆಗಳ ಬದಿಗಿಟ್ಟು ಚಲಾಯಿಸಿ.

        ನಮ್ಮ ಯುವ ಜನತೆಯ ಪ್ರತಿಭೆ, ಸಾಧನೆ, ಸಾಧ್ಯತೆ ಹಾಗೂ ಆರಂಭಶೂರತ್ವ ಹಾಗೂ ಆಲಸ್ಯ ಮನೋಭಾವಗಳ ಕುರಿತು ಮುಂದಿನ ಸಂಚಿಕೆಯಲ್ಲಿ....

       
        
     


Monday, September 9, 2013

ತಳಮಳಗಳು.

ವಿಚಿತ್ರ ತಳಮಳಗಳು.
ಒಂದೆರಡು ಬಿರುದುಗಳೇ
ಈ ಬದುಕಿಗೆ!
ಒಮ್ಮೆ ಸ್ವಾಥರ್ಿ
ಇನ್ನೊಮ್ಮೆ ಅಹಂಕಾರಿ,
ಮತ್ತೊಮ್ಮೆ 
ಹುಚ್ಚಿ,
ಇನ್ನೊಮ್ಮೆ
ಇನ್ನೇನೋ..


ಆಚೆಗೆ,
ಒಳಗೇನಿದೆ ನಿಜವಾಗಿ?
ಗೊಂದಲ
ಒಳಗೊಳಗೇ ಪ್ರಶ್ನೆ
ಇಷ್ಟೆಲ್ಲ ಬಿರುದುಗಳೊಂದಿಗೆ
ಏನಿದೆ ನನ್ನಲ್ಲಿ?
ನನಗಾಗಿ?

ನಾಳೆಗೆ ಕನಸು
ನಿನ್ನೆಯ ನೆನಪು
ಇಂದಿಗೆ ಹಂಗಿಲ್ಲದ
ಬದುಕು
ಯಾರೊಳಗಿಲ್ಲ?

ಅಲೆಮಾರಿ
ಜೋಗಿತಿಯ ಜೋಳಿಗೆಯ
ಒಳಗೆ ಉಳಿದಿದ್ದೇನು?
ಖಾಲಿ
ಖಾಲಿ
ಖಾಲಿ 

Saturday, June 29, 2013

ಸಾಕೋ..

ಒಂದೂ ಕವಿತೆಯ ಬರೆಯಬಾರದೆನ್ನುವ
ಕೊಲೆಗಡುಕ ಮನಸು,
ಯಾಕೋ?
ಬರೆದದ್ದೆಲ್ಲವೂ ಕವಿತೆಯಾಗದಿದ್ದರೂ
ಕವಿಮನದ ಸೊಲ್ಲಾದೀತು
ಬರೆದುಬಿಡು ಎಂಬ
ಒಳ ಸುಳಿಯ ಹತ್ತಿಕ್ಕುವ
ಹುಚ್ಚೂ ನಿನಗ್ಯಾಕೋ?

ಹೂವರಳುವ ಭಾವ
ಬಯಲಾಸರೆಯಲ್ಲಿ
ಕುಣಿದು ಕುಪ್ಪಳಿಸುವ
ಎಳೆಗರುವಿನಂತ
ಮುಗ್ಧ ಚೆಲುವಿನ ಹೂವ
ಮತ್ತೆ ಮೂಡಿಸಬೇಡ,
ಚಿತ್ರ
ಹರಿಯುವೆದೆನೆಂಬ
ಕೊಸರು ಗಣ್ಣಿನ ಕಿಸುರು
ನಿನಗ್ಯಾಕೋ?

ಅಗರುಬತ್ತಿಯ ಹಚ್ಚಿ
ಪರಿಮಳವ ತೆಗೆದುಕೊಳ್ಳಬೇಡ
ಎಂಬಂತ ಸಣ್ಣತನ ನಿಂಗ್ಯಾಕೋ
ಸಣ್ಣ ಸಣ್ಣ ಖುಶಿಗಳೆಲ್ಲ
ಕಸಿದುಕೊಳ್ಳುವ
ನಿನ್ನ ಮನಸಿನ ಒಳಗೆ
ಅದೆಷ್ಟು ಸಣ್ಣತನಗಳ
ತುಂಬಿಕೊಂಡಿದ್ದೀ ಯಾಕೋ?

ಭಾವಗಳ, ಬಯಕೆಗಳ
ಬದುಕುಗಳ, ಕನಸುಗಳ
ನಡುವೆ ನಿನ್ನದು ಎಂತ
ದುಷ್ಟತನದಾಟ!
ಒಂದೊಮ್ಮೆ ಅನ್ನಿಸೀತು ನೋಡು
ಈ ನಿನ್ನ ಆಟದಾಳಗಳಲ್ಲಿ
ಸೋತು ಹೋದವರೆಲ್ಲ
ನೋಡು ಸಾಕೋ.
ಸಾಕೋ..

Tuesday, June 11, 2013

ಮಳೆಹಾಡು

ಮೇಘವೇ
ಸುರಿದು ಬಿಡು
ಇಳೆಯ ಉಸಿರೂ
ಬಸಿರಾಗುವಂತೆ,
ಎಲ್ಲೆಲ್ಲೂ ಹಸಿರು
ಮೊಳಕೆಯೊಡೆಯುವಂತೆ.

ನೀನೂ
ಹರಿದುಬಿಡು,
ಉಸಿರುಗಟ್ಟುವಂತೆ
ಹಸಿಯಾಗಿಸಿ,
ತಂಪಾಗಿಸಿ.

ಜಲಪಾತವಾಗಲಿ
ಮಳೆ!
ಪ್ರೀತಿ!
ತಣಿಯಲಿ.
ಅಲ್ಲು. ಇಲ್ಲು.

ಯಾರಿಗೆ ಹೇಳಲಿ?

ಯಾರಿಗೆ ಹೇಳಲಿ?
ಏನೆಂದು ಬರೆಯಲಿ?

ಭಾವಗಳ ಮಳೆ ಸುರಿಯೆ,
ಮನಸು ಬಂದ ಹಾಗೆಲ್ಲ
ಮನದ ಮಳೆಯಂತೆ
ಸುರಿದು ಬಿಡಲೊಮ್ಮೆ
ಎಲ್ಲಿರುವೆ ನೀನು
ಇನ್ನೆಲ್ಲಿ ನಾನು!

ನನ್ನ ಮುನಿಸಿಗೆ ಮಡಿಲು
ನನ್ನ ಕನಸಿಗೆ ಒಡಲು
ಜೀವ ಉಸಿರಿಗೆ ಕಡಲು
ಕಡಲಾದೆ ನೀನು!
ಕರಗಿಸದೇ ಉಳಿದು ಹೋದೆ
ನನ್ನ ನಾ ಕಲ್ಲು ಬಂಡೆಯಾಗಿ!


ಪ್ರತಿ ಬೆಳಗು ಕನ್ನಡಿಯ
ಹಂಗ್ಯಾಕೆ ಇನ್ನು?
ಸಿಂಗಾರದ  ಸೀರೆಗೆ
ನೆರಿಗೆಗಳೇಕೆ ಇನ್ನು?
ನೀನಿರದ  ದಿನ ದಿನಕು
ಯಾವ  ರಾಗದ ಹೊನಲು!
ನುಡಿಸಲಿವೆ ತಂತಿ ಹರಿದ
ವೀಣೆ
ಹೊಸದೇ ಶೃತಿಯನ್ನು!


  ಕೊಡಲೇನು ಗೆಳೆಯಾ
ವಿದಾಯಕ್ಕೆ ಮುನ್ನ?
ಕಣ್ಣ ಕೊನೆಯಂಚಲ್ಲಿ
ಸಣ್ಣಗೆ ಉಳಿದಿದೆ
ತಂಪು ತಂಪೆನ್ನುವ
ಹನಿ ಬಿಂದುಗಳು ನಿನ್ನ
ತಾಗಲಿ ಉಳಿದುಹೋಗಲಿವೆ
ಅಲ್ಲೇ
ತುಟಿಯಂಚಿನಲ್ಲೇ ....