ವೈಶಾಖದ ಬಿರು ಬಿಸುಲು ಸುಡು ಸುಡುತ್ತಿದೆ. ಬೆವರಿಳಿಸುತ್ತ ಬಿರ ಬಿರನೇ ನಡೆಯುತ್ತಿದ್ದಾಳೆ ವಿಶಾಖ.... ಮನೆಯಿಂದ ಹೊರಡುವಾಗಲೇ ಲೇಟು. ಎಷ್ಟು ಗಡಿಬಿಡಿ ಮಾಡಿದರೂ ಮುಗಿಯದ ಕೆಲಸ. ಈ ಬಿಸಿಲಿನುರಿಗೆ ಮೊದಲೇ ಕಪ್ಪಾದ ಮುಖ ಇನ್ನಷ್ಟು ಕರಿದಾಗಿ ಸುಟ್ಟು ಹೋಗುತ್ತದೆ. ಒಂದು ಛತ್ರಿಯಾದರೂ ಹಿಡಿದು ತರಬೇಕಿತ್ತು ಅನಿಸಿದರೂ ಈ ಗಡಿಬಿಡಿಯಲ್ಲಿ ಅದು ನೆನಪಾದರೂ ಎಲ್ಲಿಂದ ಬರಬೇಕೆನೆಸಿ ಸಮಾಧಾನ ಮಾಡಿಕೊಳ್ಳುತ್ತಿದ್ದಳು. ವಿಶಾಖ ಬಿಸಿಲಲ್ಲಿ ಕಪ್ಪಾಗಿ ಹೋಗ್ತಿಯ ಛತ್ರಿ ಹಿಡ್ಕೊಂಡು ಹೋಗೇ ಅನ್ನೊ ಕರುಳು ನನಗಾದರು ಎಲ್ಲಿದೆ. ಅಷ್ಟೊಂದು ಬಾಗ್ಯ ಇದ್ದವಳಾಗಿದ್ದರೆ ಈ ಪರಿ ಬಿಸಿಲಲ್ಲಿ ಹೀಗೆ ಓಡುವ ಹಣೆಬರಹ ನನಗಾದರು ಯಾಕಿತ್ತು.?
ಬಿಸಿಲು ನೆತ್ತಿಯನ್ನು ಸೋಕಿ ಬೈತಲೆಯೆಲ್ಲ ಬಿಸಿ ಬಿಸಿ ಎನಿಸಿ ಒಂದು ಕ್ಷಣ ತಲೆಸುತ್ತುವಂತೆನೆಸಿ ಹೊಟ್ಟೆಯೆಲ್ಲ ಸಂಕಟವೆನಿಸಿ ವಾಂತಿ ಬರುವಂತಾಗಿ ಅತ್ತಿತ್ತ ನೋಡುತ್ತ ಸಾವರಿಸಿಕೊಳ್ಳುವವರೆಗೆ ಪಕ್ಕದಲ್ಲೇ ಯಾರೋ ಬುರ್. ಎಂದು ಬೈಕ್ ಹಾರಿಸಿಕೊಂಡು ಹೋಗುವವರೆಗೆ ಗೊತ್ತಾಗುತ್ತಿತ್ತು. ರಸ್ತೆ ಮೇಲೆ ನಡೆಯುತ್ತಿದ್ದೇನೆ. ಎಂದು. ನಿರ್ಜನವಲ್ಲದಿದ್ದರೂ ಜನಸಂದಣಿಯೇನೂ ಹೆಚ್ಚಿಗೆ ಇರಲಿಲ್ಲ. ಇವತ್ತು ರಜೆಯ ದಿನ ವಾಗಿದ್ದರಿಂದ ಈ ನಡು ಮದ್ಯಾಹ್ನ ದಾರಿಯಲ್ಲಿ ಅತೀ ವಿರಳ ಜನರಿದ್ದರು. ಕೈಲಿರೋ ಪುಟ್ಟ ಪ್ಲಾಸ್ಟಿಕ್ ಬ್ಯಾಗಿನಲ್ಲಿನ ಕೋಕಾ ಕೋಲಾದ ಬಾಟ್ಲಿ ತೆಗೆದು ನೋಡಿದಳು. ಈಗಾಗಲೇ ಬೆಳಿಗ್ಗೆಯಿಂದ ಅದೆಷ್ಟು ಬಾರಿಯೋ ಅವಳು ಆ ಬಾಟ್ಲಿ ತುಂಬಿ ತಂದ ನೀರು ಖಾಲಿಯಾದರೂ ಇನ್ನೊಮ್ಮೆ ನೋಡಿಕೊಳ್ಳುತ್ತಿದ್ದಳು. ದಿನಾಲೂ ತಂದ ಒಂದು ಬಾಟ್ಲಿ ನೀರು ಅವಳು ವಾಪಸ್ ಮನೆಗೆ ಹೋಗುವವರೆಗೂ ಇರುತ್ತಿದ್ದರಿಂದ ಈಗಲೂ ಇದೆಯೇನೋ ಅನ್ನೋ ಚೂರು ಆಸೆಯಿಂದ ನೋಡುತ್ತಿದ್ದಳು. ಆದರೆ ಮನೆಯಿಂದ ಹೊರಟು ಮೊದಲ ಮನೆ ಕೆಲಸ ಮುಗಿಸೋ ಹೊತ್ತಿಗೇ ಅವಳ ಬಾಟ್ಲಿ ನೀರು ಖಾಲಿಯಾಗಿತ್ತು. ಎರಡನೇ ಮನೆಯಿಂದ ನೀರು ತರಲು ಮರೆತೇ ಹೋಗಿತ್ತು. ಮೂರನೇ ಮನೆಗಿನ್ನು ಪಲರ್ಾಂಗು ನಡೆಯಬೇಕು. ಅಲ್ಲಿವರೆಗೂ ನಡೆಯಲಾರೆ ಅನ್ನಿಸಿ ಮುಚ್ಚಿದ ಗೂಡಂಗಡಿಯ ಪಕ್ಕದ ಬೆಂಚಿನ ಮೇಲೆ ಕುಳಿತಳು. ಅತ್ತಿತ್ತ ಯಾವುದಾದರೂ ಮನೆಯ ಬಾಗಿಲು ಸ್ವಲ್ಪವೇ ತೆಗೆದಿದ್ದರೆ ಒಂದು ಲೋಟ ನೀರು ಕೇಳೋಣ ಅನ್ನಿಸಿ ಅತ್ತಿತ್ತ ಆಸೆ ಕಂಗಳಿಂದ ನೋಡಿದಳು. ಯಾರದೋ ಮನೆಯ ಟೀವಿ ಯ ಒದರುವಿಕೆಯಲ್ಲಿ ತನ್ನ ಕ್ಷೀಣ ದನಿ ಕೇಳಲಾರದೆನಿಸಿ ಸುಮ್ಮನಾದಳು.ಕುಳಿತ ಮೆಟ್ಟಿಲು ತಂಪು ಸ್ಥಳ ಹಿತವೆನಿಸಿ ಕಣ್ಮುಚ್ಚಿ ಕುಳಿತಿದ್ದಳು.
ಹತ್ತು ನಿಮಿಷ ಹಾಗೇ ಕುಳಿತಿದ್ದಳು. ನಿಜರ್ೀವ ಬೊಂಬೆಯಂತೆ. ಯಾರೂ ಅವಳತ್ತ ತಿರುಗಿಯೂ ನೋಡಿರಲಿಲ್ಲ. ಮಂಡಿಯ ಮೇಲೇ ತಲೆಯಿಟ್ಟು ಕಣ್ಮುಚ್ಚಿ ಸಾವರಿಸಿಕೊಂಡರೂ ಏನೋ ನಿಶ್ಯಕ್ತಿ ಅವಳನ್ನು ಏಳಲು ಬಿಡುತ್ತಿರಲಿಲ್ಲ. ಹೋಗಬೇಕಾದ ಮನೆಯ ಕೆಲಸ ಅವಳನ್ನು ಕರೆಯುತ್ತಿತ್ತು. ಜೊತೆಗೇ ಇವತ್ತು ಉತ್ತರ ಹೇಳಬೇಕಲ್ಲ ತಾನು ಎನ್ನುವ ಆತಂಕ!
* * *
ವಿಶಾಖ ಕುಮಟಾ ಪೇಟೆಗೆ ಕಾಲಿಟ್ಟಾಗಿಂದ ಅವಳದ್ದು ಕಸಮುಸುರೆಯ ಮನೆಕೆಲಸ. ಅವಳಿಗದರಲ್ಲಿ ಬೇಸರವೇನೂ ಇರಲಿಲ್ಲ. ಆದಾಯವೂ ತೀರಾ ಕಮ್ಮಿ ಇರಲಿಲ್ಲ. ತಾನು ಕಲಿತಿರೋ ಮೂರಕ್ಷರದ ವಿದ್ಯೆಗೆ ಊರಲ್ಲಿ ತನಗಿಂತ ಎಷ್ಟೋ ಜಾಸ್ತಿ ಹಾಯ್ಸ್ಕೂಲ್ ಮುಗಿಸಿದ ಹುಡ್ಗೀರು ದುಡಿಯೋ ಮೊತ್ತದ ನಾಲ್ಕು ಪಟ್ಟು ತಾನು ದುಡಿಯುತ್ತಿದ್ದೇನೆ ಅನ್ನೋ ಹೆಮ್ಮೆ ಇತ್ತು ಅವಳಿಗೆ.
ಮೊದ ಮೊದಲು ಒಂದು ಎರಡು ಮನೆಕೆಲಸ ಮಾಡುತ್ತಿದ್ದೋಳು ಈಗ ನಾಲ್ಕು ಮನೆ ಕೆಲಸ ಮಾಡುತ್ತಿದ್ದಳು. ತನ್ನನ್ನು ಮನೆಕೆಲಸಕ್ಕೆಂದು ಊರಿಂದ ಕರೆತಂದು ಇಟ್ಟುಕೊಂಡ ಒಡತೀಯೇ ತನಗೆ ಹೀಗೇ ನಾಲ್ಕು ಮನೆ ಕೆಲಸ ಹಿಡಿಸಿಕೊಟ್ಟಿದ್ದಳು. ಅವರ ವಿಶ್ವಾಸ ಗೆದ್ದದ್ದರಿಂದ ಅವರದೇ ಗೆಳತಿಯರ ಮನೆಕೆಲಸ ಮಾಡ್ತೀಯಾ ನಿನಗೂ ನಾಲ್ಕು ಕಾಸು ಜಾಸ್ತಿ ಸಂಪಾದನೆ ಆಗತ್ತೆ. ಇಡೀ ದಿನ ಇಲ್ಲಿ ಕೂತು ಏನು ಮಾಡ್ತೀ ಅಂದಾಗ ತನಗೂ ಇದು ಒಳ್ಳೇದು ಅನ್ನಿಸಿ ಒಪ್ಪಿಕೊಂಡಿದ್ದು. ಉಳಿಯುವ ಊಟದ ಸಮಸ್ಯೆ ಇರಲಿಲ್ಲ. ತನ್ನೊಡತಿ ಇಡೀ ದಿನ ಹೊರಗಿನ ಕೆಲಸಕ್ಕೆ ಹೋಗುವವಳು. ಎಷ್ಟೇ ಹೊತ್ತಿಗೆ ಬಂದರೂ ಒಂದು ತುತ್ತು ಊಟ ತಿಂಡಿಗೆ ಕೈ ಹಿಡಿದವರಲ್ಲ. ಅವರ ಹಾಗೂ ಯಜಮಾನರ ಕೆಲಸಕ್ಕೆ ಕುಂದುಂಟಾಗದಂತೆ ಕೆಲಸ ಮಾಡಿಕೊಂಡಿದ್ದರಾಯ್ತು. ಒಮ್ಮೆ ಯಜಮಾನ ಯಜಮಾನತಿ ಬೆಳಿಗ್ಗೆ ಹೊರಟರೆ ಅಲ್ಲಿಗೆ ತನ್ನಕೆಲಸವೂ ಮುಗಿದಿರತ್ತೆ. ಮತ್ತೆ. ಮಧ್ಯಾಹ್ನದ ಊಟಕ್ಕೆ ಅವರವರೇ ಬಡಿಸಿಕೊಳ್ತಾರೆ. ಸಂಜೆ ವಾಪಸ್ಸಾಗೋ ಹೊತ್ತಿಗೆ ಕಾಫಿ ತಿಂಡಿ ಮಾಡೋದಕ್ಕೆ ತಾನು ತಲುಪಿದ್ರಾಯ್ತು. ಅವಳಿಗೆ ಕೆಲಸಗಳು ಭಾರವೆನಿಸುತ್ತಿರಲಿಲ್ಲ. ಹಣ ಒಂದಿಷ್ಟು ಬರತ್ತಲ್ಲ. ಮೈ ಮುರಿದು ದುಡಿಯುತ್ತಿದ್ದರೆ ಬೇರೆ ಯೋಚನೆಗಳು ಅವಳನ್ನು ಕಾಡುತ್ತಿರಲಿಲ್ಲ. ಎಲ್ಲವೂ ಸುಗಮವಾಗಿ ಸಾಗುತ್ತಿತ್ತು. ವರ್ಷದಿಂದ.
ತನ್ನೊಡತಿ ಅಶ್ವಿನಿಯವರ ಮನೆಗೆಲಸಕ್ಕೆ ಬಂದ ಮೊದಲ ನಾಲ್ಕು ತಿಂಗಳು ತಾನು ಮನೆಯಿಂದ ಎಲ್ಲೂ ಹೊರಗೆ ಬಿದ್ದಿರಲಿಲ್ಲ. ಪಕ್ಕದ ಅಂಗಡಿಯಿಂದ ನಾಲ್ಕು ತರಕಾರಿ ದಿನಸಿ ತರೋದಾದರೆ ಮಾತ್ರ ತನ್ನ ಕಳಿಸುತ್ತಿದ್ದದ್ದು. ಹಾಗಂತ ಅಪನಂಬಿಕೆ ಅಂತದ್ದೇನಿರಲಿಲ್ಲ ಹೊಸದಾಗಿ ಪೇಟೆಗೆ ಬಂದವಳು ಅಂತ ಅವರಿಗೂ ಸಹಜ ಭಯವಿತ್ತು. ತನಗೂ ಆ ಭಯ ಇದ್ದೇ ಇತ್ತು. ತನ್ನ ಅಶ್ವಿನಿ ಅಮ್ಮ ಸೋಮಾರಿಯೇನಲ್ಲ. ಅವರು ಮನೆಯಲ್ಲಿದ್ದರೂ ಹತ್ತು ನಿಮಿಷ ಖಾಲಿ ಕುಳಿತು ಸಮಯ ಹಾಳು ಮಾಡಿದವರಲ್ಲ. ಮನೆಯಲ್ಲಿ ಮಕ್ಕಳು ಇಲ್ಲದಿದ್ದರೂ ಸುಖೀ ದಾಂಪತ್ಯ ಅವರದು. ಆಫೀಸಿನ ಕೆಲಸದ ನಂತರ ನೂರಾರು ಬೇರೆ ಬೇರೆ ಕೆಲಸಗಳ ಹಚ್ಚಿಕೊಂಡವರು. ಮಧ್ಯೆ ಮನೆಯ ಎಲ್ಲ ಉಸ್ತುವಾರಿ ಅವರದ್ದೇ.. ದೇವರ ಪೂಜೆಯಿಂದ ಹಿಡಿದು ಮನೆಗೆ ಬೇಕಾದ ಅಕ್ಕಿ ಬೇಳೆ, ನೀರು, ಕರೆಂಟ್ ಎಲ್ಲಾ ನೋಡಿಕೊಳ್ಳುವುದು ಅವರದ್ದೇ ಕೆಲಸ. ಅದರಲ್ಲೇನು ವಿಶೇಷ ಅಂತಿಲ್ಲ. ಆದರೆ ವಿಶೇಷವಿರೋದು ಅವರ ನಗುಮುಖದ ಜೊತೆಯ ಬದುಕುವುದರಲ್ಲಿ. ಒಂದಿನ ದೊಡ್ಡಕ್ಕೆ ಮಾತಾಡಿದವರಲ್ಲ. ಒಂಚೂರು ಬೈದವರಲ್ಲ.ಜವಾಬ್ದಾರಿಯ ಜೊತೆ ನಂಬಿಕೆಯನ್ನೂ ಕೊಟ್ಟವರು. ಅವಳಿಗೆ ಈ ಮನೆ ತನ್ನದೆಂಬ ಆತ್ಮೀಯ ಭಾವ ಮೂಡಿದ್ದರೆ ಅದು ಆಶ್ವಿನಿ ಅಮ್ಮನ ಗುಣದಿಂದಲೇ ಅನ್ನಿಸುತ್ತದೆ.
ಇಂಥ ಅಮ್ಮನ ಸಲಹೆಯ ಮೇರೆಗೆ ಅವರ ಗೆಳತಿಯರ ಮನೆಗೆ ಕೆಲಸಕ್ಕೆ ಹೋಗ ತೊಡಗಿದ ಮೊದಮೊದಲು ಎಲ್ಲ ಚೆನ್ನಾಗೇ ಇತ್ತು. ಕ್ರಮೇಣ ಒಂದೊಂದೇ ಮನೆಯ ಅಭ್ಯಾಸವೂ ಆಯ್ತು. ಉಳಿದ ಎರಡು ಮನೆಗಳಲ್ಲಿ ಎರಡು ಮಕ್ಕಳುಮತ್ತೆ ಗಂಡ ಹೆಂಡತಿ. ಕೇವಲ ಪಾತ್ರೆ ತೊಳೆದು ಬಟ್ಟೆ ಒಗೆದು ಬಂದರಾಯ್ತಷ್ಟೇ. ಆದರೆ ಮಧ್ಯಾಹ್ನ ಹೋಗೋ ಈ ಮನೆಯಲ್ಲಿ ಮಾತ್ರ ಮನೆತುಂಬ ಜನ. ಮನೆಯ ಹಿರಿ ಜೀವ ಅನಂತಜ್ಜ. ಅವರ ಮೂವರು ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳು. ಅದಲ್ಲದೇ ಮನೆಯ ಒಳಗಿನ ಕೆಲಸಕ್ಕೆ ಇರೋ ಶ್ಯಾಮಲಾ ಆಂಟಿ.. ಯಾವಾಗಲೂ ಮನೆತುಂಬಾ ಜನ ಇರೋ ಮನೆ ಇದು. ತನ್ನ ಕೆಲಸ ಮದ್ಯಾಹ್ನ ಅನಂತಜ್ಜನ ಕೋಣೆ ಒರೆಸಿ ಅವರ ಬಟ್ಟೆ ತೊಳೆದು ಬೇಕಾದ ಬಟ್ಟೆ ಐರನ್ ಮಾಡಿಟ್ಟು ಅವರ ಜೊತೆ ಒಂದು ಅರ್ಧ ಕಿಲೋಮೀಟರ್ ವಾಕಿಂಗ್ ಹೋಗಿ ವಾಪಸ್ ಮನೆಗೆ ಬಿಟ್ಟು ಬಂದರಾಯ್ತು. ಒಂದಿನ ವಾಕಿಂಗ್ ಹೋದಾಗಲೇ ಅವರ ಪ್ರೆಶರ್ ಹೆಚ್ಚಾಗಿ ರಸ್ತೆಲಿ ಬಿದ್ದು ಬಿಟ್ಟಿದ್ದರಿಂದ ಈ ವ್ಯವಸ್ಥೆ. ತನ್ನ ಕೆಲಸ ಅಷ್ಟೇ ಆದರೂ ಸಂಬಳಕ್ಕೇನೂ ಕಮ್ಮಿ ಇರಲಿಲ್ಲ. ಸಂಜೆ ಆರರ ಒಳಗೆಲ್ಲ ವಾಪಸ್ ಮನೆಗೆ ಹೊರಟುಬಿಡಬೇಕಿತ್ತು ತಾನು. ಅಜ್ಜ ಒಂದು ದಿನವೂ ಕಿರಿಕಿರಿ ಮಾಡುವವರಲ್ಲ.
ಶುಭ್ರ ಬಿಳಿಯ ಪಾಯಜಾಮ ಅದರ ಮೇಲೊಂದು ಅಷ್ಟೇ ಶುಭ್ರ ಬಿಳಿಯ ಉಜಾಲಾ ಹೊಳಪಿನ ಜುಬ್ಬಾ ಅವರ ದಿನನಿತ್ಯದ ಉಡುಗೆ. ನುಣ್ಣಗೆ ಶೇವ್ ಮಾಡಿ ಚಿನ್ನದ ಫ್ರೇಮಿನ ಕನ್ನಡಕ ಧರಿಸಿ ಕೈಲೊಂದು ಕೋಲು ಹಿಡಿದು ಅವರು ಹೊರಟರೆ ಅವರ ಪಕ್ಕ ನಡೆಯಲು ಭಯವಾಗುತ್ತಿತ್ತು. ಹಾಗಂತ ದೂರ ನಡೆದರೆ ಅವರೇ ಹತ್ತಿರ ಕರೆಯುತ್ತಿದ್ದರು. ಆ ಗತ್ತು ಆ ನಡಿಗೆ ಅವರ ಕೊರಳಲ್ಲಿನ ಚಿನ್ನದೆಳೆಯ ಚೈನ್ ಸರ ಎಲ್ಲ ನೋಡುತ್ತಿದ್ದರೆ ತನಗೋ ಟಿವಿ ಯಲ್ಲಿ ಬರುವ ಮಂತ್ರಿಗಳ ನೋಡಿದಂತೆನಿಸುತ್ತಿತ್ತು.
ಕಳೆಗೆಟ್ಟ ಮುಖದಲ್ಲಿ ನಾನಿದ್ದರೆ ಅವರು 'ಹೋಗಿ ಮುಖ ತೊಳ್ಕೊ ಬಾ ವಿಶಾಖಾ' ಅಂತನ್ನುತ್ತಿದ್ದರು. ಅದಕ್ಕೆಂದೇ ಅವರ ಮನೆಗೆ ಹೋದ ತಕ್ಷಣ ಮೊದಲು ಕೈಕಾಲು ಮುಖ ತೊಳೆದೆ ತಾನು ಒಳಗೆ ಹೋಗುತ್ತಿದ್ದದ್ದು. ಅನಂತಜ್ಜ ನ ಒಡೆದೀರು ಅಂತಲೇ ಕರೆಯುತ್ತಿದ್ದದ್ದು.
ಒಡೆದೀರು ಕಾಯುತ್ತಿದ್ದಾರೆ ಎಂಬ ನೆನಪಾದ ತಕ್ಷಣ ಎದ್ದು ಹೊರಟಳು. ಎಂದಿನ ಅದೇ ದಾರಿ. ದೂರದಲ್ಲಿ ಎರಡಂತಸ್ತಿನ ಮನೆ. ಮಧ್ಯೆ ಕುಂಬೇಶ್ವರ ದೇವಸ್ಥಾನದ ಬಳಿಗಾದ್ರೂ ಹೋಗಿ ಒಂಚೂರು ನೀರು ಕುಡಿದು ಹೋಗೋಣ ಎಂದುಕೊಂಡು ಬಿರಬಿರನೇ ಹೆಜ್ಜೆ ಹಾಕಿದಳು. ದೇವಸ್ಥಾನದ ಎದುರು ಅದೇ ಕಾಯಿ ಊದುಬತ್ತಿ ಮಾರಾಟದ ಅಂಗಡಿ ಸಾಲು. ಆವಾಗಾವಾಗ ಅಜ್ಜನ ಜೊತೆ ಇಲ್ಲಿವರೆಗೂ ಹೆಜ್ಜೆ ಹಾಕಿದ್ದರಿಂದ ಪರಿಚಯದ ಮುಖಗಳು. ಒಂಚೂರು ನೀರು ಕೊಡಣ್ಣ ಅಂತ ಬೇಡಿ ಅವನು ಕೊಟ್ಟ ಚೊಂಬಿಗೆ ನೀರು ಘಟಘಟನೆ ಕುಡಿದಾಗಲೇ ಅರ್ಧ ಸಮಾಧಾನ ಅನ್ನಿಸಿದ್ದು. ಒಂದು ಮುಗುಳ್ನಗೆ ಧನ್ಯವಾದ ಎಸೆದು ಬಿರಬಿರನೇ ನಡೆದಳು ವಿಶಾಖಾ.
ಮನೆಯೆದುರಿನ ಅಂಗಳದ ಮೂಲೆಯಲ್ಲಿ ಚಪ್ಪಲಿ ಬಿಟ್ಟು ನಲ್ಲಿ ನೀರಿಗೆ ಮುಖ ಹಾಕಿ ಸ್ವಲ್ಪ ಹಾಯೆನಿಸುತ್ತಿದ್ದಂತೆ ಮನೆಯೊಳಗಿಂದ ಜೋರಾದ ಗಲಾಟೆ ಕೇಳಿಬಂದುಹೋ ಯಾರೋ ನೆಂಟರು ಬಂದಿರಬೇಕೇನೋ ಅಂದುಕೊಂಡಳು. ಹಾಗೆ ನೆಂಟರು ಬಂದಿದ್ದರೆ ಅಜ್ಜ ಒಂದೊಂದು ಬಾರಿ ವಾಕಿಂಗ್ ಹೊರಡುತ್ತಿರಲಿಲ್ಲ. ಹೀಗಾದರೆ ಇವತ್ತು ಒಳ್ಳೇದು. ಬೇಗ ಮನೆಗೆ ಹೋಗಿ ತಾಸು ಮಲಗೋದಕ್ಕಾದೀತು ಅಂದುಕೊಂಡರೂ ತಡಮಾಡದೇ ಒಳ ನಡೆದು ಬಾತ್ ರೂಮಿನ ಹೊರಗಿಟ್ಟ ಒರಸು ಬಟ್ಟೆ ಬಕೇಟು ತೆಗೆದುಕೊಂಡಳು. ಮನೆಯ ವರಾಂಡದಲ್ಲಿ ನಾಲ್ಕಾರು ಜನ ಕೂತು ಮಾತಾಡುತ್ತಿದ್ದರು. ಒಡೇದೀರು ಅಲ್ಲೇ ಇದ್ದರು. ಹಾಗೇ ಅವನೂ ಇದ್ದ. ಕಳ್ಳ ನೋಟ ತನ್ನೆಡೆಗೆ ಹಾಯಿಸುತ್ತ. ಈ ಹೊತ್ತು ಬಚಾವ್ ಎಂದುಕೊಂಡು ಸರಸರನೆ ಕೋಣೆಯತ್ತ ನಡೆದಳು ವಿಶಾಖ.ಕೋಣೆ ಒರೆಸಿ ಬಟ್ಟೆ ತೊಳೆದು ಮೇಲೆ ಟೆರೆಸ್ ಗೆ ಹರಗಲು ಹೊರಡುತ್ತಿದ್ದಂತೆ ಮಟ್ಟಿಲ ಪಕ್ಕದಲ್ಲಿ ನೆರಳಾದಂತೆನೆಸಿ ಭಯವಾಯ್ತು. ಆಚೀಚೆ ನೋಡಿದಳು. ಯಾರೂ ಕಾಣಲಿಲ್ಲ. ತನ್ನ ಭ್ರಮೆ ಎಂದುಕೊಂಡು ಮೆಟ್ಟಿಲೇರಿದಳು.
ಟೆರೆಸ್ ಪಕ್ಕದಲ್ಲಿಯೇ ಇರೋ ಪುಟ್ಟ ಶೆಡ್ ಒಳಗೆ ಇಟ್ಟಿರೋ ಕ್ಲಿಪ್ ಗಳನ್ನ ತರಲು ಒಳ ಹೊಕ್ಕಿದರೆ ಅವನಿದ್ದ ಅಲ್ಲೇ.. ಏನು ವಿಚಾರ ಮಾಡಿದೆ ವಿಶಾಖ?'' ಅವಳು ಮಾತಾಡದೇ ಅಲ್ಲಿರುವ ಕ್ಲಿಪ್ ಎತ್ತಿಕೊಂಡು ಈಚೆ ಬಂದಳು. ಅವಳಿಗೆ ಗೊತ್ತು. ಅವನಲ್ಲೇ ಕಾಯುತ್ತಿದ್ದಾನೆ. ಹಾಗಂತ ಅವಳು ಬಹಳ ಹೊತ್ತು ಅಲ್ಲಿ ನಿಲ್ಲಲಾರಳು. ಅವನ ಬೇಡಿಕೆ ಅವಳಿಗೆ ಗೊತ್ತು. ಒಬ್ಬ ಪುಟ್ಟ ಹುಡುಗನ ಮನಸಿನವ ಆತ. ದೇಹ ವಯಸ್ಸಿಗೆ ತಕ್ಕಂತೆ ಬೆಳೆದಿದೆ. ಸುರ ಸುಂದರಾಂಗನೇ.. ಎಲ್ಲರಂತಿದ್ದರೆ ಬಹುಶಃ ಇಷ್ಟು ದಿನಕ್ಕೆ ಕುಮಟಾ ಪೇಟೆಲಿ ಫಲ್ಸರ್ ಮೇಲೇ ಗುರ್ ಅಂತ ಓಡಾಡೋ ಹುಡುಗ್ರಲ್ಲಿ ಅವನೂ ಒಬ್ಬನಾಗಿರ್ತಿದ್ದ. ತನ್ನೆಡೆಗೆ ತಿರುಗಿ ಕೂಡ ಹಾಯದ ಅಂತಸ್ತು ಅವನದು. ಆದರೆ ಇವತ್ತು ಅವನು ವಿಶಾಖ ವಿಶಾಖ ಅಂತ ತನ್ನ ಬೆನ್ನು ಬಿದ್ದಿದ್ದು ಅವನದೊಂದೇ ಕೋರಿಕೆ. ನೀನು ನನ್ನ ದೋಸ್ತ್ ಆಗ್ತೀಯ ವಿಶಾಖ? ಎಲ್ಲರಿಗೂ ದೋಸ್ತರಿರುತ್ತಾರಲ್ಲ! ನನಗೆ ಮಾತ್ರ ಯಾರೂ ಇಲ್ಲ. ನನಗೆ ನೀನು ದೋಸ್ತ ಆಗ್ತೀಯ? ಅವನದ್ದು ಅಪ್ರಬುದ್ಧ ಮನಸು ನಿಜ. ಆದರೆ ಅವನ ಹೇಳಿಕೆಯಂತೇ ದೋಸ್ತ್ ಆಗೋದಕ್ಕೆ ಸಾಧ್ಯವಾ? ಮನಸಿನ ಒಳಗೆ ಒಂಚೂರು ಹೆಮ್ಮೆ ಕಾಣಿಸಿಕೊಂಡಿತು. ರಾಯರ ಮನೆ ಹುಡುಗ ನನ್ನ ಗೆಳೆತನಕ್ಕೆ ಹಾತೊರೆಯುವುದೆಂದರೆ ಸಾಮಾನ್ಯವಾ? ಚಿನ್ನದ ಚಮಚೆ ಬಾಯಲ್ಲಿ ಇಟ್ಕೊಂಡು ಹುಟ್ಟಿದ ಹುಡುಗ ಅವನು. ಅವರ ಮನೆಯಲ್ಲಿ ಬಾಯ್ಬಿಡದೇ ತುಟಿ ಪಿಟಿಕ್ ಅನ್ನದೇ ಕೆಲಸ ಮುಗಿಸಿ ಬರುವ ಅವಳು. ಯಾಕಾಗ್ಬಾರ್ದು ದೋಸ್ತಿ? ಅನ್ನಿಸ್ತಿತ್ತು. ಎದೆಯೊಳಗೆಲ್ಲೋ ಅಮಿತ ಆನಂದ.
ಚಿಕ್ಕ ಮಕ್ಕಳ ಬುದ್ದಿ ಬಿಟ್ಟರೆ ಕರ್ಣ ಎನೂ ಕೆಟ್ಟ ಹುಡುಗರಂತಿರಲಿಲ್ಲ.ಅವನಷ್ಟೊತ್ತಿಗೆ ಆಟಿಕೆ ಆಡಿಕೊಂಡು ಅಜ್ಜನ ಜೊತೆ ಕತೆ ಕೇಳಿಕೊಂಡು ಶುಭ್ರ ಬಟ್ಟೆ ಧರಿಸಿ ಆರಾಮಾಗೇ ಇದ್ದ. ಮನೆಯವರೆಲ್ಲ ಅವನ ಅಕ್ಕರಾಸ್ತೆಯಿಂದಲೆ ನೋಡಿಕೊಳ್ಳುತ್ತಿದ್ದರು. ಅವನ ನೋಟ ತನ್ನೆಡೆಗೆ ಹರಿದಿರೋದ ಗಮನಿಸಿ ಮನೆಯೊಡತಿ ಚಂದ್ರಾಣಿ ತನಗೆ ಸೂಕ್ಷ್ಮ ಸೂಚನೆಯನ್ನೂ ಕೊಟ್ಟಿದ್ದರು. ಇಷ್ಟೆಲ್ಲ ಆದಮೇಲೂ ಅವನೊಟ್ಟಿಗೆ ಸ್ನೇಹ ಎಂದು ಕೈ ಚಾಚಲು ಧೈರ್ಯ ಬರ್ತಿರಲಿಲ್ಲ. ಇತ್ತೀಚೆಗೆ ಆಗಾಗ ಹೀಗೆ ತನ್ನ ಕಾಡುವುದು ಸಾಮಾನ್ಯವಾಗಿತ್ತು. ಜೊತೆಗೇ ಅದೇ ಟೆರೆಸ್ ಶೆಡ್ ನಲ್ಲಿ ಬಾಗಿಲು ಹಾಕಿಕೊಂಡು ಅಳುತ್ತಿದ್ದದೂ ಗಮನಕ್ಕೆ ಬರುತ್ತಿತ್ತು.
ಕಪ್ಪುಕಣ್ಣಿನ ದಪ್ಪ ಹುಬ್ಬನ್ನು ಗಂಟಾಗಿಸಿ ಅವನು ನೋಡುತ್ತಿದ್ದರೆ ತನಗೋ ಒಳಗೊಳಗೇ ಪುಳಕ. ಅದಾಗಲೇ ಮೂಡಿರುವ ಚಿಗುರು ಮೀಸೆಯಡಿಯಲ್ಲಿ ಪುಟ್ಟ ತುಟಿಗಳ ಓರೆಯಾಗಿಸಿ 'ವಿಶಾಖ........' ಅನ್ನುತ್ತಿದ್ದರೆ ಎದೆಯೊಳಗೆಲ್ಲ ಮಳೆ ಹೊಯ್ದ ಅನುಭವ.
ಹೌದು. ತನ್ನಂತ ಕಪ್ಪು ಹುಡುಗಿಗೆ ಮದುವೆಯ ಕನಸುಗಳಿರಲಿಲ್ಲ. ಕುಡುಕ ಅಪ್ಪನ ಸಾವು ಎಂದೋ ಕಳೆದುಕೊಂಡ ಅಮ್ಮ ಅವರವರ ಬದುಕೇ ಹೊರೆಯಾದಂತಿರುವ ಅಕ್ಕ ಅಣ್ಣಂದಿರು ತನ್ನನ್ನು ಅಶ್ವಿನಿ ಅಮ್ಮನ ಮನೆಗೆ ಸೇರಿಸಿದ ನಂತರ ತಿಂಗಳಿಗೊಮ್ಮೆಯೂ ಊರ ಕಡೆ ಮುಖ ಹಾಕಿದ್ದಿಲ್ಲ. ಕರೆದೊಯ್ಯುವವರೂ ಇಲ್ಲ. ಎಂದೋ ಸುಗ್ಗಿ ಹುಣ್ಣಿಮೆಯ ಸಮಯದಲ್ಲಿ ಅಮ್ಮನೇ ತನ್ನ ಅಣ್ಣನ ಕರೆದು ಊರಿಗೆ ಕಳಿಸಿದ್ದರೂ ತಾನು ಎರಡೇ ದಿನಕ್ಕೆ ಹಿಂತಿರುಗಿದ್ದು ನೆನಪಾಯ್ತು. ಇನ್ನು ತನ್ನ ಮದುವೆಯಂತ ಕನಸುಗಳ ಯಾವತ್ತೋ ಬಿಟ್ಟಿದ್ದಳು. ಮದುವೆಯ ಕನಸಿರದಿದ್ದರೂ ಅವಳೆದೆಯಲ್ಲಿ ಬಯಕೆಯ ಸುಳಿ ಕಾಡುತ್ತಿತ್ತು. ಅಮ್ಮ ಎಂದಾದರೂ ತನ್ನ ಮದುವೆ ಮಾಡಿಯಾರು ಅನ್ನೋ ನಂಬಿಕೆ ತಂದುಕೊಳ್ಳುತ್ತಿದ್ದಳು. ಆದರೂ ಕರ್ಣನ ಕಣ್ಣಿನ ಸೆಳೆತದಲ್ಲಿ ಅವಳೂ ನಲುಗುತ್ತಿದ್ದಳು. ರಾತ್ರಿಯೂ ಅದೇ ಮುಗ್ದಕಂಗಳು ಅವಳನ್ನು ಕಾಡುತ್ತಿದ್ದವು.ನಿದ್ರೆ ಬರದೇ ಹೊರಳಾಡುತ್ತಿದ್ದಳು. ಹೌದು ಅವನೇ ಕರೆದಾಗ ನಾನು ಸುಮ್ಮನೆ ಪ್ರೆಂಡ್ ಅಂತ ಮಾತಾಡಿದರೆ ತಪ್ಪೇನು ಅನ್ನಿಸುತ್ತಿತ್ತು. ಎಷ್ಟು ಜನ ಹುಡುಗರು ಹುಡುಗಿಯರು ಕೈ ಕೈ ಹಿಡ್ಕೊಂಡು ಮಾತಾಡ್ಕೊಂಡು ಹೋಗೋದು ಇದೇ ಕುಮಟಾ ರಸ್ತೆಯಲ್ಲಿ ತಾನು ನೋಡಿದ್ದಿಲ್ಲ? ಅವರೆಲ್ಲ ಎಂತ ಮದುವೆಯೇ ಆಗುವವರಾ? ಮನೆ ತುಂಬಾ ಜನರಿರ್ತಾರೆ. ಅವನೆನೂ ನನ್ನ ಜೊತೆ ಕೆಟ್ಟದಾಗಿ ನಡೆದುಕೊಳ್ಳೋದಕ್ಕೆ ಆಗೋದಿಲ್ಲ. ಹಾಗಿದ್ದಾಗ ಒಂದಷ್ಟು ಪ್ರೀತಿ ಮಾತು ಆಡಿದ್ರೆ ತಪ್ಪೇನು ಅನ್ನಿಸುತ್ತಿತ್ತು.
ಆದರೂ ಚಂದ್ರಾಣಿ ಅಮ್ಮ ಹೇಳಿದ್ದು ನೆನಪಾದರೆ ಭಯವೂ ಆಗುತ್ತಿತ್ತು. ನೋಡು ವಿಶಾಖ. ನಮ್ಮ ಕರ್ಣನಿಗೆ ಏನೂ ತಿಳಿಯೋದಿಲ್ಲ. ಅವನ ದೇಹ ಬೆಳೆದಿದೆ. ಬುದ್ಧಿ ಬೆಳೆದಿಲ್ಲ. ಅವನ ಕೈಗೆ ಸಿಗೋ ಹಾಗೆ ಒಬ್ಬೊಬ್ಬಳೇ ಇರ್ಬೇಡ. ಆಮೇಲೆ ಏನಾದ್ರೂ ಅನಾಹುತ ಆದ್ರೆ ನಾವ್ಯಾರು ಏನೂ ಮಾಡಕ್ಕಾಗಲ್ಲ. ನಿನ್ನಷ್ಟೊತ್ತಿಗೆ ನೀನಿರು. ಹೌದು. ನನಗ್ಯಾಕೆ ದೊಡ್ಡವರ ಮನೆ ಉಸಾಬರಿ ಅನಿಸಿ ಸುಮ್ಮನುಳಿದರೂ ಮನೆಗೆ ಬಂದು ಹೋಗುವವರೆಗಿನ ಅವನ ಮುಗ್ಧ ನೋಟಕ್ಕೆ ತಾನೂ ಕಾಯುತ್ತಿರೋದು ಸುಳ್ಳಲ್ಲ. ಆ ನೋಟದಲ್ಲಿನ ಅವ್ಯಕ್ತ ಒಲುಮೆ ತನ್ನ ಕುಶಿ ಪಡಿಸ್ತಾ ಇರೋದು ಸುಳ್ಳಲ್ಲ ಎನಿಸಿ ಅವಳಷ್ಟಕ್ಕೇ ಅವಳು ಗಾಬರಿಯಾದಳು.
ಒಣಗಿದ್ದ ಬಟ್ಟೆ ಮಡಿಸಿಟ್ಟು ಒದ್ದೆ ಬಟ್ಟೆ ಹರಗಿ ಅವು ಗಾಳಿಗೆ ಹಾರದಂತೆ ಕ್ಲಿಪ್ ಹಾಕಿ ಬರುವವರೆಗೂ ಅವಳನ್ನೇ ನೋಡುತ್ತಿದ್ದ ಕರ್ಣ. ಅದೇ ಶೆಡ್ ನ ಬಾಗಿಲಿಗೊರಗಿ ನಿಂತು. ಅವಳ ಕೆಲಸ ಮುಗಿಯುತ್ತಿದ್ದಂತೇ ಹೇಳೇ ................ವಿಶಾಖ........... ಎಂದ.
ಅವಳು ಮಾತಾಡದೇ ಇಳಿದು ಬಂದಳು. ಒಂದೊಂದುಸಲ ಭಯವೂ ಕಾಡುತ್ತಿತ್ತು ಅವಳಿಗೆ. ಅವನೊಳಗಿನ ಒಂಟಿತನದ ಅರಿವಿತ್ತು. ಇದೇ ನೆಪ ಮಾಡ್ಕೊಂಡು ಅವನಿಗೇನಾದರೂ ಆದರೆ!
ಯಾರತ್ರನಾದ್ರೂ ಹೇಳ್ಬೇಕನಿಸಿತು. ಯಾರತ್ರ ಹೇಳೋದು? ಅಶ್ವಿನಿ ಅಮ್ಮನ ಹತ್ತಿರ ಹೇಳಿ ಅವರ ಗೆಳತಿಗೆ ಹೇಳಿಸೋದು ಒಳ್ಳೇದೇನೋ ಅಂದುಕೊಳ್ಳುತ್ತಿದ್ದಂತೇ ಅಜ್ಜ ಕೋಲು ಹಿಡಿದು ಶಾಲು ಹೊದೆದು ಹೊರಗೆ ಬಂದರು. ಸರ ಸರ ನಡೆದು ಬಕೇಟು ಇಟ್ಟು ಬಂದಳು. ಅಜ್ಜನ ಬೆನ್ನಿಗೆ ಹೊರಟಳು.
ಬಂದವರ ಗಲಾಟೆಯಿನ್ನೂ ವರಾಂಡದಲ್ಲಿ ಕೇಳುತ್ತಲೇ ಇತ್ತು. ಅಜ್ಜ ಒಂದಿನ ಮನೇಲಿ ಕೂತ್ಗೋಬಾರ್ದಾ? ಅಂತ ಮನದಲ್ಲೇ ಶಾಪ ಹಾಕಿಕೊಂಡಳು. ಆದರೆ ಆಗಲೇ ರಸ್ತೆ ಹಿಡಿದ ಅಜ್ಜನ ಬೆನ್ನಿಗೆ ಕಾಲು ಉದ್ದುದ್ದ ಹಾಕತೊಡಗಿದಳು. ಇವತ್ಯಾಕೋ ಜೀವ ಸಹಕರಿಸುತ್ತಿಕಲ್ಲ ಅನಿಸಿದರೂ ತುಟಿ ಪಿಟಿಕ್ ಅನ್ನಲಿಲ್ಲ ವಿಶಾಖ. ಅಜ್ಜರೆಂದರೆ ವಿಪರೀತ ಗೌರವ ಅವಳಿಗೆ. ಹಾಗಿರಬೇಕು ಮನೆ ಯಜಮಾನರೆಂದರೆ ಎಂಬುದು ಅವಳ ಅಭಿಮತ. ದೇವಸ್ಥಾನದ ಎದುರು ನಿಂತು ಚಪ್ಪಲಿ ಕಳೆದು ಒಂದು ಸುತ್ತು ಕೈ ಮುಗಿದು ಹೊರ ಬರುತ್ತಿದ್ದಂತೇ ವಿಶಾಖ ದಡಕ್ಕನೇ ಬಿದ್ದು ಹೋದಳು..............
* * *
ಪಂಡಿತರ ಆಸ್ಪತ್ರೆ ವಾರ್ಡನಲ್ಲಿ ತಾನು ಕಣ್ ಬಿಟ್ಟಾಗ ಪಕ್ಕದಲ್ಲೇ ಕುಳಿತಿದ್ದ ಒಡೇದೀರು ತಲೆ ಮೇಲೇ ಕೈಯಿಟ್ಟು ನೇವರಿಸುತಿತದ್ದರೆ ತನಗೆ ಎಚ್ಚರವಾಯ್ತಾ ಇಲ್ಲ ಕನಸಾ ಗೊತ್ತಾಗ್ತಿರಲೇ ಇಲ್ಲ. ನರ್ಸ ಬಂದು ಒಂದು ಇಂಜೆಕ್ಷನ್ ಚುಚ್ಚಿ ಹೋದಾಗ ಹಾ!!! ಎಂದು ನಲುಗಿದ್ದಷ್ಟೇ ಗೊತ್ತು. ಆ ನಂತರ ತನಗೆ ಸರಿಯಾಗಿ ಎಚ್ಚರಾಗಿದ್ದು ಬೆಳಿಗ್ಗೆಯೇ. ರಾತ್ರಿ ಸುಮಾರು ಹೊತ್ತಿನ ವರೆಗೂ ಅಜ್ಜನವರು ತನ್ನ ಜೊತೆಗೇ ಇದ್ದರೆಂದು ಬೆಳಿಗ್ಗೆ ಮತ್ತೆ ಬರುತ್ತಾರೆಂದೂ ಅಶ್ವಿನಿ ಅಮ್ಮ ಬಂದು ಹೋಗಿದ್ದರೆಂದು ತನಗೇನೂ ಚಿಂತೆ ಬೇಡವೆಂದೂ ತನ್ನ ನೋಡಿಕೊಳ್ಳತ್ತಿದ್ದ ನರ್ಸ ಹೇಳುತ್ತಿದ್ದರೂ ತನಗೇನಾಗಿದೆಯೆಂದು ಯಾರೂ ಹೇಳುತ್ತಿರಲಿಲ್ಲ. ಎದ್ದು ಕೂತುಕೊಳ್ಳೋಣವೆಂದರೆ ಅದೂ ಸಾಧ್ಯಾವಾಗಲಿಲ್ಲ............
ಪಕ್ಕದಲ್ಲಿದ್ದ ನರ್ಸನ ಬಲವಾಗಿ ಹಿಡಿದು ಕೇಳಿದ್ದಳು. ಏನಾಗಿದೆ ನನಗೆ?
ಏನಿಲ್ಲ. ನಿಮಗೆ ತುಂಬಾ ವೀಕ್ನೆಸ್ ಆಗಿದೆ. ಜ್ವರ ಇದೆ. ಅದು ಟಾರ್ಯಫರ್ಡ್ ಆಗೋ ಸಾಧ್ಯತೆ ಇದೆ. ನಿಮಗೆ ರೆಸ್ಟ್ ಬೇಕು. ಸುಮ್ಮನೇ ಮಲಗಿ. ಡಾಕ್ಟರು ಎಲ್ಲಾ ಟೆಸ್ಟ ಮಾಡಿದ್ದಾರೆ. ರಿಪೋರ್ಟ ಬರತ್ತೆ ಇವತ್ತು
ಆ ಆಸ್ಪತ್ರೆಯ ವಾಸನೆಗೆ ಹೊಟ್ಟೆ ಕಿತ್ತು ಬಂದಂತಾಗುತ್ತಿತ್ತು. ಕೆಳಗೆಲ್ಲೋ ಮಕ್ಕಳು ಚೀರಾಡುವುದು ಕೇಳುತ್ತಿತ್ತು. ಪೇಶೆಂಟ್ಗಳ ಓಡಾಟ. ಅವರ ಪರಿಚಯದವರ ಮಾತು ನರ್ಸಗಳು ಬಿಳಿ ಸೀರೆಯ ಸೆರಗನ್ನ ಅತ್ತಿತ್ತ ಬೀಸಾಡುತ್ತ ಓಡಾಡುತ್ತಿದ್ದುದು ಎಲ್ಲವನ್ನೂ ನೋಡುತ್ತ ಮಲಗಿದ್ದಳು. ಸುಮಾರು ಹತ್ತು ಗಂಟೆಯ ಹೊತ್ತಿಗೆ ಅನಂತಜ್ಜ ಮತ್ತು ಕರ್ಣ ಬಂದರು. ಅವನನ್ನು ನೋಡಿ ಆಶ್ಚರ್ಯ ವಾದರೂ ಸುಮ್ಮನುಳಿದಳು ವಿಶಾಖ. ನಮ್ಮ ಕರ್ಣ ತಾನೂ ಬರ್ತೀನಂತ ಹಟ ಹಿಡಿದ. ಅದ್ಕೇ ಕರ್ಕೊಂಡ್ ಬಂದೆ. ಅಜ್ಜ ಮೊಮ್ಮಗ ಬಂದಿದ್ದಕ್ಕೆ ಕಾರಣ ಹೇಳಿಕೊಂಡರು. ಅವರೇ ಡಾಕ್ಟರ್ ಹತ್ತಿರ ಮಾತಾಡ್ಕೊಂಡ್ ಬಂದ್ರು ಅನ್ಸತ್ತೆ. ವಿಶಾಖ ಯೋಚನೆ ಮಾಡಬೇಡಮ್ಮ. ಅಶ್ವಿನಿಗೆ ನಾನು ಹೇಳಿದ್ದೀನಿ. ಒಂದೆಂಟ್ ದಿನ ನಮ್ಮನೇಲೇ ಇದ್ದು ರೆಸ್ಟ್ ತಗೋ ಆಮೇಲೆ ಅಲ್ಲಿಗೆ ಹೋಗೋವಂತೆ. ಅವರಿಬ್ಬರೂ ಕೆಲ್ಸಕ್ಕ ಹೋಗೋರು. ನಮ್ಮನೇಲಾದ್ರೆ ಶ್ಯಾಮಲಾ ಇರ್ತಾಳೆ. ಮನೆ ತುಂಬಾ ಜನ ಇರ್ತಾರೆ. ಯೋಚನೆ ಮಾಡಬೇಡ.ಅವರ ಮಾತು ತೆಗೆದು ಹಾಕೋ ಧೈರ್ಯ ಯಾರಿಗೂ ಇರಲಿಲ್ಲ. ಮತ್ತೆ ನಾನೆಷ್ಟರವಳು. ಅವರೊಟ್ಟಿಗೇ ರಿಕ್ಷವರೆಗೆ ನಡೆದು ಬಂದಿದ್ದಾಯ್ತು. ಆಟೋ ಮಾಡಿಕೊಂಡು ಮನೆಗೆ ಬಂದಿದ್ದೂ ಆಯ್ತು. ಅಜ್ಜ ತನ್ನ ರೂಮಿನ ಪಕ್ಕದಲ್ಲೇ ಇರುವ ಸ್ಟೋರ್ ರೂಮಿನ ಚಾವಿ ತೆಗೆದು ಅಲ್ಲಿ ಇರಲು ಹೇಳಿದರು. ಶ್ಯಾಮಲಾ ಆಂಟಿ ಬಂದು ನೀರು ಚಾಪೆ ಒಂದು ರಗ್ ಕೊಟ್ಟು ಹೋದರು. ಅಜ್ಜ ತಲೆ ನೇವರಿಸುತ್ತಿದ್ದದ್ದಷ್ಟೇ ತನಗೆ ಗೊತ್ತು
* * *
ತನ್ನ ಔಷಧ ಉಪಚಾರ ನೋಡಿಕೊಂಡ ಅಜ್ಜ ಮತ್ತು ಮೊಮ್ಮಗನ ಬಗ್ಗೆ ಹೇಳೋಕೆ ಅವಳಲ್ಲಿ ಶಬ್ಧಗಳಿರಲಿಲ್ಲ. ಎಂಟು ದಿನ ಕಳೆದಿತ್ತು. ದಿನಾಲೂ ಒಂದಷ್ಟು ಹೊತ್ತು ಅಜ್ಜನೋ ಮೊಮ್ಮಗನೋ ತನ್ನ ಪಕ್ಕದಲ್ಲಿ ಬಂದು ಕೂರುತ್ತಿದ್ದದ್ದು ತನಗರಿವಾದರು ತಾನು ತುಟಿ ಪಿಟಿಕ್ ಎನ್ನದೇ ಸುಮ್ಮನಿದ್ದಳು. ಆ ದಿನ ಮನೆಯಲ್ಲಿ ಯಾರ ಮಾತೂ ಕೇಳದಷ್ಟು ಮೌನವಿತ್ತು.
ಬಹುಶಃ ರಾತ್ರಿ ಊಟವೂ ಮುಗಿದು ಎಲ್ಲ ಮಲಗಿರಬಹುದು. ಇಡೀ ಮನೆ ಪ್ರಶಾಂತವಿರುವಾಗ ಅವಳಿಗೆ ಹಗಲು ನಿದ್ರಿಸಿರುವುದರಿಂದ ನಿದ್ರೆ ಬರುತ್ತಿರಲಿಲ್ಲ. ಕರ್ಣ ತನ್ನ ಜೊತೆ ನಡೆದುಕೊಳ್ಳುತ್ತಿದ್ದದ್ದನ್ನೇ ಧ್ಯಾನಿಸುತ್ತಿದ್ದಳು. ಕತ್ತಲು ತುಂಬಿದ ಪುಟ್ಟ ಕೊಟಡಿಯದು. ಬಾಗಿಲು ಚಿಲಕವೇನೂ ಹಾಕಿರುವುದಿಲ್ಲ. ಅಲ್ಲೆಲ್ಲೋ ಗೋಡೆಯ ಮೇಲೆ ಹಲ್ಲಿಯೊಂದು ಲೊಚಕ್ ಅನ್ನುವಶಬ್ಧ. ಈ ಕಾಳ ಕತ್ತಲಿನ ಅರಮನೆಯಲ್ಲಿ ತಾನೆಲ್ಲೋ ಕಳೆದುಹೋದಂತೆ ಅವಳಿಗೆ ಭಯವಾಗುತ್ತಿತ್ತು. ಅಜ್ಜ ತನ್ನನ್ನು ಎಷ್ಟು ಚೆನ್ನಾಗಿ ನೋಡಿಕೊಂಡರು. ಮನೆ ಮಗಳಂತೆ! ಅವರು ಹಣೆಮೇಲೆ ಕೈಯಿಟ್ಟರೆ ಎಂತಹ ಭದ್ರತೆ! ನೆಮ್ಮದಿ! ದೇವರಂತ ಅಜ್ಜ...........ಯಾವುದೋ ಬೆಚ್ಚಗಿನ ಕೈಯೊಂದು ಅವಳ ಕೈ ಹಿಡಿದುಕೊಂಡಿತು. ಮುಖ ನೇವರಿಸತೊಡಗಿತು...............!!!!???.
ಬೆಳಿಗ್ಗೆ ಎದ್ದ ವಿಶಾಖ ತಡಮಾಡದೇ ಶ್ಯಾಮಲಾ ಆಂಟಿ. ನಾನು ಅಮ್ಮನ ಮನೆಗೆ ಹೋಗ್ತೀನ್ರೀ ಎಂದು ಹೊರಟೇ ಬಿಟ್ಟಳು.ಅಮ್ಮನ ಹತ್ತಿರ ಎಲ್ಲಾ ಹೇಳಿ ಇನ್ನು ಈ ಮನೆ ಕೆಲಸಕ್ಕೆ ಕಾಲಿಡಬಾರ್ದು ಅಂದುಕೊಳ್ಳುತ್ತ. ಅದೇ ದಿನದ ದಾರಿಯಾದರೂ ಎಲ್ಲರೂ ತನ್ನನ್ನೇ ನೋಡುತ್ತಿರುವ ನಗುತ್ತಿರುವ ಭಾವ. ತನ್ನೊಳಗೆ ತಾನೇ ಅಡಗಿಕೊಂಡು ಕುಳಿತುಕೊಳ್ಳುವ ಬಯಕೆ.
ಅವಳ ತಲೆ ಕೆಟ್ಟು ಕೆಸರಾಯಿತು. ಆಶ್ವಿನಿ ಅಮ್ಮನ ಮನೆಗೆ ಬಂದು ಸುಮ್ಮನೇ ಕುಳಿತಳು ನಾಲ್ಕು ದಿನ. ಮತ್ತೆ ಪ್ರಶ್ನೆ ಶುರುವಾಯ್ತು. ದಿನಕ್ಕೆ ನಾಲ್ಕು ಬಾರಿ ಅಜ್ಜ ಅಥವಾ ಮೊಮ್ಮಗನ ಫೋನ್ ಬರುತ್ತಿತ್ತು. ಅಮ್ಮ ಏನೋ ಸಹನೆಯಿಂದಲೇ ಇದ್ದರು. ತನಗೇ ಸಹನೆ ಕೆಟ್ಟು ಸಿಟ್ಟು ಬರುತ್ತಿತ್ತು. ಅವರಂದ ನಿಮ್ಮಂತ ಕೆಲಸದ ಹುಡ್ಗೀಗೆ ಇದು ಮಾಮೂಲಲ್ವಾ? ಮದ್ವೆ ಗಿದ್ವೆ ಇರೋದಿಲ್ಲ. ನೀವಾದ್ರೂ ಮತ್ತೇನು ಮಾಡ್ತೀರಿ. ನಿನಗೆ ಎಂಥಾ ಕೊರತೇನೂ ಮಾಡೋದಿಲ್ಲ. ಹೆದರ್ಬೇಡ ಅಂದಿದ್ದು ಕಿವಿಯಲ್ಲಿ ಕಾದ ಸೀಸದಂತೇ ಅನಿಸುತ್ತಿತ್ತು. ಹಾಗೆ ಅವರಂದುಕೊಂಡಂತೇ ಆಗಿದ್ರೆ ನಿನ್ನ ಮೊಮ್ಮಗನ ಯಾವಾಗ್ಲೋ ಬುಟ್ಟಿಗೆ ಹಾಕ್ಕೊಂಡಿರ್ತಿದ್ದೆ ಅಂತ ಹೇಳಬೇಕೆನಿಸುತ್ತಿತ್ತು. ಅಸಹಾಯಕತೆ ಅವಳನ್ನ ಕಟ್ಟಿ ಹಾಕುತ್ತಿತ್ತು.
ಕರ್ಣನ ನೆನಪಾದರೆ ಹೌದು ಅವಳಿಗೆ ಅವನು ಇಷ್ಟವಾಗುತ್ತಿದ್ದ. ಅವನ ನೋಟವೂ ಇಷ್ಟವೆನಿಸುತ್ತಿತ್ತು. ಹಾಗಂತ ಅಜ್ಜ ಮೊಮ್ಮಗನಿಗೆ ಕಾವಲಾಗಿ ಹೀಗೆ ಹೇಳ್ತಾನೆ ಅಂತ ಅವಳಿಗೆ ಕಲ್ಪನೆ ಇರಲಿಲ್ಲ. ತನ್ನ ದಂಡ ಪಿಂಡದಂತ ಮೊಮ್ಮಗನ ಬಯಕೆ ತೀರಿಸೋಕೆ ತನ್ನ ಬಲಿ ಪಶು ಆಗು ಅಂತ ಕೇಳೋ ಅಜ್ಜನ ಕುರಿತು ಭಯಂಕರ ಕೋಪ ಉಕ್ಕುತ್ತಿತ್ತು. ತನಗೆ ಅಷ್ಟು ಪ್ರೀತಿ ತೋರಿಸಿದ್ದರ ಹಿಂದಿನ ಉದ್ದೇಶ ಅರ್ಥವಾಗುತ್ತಿದ್ದಂತೆ ಮೈ ಉರಿಯುತ್ತಿತ್ತು. ತಾನು ಮನೆಮನೆಗೆ ಕೆಲಸಕ್ಕೆ ಹೋಗ್ತೀನೇ ಹೊರತು ಹಾದರಕ್ಕಲ್ಲ. ಅಂತ ಉಗಿದುಬಿಡೋ ಆವೇಶ ಬಂದ್ರೂ ತನ್ನ ಪರಿಸ್ಥಿತಿ ನೆನೆದು ಸುಮ್ಮನೇ ಬಾಯ್ಮುಚ್ಚಿ ಬಂದಿದ್ದಳು. ಅಷ್ಟು ದೊಡ್ಡ ಮನುಷ್ಯರು ಇಂತ ಮಾತಾಡಬಾರದಿತ್ತು ಅಂತ ಸಾವಿರ ಸಲ ಅಂದುಕೊಳ್ಳುತ್ತಿದ್ದಳು.
ಅಮ್ಮ ಕೆಲಸಕ್ಕೆ ಹೋಗುವಾಗಲೇ ಎಲ್ಲ ಮನೆಗೆಲಸ ಮುಗಿಸಿ ಹೋಗಿದ್ದರು. ಮನೆಯ ಹೊರಗಿನ ಬಾಲ್ಕನಿಯಲ್ಲಿ ಹೂ ಕಟ್ಟುತ್ತ ಕುಳಿತ ಅವಳಿಗೆ ಬಗಲಲ್ಲೊಂದು ಕಂದನ ಕಟ್ಕೊಂಡು ಅಚೀಚೆ ರಸ್ತೆ ತುಂಬ ಬೇಡ್ತಾ ಇದ್ದ ಅವಳು ಕಂಡಳು. ಯಾಕೋ ಆ ಕಮಗುವಿನ ಕಣ್ಣಲ್ಲಿ ಏನಿದೆ ಹುಡುಕೋಕೆ ಆಸೆಯಾಗುತ್ತಿತ್ತು. ಮುದ್ಧಾದ ಮಗುವದು. ತೀರಾ ಹೊಲಸು ಹರಕು ಬಟ್ಟೆ ಅದರ ಅರ್ಧ ಮೈಯನ್ನೂ ಮುಚ್ಚುತ್ತಿರಲಿಲ್ಲ. ಆ ತಾಯಿ ಅವಳ ಸೆರಗನ್ನೇ ಜೋಳಿಗೆಯಾಗಿಸಿ ಮಗುವನ್ನ ಸೊಂಟಕ್ಕೆ ಕಟ್ಟಿಕೊಂಡಿದ್ದಳು. ಅಮ್ಮಾ.ತಾಯೇ. ಮಗು ಹಸಿದಿದೆ. ಭಿಕ್ಷೆ ಹಾಕಮ್ಮಾ . ಚೂರು ದೋಸೆ ಕೊಡಮ್ಮ. ಸಾಂಬಾರ್ ಕೊಡಮ್ಮ ಪ್ರತೀ ಮನೆಯೆದುರು ಅವಳ ರಾಗ. ತನ್ನ ಮನೆಯೆದುರು ಬರುತ್ತಿದ್ದಂತೇ ಕೇಳಬೇಕೆನಿಸಿತು. ಈ ಮಗುವಿನ ತಂದೆ ಯಾರು?
ಅವನಿಗೆ ಮಗು ಸಾಕೋದಕ್ಕೆ ದುಡಿದು ತರೋದಕ್ಕೆ ಹೇಳು. ಯಾಕೆ ಮಗುನ ಹೊತ್ಕೊಂಡು ಊರೂರು ಅಲಿತೀಯ?
ನೂರಾರು ಪ್ರಶ್ನೆ ಕೇಳಬೇಕೆನಿಸುತ್ತಿತ್ತು. ಆದರೆ ಮಾತೇ ಹೊರಡಲಿಲ್ಲ. ಒಳಗೆ ಹೋಗಿ ಒಂಚೂರು ಅನ್ನ ಸಾಂಬಾರ್ ತಂದು ಅವಳ ಒಡೆದ ಸ್ಟೀಲ್ ಬಟ್ಟಲಲ್ಲಿ ಸುರಿದಳು ವಿಶಾಖ. ಮತ್ತೆ ಅವಳ್ಯಾವುದೋ ಮನೆಯ ಬಾಗಿಲು ತಟ್ಟುತ್ತಿದ್ದರೆ ತಾನೂ ಭಾವನೆಗಳಿಗೆ ಒಳಗಾದರೆ ಹೀಗೇ ಒಂದಿನ ಕರ್ಣನ ಮಗು ಹೊತ್ತು ಬೀದಿ ಬೀದಿ ತಿರುಗಬೇಕಾಗುತ್ತಾ? ಅನ್ನಿಸಿ ನಡುಗಿದಳು. ಹೌದು. ಆ ಅಜ್ಜನ ಮಾತು ತನಗೆ ಕರ್ಣನ ಬಗ್ಗೆ ಇರೋ ಅಲ್ಪ ಸ್ವಲ್ಪ ಆಕರ್ಷಣೆ. ಯನ್ನೂ ಕೊಂದುಬಿಟ್ಟಿದೆ ಅನ್ನೋ ಸತ್ಯ ಅರಿವಾಗುತ್ತಿತ್ತು. ತಾನಿನ್ನು ಇಂತ ಬಯಕೆಗಳಿಗೆ ಬೀಳಬಾರ್ದು. ಅಮ್ಮನಿಗೆ ಹೇಳಿ ಬಿಡಬೇಕು. ದೇವರಂತ ಅಶ್ವಿನಿ ಅಮ್ಮ ಇದ್ದಾರೆ. ತಾನಿನ್ನು ಯಾರ ಮನೆ ಕೆಲಸಕ್ಕೂ ಹೋಗೋದಿಲ್ಲ ಅಂತ. ನನಗಿಲ್ಲೇ ಮಾಡಲು ಏನಾದರೂ ಕೆಲಸ ಹುಡುಕಿಕೊಡಿ. ಮನೆಯಲ್ಲೇ ಕುಳಿತು ಮಾಡ್ತೀನಿ ಅನ್ಬೇಕು. ಕಾರಣ ಹೇಳಿ ಅವರ ಮನಸು ನೋಯಿಸೋದಕ್ಕಿಂತ ಇದೇ ಉತ್ತಮ ಉಪಾಯ ಅನ್ನಿಸತೊಡಗಿತು.
* * *
ವಿಶಾಖಾ ಹೋಂ ಪ್ರೊಡಕ್ಟ ಅಶ್ವಿನಿ ಹಾಕಿಕೊಟ್ಟ ಪುಟ್ಟ ಉದ್ಯೋಗವಿಂದು ವಿಶಾಖಳ ಶ್ರಮದಿಂದ ಬೆಳೆದು ನಿಂತಿದೆ. ಅದರ ಬೆಳವಣಿಗೆಗೆ ಅವಳ ಶ್ರಮದಷ್ಟೇ ಆಶ್ವಿನಿ ಅಮ್ಮನ ಪ್ರೋತ್ಸಾಹವೂ ಕಾರಣ. ಹಾಗೇ ಇಂದು ಅವಳ ಮನಸ್ಸಿನಲ್ಲಿ ಎಂದೋ ತೀರಿ ಹೋದ ಅನಂತಜ್ಜನ ಬಗ್ಗೆಯೂ ಕಹಿ ಉಳಿದಿಲ್ಲ. ತಾನಿಂದು ಹೀಗೆ ಸ್ವಾವಲಂಬಿ ಆಗೋದಕ್ಕೆ ಅವರೂ ಒಂದು ರೀತಿಯಲ್ಲಿ ಕಾರಣವೇ.
ಆಗಾಗ ಅದೇ ದಾರಿಯಲ್ಲಿ ಅಪ್ಪನ ಕಾರಿನ ಹಿಂಬಾಗದಲ್ಲಿ ಕೂತು ಆಚೀಚೆ ಕಣ್ಣು ಪಿಳುಕಿಸುತ್ತಾ ಹೋಗುವ ಕರ್ಣ ಅವಳೆಡೆಗೆ ನಿಜೀವ ಭಾವ ತೋರುತ್ತಾನೆ. ಪರಿಚಯದ ನಗು ಬೀರುತ್ತಾಳೆ. ಇತ್ತೀಚೆಗೆ ಅವನನ್ನು ನೋಡದೇ ವರ್ಷಗಳೇ ಕಳೆದವೇನೋ. ತನ್ನ ಕೆಲಸಗಳ ಒತ್ತಡದಲ್ಲಿ ಅವರಿವರ ಮಾತನಾಡಲು ಪುರುಸೊತ್ತೆಲ್ಲಿ? ಅಶ್ವಿನಿ ಅಮ್ಮಂಗೆ ಗೊತ್ತರಬಹುದಾದ್ರೂ ಅವರೇನೂ ಇಂತಹ ವಿಷಯ ಮಾತಾಡುತ್ತ ಕುಳಿತುಕೊಳ್ಳೋದಿಲ್ಲ. ಯಾಕೋ ಇವತ್ತು ಕರ್ಣನ ನೆನಪು! ಅವನ ಮುಗ್ದ ನೋಟ ಬಹಳ ನೆನಪಿಗೆ ಬರುತ್ತಿದೆ ಅನಿಸುತ್ತಿದ್ದಂತೇ ಭಾವನೆಗಳ ಬದುಕಿಂದ ತಾನೆಷ್ಟು ದೂರ ಬಂದಿದ್ದೇನೆ ಅನ್ನಿಸಿತು. ತನಗೆ ತನ್ನನ್ನೂ ಕನ್ನಡಿಯಲ್ಲಿ ನೋಡಿಕೊಳ್ಳುವ ಅಭ್ಯಾಸವೇ ಮರೆತು ಹೋಗಿದೆ ಅನ್ನಿಸಿತು.! ಅವತ್ತಿನ ಲಂಗ ದಾವಣಿ ತೊಟ್ಟು ಬಿಸಿಲು ಮಳೆಯೆನ್ನದೇ ಕುಮಟಾ ಪೇಟೆಯ ಬೀದಿ ಬೀದಿ ಸುತ್ತಿ ತನ್ನ ಕರಿದಾದ ಮುಖವನ್ನ ಇನ್ನೂ ಕರಿದಗಿಸಿಕೊಂಡು ಕಣ್ಣಲ್ಲೊಂದಿಷ್ಟು ಕನಸು ಇಟ್ಕೊಂಡು ನಡೆದ ದಿನಗಳು ಈ ಆರು ವರ್ಷದಲ್ಲಿ ತನ್ನ ಬದುಕೆಷ್ಟು ಬದಲಾಗಿದೆ! ಅವತ್ತೇನಾದರೂ ತಾನು ಹದಿ ಭಾವನೆಗಳಿಗೆ ಜೋತು ಬಿದ್ದಿದ್ದರೆ ತನ್ನ ಬದುಕು ಹೇಗಿರುತ್ತಿತ್ತು! ಯೋಚನೆಗೂ ಸಿಗದು ಎಂದುಕೊಳ್ಳುತ್ತಿದ್ದಂತೆ ಅಶ್ವಿನಿ ಅಮ್ಮ ಬಂದರು.
ವಿಶಾಖ ಗೊತ್ತಾ ನಿಂಗೆ? ನಮ್ಮ ಅನಂತಜ್ಜನ ಮನೆ ಕರ್ಣ ಇದ್ದಾನಲ್ಲ. ಅವನ ಹಾಸ್ಪಿಟಲ್ ನಲ್ಲಿಟ್ಟು ಒಂದು ತಿಂಗಳಾಗಿತ್ತಂತೆ. ಅವನಿಗೆ ಚಿಕ್ಕೋನಿದ್ದಾಗಲೇ ಹಾರ್ಟ ಪ್ರಾಬ್ಲಂ ಇತ್ತಲ್ಲವ. ಹೋಗ್ಬಿಟ್ನಂತೆ ಬೆಳಿಗ್ಗೆ.
ಅವರೇ ಮಾತು ಮುಂದುವರೆಸಿದರು. ಪಾಪದ ಹುಡುಗ
ಬದುಕು ಬದಲಾಗಿದೆ! ನಿಜ ಇನ್ನು ಕನಸೂ ಕಾಣುವ ಹಾಗಿಲ್ಲ! ನೋವಿಗೂ ಅರ್ಥವಿಲ್ಲ
ಎಂದೆನೆಸಿ ಎದುರಿಗಿನ ಕೆಲಸ ಕೈಗೆತ್ತಿಕೊಂಡಳು.......

ಕಥೆಯ ಅಂತ್ಯ - ಕಥೆಯ ಆದಿ ಮಧ್ಯಗಳಿಗೆ ಬೇರೆಯದೇ ಭಾವಗಳ ತುಂಬಿದಂತಿದೆ...
ReplyDeleteಇಷ್ಟವಾಯಿತು...
Cholo iddu chikkamma:) Liked it:)
ReplyDeleteಕಾಡುವ ಕಥೆ ಮೇಡಂ, ಓದಿ ಕಣ್ಣು ತೇವಗೊಂಡವು·ಹನುಮಂತ·ಹಾಲಿಗೇರಿ
ReplyDeleteಮೂರು ಹಂತಗಳಲ್ಲೂ ಭಾವ ವೈವಿಧ್ಯವನ್ನು ನೀವು ದಾಖಲಿಸಿದ್ದೀರಿ. ಅತೀವ ನೋವಿಗೆ ಮನಸ್ಸು ಈಡಾಗುವ ಹೊತ್ತಿನಲ್ಲಿ ನಿಮ್ಮ ಈ ಬರಹ ನನಗೆ ನೆನಪಾಗಲಿ. ಸ್ವಾವಲಂಬಿ ಅಶ್ವಿನಿ, ವಿಶಾಖ, ಕರ್ಣ ಮನಸ್ಸಿನಲ್ಲಿ ಉಳಿಯುತ್ತಾರೆ.
ReplyDeleteಕಥೆಯ ಪಾತ್ರಗಳೆಲ್ಲವೂ ಇಷ್ಟವಾಯ್ತು ನಂಗೆ...ಕೊನೆಗೊಮ್ಮೆ ವಿಶಾಖಾಳ ಬಗೆಗೊಂದು ಗೌರವ ಮೂಡಿದ್ದು ಸುಳ್ಳಲ್ಲ ...ಎಲ್ಲರನ್ನೂ ಪ್ರೀತಿಸೋ ,ಗೌರವಿಸೋ ಆದರಿಸೋ ಅವಳ ಗುಣಕ್ಕೆ ನನ್ನದೊಂದು ನಮನ ....ಮನ ಆದ್ರ ಆಯ್ತು
ReplyDeleteಬರೀತಾ ಇರಿ
ತುಂಬಾ ತುಂಬಾ ಧನ್ಯವಾದಗಳು. ಕಥೆಯ ಓದಿ ಅನಿಸಿಕೆಗಳ ಹಂಚಿಕೊಂಡಿದ್ದಕ್ಕಾಗಿ..
ReplyDelete