ಮನಸಿನ ಹರಿಯುವಿಕೆಗೆ ಆನಂದಕ್ಕೆ ಪೃಕೃತಿಯಿದೆ. ಹಿಮ ಸುರಿಯುವ ಮುಂಜಾನೆಗಳಿವೆ. ಅದ್ಭುತ ಸೂರ್ಯಾಸ್ತಗಳಿವೆ. ಸಮುದ್ರವಿದೆ. ತಂಗಾಳಿಯಿದೆ. ಬೆಳದಿಂಗಳ ರಾತ್ರಿಗಳಿವೆ.. ಕತ್ತಲೆಯ ಮೈತ್ರಿಯಿದೆ. ಎಲ್ಲಾ ಇದೆ. ಆನಂದಿಸುವ ಮನಸೂ ಇದೆ. ಆದರೆ ಮನುಷ್ಯ ಬಯಸೋದು ತನ್ನ ನೋವು ನಲಿವುಗಳಿಗೆಲ್ಲ ಹಂಚಿಕೊಳ್ಳುವ ಇನ್ನೊಂದು ಮನಸಿನ ಆಸರೆಯನ್ನ... ಮನುಷ್ಯನ ಭಾವಗಳಿಗೆ ಮತ್ತೊಂದು ಮನಸಿನ ಆಸರೆಯ ಹುಚ್ಚು.... ಇದೂ ಸಹ ಅಂತದ್ದೇ ಒಂದು ಹುಚ್ಚು... ವಿಚಾರ ಭಾವಗಳಿಗೆಲ್ಲ ಅಕ್ಷರ ಕೊಡುವ ಹುಚ್ಚು... ಖಾಲಿಯಾಗುವ ಕನಸು.... ಅಂತದ್ದೊಂದುಯಾನದಲ್ಲಿ ನಿಮ್ಮ ಜೊತೆ.......







Tuesday, November 13, 2012

ಹಚ್ಚೋಣ ಬನ್ನಿ ಹಣತೆಗಳ..






                         ಇದು ಲಕ್ಷ್ಮೀಪೂಜೆಯ ಹೊತ್ತು. ಮುಸ್ಸಂಜೆಯ ಈ  ಸಮಯ ಮನೆಮನೆಗಳಲ್ಲಿ ದೀಪ ಹಚ್ಚುವ ಸಂಭ್ರಮ! ಅಂಗಡಿ, ಪ್ಯಾಕ್ಟರಿ, ಬ್ಯುಸಿನೆಸ್ ಏನೇ ಇರಲಿ.. ಉದ್ಯೋಗಸ್ಥರಿಗೆಲ್ಲ  ತಮ್ಮ ಆದಾಯದ ಮೂಲವನ್ನು ಪೂಜಿಸಿ  ಆ ಶ್ರೀಮಾತೆ ಲಕ್ಷ್ಮೀ ಯಲ್ಲಿ ಮನಃಪೂರ್ವಕ ಪ್ರಾಥರ್ಿಸಿ ಪೂಜಿಸಿ ಎಲ್ಲೆಲ್ಲು ದೀಪಗಳ ಹಚ್ಚಿಟ್ಟು ಸಂಭ್ರಸುವುದು ಕಾಣುತ್ತಿದ್ದೇವೆ.
ಹಾಗೇ ಒಂದು ಪುಟ್ಟ ದೀಪದೊಂದಿಗೆ ನನ್ನದೂ ಪ್ರಾರ್ಥನೆ ಮುಗಿಸಿ ನಿಮ್ಮೆದುರು ಹೀಗೆ ಮನಸು ಹರವಿಕೊಂಡು ಕೂತಿದ್ದೇನೆ


   ಪೂಜೆಗಳೆಲ್ಲ  ಮನಸಿನ ಸಂಭ್ರಮಕ್ಕೆ, ಶೃದ್ಧೆ ಭಕ್ತಿಗೆ. ದೇವರು ಒಂದು ದಿನವಲ್ಲ. ಪ್ರತಿ ದಿನವೂ ಪ್ರತಿಕ್ಷಣವೂ ಅವನ ಕರುಣೆಯ ಅವಶ್ಯಕತೆಯಿದೆ ನಮಗೆಲ್ಲರಿಗೂ..
ಇಂದಿನ ಈ ಪುಟ್ಟ ಹಣತೆಯಲ್ಲಿ ಹಚ್ಚಿಟ್ಟ ಎಲ್ಲ ದೀಪಗಳು ನಮ್ಮಬದುಕನ್ನೇ ಬೆಳಗಲಿ ಎಂಬ ಪ್ರಾರ್ಥನೆ ಅವಳಲ್ಲಿ.
ಈ ದಿನ  ಅವಳಲ್ಲಿ ಇನ್ನಷ್ಟು ನಿವೇದನೆಗಳ ತಂದಿದ್ದೇನೆ!  ಜೋಗಿತಿಯ ಜೋಳಿಗೆಯಲ್ಲಿ ಅವಳ ಕರುಣೆಗಾಗಿ ಬೇಡಿಕೆಯ ಪಟ್ಟಿಗಳಿವೆ! ತುಂಬಿಕೊಳ್ಳಲೆಂಬ ಶುದ್ಧ ಬೇಡಿಕೆಯಿದು.
ಖಾಲಿಯಾಗುವ ಹಂಬಲದಲ್ಲಿಯೇ ತುಂಬಿಕೊಳ್ಳುವ ಮನಸಿನ ಸೋಜಿಗಗಳಿವು!

   ಮೊನ್ನೆ ಮೊನ್ನೆ ಪ್ರೀತಿಯಿಂದ  ಸಮ್ಮಾನಿಸಿದ ಕುಮಟಾ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿಗೊಂದು ಮನಸ್ವೀ ಕೃತಜ್ಞತೆಯನ್ನು ಮೊಟ್ಟಮೊದಲು ಸಲ್ಲಿಸುತ್ತೇನೆ.
ಸಮ್ಮಾನವೆಂಬುದು  ಹಾಗೆ ಸ್ವೀಕರಿಸುವ ಅರ್ಹತೆಗಳು ನನಗೆಷ್ಟಿವೆ ಗೊತ್ತಿಲ್ಲ ನನಗೆ. ಆದರೆ ಇಷ್ಟು ಮಾತ್ರ ಹೇಳಬಲ್ಲೆ. ನಮ್ಮದೇ ತಾಲೂಕಿನಲ್ಲಿ ನನಗಿಂತ ಹಿರಿಯರು, ಸಾಧನೆ ಮಾಡಿದವರು ಹಾಗೂ ಪ್ರತಿಭಾವಂತರೂ ಸಾಕಷ್ಟು ಜನರಿದ್ದಾರೆಂದು ಅರಿವಿನಿಂದಲೂ ವಿನಯದಿಂದಲೂ ಹೇಳಬಯಸುತ್ತೇನೆ.  ಹಾಗಿದ್ದೂ ಸಹ ಈ ಸಮ್ಮಾನ ನನ್ನಂತ ಹೊಸತಲೆಮಾನ
ಹಲವು ಬರಹಗಾರರಿಗೆ ಸಲ್ಲುವುದು. ಮತ್ತು ಇದು ನನ್ನನ್ನೂ ಸೇರಿ ಇನ್ನಷ್ಟು ಜನರಿಗೆ ಸ್ಪೂರ್ತಿದಾಯಕಾವಾಗಿದ್ದು ಆ ಕಾರಣಕ್ಕೆ  ಇದು ಶ್ಲಾಘನೀಯವೆಂದು ಹಾಗೂ ಸಾಹಿತ್ಯ ಪರಿಷತ್ತಿನ ಪ್ರೀತಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳನ್ನು ಅರ್ಪಿಸಲು ಬಯಸುತ್ತೇನೆ.

 ದೀಪಾವಳಿ ಈ ಶುಭ ಸಂದರ್ಬದಲ್ಲಿ ತಾಯಿ ಭಗವತಿ ಇನ್ನಷ್ಟು ಬರೆಯುವ ಓದುವ ಹಾಗೂ ಕನ್ನಡಾಂಬೆಯ ಸೇವೆ ಸಲ್ಲಿಸುವ ಅವಕಾಶ ನನಗೆ ದಯಪಾಲಿಸಲೆಂದು ಬೇಡಿಕೊಳ್ಳುತ್ತೇನೆ. ಅಂತಜರ್ಾಲದಲ್ಲಿ ಇತ್ತೀಚೆಗಷ್ಟೆ ಅಂಬೆಗಾಲಿಟ್ಟು ಬರೆಯುತ್ತಿರುವ ನನ್ನನ್ನು ಪ್ರೀತಿಯಿಂದ   ಆದರಿಸಿದ ನನ್ನೆಲ್ಲ ಮಿತ್ರರಿಗೆ ತುಂಬು ಮನದ ಕೃತಜ್ಞತೆಗಳು. ನನ್ನ  ಸಾಹಿತ್ಯ ಬಳಗದ ಎಲ್ಲ ಸ್ನೇಹಿತರಿಗೂ ನನ್ನ ಬೆಳೆಸಿದ ನನ್ನ ಬದುಕಿನ ಎಲ್ಲ ಸಂಗತಿಗಳಿಗೂ ನಾನು ಋಣಿಯಾಗಿದ್ದೇನೆ. ಮತ್ತೊಮ್ಮೆ   ಎಲ್ಲರಿಗೂ  ದೀಪಾವಳಿಯ ಶುಭಕೋರುತ್ತ.
ಇದೊಂದು ಪುಟ್ಟ ಸಾಲಿನೊಂದಿಗೆ ನಿಮ್ಮ

-ಸಿರಿ


ಕತ್ತಲೆಯ ರಾತ್ರಿಯಲಿ
ನಕ್ಷತ್ರಗಳ ಹಾಗೆ
ಬದುಕ ದಾರಿಯಲಿಂದು
ಬೆಳಕ ಹಣತೆ!

ಭಾವಗಳ ಬತ್ತಿಯಲಿ
ಪ್ರೀತಿ ತೈಲವನೆರೆದು
ಬೊಗಸೆ ಹಣತೆಯಲಿಟ್ಟ
ಚೆಲುವ ಕವಿತೆ!

ದೀಪಗಳ  ಹಚ್ಚಿಟ್ಟು
ಹೊರಟ ಯಾತ್ರಿಕನಾರೋ
ತಿರುವಿಗೆಲ್ಲಿಯ ಬೆಳಕು
ಅವನೇ ತಾನೆ?


ಅಂತರಾತ್ಮನೆ ಜ್ಯೋತಿ
ಅವನೆ ಇಹದ ಅಕ್ಷಿ.
ಭವಕು ದಿವ್ಯತ್ವಕ್ಕೂ
ದೀಪಗಳೇ ಸಾಕ್ಷಿ!
















Saturday, October 27, 2012

ಕನಸು






ಸಾಗರ ತೀರದ ಮುಸ್ಸಂಜೆಯಲಿ
ಮತ್ತದೇ ಹೆಜ್ಜೆಗಳ ಮೂಡಿಸುವ ಕನಸು
ಬುಟ್ಟಿ ತುಂಬ ಬೊಗಸೆ ಪಾರಿಜಾತವ ತುಂಬಿ
ನಿನ್ನ ನಸುನಗೆಗೆ ಕಾಯುವ ಮನಸು!

ಜಲಪಾತದಂಚಲ್ಲಿ ಮುತ್ತುಗಳ ತುಂಬಿಕೊಂಡು
ಆ ಮೌನ ಶಿಖರಗಳ ಅರ್ಚಿಸುವ ಕನಸು!
ದೇಗುಲದ ಗಂಟೆಯಲಿ ನಾದಗಳ ಸವಿಯುತ್ತ
ಕಲ್ಲಾಗಿ ಬಿಡುವಂತ ಕಲೆಯ ಮನಸು!

ಕೈಯೆಡೆಗೆ ಕೈಚಾಚಿ ಹಿಡಿದ ಅಂಗೈಯಲ್ಲಿ
ಬೆಸೆದ  ಬಾಂಧವ್ಯಗಳ ಮಧುರ ಕನಸು
ಮಾತಿಲ್ಲದೇ ನಡೆದ ಮೌನಾಂಧಕಾರದಲಿ
ಭಗವತಿಯ ಧ್ಯಾನಿಸುವ ಶುದ್ಧ ಮನಸು!

ಮತ್ತಷ್ಟು ಕನಸುಗಳ ಬುಟ್ಟಿ ಹೆಣೆಯುತ್ತ
ಈ ಬೆಳಗ ಬೆಳಕಲ್ಲಿ ನಲಿವ ಮನಸು!
ಭಾವದ ಹೊಸ್ತಿಲೊಳಗೆ ಹೂನಗೆಯಹಾಸುತ್ತ
ನಿನ್ನ ಬರಮಾಡಿಕೊಳ್ಳುವ ಪುಟ್ಟ ಕನಸು

Friday, August 24, 2012




AREHOLE SAHITYA SAMBHRMA




             ಕರಾವಳಿಯ ನಮಗೆಲ್ಲ ಸಮುದ್ರ ಹೊಸದೇನಲ್ಲ. ಆದರೆ ನನಗಂತೂ ಸಮುದ್ರದ ಅಲೆಗಳೆಂದರೆ ಅದೊಂದುತರಹದ ವಿಚಿತ್ರ ಆಕರ್ಷಣೆ. ಮಂಗಳೂರಿನ ಹೆಸರಿನ ಜೊತೆ ಈ ಅಲೆಅಲೆಗಳು ಕುಣಿದಾಡಿದ್ದವು ಹೊರಡುವ ಮೊದಲಿನ ಕನಸಿನಲ್ಲಿ! ಆದರೇನು! ಈ ಬಾರಿಯೂ ಸಮುದ್ರದಂಚಿಗೆ ಹೋಗುವ ಸಮಯವಾಗಲೇ ಇಲ್ಲ. ಆದರೆ ಅಂತಹ ಸಮುದ್ರವನ್ನು ಮರೆಸುವಂತಹ ಹೊಸದೊಂದು ಪ್ರಪಂಚದಲ್ಲಿ ವಿಹರಿಸುವಂತೆ ಮಾಡಿದ್ದು ಅರೆಹೊಳೆ ಪ್ರತಿಷ್ಠಾನ ದ ಸಾಹಿತ್ಯ ಸೌರಭ ಕಾರ್ಯಕ್ರಮ. ಮತ್ತು 3ಕೆ ಬಳಗದ ಸಹಯೋಗ, ಸ್ನೇಹ...   ಎಲ್ಲೆಲ್ಲೋ ಹುಟ್ಟಿ ಎಲ್ಲೋ ಬೆಳೆದ ನೂರಾರು ಜೀವಗಳ ಸ್ನೇಹ ಬೆಸೆಯುವಂತೆ ಮಾಡುವ ಶಕ್ತಿಯಿರೋದು ಈ ಸಾಹಿತ್ಯ, ಸಂಗೀತ ಹಾಗು ಶಿಲ್ಪ, ಚಿತ್ರಗಳಂತ ಲಲಿತ ಕಲೆಗಳಿಗೆ ಮಾತ್ರ ಸಾಧ್ಯ. ನಾಲ್ಕಾರು ವರ್ಷಗಳ ಹಿಂದೆ ಸಾಪ್ಟ್ ವೇರ್ ಪ್ರಪಂಚವೆಂದರೆ ಸಾಹಿತ್ಯದಿಂದ ದೂರವಿರುವ ಪ್ರಪಂಚ ಎಂಬ ಕಲ್ಪನೆಗಳಿತ್ತು. ಮನುಷ್ಯ ಭಾವಗಳಿಗಿಂತ ಅವರೆಲ್ಲ ಹಣ, ಮತ್ತು ತಂತ್ರಜ್ಞಾನಗಳ ಮಾತ್ರ ಅರ್ಥಮಾಡಿಕೊಳ್ಳಬಲ್ಲರೆಂಬ ಹುಸಿ ಅಪವಾದವೊಂದಿತ್ತು ಸಾಹಿತ್ಯವಲಯದಲ್ಲಿ. ಅಷ್ಟೇ ಅಲ್ಲದೇ ಗಂಭೀರವಾದ ಅಥವಾ ಜೀವನಕ್ಕೆ ಸನಿಹವಾದ ಸಾಹಿತ್ಯ ಪ್ರಪಂಚದಿಂದ ಅವರನ್ನು ಪ್ರತ್ಯೇಕವೆಂಬ ಭಾವವೂ ಬುದ್ಧಿ ಜೀವಿಗಳಲ್ಲಿತ್ತು. ಇಂದು ಈ ಎಲ್ಲ ಪ್ರಶ್ನೆಗಳಿಗೆ ಉತ್ತರವೆಂಬಂತೆ
ತಂತ್ರಜ್ಞಾನದ ಬಳಕೆಯಿಂದಲೇ ಅದೆಷ್ಟೋ ಸಾಹಿತ್ಯ ಮಾತ್ರವಲ್ಲ ಸ್ನೇಹಗಳು, ಉತ್ತಮ ಕೆಲಸಗಳು, ನಡೆಯುತ್ತಿವೆ. ಅಲ್ಲಿಯೇ ಹುಟ್ಟಿ ಬೆಳೆಯುತ್ತ ಕಲಿಯುತ್ತ, ಭಾವಗಳಿಗೆ ಜೀವ ತುಂಬುತ್ತ ಸಾಹಿತಿಗಳಾಗಿ ಬೆಳೆಯುತ್ತ ಸಾಮಾಜಿಕ ಪ್ರಪಂಚದಲ್ಲಿ ತಮ್ಮ ಹೆಸರನ್ನು ಪ್ರತಿಷ್ಠಾಪಿಸಿಕೊಂಡ ಅನೇಕ ಜನರನ್ನು ನಾವು ನೋಡುತ್ತಿದ್ದೇವೆ. ಅಲ್ಲಿಗೆ ತಂತ್ರಜ್ಞಾನ ಜೀವಂತಿಕೆಯಿಂದ ಹೊರತಾಗೇನೂ ಉಳಿಯದೇ ನಿರಂತರ ಚಲನೆಯಲ್ಲಿರುವ ಸಂಸ್ಕೃತಿಗೆ ಪೂರಕವಾಗುಳಿದಿದೆ ಎಂಬುದು ಸತ್ಯವಾಯಿತು. ಯಾವುದನ್ನೇ ಆಗಲಿ ಬದಲಾವಣೆಗೆ ಒಗ್ಗಿಕೊಳ್ಳುವ ಮುನ್ನ ಒಂದಿಷ್ಟು ಸಂಘರ್ಷಕ್ಕೊಳಪಡುವುದು ಇರುವುದೇ. ಕೆಟ್ಟದ್ದು ಒಳ್ಳೆಯದು ಎರಡೂ ಪರಿಣಾಮಗಳನ್ನು ಅನುಭವಿಸಬೇಕಾದದ್ದೇ. ಈ ಎಲ್ಲವನ್ನು ಮೀರಿ ಕೆಟ್ಟದ್ದನ್ನು ಬದಿಗಿರಿಸಿ ತಂತ್ರಜ್ಞಾನದ ಬಹುಪಯೋಗಿ ಸಾಮಥ್ರ್ಯವನ್ನು ಸದುಪಯೋಗಿಸಿಕೊಂಡಾಗ ಒಂದು ಹೊಸ ಉದಯ, ಹೊಸ ಹುಟ್ಟು ತನ್ನ ಅಸ್ತಿತ್ವವನ್ನು ಸಾರ್ಥಕಗೊಳಿಸಿಕೊಳ್ಳುತ್ತದೆ. ಇದಕ್ಕೆ ಅಂತಜರ್ಾಲ ಬರಹಗಾರರ ಸಮಾವೇಷ ನಡೆಸಿ  ಅಚ್ಚುಕಟ್ಟಾಗಿ ಅದನ್ನು ನಿರ್ವಹಿಸುತ್ತಿರುವ ಅರೆಹೊಳೆ ಪ್ರತಿಷ್ಟಾನ ಹಾಗು 3ಕೆ ಬಳಗವೇ ಸಾಕ್ಷಿಯಾಗಿದೆ.

         ಕಾರ್ಯಕ್ರಮಕ್ಕೆ ನಾನು ತಲುಪಿದ್ದು ತಡವಾಗಿಯೇ... ಅಲ್ಲಿಯವರೆಗಿನ ಕಾರ್ಯಕ್ರಮಗಳ ಮಿಸ್ ಮಾಡಿಕೊಂಡದ್ದಕ್ಕಾಗಿ ಪಶ್ಚಾತ್ತಾಪವಿದೆ. ಆದರೆ ಕಾರ್ಯಕ್ರಮದ ರೂಪುರೇಷೆ, ನಿರ್ವಹಣೆ ಮತ್ತು ಕಾರ್ಯಕ್ರಮದ ಕುರಿತಾಗಿ ನನ್ನ ಅನಿಸಿಕೆಗಳ ವ್ಯಕ್ತಪಡಿಸಲು ನಾನಿದ್ದ ಸ್ವಲ್ಪ ಹೊತ್ತೇ ಸಾಕು. ಸಾಹಿತ್ಯ ಸಮಾರಂಭಗಳೆಂದರೆ ಭಣ ಬಣಗುಡುತ್ತಿರುವ ಸಭೆಗಳು! ಕೆಲವೊಮ್ಮೆ ವೇದಿಕೆಎದಿರಿಗಿಂತ ವೇದಿಕೆಯ ಮೇಲಿನ ಸಂಖ್ಯೆಯೇ ಜಾಸ್ತಿ ಎನ್ನಿಸಿ ಹಾಸ್ಯಾಸ್ಪದವೆನ್ನಿಸಿದ ಸಭೆಗಳನ್ನೂ ನೋಡಿದ್ದ ನನಗೆ ಮಂಗಳೂರಿನ ಸಾಹಿತ್ಯಸಕ್ತ ಪ್ರಜೆಗಳಿಗೆ ವಂದನೆ ಸಲ್ಲಿಸಬೇಕೆನ್ನಿಸಿದೆ. ಆಸಕ್ತ ವಿದ್ಯಾಥರ್ಿ ಸಮುದಾಯ ಸಹ ಅಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಪ್ರಯೋಜನ ಪಡೆದುಕೊಂಡಿದ್ದು ಸಂಘಟಕರ ಶ್ರಮವನ್ನು ಸಾರ್ಥಕಗೊಳಿಸಿದೆ. ಈ ನಿಟ್ಟಿನಲ್ಲಿ  ಕಾರ್ಯಕ್ರಮದ ಆಯೋಜಕರು ಬಹಳಷ್ಟು ಶ್ರಮವಹಿಸದ್ದಾರೆಂದು ಬೇರೆ ಹೇಳಬೇಕಿಲ್ಲ. ಅಂತಜರ್ಾಲದ ಬಳಕೆ ಮತ್ತು ಸದುಪಯೋಗದ ಕುರಿತಾದ ಮಾಹಿತಿಯುಕ್ತ ಸಂವಾದ ವಿದ್ಯಾಥರ್ಿಗಳಿಗಷ್ಟೇ ಅಲ್ಲದೇ ಪ್ರತಿಯೊಬ್ಬರಿಗೂ ಪ್ರಯೋಜನಕಾರಿಯಾಗಿತ್ತು. ಆಗಮಿಸಿದ ಎಲ್ಲ ಅತಿಥಿಗಳ ಉಪನ್ಯಾಸಗಳು ವಿದ್ವತ್ಪೂರ್ಣವಾಗಿದ್ದು 
ಸಾಹಿತ್ಯದ ಪೂವರ್ಾಪರಗಳ ಚಿಂತನೆಗೆ ಸಾಕಷ್ಟು ವಿಷಯಗಳಿದ್ದವು.  ಇಷ್ಟಲ್ಲದೇ ಇಂದಿನ ಹೆಸರಾಂತ ಸಾಹಿತ್ಯ ದಿಗ್ಗಜರುಗಳು ಸಹ ಅಂತಜರ್ಾಲವನ್ನು ಹೇಗೆ ಸದುಪಯೋಗಪಡಿಸಿಕೊಂಡಿದ್ದಾರೆಂಬುದು ವೇಗದ ಬದುಕಿನ ಸವಾಲಿಗೆ ಒಡ್ಡಿಕೊಳ್ಳುತ್ತಿರುವ ಪ್ರತಿಯೊಬ್ಬರಿಗೂ ಮಾರ್ಗದರ್ಶಕವಾಗಿತ್ತು.


    ಇನ್ನು  ಕವಿತೆ ಕಾವ್ಯದ ಕುರಿತು ಒಂದೆರಡು ಮಾತು ಹೇಳಲೇಬೇಕು. 3ಕೆ ಬಳಗದ ಸದಸ್ಯರಾಗಲೀ ಉಳಿದ ಆಸಕ್ತರಾಗಲೀ ಕವಿತೆಗಳ ಕುರಿತು ಚಚರ್ೆಗೆ ಇಳಿದುಕೊಳ್ಳಲಿಲ್ಲ ಎಂಬುದು ಸತ್ಯವಾದರೂ ಒಂದು ಸಮಯಕ್ಕೆ ಕವಿತೆಗಳನ್ನು ಓದಿದರೆ ಕೇಳುವವರಿಲ್ಲ, ಬರೆದರೆ ಓದುವವರಿಲ್ಲ ಎಂಬಂತ ಸ್ಥಿತಿಯಿಂದ ಹೊರಬಂದ ಇಂದಿನ ಬೆಳವಣಿಗೆಯನ್ನು ಗಮನಿಸಿದರೆ ಮೌಲ್ಯವೇ ಒಂದು ಮೈಲಿಗಲ್ಲು ಎಂದುಕೊಳ್ಳುವುದು ಸಮಂಜಸವಲ್ಲ ಎನ್ನಿಸುತ್ತದೆ. ಈ ಕಾರಣದಿಂದ ಒಬ್ಬೊಬ್ಬರಾಗಿ ಸಾಹಿತ್ಯಾಸಕ್ತರು ಬೆಳೆಯುತ್ತಾರೆ. ಒಂದಿನ ಇವರೆಲ್ಲರೂ ದೊಡ್ಡ ಲೇಖಕರಾಗದಿರಬಹುದು. ಆದರೆ ಉತ್ತಮ ಓದುಗರಾಗುತ್ತಾರೆಂಬ ನಂಬಿಕೆ ನನ್ನದು. ಒಬ್ಬ ಉತ್ತಮ ಓದುಗನನ್ನು ತಯಾರಿಸುವುದು ಸಹ ಸಾಹಿತ್ಯಕ್ಕೆ ಮಾತ್ರ ಸಾಧ್ಯ. ಅದಕ್ಕೆಂದೇ ಬಾಲಿಶ ಬೆಳವಣಿಗೆಗಳು ಸಹ  ಎಲ್ಲೋ ಒಂದು ಶುಭಾರಂಭವನ್ನೇ ಸೂಚಿಸುತ್ತವೆ. ಈ ದೃಷ್ಟಿಯಿಂದ ನೋಡಿದಾಗ ಬಳಗದ ಕವಿತೆಗಳು ಭವಿಷ್ಯದಲ್ಲಿ ಉತ್ತಮವಾದುದನ್ನು ಸಾಧಿಸುತ್ತಾರೆಂದು ನಿರೀಕ್ಷಿಸಬಹುದು. 
  

     ಕಾವ್ಯ ಒಂದು ಸೀಮಿತ ವ್ಯಾಖ್ಯೆಗೆ ನಿಲುಕುವ ಶಬ್ಧವಲ್ಲ.  ಇದರ ಆಳ ಅಗಲ ವಿಸ್ತಾರ ತುಂಬಾ ವಿಶಾಲವಾಗಿದೆ.  ಕವಿತೆ ಹುಟ್ಟುವುದು ಮತ್ತು ಕಟ್ಟುವುದು ಎಂಬ ಎರಡು ವಿಧಗಳಿವೆ. ಕಾವ್ಯದ ಕುರಿತಾಗಿ ಅದೆಷ್ಟೇ ವ್ಯಾಖ್ಯೆಗಳ ಬಳಸಿದರೂ ಇನ್ನಷ್ಟು ಉಳಿಯುತ್ತದೆ. ವ್ಯಾಕರಣ, ಶಬ್ಧ, ಸೌಂದರ್ಯ, ಉಪಮೆ ಅಲಂಕಾರಗಳು. ಇವೆಲ್ಲವೂ ಕಾವ್ಯಕ್ಕೆ ಪೂರಕ. ಭಾವಗಳು ಕಾವ್ಯದ ಜೀವಾಳ. ಹಾಗಿದ್ದಾಗಲೂ ಕಾವ್ಯ ವಿಮಶರ್ೆಗೊಳ್ಳುವುದು ಶಬ್ಧ, ಅಲಂಕಾರ ಬಳಕೆಯಿಂದಾಗಿ.. ಇವನ್ನೆಲ್ಲ ನಾನು ತುಂಬಾ ತಿಳಿದಿದ್ದೇನೆಂದಲ್ಲ. ಆದರೆ ನಾವು ತಿಳಿದಿರುವುದಕ್ಕಿಂತ ಹೆಚ್ಚು ವಿಶಾಲವೂ ವಿಸ್ತಾರವೂ ಆದ ಕಾವ್ಯವನ್ನು ನಾವೆಲ್ಲ ಹೀಗೇ ಅಂತ ನಿರ್ಣಯಿಸುವ ತಪ್ಪನ್ನು ಮಾಡದೇ ಕಾವ್ಯದೆದುರು ಒಂದು ವಿನಮ್ರತೆಯನ್ನು ಕಾಯ್ದುಕೊಂಡಾಗ  ನಮ್ಮ ಕವಿತ್ವಕ್ಕೆ ಹೆಚ್ಚು ಶಕ್ತಿತುಂಬಬಹುದೆಂಬುದು ನನ್ನ ಅನಿಸಿಕೆ.ಈ ಮಾತಿನ ಜೊತೆಗೆ ಇನ್ನು ಸಾಹಿತ್ಯ ಪ್ರಪಂಚದಲ್ಲಿ ಕಣ್ಬಿಡುತ್ತಿರುವ ನಮಗೆಲ್ಲ ಆ ಅಕ್ಷರಮಾತೆಯ ಕೃಪಾ ಕಟಾಕ್ಷವಿರಲೆಂಬ ಪ್ರಾರ್ಥನೆ. 


    ನಾವೆಲ್ಲ ಕವಿತೆ ಗೀಚುವುದಕ್ಕಿಂತ ದೊಡ್ಡದು ನಮ್ಮ ಗೀಚಿದ ಕವಿತೆಗಳಿಗೂ ಒಂದು ವೇದಿಕೆ ಕಟ್ಟಿಕೊಡುವ ಮನಸುಗಳದ್ದು. ಮೊನ್ನೆಯಷ್ಟೇ ಕೇಳಿದ ಒಂದು ಮಾತು ಇಲ್ಲಿ ನೆನಪಾಗುತ್ತದೆ."ಪ್ರಾರ್ಥನೆ ಮಾಡುವ ತುಟಿಗಳಿಗಿಂತ ಸಹಾಯ ಮಾಡುವ ಹಸ್ತಗಳೇ ಶ್ರೇಷ್ಠ" ಎಂಬುದು. ಅಂತ ಶ್ರೇಷ್ಠ ಕೆಲಸ ಇಂತಹ ಕಾರ್ಯಕ್ರಮದ ಸಂಘಟನೆ. ಎಷ್ಟೋ 
ಮನಸುಗಳ ಸ್ನೇಹಗಳ ಬೆಸೆಯುವ ಕೆಲಸಕ್ಕೆ ನಮ್ಮೆಲ್ಲರ ನಮನವಿರಲಿ.  ಈ ಕಾರ್ಯಕ್ರಮದ ಹಿಂದೆ ದುಡಿದ ಎಲ್ಲ ಕೈಗಳಿಗೂ ನಮ್ಮ ಹೃದಯಪೂರ್ವಕ ವಂದನೆಗಳು.  ಅಂತಜರ್ಾಲ ಪ್ರಪಂಚದ ಬಂಧು ಬಾಂಧವರೇ  ಸ್ನೇಹಪೂರ್ಣ ಮನಸುಗಳು ಹೀಗೆ ಜೀವಂತಿಕೆಯಿಂದ ಸದಾ ಅರಳುತ್ತಿರಲಿ. ಮತ್ತೆ ಸಿಗೋಣ

ನಿಮ್ಮ ಸಿರಿ.














Wednesday, August 8, 2012

ಕಲ್ಲು ಮತ್ತು ಮೂರ್ತಿ


ಕಲ್ಲು ಮತ್ತು ಮೂರ್ತಿ

ರಾಧಾ " ಬೃಂದಾವನ" ದ ಬೆಳದಿಂಗಳಲ್ಲಿ ಕುಳಿತು ನಿರೀಕ್ಷೆಯಲ್ಲಿದ್ದಳು. ಮೈ ಹೆಪ್ಪುಗಟ್ಟುವ ಮಾಗಿ ಛಳಿ. ಅವಳ ದುಪ್ಪಟ್ಟಾ ಹಾರುತ್ತಿತ್ತು. ಬಿಗಿಯಾಗಿ ಹಿಡಿದಷ್ಟೂ. ಮನಸ್ಸಿನಂತೆ. ಜಾವ ಎರಡು ಕಳೆದರೂ ಪತ್ತೆಯಿಲ್ಲ. ಅಳುವಹಾಗೆನಿಸುತ್ತಿತ್ತು.ಅಳು ಬರುವ ಮುನ್ನ ಪ್ರೀತಿಯೆಂಬ ಪ್ರೀತಿ ಅವಳನ್ನು ಅಣಕಿಸುತ್ತಿತ್ತು.ನಿನಗೆ ವಿಶ್ವಾಸವಿಲ್ಲ ಅಲ್ಲವೇ? ಅನ್ನುತ್ತ. ಹಾಗೆ ನಂಬಲೂ ಅವಳಿಗೆ ಕಷ್ಟ. ಅವಳ ವಿಶ್ವಾಸವೇ ಅವಳ ಬದುಕು. ಅದೇ ಅವಳ ಬಲ. ಅದಿಲ್ಲವಾದರೆ ಅವಳಿಲ್ಲ.ಕೃಷ್ಣನ ಕೊಳಲು ರಾಧೆೆಗೋ ಗೋಪಿಕೆಯರಿಗೋ ಅವಳಿಗೂ ಅನುಮಾನವೇ. ಆದರೂ ರಾಧಾ ಮಾಧವನೆಂಬ ಅವಳ ಅಚಲ ನಂಬಿಕೆ........
ಮಾಗಿಯ ರಾತ್ರಿಗೆ ಬರುವ ನಲ್ಲನ ನಿರೀಕ್ಷೆಯ ಹೊತ್ತು ಅದೆಷ್ಟು ದಿನ ಕಳೆದಿದ್ದಳೋ....ಅಂತೂ ಬೃಂದಾವನಕ್ಕೆ ಅವನ ಆಗಮನದ ಸುದ್ದಿ ಕೇಳುತ್ತಿದ್ದಂತೆ ಇಡೀ ಬೃಂದಾವನವೇ ಸಡಗರದಿಂದ ಸಿಂಗಾರಗೊಳ್ಳೋದು ನೋಡಿ ಮನಸ್ಸು ಚುರುಕ್ಕೆಂದಿತ್ತು! ಬಂದವನೇ ಅವ ವಿಶ್ರಮಿಸದೇ ಸತ್ಯಳ ಬಳಿ ನಡೆದಿದ್ದ. ಅವಳ ಕೋಪ ಹಾರಾಟ ಜಗತ್ತಗೇ ತಿಳಿದದ್ದು. ಆದರೂ ಕೃಷ್ಣ ಅವಳ ಮುನಿಸು ತಣಿಸಲು ಸದಾ ಅವಳ ಓಲೈಸುತ್ತಿದ್ದ.ಬೃಂದಾವನದಭಕ್ತರಿಗೆ ಮೀಸಲಾದವನು ಕೃಷ್ಣ! ಅವನು ಊರೆಲ್ಲ ವಿಚಾರಿಸಿ, ಅವನಿಗಾಗಿ ಕಾಯ್ದಿಟ್ಟ ಹಾಲು, ಮೊಸರು, ಅವಲಕ್ಕಿಗಳ ರುಚಿ ನೋಡದೇ ಎಲ್ಲಿ ಬರಬಿಡುವರು?ದೂರದಲ್ಲಿ ಜೋಗಿತ್ತಿಯೊಬ್ಬಳು ಹಾಡುತ್ತಾ ಹೋಗುತ್ತಿದ್ದಳು.ಅವಳ ಬಾಯಲ್ಲೂ ಅವನೇ........ ಜಾವ ಎರಡಾದರೂ ಅವನು ಬರಲೊಲ್ಲ. ಇನ್ನು ನಿರೀಕ್ಷೆ ಸುಮ್ಮನೇ ಅಂದುಕೊಂಡಳು......ಈಗಾಗಲೇ ಸುಸ್ತಾಗಿರುತ್ತಾನೆ. ದೂರದ ಪ್ರಯಾಣ ಮಾಡಿ ಬಂದಿರುವ ಅವನು ಯಾರ ಮನೆಯಲ್ಲೋ ಪಲ್ಲಂಗ ಸೇರಿದರೆ ಆಶ್ಚರ್ಯವೇನು? ಒಂದುವೇಳೆ ಬಂದರೂ ಅವನು ಮಾತನಾಡಬಲ್ಲನೇ? ಸುಮ್ಮನೇ ನಿರೀಕ್ಷೆ ಬಿಟ್ಟುಮಲಗೋಣ ಎಂದುಕೊಂಡು ಒಳಕೋಣೆಗೆ ನಡೆದಳು...
ಸುಖದ ಸುಪ್ಪತ್ತಿಗೆ... ರೇಶಿಮೆಯ ಹಾಸು, ಎತ್ತರವಾದ ಪಲ್ಲಂಗ.......ತನ್ನನ್ನು ಅಣಕಿಸಿದಂತೆ.....ರಾಧೆ ಬೆಚ್ಚಿದಳು. ಕಿಡಕಿಯಾಚೆ ಸುಖನಿದ್ರೆಯಲಿದ್ದ ಚಂದ್ರಮನ ಕಂಡು ನಿಡುಸುಯ್ದಳು. ಧರಿಸಿದ ಆಭರಣಗಳು ಮೈ ಯೆಲ್ಲ ಚುಚ್ಚುತ್ತಿರುವಂತೆನಿಸಿ ತೆಗೆದಿಟ್ಟಳು." ಕೃಷ್ಣಾ " ಅಂದುಕೊಂಡು ಕಣ್ಣು ಮುಚ್ಚಿದಳು.
ಅವಳಿಗೇನೂ ಹೊಸದಲ್ಲ ಅದು. ದಿನ ದಿನವೂ ಇದೇ ನಿರೀಕ್ಷೆಯೇ ಅವಳ ಬದುಕಾಗಿ ಬಿಟ್ಟಿದೆ. ಹೆಸರಿಗೆ ಪಟ್ಟದ ರಾಣಿ. ಬೃಂದಾವನದ ಹೆಂಗಳಿಯರಿಗೆಮಾಡಲು ಕೆಲಸವಾದರು ಇದೆ. ಅವಳಿಗೆ ಕೆಲಸಗಳೂ ಇಲ್ಲ. ಸಾಕ್ಷಾತ್ ಕೃಷ್ಣನ ಮನದನ್ನೆ ರಾಧೆಗೆ ಏನು ಕೆಲಸ? ಸಮಯ ಮಾತ್ರ ಅವಳನ್ನುಗೋಳು ಹುಯ್ದುಕೊಳ್ಳುತ್ತದೆ.ದೇವರ ಪೂಜೆಗೆ ಕುಳಿತರೆ ಸಾಕ್ಷಾತ್ ಕೃಷ್ಣನೇ ಬರದಿರುವಾಗ ಇನ್ಯಾವ ದೇವ ಬರಬಹುದು ಅನ್ನಿಸುತ್ತದೆ.ಅದು ಕಲ್ಲುಮೂರ್ತಿಯಾಗಿ ಕಾಣುತ್ತದೆ. ಅಲ್ಲ ಅವನುಳಿದು ಅನ್ಯವೇ ಇಲ್ಲದ ರಾಧೆ ಅವನೊಳಗೇ ಲೀನವಾದ ಮೀರಾ..... ಕಲ್ಲಿನ ದೇವರೆದುರು ನಿಂತರೆ !
ಪ್ರೀತಿ ಎಂಥ ಹಂಬಲ! ಅದರೊಳಗೆ ಅದೆಷ್ಟು ಸಹನೆ! ರಾಧೆಯ ಪ್ರೀತಿ ಕೃಷ್ಣನಿಗೆ ಅರ್ಥವಾದೀತಾ? ರಾಕ್ಷಸರುಗಳ ಕೊಲ್ಲುವಾಗ,ರಾಜ್ಯಗಳ ಗೆಲ್ಲುವಾಗ, ಧರ್ಮಯುದ್ಧ ಮಾಡುವಾಗ, ಜಗದ ಕಷ್ಟ ಪರಿಹರಿಸುವಾಗ ಯಾವತ್ತೂ ಕೃಷ್ಣ ಬರೀ ಕರ್ಮಯೋಗಿಯಾಗಿ ಕಾಣಿಸಿಕೊಂಡ.ಪ್ರೇಮವನ್ನು ಸಾರುವಾಗಲೂ ಅವನು ಗೋಪಿಕೆಯರನ್ನೇ ಬಳಸಿಕೊಂಡ. ಯಮುನೆಯ ತಟದಲ್ಲಿ ಕೃಷ್ಣನ ಕೊಳಲಿಗೆ ಮರುಳಾಗಿದ್ದು ರಾಧೆ ಮಾತ್ರಅಲ್ಲ!. ಹದಿನಾರು ಸಾವಿರ ಹೆಂಡತಿಯರ ಮನದಲ್ಲಿ ಮನೆಮಾಡಿ ಬಂದ ಕೃಷ್ಣನ ರಾಧೆ ಒಂದಿನಿತೂ ಮುನಿಸಿಲ್ಲದೇ ಲೋಕದ ಯಾವ ಭಯವಿಲ್ಲದೇಒಂದೇ ಪ್ರಶ್ನೆ ಕೇಳದೇ ಬರಮಾಡಿಕೊಳ್ಳುತ್ತಾಳೆ. ರಾಧೆ ಎಂತಹ ಅದ್ಭುತ ವ್ಯಕ್ತಿ! ನಮ್ಮೊಳಗೆ ಅವಳ ಸಾಮಾನ್ಯ ಬದುಕಿನ ನೋಟಗಳು ಕಾಣುವುದಿಲ್ಲಯಾಕೆ? ವನವಾಸ ಅನುಭವಿಸಿ ಬಂದ ಸೀತೆಗೆ ರಾಮ ಅಗ್ನಿಪರೀಕ್ಷೆ ನಡೆಸಿದ! ಜನರ ಮಾತಿಗೆ ಹೆದರಿ! ಆದರೆ ರಾಧೆ ಯಾವತ್ತೂ ಕೃಷ್ಣನ ಪರೀಕ್ಷಿಸಲೇ ಇಲ್ಲ.ಪಾರಿಜಾತವಾಗಲೀ, ದೂರ್ವೆಯಾಗಲೀ ಅವಳ ಪ್ರೀತಿಯ ಮುಂದೆ ಎಲ್ಲವೂ ತೃಣವೇ. ಎಂಥಹ ನಿರ್ಮಲ ಆರಾಧನೆ ಅದು? ಭಕ್ತಿಗೆ ಪ್ರೀತಿಗೆ ರಾಧೆ ಒಬ್ಬಳೇ ಸಾಕು. ಅವಳ ಮನದಲ್ಲಿ ಎಂಥಹ ನೋವಿದ್ದರೂ ಅವಳು ಅದನ್ನೆಲ್ಲ ಮೀರಿ ನಿಲ್ಲುವ ಮೂರ್ತಿಯಾಗಿಬಿಡುತ್ತಾಳೆ.ಕೃಷ್ಣ ಕಲ್ಲಾಗಿಬಿಡುತ್ತಾನೆ.! ಕೃಷ್ಣ ರಾಧೆಯ ಪ್ರೇಮ ನಮ್ಮಂತ ಪಾಮರರಿಗೆ ನಿಲುಕದ್ದಿರಬಹುದು. ಆದರೆ. ಲೋಕದ ಕಣ್ಣಿಗೆ ರಾಧೆಯೂ ಕೂಡ ಎಲ್ಲರ ಹಾಗೆಹೆಣ್ಣು

ಪತಿತೆಯಲ್ಲ!. ಪಾವನೆ.!!



ಪತಿತೆಯಲ್ಲ!. ಪಾವನೆ.!!
ಪ್ರಶಾಂತ ನದೀ ತೀರ.......... ಕಾಲಡಿಗೆ ಹರಿಯುವ ಗಂಗೆ..... ಆಕಾಶಕ್ಕೆ ಏಣಿ ಇಟ್ಟ ಮೋಡಗಳ ಸಾಲು........ಪೃಕೃತಿ ಮೈ ಮರೆತು ನಿಂತ ಹದಿನಾರರ ಬೆಡಗಿ.... ಹಸಿ ಹಸೀ ಮೈ ಹೊತ್ತ ಕನಸು ಕಂಗಳ ಚೆಲುವೆ......ಆ ದೇಗುಲದ ನಾದ ಹರಿಯುತ್ತಿದೆ ಎದೆಯೊಳಗೆ ಅದೇ ಗಂಗೆಯಂತೆ.... ಒಡಲೆಲ್ಲ ತಂಪಾಗಿಸಿಕೊಂಡು,ಕಂಗಳಂಚಲ್ಲಿ ಭಾವಗಳ ಮಳೆ ಸುರಿಸುತ್ತಾ ಪ್ರೇಮದ ಗುಂಗಿನಲ್ಲಿ ಮೈ ಮರೆತ ಕ್ಷಣಗಳು.... ಝಣ ಝಣಿರೆನ್ನುವ ಕಿರುಗೆಜ್ಜೆ ನಾದ.... ಅವಳ ನಡಿಗೆಯೇ ಆನಂದಭೈರವಿಯಂತೆ ತೋರುತ್ತಿದೆ......... ಮನಸು ಮಂದಾನಿಲ.......... ತುಳಸಿಯೆದುರು ಕೈ ಮುಗಿದು ನಿಂತ ಮುಂಜಾವಿನ ಸೊಬಗು! ಹೃದಯ ಹಾಡುವ ಕುಹೂ...ಕುಹೂ........ ಕೇಳಿ ಕೋಗಿಲೆ ಹಾಡೋದು ಮರೆತ ಹಾಗಿದೆ..ಇಂಚರದ ಸೊಂಪಲ್ಲಿ ಮಾವಿನೆಲೆ ಚಿಗುರು! ಅದೇ ಅದೇ ಪ್ರೇಮದ ಮಧುರ ಮಧುರ ಸಂಚಾರ...............ರಾಧೆಯೆಂಬ ಪ್ರೇಮದರಸಿ ರಾಧೆಯಲ್ಲ........ ರುಕ್ಮಿಣಿಯಂತೆ ಪಟ್ಟದರಸಿ ಬಯಸಿದವಳಲ್ಲ. ನಾನೊಬ್ಬ ಮುಗ್ದೆ. ನನ್ನಿರವು ನಿನಗೇನಲ್ಲ ಗೊತ್ತು ಕೃಷ್ಣಾ ಹಾಗಂತ ನೀನಿಲ್ಲದೇ ನಾನಿಲ್ಲ....... ನಿನ್ನ ಪ್ರೇಮದ ಬಯಲಲಿ ತಂಗಾಳಿಯಾಗಿ ಬರುವ ಗಾಳಿ ನಾನು. ನಿನ್ನ ಭಕ್ತಿ ರಸದಲಿ ಗಂಧವಾಗೋ ಹೂ ನಾನು. ನಾನು ಕೃಷ್ಣಾ ನಿನ್ನದೇ ಮೀರೆ. ಭೂಮಿಯ ಬದುಕಿನ ಮೋಹಗಳೆಲ್ಲ ತೊರೆಯದ ಬಲು ಭಾರ ನಾನು. ನನ್ನಿರವನ್ನೇ ನಿನಗಪರ್ಿಸಿಕೊಳ್ಳುವ ಆನಂದಿ ನಾನು. ನಿನ್ನಿಂದ ನಿರೀಕ್ಷೆಯೇನಿಲ್ಲ ಕೃಷ್ಣಾ ನಾನೇ ನೀನಾಗುವ ಹಂಬಲ ನನಗೆ! ಅಲ್ಲ. ನೀನೆಲ್ಲಿ ನಾನೆಲ್ಲಿ! ಗೊತ್ತೊ ನನಗೆ.! ನಿನ್ನಡಿಯ ಪಾದದ ಧೂಳಾಗೋ ಆಸೆ. ನೀ ನಡೆವ ಹಾದಿಯಲಿ ಹೂವಾಗೋ ಆಸೆ.... ನಿನ್ನ ಮುರಳಿಗೆ ಸಿಗುವ ಬಿದಿರಾಗೋ ಆಸೆ..... ನೀನುಡುವ ಪೀತಾಂಬರದ ನೂಲಾಗೋ ಆಸೆ..... ಎಂಥಹಆಸೆಗಳ ಮೂಟೆ ನಾನು! ಹೇಗೆ ತೊರೆಯಲಿ ನಿನ್ನಾಸೆ? ಕೃಷ್ಣ......... ಕೃಷ್ಣ ನಿಲ್ಲದ ಕಣವಿಲ್ಲ. ಕೃಷ್ಣನಿಲ್ಲದ ಕ್ಷಣವಿಲ್ಲ. ನನ್ನ ತಂಬೂರಿಯ ದನಿಯಾಗೋ ಕೃಷ್ಣನನ್ನೆದೆಯಲಿ ಮಿಡಿವ ಮನವಾಗೋ ಕೃಷ್ಣ. ನನ್ನೊಡಲ ತುಂಬುವ ಖನಿಯಾಗೋ ಕೃಷ್ಣ.ಮೀರೆಯ ಮಾಧವ ಮತ್ಯಾರೋ ಅಲ್ಲ. ಅವ ಸಾಕ್ಷಾತ್ ಪ್ರೇಮಸ್ವರೂಪಿ. ರಾಧೆಯ ಮೋಹನ ಮುರಳಿ ಅವನು. ಗೋಪಿಕೆಯರ ತನುಮನದಗೋಪಾಲ ಅವನು. ಹದಿನಾರು ಸಾವಿರ ಕನ್ಯೆಯರ ವರಿಸಿದವನವನು. ರುಕ್ಮಿಣಿಯ ಸಿಂಧೂರ, ಸತ್ಯಭಾಮೆಗೆ ವರ. ಎಲ್ಲೆಲ್ಲೂ ಕೃಷ್ಣಾ ನಿನ್ನ ಪ್ರೇಮದ ಜಲ....ನಂದಗೋಕುಲದಲ್ಲಿ ಮನೆಮನೆಗೆ ಕಂದ......ಮಥುರೆಯ ಮೈದಾನದಿ ಮನಮನದ ನಾದ... ಯಮುನಾ ತೀರದಲಿ ಗೋಪಿಕೆಯರ ಮನಕದ್ದದ್ವಾರಕೆಗೆ ಮರಳಿದರೆ ಅವ ಸಾಕ್ಷಾತ್ ರಾಜನಾಗಿದ್ದ. ಆದರೂ ಮೀರೆಗೆ ಅವನಲ್ಲದೇ ಇನ್ಯಾರೂ ಕಾಣಲಿಲ್ಲ............ ಯಾಕೋ ಮೀರೆಗೆ ಮಾಧವನ ಹುಚ್ಚು!ಮಾಧವನ ಪ್ರೇಮವೇ ಹಾಗೆ ಅದು ಬರೀ ಹುಚ್ಚಲ್ಲ. ಪ್ರೇಮದ ಅತೀ ಹುಚ್ಚು. ಒಮ್ಮೆ ಅವನಿಗಾಗಿ ಪರಿತಪಿಸಿ ಹೊರಟವರ್ಯಾರೂ ಹಿಂದೆ ತಿರುಗಿಲ್ಲ. ದಾಸರೂ ಭಕ್ತರು ಎಲ್ಲರೂ ಅವನ ಪ್ರೇಮದ ದಾಹಿಗಳೇ.........


ಗಂಡ ಮಕ್ಕಳೆಲ್ಲ ತುಂಬಿದ ಸಂಸಾರ ಅವಳದು. ಅವಳು ಹೊರಟಿದ್ದು ಮಾಧವನ ಹಿಂದೆ. ತೊರೆದದ್ದು ಬಂಧನವ. ಹಿಡಿದದ್ದುಬಂಧವ.....ಭಾವದಲಿ ಪೂಜಿಸುವ ಅವನೇ ಪತಿ......ಬಂಧಗಳ ಗೆಲ್ಲಿಸುವ ಅವನೇ ನಿಧಿ..... ಕೃಷ್ಣಾ. ನಿನ್ನ ಪ್ರೇಮದ ಪರಿಯ ಬಣ್ಣಿಸಲಿ ಹೇಗೆ? ನನ್ನ ನಾಡಿಗಳೆಲ್ಲ ರಸರಸದ ಜೀವ.... ಜಗದೆಲ್ಲ ಆನಂದ ಈ ಒಡಲಿಗೇ ಸುರಿದ ನಿನ್ನೊಲವು ಕೃಷ್ಣಾ..........ನೀನಿಲ್ಲದೇ ಜಗವಿಲ್ಲ ಆನಂದವಿಲ್ಲ ನಾನಿಲ್ಲ ಕೃಷ್ಣಾ. ತಂಬೂರಿ ಮೀಟುತ್ತ ಹಾಡುತ್ತ ನಡೆದವಳು ಕೃಷ್ಣನರೆಸುತ್ತಾ ಜಗವೆಲ್ಲ ಸುತ್ತಿ ಅವನಲ್ಲೇ ಐಕ್ಯಗೊಂಡವಳು ಮೀರೆ. ಪತಿತೆಯಲ್ಲ!. ಪಾವನೆ.

Thursday, August 2, 2012

ಸಂಕಲ್ಪ.



 ಸೃಷ್ಟಿ ಚಿಂತನದ ಕಾಲಗರ್ಭದೊಳು
ಅದೆಷ್ಟೋ ಕಾಯಗಳ ವೈಭವ!
ಕರಗುವುದು ಸೊರಗುವುದು
ನರಮಾಂಸ ಮಜ್ಜೆಗಳು,
ಇರುವುದೊಂದೇ ಪ್ರೀತಿ
ಆತ್ಮಜ್ಯೋತಿ.

ಸುರಿವ ಶುದ್ಧಾಮೃತಕೆ ತೆರೆದಿದೆ
ಕವಿದ ಕಪ್ಪನೆ ಮೋಡ!
ಉರಿವ ಸೂರ್ಯನ ತೆಕ್ಕೆಯೊಳಗೆ
ಸಂಧ್ಯೆ ಕಾಲಿನ ಜೇಡ!

ಅಂಧಕಾರದ ಅಸುರ ಗರ್ಭದಲಿ
ನವನವೋನ್ಮೇಷದ
ಚೈತನ್ಯ ಚಿಲುಮೆ
ಬೆಳಗು,
ಬಾನಿನೆದೆಯಲಿ
ಹೊತ್ತಿದ, ಪ್ರೇಮಜ್ಯೋತಿ.
ಪ್ರೀತಿ
ತಮವ ಕರಗಿಸುವ ಜಲಪಾತ್ರೆ.
ಬದುಕು
ಅರ್ಚನೆಗೆ ಕಾಯ್ದ ಸಂಕಲ್ಪ.

Tuesday, September 13, 2011

ಹೀಗೊಂದು ಕ್ಷಣ....ದ ಕವಿತೆಗಳು



ಸೋತೆ ಹೃದಯವೇ
ಬಾಳು ಇಲ್ಲವೇ
ಕ್ಷಣವು ತುಂಬಿದೆ ಕಂಬನಿ.
ಎದೆಯ ಭಾವಕೆ
ಕರುಣೆ ಇಲ್ಲವೇ
ಮರೆತೆ ಒಲವಿನ ಹನಿ ಹನಿ.

 ದೇಶ ಸುತ್ತದೇ
ಭಾಷೆ ನಿಲುಕದೇ
ರೋಷದೆದೆಯೊಳು
ದ್ವೇಷವಿಲ್ಲದೇ
ಹಕ್ಕಿ ಹಾರಿದೆ ಬಾಂದಣ..
ಪ್ರೀತಿಯಿಲ್ಲದೇ ಮಮತೆ ಕಾಣದೇ
ಬರಿಯ ಕನಸೊಳು ಭಾವವಿಲ್ಲದೇ
ವಿಷಯ ವತರ್ುಲದೊಳಗೆ ನಾ.

ಬೇಡ ಬೀಸಿದ
ಬಲೆಯ ನಡುವಣ
ಹಕ್ಕಿ ಸಿಲುಕಿದೆ ಹಾರದೇ.
ತುತ್ತು ಕೂಳಿನ
ಋಣದ ಭಾರಕೆ
ಹೆತ್ತ ಹೊಟ್ಟೆಯ
ಕರುಣೆ ತೀರಕೆ
ತಾಳ ಹಾಕಿದೆ ಭಣಭಣ.
ಹಣದ ಗಂಟಿನ ಜಣಜಣ.


ದೀಪದೊಲವು...

ಒಂಟಿಯಾದೇನೆಂದು
ಮರುಕ ಪಡದಿರು,
ಕಣ್ಣು ಕಿವಿಗಳಿಲ್ಲದವರೂ
ಹೃದಯದಿಂದ ನೋಡುವರು
ಕರುಣೆಯಿಲ್ಲದವರ ನಂಬದಿರು.
ಕಂಗಳ ತುಂಬಾ ಬೆಳಕಿದ್ದವರು
ದಾರಿದೀಪವಾದಾರು!!


 ಎದೆಗೂಡೊಳಗೊಂದು
ಅಕ್ಷಯದೀಪವನಿಟ್ಟು
ಆಗಾಗ ಅದನ್ನೂದುವವರು!
ಆರೀತೆ? ಬೆಳಗೀತೆ?
ಎಂದು ಕಾದವರು!
ಕಗ್ಗತ್ತಲ ಸಹಿಸದವರು!
ಬೆಳಕಿಗಾಗಿ ಬೆನ್ನುಬಿದ್ದವರು!

ದೀಪದ ಹೆಸರು ಹೊತ್ತು
ದೀಪವಾಗಲು ಹವಣಿಸುವ
ಪತಂಗದಂತವರು!
ಸುಟ್ಟು ಹೋದಾರು
ಸುಕೋಮಲ ಶರೀರದವ
ರೆಲ್ಲ ಸೇರಿ ಉರಿಸೀರೇ ಬೆಳಕು
ಸೂಡಿ ಬೆಂಕಿಯಲ್ಲ.
ಹಣತೆ ತೊದಲು.

ಕಂಗಳ ಬೆಳಕಿನ  ಸೊಡರು
ಕರಗದಂತಿರಲೆಂದು
ಕಪ್ಪು ಮಸಿಯಾಗದಂತೆ ಕಾಯ್ದುಕೋ..
ಸಿಗದೇ ಸುರುಳಿ ಸುಟ್ಟು ಹೊದೀತು
ಕಾಡಿಗೆ  ಮಸಿಯಾಗಿ
ಕಣ್ಣ ಉರಿಸೀತು,
ಮತ್ತೆ ಬೆಳಕಿನ ಹಣತೆ
ಭಾಗ್ಯದ ಬೆಳಗಲ್ಲಿ ಮಾಯವಾದೀತು.!
ಎಂದಿಗೂ ಸಿಗದೇ ಹೋದೀತು!!