ಮನಸಿನ ಹರಿಯುವಿಕೆಗೆ ಆನಂದಕ್ಕೆ ಪೃಕೃತಿಯಿದೆ. ಹಿಮ ಸುರಿಯುವ ಮುಂಜಾನೆಗಳಿವೆ. ಅದ್ಭುತ ಸೂರ್ಯಾಸ್ತಗಳಿವೆ. ಸಮುದ್ರವಿದೆ. ತಂಗಾಳಿಯಿದೆ. ಬೆಳದಿಂಗಳ ರಾತ್ರಿಗಳಿವೆ.. ಕತ್ತಲೆಯ ಮೈತ್ರಿಯಿದೆ. ಎಲ್ಲಾ ಇದೆ. ಆನಂದಿಸುವ ಮನಸೂ ಇದೆ. ಆದರೆ ಮನುಷ್ಯ ಬಯಸೋದು ತನ್ನ ನೋವು ನಲಿವುಗಳಿಗೆಲ್ಲ ಹಂಚಿಕೊಳ್ಳುವ ಇನ್ನೊಂದು ಮನಸಿನ ಆಸರೆಯನ್ನ... ಮನುಷ್ಯನ ಭಾವಗಳಿಗೆ ಮತ್ತೊಂದು ಮನಸಿನ ಆಸರೆಯ ಹುಚ್ಚು.... ಇದೂ ಸಹ ಅಂತದ್ದೇ ಒಂದು ಹುಚ್ಚು... ವಿಚಾರ ಭಾವಗಳಿಗೆಲ್ಲ ಅಕ್ಷರ ಕೊಡುವ ಹುಚ್ಚು... ಖಾಲಿಯಾಗುವ ಕನಸು.... ಅಂತದ್ದೊಂದುಯಾನದಲ್ಲಿ ನಿಮ್ಮ ಜೊತೆ.......







Thursday, August 2, 2012

ಸಂಕಲ್ಪ.



 ಸೃಷ್ಟಿ ಚಿಂತನದ ಕಾಲಗರ್ಭದೊಳು
ಅದೆಷ್ಟೋ ಕಾಯಗಳ ವೈಭವ!
ಕರಗುವುದು ಸೊರಗುವುದು
ನರಮಾಂಸ ಮಜ್ಜೆಗಳು,
ಇರುವುದೊಂದೇ ಪ್ರೀತಿ
ಆತ್ಮಜ್ಯೋತಿ.

ಸುರಿವ ಶುದ್ಧಾಮೃತಕೆ ತೆರೆದಿದೆ
ಕವಿದ ಕಪ್ಪನೆ ಮೋಡ!
ಉರಿವ ಸೂರ್ಯನ ತೆಕ್ಕೆಯೊಳಗೆ
ಸಂಧ್ಯೆ ಕಾಲಿನ ಜೇಡ!

ಅಂಧಕಾರದ ಅಸುರ ಗರ್ಭದಲಿ
ನವನವೋನ್ಮೇಷದ
ಚೈತನ್ಯ ಚಿಲುಮೆ
ಬೆಳಗು,
ಬಾನಿನೆದೆಯಲಿ
ಹೊತ್ತಿದ, ಪ್ರೇಮಜ್ಯೋತಿ.
ಪ್ರೀತಿ
ತಮವ ಕರಗಿಸುವ ಜಲಪಾತ್ರೆ.
ಬದುಕು
ಅರ್ಚನೆಗೆ ಕಾಯ್ದ ಸಂಕಲ್ಪ.

Tuesday, September 13, 2011

ಹೀಗೊಂದು ಕ್ಷಣ....ದ ಕವಿತೆಗಳು



ಸೋತೆ ಹೃದಯವೇ
ಬಾಳು ಇಲ್ಲವೇ
ಕ್ಷಣವು ತುಂಬಿದೆ ಕಂಬನಿ.
ಎದೆಯ ಭಾವಕೆ
ಕರುಣೆ ಇಲ್ಲವೇ
ಮರೆತೆ ಒಲವಿನ ಹನಿ ಹನಿ.

 ದೇಶ ಸುತ್ತದೇ
ಭಾಷೆ ನಿಲುಕದೇ
ರೋಷದೆದೆಯೊಳು
ದ್ವೇಷವಿಲ್ಲದೇ
ಹಕ್ಕಿ ಹಾರಿದೆ ಬಾಂದಣ..
ಪ್ರೀತಿಯಿಲ್ಲದೇ ಮಮತೆ ಕಾಣದೇ
ಬರಿಯ ಕನಸೊಳು ಭಾವವಿಲ್ಲದೇ
ವಿಷಯ ವತರ್ುಲದೊಳಗೆ ನಾ.

ಬೇಡ ಬೀಸಿದ
ಬಲೆಯ ನಡುವಣ
ಹಕ್ಕಿ ಸಿಲುಕಿದೆ ಹಾರದೇ.
ತುತ್ತು ಕೂಳಿನ
ಋಣದ ಭಾರಕೆ
ಹೆತ್ತ ಹೊಟ್ಟೆಯ
ಕರುಣೆ ತೀರಕೆ
ತಾಳ ಹಾಕಿದೆ ಭಣಭಣ.
ಹಣದ ಗಂಟಿನ ಜಣಜಣ.


ದೀಪದೊಲವು...

ಒಂಟಿಯಾದೇನೆಂದು
ಮರುಕ ಪಡದಿರು,
ಕಣ್ಣು ಕಿವಿಗಳಿಲ್ಲದವರೂ
ಹೃದಯದಿಂದ ನೋಡುವರು
ಕರುಣೆಯಿಲ್ಲದವರ ನಂಬದಿರು.
ಕಂಗಳ ತುಂಬಾ ಬೆಳಕಿದ್ದವರು
ದಾರಿದೀಪವಾದಾರು!!


 ಎದೆಗೂಡೊಳಗೊಂದು
ಅಕ್ಷಯದೀಪವನಿಟ್ಟು
ಆಗಾಗ ಅದನ್ನೂದುವವರು!
ಆರೀತೆ? ಬೆಳಗೀತೆ?
ಎಂದು ಕಾದವರು!
ಕಗ್ಗತ್ತಲ ಸಹಿಸದವರು!
ಬೆಳಕಿಗಾಗಿ ಬೆನ್ನುಬಿದ್ದವರು!

ದೀಪದ ಹೆಸರು ಹೊತ್ತು
ದೀಪವಾಗಲು ಹವಣಿಸುವ
ಪತಂಗದಂತವರು!
ಸುಟ್ಟು ಹೋದಾರು
ಸುಕೋಮಲ ಶರೀರದವ
ರೆಲ್ಲ ಸೇರಿ ಉರಿಸೀರೇ ಬೆಳಕು
ಸೂಡಿ ಬೆಂಕಿಯಲ್ಲ.
ಹಣತೆ ತೊದಲು.

ಕಂಗಳ ಬೆಳಕಿನ  ಸೊಡರು
ಕರಗದಂತಿರಲೆಂದು
ಕಪ್ಪು ಮಸಿಯಾಗದಂತೆ ಕಾಯ್ದುಕೋ..
ಸಿಗದೇ ಸುರುಳಿ ಸುಟ್ಟು ಹೊದೀತು
ಕಾಡಿಗೆ  ಮಸಿಯಾಗಿ
ಕಣ್ಣ ಉರಿಸೀತು,
ಮತ್ತೆ ಬೆಳಕಿನ ಹಣತೆ
ಭಾಗ್ಯದ ಬೆಳಗಲ್ಲಿ ಮಾಯವಾದೀತು.!
ಎಂದಿಗೂ ಸಿಗದೇ ಹೋದೀತು!!


Monday, August 22, 2011

ರಾಧೆಯಾದೆ.. ಮೀರೆಯಾದೆ...

ಅಂಗೈಯೊಳಗೊಂದು
ಚೈತ್ರಕಲ್ಪ.. ಶಿಲೆ.. ಹೂ... ದುಂಬಿ...
ಉಸಿರಾಗಿಸಿ ಜೀವತುಂಬಿ
ಹಾಡು ನೀ ಕೊಳಲು... ಹಾಡು...
ಬೆಳದಿಂಗಳು ಭಾವತುಂಬೀ....

 ಜೀವದನಿಗೆ ರಾಗವಾದೆ
 ಪ್ರೇಮಸಖೀ ಭಾವವಾದೆ
 ಅವಗೆ ಬರಿದೆ ಪ್ರೇಮವಾದೆ
 ರಾಧೆ.. ರಾಧೆ... ರಾಧೆ ನೀನು
 ರಾಧೆಯಾದೆ.. ಮೀರೆಯಾದೆ...
    
     
 ಕಲ್ಲು ಮಣ್ಣು ಸೃಷ್ಟಿಸೊಬಗು
 ವೀಣೆ ಬೆರಳ ಮಿಡಿವ ಹಾಗೆ
 ನದಿಯೂರಿನ ಮೋಹನನವ
  ಅವನೆಂದರೆ ಹಾಗೆ ಹಾಗೆ
   ದೀಪದೆದೆಯ ಜ್ಯೋತಿಹಾಗೆ
     
ಪ್ರೇಮಪಥದ ದೀಕ್ಷೆಪಡೆದ
ಜೋಗಿತಿಯದೇ ಜೋಳಿಗೆ
ಖಾಲಿ ಖಾಲಿ ನಡೆದುಬಿಡು
 ಅವನಿಲ್ಲದ ದಾರಿಗೆ...
 ಅವನೂರಿನ ಹಾದಿಗೆ.........
       



Tuesday, June 7, 2011

ಮುಕ್ತಿಯೆಡೆಗೆ....





ಕತ್ತಲೆಯ ಒಳಮನೆಗೆ
ಬೆತ್ತಲೆಯ ಹಂಗಿಲ್ಲ.
ಬೆಳಕಿನಲೆಗಳ ತೀರ
ಕಾಯುವುದಿಲ್ಲ.


ಆಳದಾಳಕೆ ನಿಶ್ಯಬ್ಧ ನಡೆಯುತಿರೆ
ಈ ಜಗದ ಗೊಂದಲದ
ಗದ್ದಲವೇ ಇಲ್ಲ!


ನಿತ್ಯ ನಿಯಮಗಳ ಮೀರಿ
ತಮೋಹಾರಿಯನರಸಿ
ಹೊರಟ ಗಳಿಗೆಯಲಿಂದು
ಬಂಧಗಳು ಭಾವಗಳು
ಪ್ರೇಮಜೀವವು ಬೇಡ..


ದೀಪವಿಲ್ಲದ ಗಮ್ಯದೆಡೆ
ಜಾರುತಿದೆ ಮನವು!!
ನೆಲೆಯಾಗಲಲ್ಲಿಯೇ
ಎಲ್ಲ ಗೆಲುವು....

Friday, January 14, 2011

ಸಂಕ್ರಮಣದ ಶುಭಾಶಯಗಳು.

      

ಋತುಮಾನದಾವರ್ತನೆಗೆ
ಮತ್ತೊಂದು ಹೊಸಬೆಳಗು.
ಎಳ್ಳುಬೆಲ್ಲದ ಕಲಶ
ಕೈಯಲ್ಲಿ ಹಿಡಿದು
ಉಷೆಕಂಗಳಾರತಿಯಲಿ
ಹೊನ್ನದೋಕುಳಿ ಮುಗಿಸಿ
ಬಂದಿಹನೋ ಭಾನು..
ಬರಮಾಡಿ ಅವನನ್ನು
ತಳಿರು ತೋರಣದಿಂದ...

ಚಂದದಲಿ ನೇಯ್ದ
ಕಡುಹಸಿರ ಸೆರಗಲಿ,
ಧವಸ ಧಾನ್ಯದ ಮಡಿಲ
ಸೆರಗಕ್ಕಿ ಹಿಡಿದು
ಮತ್ತೆ ಕಬ್ಬಿನ ಜಲ್ಲೆ,
ಹುರಿದ ಕಡಲೆಯ ಬೀಜ
ಬೆಲ್ಲದಾ ಸಿಹಿಯೆಳ್ಳು
ಬೆಳ್ಳಿ ಪಾತ್ರೆಯ ತುಂಬ
ಹಿಡಿದು ಬಂದವಳವಳೊ
ತೆನೆರಾಣಿಯಂತೆ,
ಭೂತಾಯಿ ಅಮ್ಮ.
 ಪುಣ್ಯಸ್ವರ್ಗದ ಕದವ
ತೆರೆದಿಟ್ಟು ಸುರಿಸುವನು
ಪುಷ್ಪದೋಕುಳಿ ಜಗಕೆ
ಜನ್ಮಪಾವನವು.
ಸಂಕ್ರಾಂತಿ ಕುಸುರೆಳ್ಳು
ಸ್ನೇಹ ಪ್ರೀತಿಯ ಮೆಲ್ಲು
ಇಹವೇ ಸ್ವರ್ಗದ ಸೊಲ್ಲು
ಇದನೇ ಸಾರುವನು ಇಹಪರಕೆ.